ಸಿದ್ದರಾಮಯ್ಯ ಅವರೇ ತಪ್ಪು ಸಂಪ್ರದಾಯಕ್ಕೆ ನಾಂದಿ ಹಾಡಿದ್ದೀರಿ !
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ
ಮಾನ್ಯರೇ
ನಿಮಗೆ ಸಾಹಿತಿ ಸಲ್ಮಾನ್ ರಶ್ದಿ ಗೊತ್ತಿರುತ್ತದೆ. 1989ರಲ್ಲಿ ಇವರ “ಸಟಾನಿಕ್ ವರ್ಸಸ್” ಕೃತಿಯಿಂದ ಕೆರಳಿದ ಅಯತುಲ್ಲಾ ಖೋಮೇನಿ ರಶ್ದಿ ವಿರುದ್ಧ ಮರಣ ದಂಡನೆಯ ಫತ್ವಾ ಹೊರಡಿಸಿದ್ದರು. ಇದಕ್ಕೂ 8 ವರ್ಷ ಮೊದಲೇ ರಶ್ದಿ ಅವರು ಇಂಗ್ಲಿಷಿನಲ್ಲಿ ಬರೆದ ಕೃತಿ “ಮಿಡ್ ನೈಟ್ ಚಿಲ್ಟ್ರನ್” ಗೆ ಬೂಕರ್ ಪ್ರೈಜ್ ಸಂದಿತು.ಆಗ ಭಾರತದ ಪ್ರಧಾನಿಯಾಗಿದ್ದವರು ಸಾಹಿತ್ಯದ ಬಗ್ಗೆ ಒಲವುಳ್ಳ ಇಂದಿರಾ ಗಾಂಧಿ.ಇವರೇನೂ ರಶ್ದಿ ಅವರಿಗೆ ಅಭಿನಂದನೆ ಹೇಳಲಿಲ್ಲ. ಸರ್ಕಾರದ ಹಣ, ನಿವೇಶನ ನೀಡಿ ಪುರಸ್ಕರಿಸಲಿಲ್ಲ.
ಅರುಂಧತಿ ರಾಯ್ ಅವರಿಗೆ “ಗಾಡ್ ಆಫ್ ಸ್ಮಾಲ್ ಥಿಂಗ್ಸ್” ಕೃತಿಗೆ 1997ರಲ್ಲಿ ಬೂಕರ್ ಪ್ರೈಜ್ ಬಂತು.ಆಗ ಪ್ರಧಾನಿಯಾಗಿದ್ದವರು ಸಾಹಿತ್ಯದ ಬಗ್ಗೆ ಅಪಾರ ಅಭಿರುಚಿ ಹೊಂದಿದ್ದ ಐ.ಕೆ.ಗುಜ್ರಾಲ್. ರಾಯ್ ಅವರ ಮೂಲ ನೆಲೆ ಕೇರಳ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ಇ.ಕೆ. ನಯನಾರ್.ಇವರಿಬ್ಬರೂ ಅರುಂಧತಿ ರಾಯ್ ಅವರಿಗೆ ಅಭಿನಂದನೆ ಹೇಳಲಿಲ್ಲ.ಹಣ, ನಿವೇಶನದ ಪುರಸ್ಕಾರ ನೀಡಲಿಲ್ಲ.
ಸಾಹಿತಿ ಕಿರಣ್ ದೇಸಾಯಿ ಅವರಿಗೆ “ಇನ್ಹೆರಿಟೆನ್ಸ್ ಆಫ್ ಲಾಸ್” ಕೃತಿಗೆ 2006ರಲ್ಲಿ ಬೂಕರ್ ಪ್ರೈಜ್ ಬಂತು. ಆಗ ಪ್ರಧಾನ ಮಂತ್ರಿ ಆಗಿದ್ದವರು ಮನಮೋಹನ್ ಸಿಂಗ್.ದೆಹಲಿಯ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಆಗಿದ್ದವರು ಶೀಲಾ ದೀಕ್ಷಿತ್. ಇವರಿಬ್ಬರೂ ಅಭಿನಂದನೆ ಹೇಳಲಿಲ್ಲ, ಹಣ, ನಿವೇಶನ ನೀಡಲಿಲ್ಲ.
