Kannadaರಾಜಕೀಯ

ರಾಹುಲ್‌ ಗಾಂಧಿ ಇನ್ನೂ ರಾಜಕೀಯವಾಗಿ ಪಳಗಬೇಕಾಗಿದೆಯೇ ?

ಇಂದು ರಾಹುಲ್ ಗಾಂಧಿ ಅವರ (ಜೂನ್ 19, 1970)  ಜನ್ಮದಿನ. 56ನೇ ವರ್ಷಕ್ಕೆ ಅಡಿಯಿರಿಸಿದ್ದಾರೆ. ಭಾರತೀಯ ರಾಜಕಾರಣದ ಅತ್ಯಂತ ಚರ್ಚಿತ ಮತ್ತು ಗಮನಿಸಲ್ಪಡುವ ನಾಯಕರಲ್ಲಿ ಇವರೂ ಒಬ್ಬರು. ವೈಯಕ್ತಿಕವಾಗಿ ನಾನು ಮೆಚ್ಚುವ ರಾಜಕಾರಣಿಗಳಲ್ಲಿ ಒಬ್ಬರು. ಇವರ ರಾಜಕೀಯ ಜೀವನವನ್ನು ವಸ್ತುನಿಷ್ಠವಾಗಿ ವಿಶ್ಲೇಷಿಸಿದರೆ, ಅದರಲ್ಲಿ ಕೆಲವು ಪ್ರಮುಖ ಅಂಶಗಳನ್ನು ಕಾಣಬಹುದು.

ಭಾವನಾತ್ಮಕ ಜೀವಿ  ಮತ್ತು ಮೌಲ್ಯಾಧಾರಿತ ರಾಜಕಾರಣ

ರಾಹುಲ್ ಗಾಂಧಿ ಅವರು ಕೇವಲ ಸಾಂಪ್ರದಾಯಿಕ ರಾಜಕೀಯ ಪಟ್ಟುಗಳನ್ನು ಬಳಸುವವರಿಗಿಂತ ಸೈದ್ದಾಂತಿಕ  ಅಥವಾ ಭಾವನಾತ್ಮಕ ನಿಲುವಿಗೆ ಹೆಚ್ಚು ಒತ್ತು ನೀಡುತ್ತಾರೆ ಎಂದನಿಸಿದೆ. ಕೆಲವೊಮ್ಮೆ ಅವರು ರಾಜಕೀಯ ತಂತ್ರ, ಪಟ್ಟುಗಳನ್ನು ಕಲಿತಂತೆ ಕಂಡರೂ ಇನ್ನೂ ಕೆಲವೊಮ್ಮೆ ರಾಜಕಾರಣಿಯಾಗಿ ಪಳಗಬೇಕಿದೆ ಎನಿಸುತ್ತದೆ. ಕೆಲವೊಮ್ಮೆ ಅವರು ತಕ್ಷಣದ ರಾಜಕೀಯ ಲಾಭ-ನಷ್ಟಗಳನ್ನು ಲೆಕ್ಕಿಸದೆ ಮಾತನಾಡುತ್ತಾರೆ. ಇದು ಖಂಡಿತ “ಪ್ರಾಮಾಣಿಕತೆ ಮತ್ತು ಸತ್ಯದ ರಾಜಕಾರಣ” ಎನ್ನುವುದರಲ್ಲಿ ಅನುಮಾನವಿಲ್ಲ!

ಇದೇ ಹೊತ್ತಿನಲ್ಲಿ ಇಂಥ ನಡೆಯನ್ನು  ಟೀಕಾಕಾರರು  “ರಾಜಕೀಯ ಪ್ರಬುದ್ಧತೆಯ ಕೊರತೆ” ಎಂದು ವ್ಯಾಖ್ಯಾನಿಸುತ್ತಾರೆ. ರಾಜಕಾರಣದಲ್ಲಿ ಕೇವಲ ಸಿದ್ಧಾಂತಗಳಷ್ಟೇ ಅಲ್ಲದೆ, ಪ್ರಾಯೋಗಿಕ ತಂತ್ರಗಾರಿಕೆಯೂ ಮುಖ್ಯವಾಗುವುದರಿಂದ ಈ ಭಾವನಾತ್ಮಕ ಧೋರಣೆ ಕೆಲವೊಮ್ಮೆ ಹಿನ್ನಡೆಗೆ ಕಾರಣವಾಗಿದ್ದೂ ಇದೆ.