ಕನ್ನಡಿಗ ಅರವಿಂದ ಅಡಿಗ ಅವರಿಗೆ 2008ರಲ್ಲಿ ಬೂಕರ್ ಪ್ರೈಜ್ ಬಂತು. ಇವರು ಕನ್ನಡಿಗರು. ಮದ್ರಾಸಿನಲ್ಲಿದ್ದ ಅಜ್ಜಿ ಮನೆಯಲ್ಲಿ ಜನಿಸಿದರು. ಇವರ ತಾತ ಸೂರ್ಯ ನಾರಾಯಣರಾವ್ ಅವರು ಪ್ರತಿಷ್ಠಿತ ಕರ್ನಾಟಕ ಬ್ಯಾಂಕ್ ಆಡಳಿತ ಮಂಡಳಿಯ ಛೇರ್ಮನ್ ಆಗಿದ್ದರು. ಅಡಿಗ ಅವರು 10ನೇ ತರಗತಿ ತನಕ ಮಂಗಳೂರಿನಲ್ಲಿ ಓದಿದರು. 2008ರಲ್ಲಿ ಇವರ “ವೈಟ್ ಟೈಗರ್” ಕೃತಿಗೆ ಬೂಕರ್ ಪ್ರೈಜ್ ಸಂದಿತು. ಆಗ ಕರ್ನಾಟಕ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅಭಿನಂದನೆ ಹೇಳಲಿಲ್ಲ, ಹಣ, ನಿವೇಶನ ನೀಡಲಿಲ್ಲ
ಮಣಿಪುರದ ಹಿರಿಯ ಸಾಹಿತಿ ಗೀತಾಂಜಲಿ ಶ್ರೀ ಅವರ “ರೆಟ್ ಸಮಾಧಿ’ ಕೃತಿಯನ್ನು ಹಿಂದಿ ಭಾಷೆಯನ್ನು ಆಸಕ್ತಿಯಿಂದ ಕಲಿತಿದ್ದ ಅಮೆರಿಕಾದ ಪ್ರಜೆ ಡೈಸಿ ರಾಕ್ ವೆಲ್ ಅವರು “ಟಂಬ್ ಆಫ್ ಸ್ಯಾಂಡ್” ಹೆಸರಿನಲ್ಲಿ ಇಂಗ್ಲಿಷಿಗೆ ಅನುವಾದಿಸಿದ್ದರು. ಇದಕ್ಕೆ 2022ರಲ್ಲಿ ಇಂಟರ್ ನ್ಯಾಷನಲ್ ಬೂಕರ್ ಪ್ರೈಜ್ ಬಂದಿದೆ. ಇವರ ತವರು ರಾಜ್ಯದ ಸರ್ಕಾರ ಅಭಿನಂದನೆ ಹೇಳಲಿಲ್ಲ, ಹಣ, ನಿವೇಶನ ನೀಡಲಿಲ್ಲ.
ಸಾಹಿತಿ ಬಾನು ಮುಷ್ತಾಕ್ ಅವರು 30 ವರ್ಷಗಳಲ್ಲಿ ಬರೆದ ಕಥೆಗಳಿಂದ ಸಂಗ್ರಹಿಸಿದ ಕೆಲವು ಕಥೆಗಳನ್ನು ದೀಪಾ ಭಸ್ತಿ ಅವರು “ಹಾರ್ಟ್ ಲ್ಯಾಂಪ್ ಹೆಸರಿನಲ್ಲಿ ಇಂಗ್ಲಿಷಿಗೆ ಅನುವಾದಿಸಿದ್ದರು. ಇದಕ್ಕೆ 2025ರಲ್ಲಿ ಇಂಟರ್ ನ್ಯಾಷನಲ್ ಬೂಕರ್ ಪ್ರೈಜ್ ಬಂದಿದೆ.
ಎರಡು ಪ್ರೈಜ್ ಗಳ ವ್ಯತ್ಯಾಸಗಳನ್ನೂ ತಿಳಿಸಬೇಕು.1969ರಲ್ಲಿ ಬೂಕರ್ ಪ್ರೈಜ್ ಆರಂಭವಾಗಿದೆ. ಇಂಗ್ಲಿಷಿನಲ್ಲಿ ನೇರವಾಗಿ ಬರೆದು ಇಂಗ್ಲೆಂಡ್ ಅಥವಾ ಐರ್ಲೆಂಡಿನಲ್ಲಿ ಪಬ್ಲಿಶಿಂಗ್ ಹೌಸ್ ಮುಖಾಂತರ ಮುದ್ರಿತವಾಗಿ ಪ್ರಕಟವಾಗಿ ನಂತರ ಸ್ಪರ್ಧೆಯಲ್ಲಿ ಗೆದ್ದವರಿಗೆ 50,000 ಪೌಂಡ್ ಮೊತ್ತದ ಬೂಕರ್ ಪ್ರೈಜ್ ನೀಡುತ್ತಾರೆ.
ಇಂಟರ್ ನ್ಯಾಷನಲ್ ಬೂಕರ್ ಪ್ರೈಜ್ ಎನ್ನುವುದು ಇಂಗ್ಲಿಷಿಗೆ ಅನುವಾದ ಸಾಹಿತ್ಯ ಉತ್ತೇಜಿಸುವುದಕ್ಕಾಗಿಯೇ ಸ್ಥಾಪಿತವಾದ, ಅನುವಾದಕರಿಗೆ ನೀಡುವ ಪ್ರೈಜ್. ಈ ಸಂದರ್ಭದಲ್ಲಿ ಮೂಲ ಲೇಖಕರಿಗೂ 50, 000 ಪೌಂಡ್ ಬಹುಮಾನದ ಹಣದಲ್ಲಿ ಅರ್ಧಭಾಗ ನೀಡುತ್ತಾರೆ.
2005ರಿಂದ 2016 ತನಕ ವರ್ಷಕ್ಕೆ ಎರಡು ಬಾರಿ ಸ್ಪರ್ಧೆ ನಡೆಸುತ್ತಿದ್ದರು. ನಂತರ ವರ್ಷಕ್ಕೊಮ್ಮೆ ಸ್ಪರ್ಧೆ ನಡೆಸುತ್ತಿದ್ದಾರೆ. ಯಾವುದೇ ಭಾಷೆಯಿಂದಲಾದರೂ ಇಂಗ್ಲಿಷಿಗೆ ಅನುವಾದಿತವಾದ ಕೃತಿ ಆಗಿರಬೇಕಷ್ಟೆ! ಇದು ಇಂಗ್ಲೆಂಡ್ ಅಥವಾ ಐರ್ಲೆಂಡಿನ ಪಬ್ಲಿಶಿಂಗ್ ಹೌಸ್ ಮುಖಾಂತರ ಮುದ್ರಿತವಾಗಿ ಪ್ರಕಟಿತವಾಗಿರಬೇಕು.