ಮಂದಗತಿ ಅಥವಾ ಅತಿ ಆತುರದ ಧೋರಣೆ?

ರಾಹುಲ್‌ ಗಾಂಧಿ ಅವರು ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಏರುಪೇರುಗಳಿವೆ ಎಂಬುದರಲ್ಲಿ ನನಗಂತೂ ಅನುಮಾನವಿಲ್ಲ. ಇದಕ್ಕೆ ನಮ್ಮ ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಳ್ಳುತ್ತೇನೆ. 2013ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಜಿ.ಪರಮೇಶ್ವರ್‌ ಅವರು ರಾಜ್ಯ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರು. ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದರು. ಇದರಲ್ಲಿ ಇತರ ನಾಯಕರ ಪಾತ್ರವೂ ಇದೆ. ಆದರೆ ಪರಮೇಶ್ವರ್‌ ಪ್ರಮುಖ ಪಾತ್ರ ಮರೆಯುವಂತಿಲ್ಲ. ಆ ಚುನಾವಣೆಯಲ್ಲಿ ಇವರಿಗೆ ಸೋಲುಂಟಾಯಿತು. ಆದರೂ ದಶಕಗಳಿಂದ ಕಾಂಗ್ರೆಸಿಗೆ ರಾಜ್ಯದ ದಲಿತರು ನೀಡುತ್ತಲೇ ಬಂದಿರುವ ಬೆಂಬಲ ಪರಿಗಣಿಸಿ ಪರಮೇಶ್ವರ್‌ ಅವರನ್ನು ಮುಖ್ಯಮಂತ್ರಿ ಮಾಡಬಹುದಾಗಿತ್ತು. ಆರು ತಿಂಗಳ ಒಳಗೆ ಎಂ.ಎಲ್.ಸಿ. ಅಥವಾ ಎಂ.ಎಲ್‌.ಎ. ಆಗಿ ಆರಿಸಿ ತರಬಹುದಾಗಿತ್ತು.

ಈ ಸಂದರ್ಭದಲ್ಲಿ ಪರಮೇಶ್ವರ್‌ ಅವರನ್ನು ಮುಖ್ಯಮಂತ್ರಿ ಮಾಡುವ ನಿರ್ಧಾರವನ್ನು ರಾಹುಲ್‌ ಗಾಂಧಿ ಮಾಡಬೇಕಿತ್ತು. ಕಾಂಗ್ರೆಸ್‌ ಪಕ್ಷಕ್ಕೆ ಬಂದು ಏಳೇ ವರ್ಷವಾಗಿದ್ದ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿದರು. ಇವರು 2013 ರಿಂದ 2018ರ ತನಕ ಉತ್ತಮ ಸರ್ಕಾರ ನೀಡಿದರು. ಆದರೆ 2018ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಸೋತರು.

ಕಾದು ನೋಡುವ ತಂತ್ರ ಅನುಸರಿಸಬಹುದಾಗಿತ್ತು

ಈ ಸಂದರ್ಭದಲ್ಲಿ ಅಂದರೆ 2018ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 104 ಶಾಸಕ ಸ್ಥಾನ ಗಳಿಸುವ ಮೂಲಕ ಅತೀ ದೊಡ್ಡ ಪಕ್ಷವಾಗಿ ಹೊಮ್ಮಿತು. ಕಾಂಗ್ರೆಸ್‌ 80 ಸ್ಥಾನ ಗೆಲ್ಲುವ ಮೂಲಕ ಎರಡನೇ ಅತೀದೊಡ್ಡ ಪಕ್ಷವಾಯಿತು. ಜೆಡಿಎಸ್‌ 37 ಸ್ಥಾನ ಗಳಿಸಿತ್ತು. ಈ ಸಂದರ್ಭದಲ್ಲಿ ಕಾಂಗ್ರೆಸ್‌ ಕಾದು ನೋಡುವ ತಂತ್ರ ಅನುಸರಿಸಬೇಕಿತ್ತು. ಆದರೆ ಅದರ ಬದಲು ರಾಹುಲ್‌ ಗಾಂಧಿ ಸೂಚನೆಯಂತೆ ಕಾಂಗ್ರೆಸ್‌ ಪಕ್ಷದ ನಾಯಕರು ಜೆಡಿಎಸ್‌ ಬಾಗಿಲಿಗೆ ಧಾವಿಸಿದರು.  ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಲು ಒಪ್ಪಿದರು.