ಬೂಕರ್ ಪ್ರೈಜ್ ಪ್ರತಿಷ್ಠಾನ ವಿಚಿತ್ರ ಷರತ್ತುಗಳನ್ನು ವಿಧಿಸುತ್ತದೆ. ಅದರಲ್ಲಿ ಒಂದು ಸ್ಪರ್ಧೆಗೆ ಲೇಖಕರು, ಅನುವಾದಕರು ತಮ್ಮ ಕೃತಿಗಳನ್ನು ಕಳಿಸುವಂತಿಲ್ಲ. ಪ್ರಕಾಶಕರಷ್ಟೇ ಕಳಿಸಬೇಕು.ಬೂಕರ್ ಪ್ರೈಜ್, ಇಂಟರ್ ನ್ಯಾಷನಲ್ ಬೂಕರ್ ಸಾಮಾನ್ಯ ಕಥಾಸ್ಪರ್ಧೆಗಳಷ್ಟೇ ! ಇವು ಪ್ರಶಸ್ತಿಗಳಲ್ಲ.ಇಂಗ್ಲೆಂಡ್, ಐರ್ಲೆಂಡಿನಲ್ಲಿ ಈ ರೀತಿ ಕಥಾಸ್ಪರ್ಧೆ, ಅನುವಾದ ಸ್ಪರ್ಧೆ ನಡೆಸಿ ಪ್ರೈಜ್ ನೀಡುವ ಅನೇಕಾನೇಕ ಖಾಸಗಿ ಸಂಸ್ಥೆಗಳಿವೆ. ಅವುಗಳಲ್ಲಿ ಡಬ್ಲಿನ್ ಪ್ರೈಜ್ ಎನ್ನುವುದು ಭಾರತೀಯ ರೂಪಾಯಿ ಮೌಲ್ಯದಲ್ಲಿ 1 ಕೋಟಿ 20 ಲಕ್ಷ ರೂಪಾಯಿ ಬಹುಮಾನ ನೀಡುತ್ತದೆ.
ಮುಖ್ಯವಾಗಿ ಹೇಳುವುದಾದರೆ ಬೂಕರ್ ಪ್ರೈಜ್ ನೀಡಿಕೆಯಲ್ಲಿನ ಪೂರ್ವಾಗ್ರಹಗಳು, ಪಕ್ಷಪಾತಗಳು, ಇವರ ಪ್ರಚಾರ ಅಭಿಯಾನಕ್ಕೆ ಪ್ರಕಾಶನ ಸಂಸ್ಥೆಗಳು ದುಡ್ಡು ಸುರಿಯುವುದು, ಪ್ರಕಾಶನ ಸಂಸ್ಥೆಗಳ ನಿಕಟವರ್ತಿಗಳೇ ಕಥಾಸ್ಪರ್ಧೆ ತೀರ್ಪುಗಾರರಾಗುವುದು, ಪ್ರಕಾಶಕರೇ ಪುಸ್ತಕ ಸಲ್ಲಿಸಬೇಕು ಎನ್ನುವುದು. ಇವುಗಳ ಬಗ್ಗೆಯೇ ಆರೋಪಗಳಿವೆ.
ಹಿಂದೆ ಬೂಕರ್ ಪ್ರೈಜ್ ಪಡೆದವರಿಗೆ ಭಾರತದ ಪ್ರಧಾನ ಮಂತ್ರಿ, ಮುಖ್ಯಮಂತ್ರಿಗಳು ಅಭಿನಂದನೆಯನ್ನೂ ಹೇಳಿಲ್ಲ. ಹೇಳಬೇಕಾಗಿಯೂ ಇಲ್ಲ. ಅಭಿನಂದನೆಯನ್ನೇ ಹೇಳದಿರುವಾಗ ಇನ್ನುಹಣ, ನಿವೇಶನ ನೀಡುವುದು ದೂರದ ಮಾತಲ್ಲವೇ ?
ವಿಷಯ ಹೀಗಿರುವಾಗ ಬಾನುಮುಷ್ತಾಕ್ ಕಥೆಗಳ ಇಂಗ್ಲಿಷ್ ಅನುವಾದಕ್ಕೆ ಬೂಕರ್ ಪ್ರೈಜ್ ಬಂದ ನಂತರ ಆಗಿದ್ದೇನು ? ನೀವು ಬಾನು ಮುಷ್ತಾಕ್, ದೀಪಾ ಭಸ್ತಿ ಅವರಿಗೆ ತಲಾ 10 ಲಕ್ಷ ನೀಡಿದಿರಿ. ನಿವೇಶನ ಕೊಟ್ಟಿದ್ದೀರಿ.ನಮ್ಮಲ್ಲಿಯೇ ಅತೀ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿ ನೀಡುವ ಅನೇಕ ಸಂಸ್ಥೆಗಳಿವೆ. ಅವುಗಳ ಪ್ರಶಸ್ತಿ ವಿಜೇತರಿಗೂ ಇದೇ ರೀತಿ ಪುರಸ್ಕಾರ ನೀಡುತ್ತೀರಾ ?
ಅಂದ ಹಾಗೆ ಇಂಥ ಸಂಧರ್ಭಗಳಲ್ಲಿ ಸಾರ್ವಜನಿಕರ ಹಣ, ನಿವೇಶನ ನೀಡಿ ಪುರಸ್ಕರಿಸುವುದು ಬೇರೆ ಯಾವ ರಾಜ್ಯದಲ್ಲಿಯೂ ಇಲ್ಲ. ವಿದೇಶಗಳಲ್ಲಿಯೂ ಇಲ್ಲ.
ಇಂಗ್ಲೆಂಡಿನಲ್ಲಿ ಖಾಸಗಿ ಪ್ರತಿಷ್ಠಾನ ನೀಡುವ ಬೂಕರ್ ಪ್ರೈಜಿನಂತೆಯೇ ಕಥಾಸ್ಪರ್ಧೆ ನಡೆಸುವ ಹಲವಾರು ಖಾಸಗಿ ಸಂಸ್ಥೆಗಳಿವೆ. ಕೆಲವಂತೂ ವರ್ಷಕ್ಕೆ ಎರಡು, ಮೂರು ಬಾರಿ ಸ್ಪರ್ಧೆ ನಡೆಸಿ ಬಹುಮಾನ ನೀಡುತ್ತವೆ. ಮುಂದೆ ಇಂಥ ಸ್ಪರ್ಧೆಗಳ ಬಹುಮಾನ ಪಡೆದವರಿಗೂ ಇದೇ ರೀತಿ ತಲಾ 10ಲಕ್ಷ ರೂಪಾಯಿ ಮತ್ತು ನಿವೇಶನ ನೀಡುತ್ತೀರಾ ? ಒಂದು ವೇಳೆ ಸರ್ಕಾರ ಹೀಗೆ ಪುರಸ್ಕಾರ ನೀಡದಿದ್ದರೆ ವಿದೇಶದ ಪ್ರೈಜ್ ಪಡೆದವರು ಕೋರ್ಟಿಗೆ ಹೋಗುವ ಸಾಧ್ಯತೆ ಇರುತ್ತದೆಯಲ್ಲವೇ?
ದಕ್ಷ ಆಡಳಿತಗಾರ ಜೊತೆಗೆ ಹಣಕಾಸು ಖಾತೆಯ ನಿರ್ವಹಣೆಯಲ್ಲಿ ನುರಿತವರೂ ಆದ ನಿಮಗೆ ಸರ್ಕಾರಿ ಖಜಾನೆಯ ಉತ್ತರದಾಯಿತ್ವದ ಬಗ್ಗೆ ಹೇಳಿಕೊಡುವ ಅಗತ್ಯವಿಲ್ಲ.
ಇಂಗ್ಲೆಂಡ್ ಸರ್ಕಾರ, ಅಲ್ಲಿಯ ಸರ್ಕಾರಿ ಪ್ರಾಧಿಕಾರ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿದ್ದು ರಾಜ್ಯ ಸರ್ಕಾರ ಹೀಗೆ ಪುರಸ್ಕರಿಸಿದ್ದರೆ ಅರ್ಥವಿರುತ್ತಿತ್ತು ! ಕಾರ್ಪೊರೇಟ್ ಹಿತಾಸಕ್ತಿ ಹೊಂದಿರುವ ಸಂಸ್ಥೆಯೊಂದು ನಡೆಸುವ ಕಥಾಸ್ಪರ್ಧೆಯಲ್ಲಿ ಪ್ರೈಜ್ ಪಡೆದವರಿಗೆ ಹಣ, ನಿವೇಶನ ನೀಡಿ ಪುರಸ್ಕರಿಸಿ ತಪ್ಪು ಸಂಪ್ರದಾಯಕ್ಕೆ ನಾಂದಿ ಹಾಡಿದ್ದೀರಿ! ದಯವಿಟ್ಟು ಯೋಚಿಸಿ, ತೀರ್ಮಾನಿಸಿ.