ಚುನಾವಣೆಯಲ್ಲಿ 80 ಸ್ಥಾನ ಗಳಿಸಿದ್ದ ಕಾಂಗ್ರೆಸ್‌ ಪಕ್ಷವು 37 ಸ್ಥಾನ ಗಳಿಸಿದ್ದ ಜೆಡಿಎಸ್‌ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವ ಅವಶ್ಯಕತೆಯಾಗಲಿ, ತುರ್ತಾಗಲಿ ಇರಲಿಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕೆನ್ನುವ ಅತುರದಿಂದ ರಾಹುಲ್ ಹೀಗೆ ಮಾಡಿದರು. 2006ರಲ್ಲಿ ಕಾಂಗ್ರೆಸ್-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಅಜಾತಶತ್ರು ರಾಜಕಾರಣಿ ಧರ್ಮಸಿಂಗ್‌ ಅವರಿಗೆ, ಕಾಂಗ್ರೆಸ್‌ ಪಕ್ಷಕ್ಕೆ ವಿಶ್ವಾಸಘಾತ ಮಾಡಿ ಕುಮಾರಸ್ವಾಮಿ ಅವರು ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ್ದನ್ನು ರಾಹುಲ್‌ ಗಾಂಧಿ ಮರೆತರು. 20 ತಿಂಗಳ ನಂತರ ಬಿ.ಎಸ್. ಯಡಿಯೂರಪ್ಪ‌ ಅವರಿಗೆ ಮುಖ್ಯಮಂತ್ರಿ ಅಧಿಕಾರ ಹಸ್ತಾಂತರ ಒಪ್ಪಂದದ ಮಾತು ತಪ್ಪಿದ್ದನ್ನೂ ಮರೆತರು.

ರಾಜಕಾರಣದಲ್ಲಿ ಯಾರು ಶಾಶ್ವತ ಮಿತ್ರರು, ಶತ್ರುಗಳು ಇರುವುದಿಲ್ಲ. ಈ ಮಾತನ್ನು ಒಪ್ಪೋಣ. ಆದರೆ ಕಡಿಮೆ ಸ್ಥಾನ ಗಳಿಸಿದ್ದ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟರೆ ಆ ಪಕ್ಷ ರಾಜಕೀಯವಾಗಿ ಬಲಿಷ್ಠವಾಗಬಹುದು ಎಂಬ ಗ್ರಹಿಕೆಯಾದರೂ ಇರಬೇಕಲ್ಲವೇ ? ಆದರೆ ಅಂದು ರಾಹುಲ್‌ ಗಾಂಧಿ ದುಡುಕಿದರು. ಮುಂದೆ ಈ ಸಮ್ಮಿಶ್ರ ಸರ್ಕಾರವೂ ಅಲ್ಪಾವಧಿಯದ್ದಾಯಿತು!

ನಂತರ ಅಂದರೆ 2023ರ ಚುನಾವಣೆಯಲ್ಲಿ ಕಾಂಗ್ರೆಸ್‌ 136 ಸ್ಥಾನ ಗಳಿಸಿ ಭರ್ಜರಿ ಗೆಲುವು ಸಾಧಿಸಿತು. ಈ ಮಟ್ಟದ ಗೆಲುವು ಸಾಧಿಸಲು ಕಾಂಗ್ರೆಸಿನ ಎಲ್ಲ ನಾಯಕರ ಪರಿಶ್ರಮವೂ ಇತ್ತು. ಆದರೆ ಪ್ರಮುಖವಾಗಿ ಪರಿಶ್ರಮ ಪಟ್ಟಿದ್ದು ಪಕ್ಷದ ಅಧ್ಯಕ್ಷರಾಗಿದ್ದ ಡಿ.ಕೆ.ಶಿವಕುಮಾರ್‌ ಎಂಬುದರಲ್ಲಿ ಎರಡು ಮಾತಿಲ್ಲ. ಇವರ ನೇತೃತ್ವದಲ್ಲಿ ಪಕ್ಷವು ಬಿಜೆಪಿ ಸರ್ಕಾರದ ವಿರುದ್ಧ ಅಭೂತಪೂರ್ವ ಎನ್ನುವ ಮಟ್ಟದ ಹೋರಾಟಗಳನ್ನು ಸಂಘಟಿಸಿತು.

ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡುವ ನಿರ್ಧಾರವನ್ನು ರಾಹುಲ್‌ ಗಾಂಧಿ ತೆಗೆದುಕೊಂಡರು. ಇಂಥ ನಿರ್ಧಾರ ತೆಗೆದುಕೊಳ್ಳುವ ಯಾವ ರಾಜಕೀಯ ಅಗತ್ಯತೆಯೂ, ತುರ್ತೂ ಇರಲಿಲ್ಲ. ಇದರ ಬದಲು ಜಿ.ಪರಮೇಶ್ವರ್‌ ಅಥವಾ ಸತೀಶ್‌ ಜಾರಕಿಹೊಳಿ ಅಥವಾ ಎಚ್.ಕೆ.ಪಾಟೀಲ್‌ ಅವರನ್ನು ಮೊದಲ ಎರಡೂವರೆ ವರ್ಷ ಅವಧಿಗೆ ಮುಖ್ಯಮಂತ್ರಿ ಮಾಡಿ ಎರಡನೇ ಅವಧಿಗೆ ಡಿ.ಕೆ. ಶಿವಕುಮಾರ್‌ ಅವರನ್ನು ಮುಖ್ಯಮಂತ್ರಿ ಮಾಡಬೇಕಿತ್ತು.

ಮೊದಲ ಅವಧಿಗೆ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿದರು. ಆದರೆ 2013 ರಿಂದ 2018ರವರೆಗೆ ಇವರು ನೀಡಿದ ದಕ್ಷ ಆಡಳಿತ ಮತ್ತೆ ಪುನರಾವರ್ತಿತ ಆಗಲಿಲ್ಲ. ಎರಡೂವರೆ ವರ್ಷ ಅವಧಿ ಮುಗಿದ ತಕ್ಷಣಕ್ಕೆ ಅಧಿಕಾರ ಹಸ್ತಾಂತರಕ್ಕೂ ಮುಂದಾಗಲಿಲ್ಲ. ಇವರಿಗೆ ಸೂಚನೆ ನೀಡಲು ರಾಹುಲ್‌ ಗಾಂಧಿ ಅವರು ಆರು ತಿಂಗಳು ತಡಮಾಡಿದರು. ಈ ಸಂದರ್ಭದಲ್ಲಿ ಪಕ್ಷದಲ್ಲಿ ಗೊಂದಲ ಉಂಟಾಯಿತು. ಶಾಸಕರ ಭಿನ್ನಧ್ವನಿ ಬೆಳೆಯುತ್ತಾ ಹೋಯಿತು. ಸ್ವಾಭಾವಿಕವಾಗಿ ಸರ್ಕಾರದ ಮೇಲೂ ಪರಿಣಾಮಗಳು ಉಂಟಾದವು. ಅದರ ವೇಗ ನಿಧಾನವಾಯತು. ವಿರೋಧ ಪಕ್ಷ ಬಿಜೆಪಿಯ ಟೀಕೆಗಳಿಗೂ ಅವಕಾಶವಾಯಿತು. ಇದಕ್ಕೆಲ್ಲ ರಾಹುಲ್‌ ಗಾಂಧಿ ಅವರು ತಕ್ಷಣದ ನಿರ್ಧಾರ ತೆಗೆದುಕೊಳ್ಳದೇ ಇರುವುದು ಕಾರಣವಲ್ಲವೇ ?

ರಾಷ್ಟ್ರಮಟ್ಟದಲ್ಲಿ ನೋಡುವುದಾದರೆ 2014 ಮತ್ತು 2019 ರ ಲೋಕಸಭಾ ಚುನಾವಣೆಗಳ ನಂತರ ಪಕ್ಷವನ್ನು ಪುನರ್ರಚಿಸುವಲ್ಲಿ ಅಥವಾ ತಕ್ಷಣದ ಬಿಕ್ಕಟ್ಟುಗಳನ್ನು ಪರಿಹರಿಸುವಲ್ಲಿಯೂ ರಾಹುಲ್‌ ಗಾಂಧಿ ಅವರು ತೀರಾ ನಿಧಾನಗತಿಯ ಧೋರಣೆ ತಳೆದರು ಎನಿಸುತ್ತದೆ.

ಇವೆಲ್ಲದರ ನಡುವೆಯೂ ಕೂಡ ರಾಹುಲ್‌ ಗಾಂಧಿ ಅವರು ಗಮನಾರ್ಹ ಪ್ರಮುಖ ರಾಜಕಾರಣಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದು ಹೇಗೆ ? ಎರಡನೇ ಭಾಗದಲ್ಲಿ ನನ್ನ ಗ್ರಹಿಕೆಗಳನ್ನು ನಿಮ್ಮ ಮುಂದೆ ಇಡುತ್ತೇನೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!