Home ಸಿನಿಮಾKannadaಕರುಣೆ ಇಲ್ಲದ ಕಾಮ ಕ್ರೌರ್ಯ ಕಾಂಚಾಣ ಜಗತ್ತಿನ ಅನಾವರಣ

ಕರುಣೆ ಇಲ್ಲದ ಕಾಮ ಕ್ರೌರ್ಯ ಕಾಂಚಾಣ ಜಗತ್ತಿನ ಅನಾವರಣ

by Kumara Raitha
0 comments

ಬಹುತೇಕರು ಒಂದೇ ಜಗತ್ತು ಇದೆ ಎಂದು ನಂಬಿದ್ದಾರೆ. ಆದರೆ ಇದು ಸತ್ಯ ಅಲ್ಲ; ಒಂದೇ ಜಗತ್ತಿನಲ್ಲಿ ಏಕಕಾಲದಲ್ಲಿ ನಾನಾ ಜಗತ್ತುಗಳಿವೆ. ಅವುಗಳಲ್ಲಿ ಡ್ರಗ್ಸ್, ವೆಪನ್, ಗ್ಯಾಬ್ಲಿಂಗ್, ಕಾರ್ಟೆಲ್ ಗಳ ಜಗತ್ತೇ ನರಕದ ಪ್ರತಿರೂಪ. ಇಲ್ಲಿರುವವರು ಸಾವು ಎಂಬುದನ್ನು ಬೆನ್ನಿಗೆ ಕಟ್ಟಿಕೊಂಡು ಕ್ಷಣಗಳ ಲೆಕ್ಕದಲ್ಲಿ ಜೀವಿಸುತ್ತಾರೆ. ಹೀಗೆ ಬದುಕುವುದೇ ಅಲ್ಲಿ ಕರುಣೆ ಇಲ್ಲದ ಕಾಮ ಕ್ರೌರ್ಯ ಕಾಂಚಾಣ ಜಗತ್ತನ್ನೂ ಸೃಷ್ಟಿಸಿದೆ. ಇಂಥದ್ದೊಂದು ಲೋಕವನ್ನೂ, ಆಧಿಪತಿಯಾಗಲು ಹೊರಟನವನ ಮಾನಸಿಕ ತುಮುಲಗಳನ್ನು “ಟಾಕ್ಸಿಕ್” (Toxic) ಸಿನಿಮಾ ಅನಾವರಣ ಮಾಡಲು ಯತ್ನಿಸಿದೆ.

ಈ ಜಗತ್ತಿನ ಭಾಷೆಯೇ ಕ್ರೌರ್ಯ ! ಅದನ್ನು ಸಾಧ್ಯವಾದಷ್ಟೂ ಮಟ್ಟಿಗೆ ತೆರೆದಿಡುವ ಕಾರ್ಯವನ್ನು “ಟಾಕ್ಸಿಕ್” (Toxic) ಮಾಡಿದೆ. ಇಲ್ಲಿಯೂ ಅಪರೂಪ ಎನ್ನುವಂತೆ ಕರುಣೆಯ ರಸವೂ ಕೊಂಚ ಜಿನುಗಿದೆ. ಅದಕ್ಕೆ ರಾಯ (Yash) ತನ್ನ ಅಕ್ಕ ತನಗಾಗಿ ಉಂಡ ಕಷ್ಟಕಾರ್ಪಣ್ಯಗಳೇ ಕಾರಣ. ಹೆಣ್ಣನ್ನು ಬಲಾತ್ಕರಿಸದಿರಲು ಇದೇ ಕಾರಣವಾಗಿದೆ. ಹುಟ್ಟುತ್ತಲೇ ಕ್ರೌರ್ಯ ಅನುಭವಿಸಿದ ಮಕ್ಕಳು ಇನ್ಯಾಗೆ ಬೆಳೆಯಬಹುದು ಎಂಬುದನ್ನೂ ಸಿನಿಮಾ ಹೇಳುತ್ತದೆ.
ಇಲ್ಲಿ ಕಾಮ, ಕುಡಿತ, ಡ್ರಗ್ಸ್ ಮತ್ತು ಡ್ರಿಂಕ್ಸ್ ನಶೆ ಉಸಿರಾಟದಷ್ಟೇ ಸಹಜ. ರಾಯ ಹೊರತಾದವನಲ್ಲ. ಆದರೆ ಅವನ ಜಗತ್ತಿಗೆ ಆಕಸ್ಮಿಕವಾಗಿ ಪ್ರವೇಶಿಸಿದ ನಾಡಿಯಾ ಅವನಲ್ಲಿ ಭಾವನೆಗಳ ತರಂಗಗಳನ್ನು ಎಬ್ಬಿಸುತ್ತಾಳೆ; ಅವಳಿದ್ದಾಗಲೂ ಇಲ್ಲದಿದ್ದಾಗಲೂ ಅವುಗಳು ಅವನನ್ನು ಆವರಿಸುತ್ತಲೇ ಹೋಗಿ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತವೆ. ಅವಳು ಕೊಟ್ಟ ಅವಳ ಪ್ರತಿರೂಪದ ಗಂಡುಮಗುವಿನ ಆಕಸ್ಮಿಕ ಸಾವು ಸಹ ಆತನನ್ನು ಕಾಡುತ್ತಲೇ ಆವರಿಸುತ್ತಾ, ಆವರಿಸಿ ಕಾಡುತ್ತಾ ಬೆಳೆಯುತ್ತಾ ಹೋಗುತ್ತದೆ. ಇದು ಅವನ ಪ್ರತಿರೂಪವೂ ಹೌದು. ಅವುಗಳ ಆವೇಗವನ್ನು – ಸಂಘರ್ಷವನ್ನು “ಟಾಕ್ಸಿಕ್” (Toxic) ಸಮರ್ಥವಾಗಿ ಕಟ್ಟಿಕೊಡುತ್ತದೆ. ಹೀಗಾಗಿ ಇದೊಂದು ಸೈಕಲಾಜಿಕಲ್ ತಾಕಲಾಟದ ಕಥೆಯೂ ಹೌದು, ಇಲ್ಲಿ ಕಾಮ ವಿಜೃಂಭಿಸಿದಂತೆ ಕಂಡರೂ ಅಲ್ಲಿ ಪ್ರೀತಿ ಎಂಬ ಕಾಮನೆಯೂ ಇದೆ.

ಚಿತ್ರದ ಕಥೆಯನ್ನು ವಿವರವಾಗಿ ಚರ್ಚಿಸುವ ಕಾರ್ಯವನ್ನು ನಾನು ಮಾಡುವುದಿಲ್ಲ. ಅದು ಸಿನಿಮಾ ನೋಡುವ ನಿಮ್ಮ ಆಸಕ್ತಿಯನ್ನು ಕುಗ್ಗಿಸಬಹುದು. “ಟಾಕ್ಸಿಕ್” (Toxic) ಕಟ್ಟಿದ ರೀತಿ,ಬೆಳೆಸಿದ ಬಗೆ ಕೂಡ ಭಾರತೀಯ ಅಂಡರ್ ವರ್ಲ್ದ್ ಸಿನಿಮಾಗಳ ರೀತಿಗಿಂತ ವಿಭಿನ್ನವಾಗಿದೆ. ಅಂದ ಹಾಗೆ ಕಾರ್ಟೆಲ್ ಜಗತ್ತಿನ ಮುಂದೆ ಅಂಡರ್ ವರ್ಲ್ಡ್ ಎಂಬುವುದು ಧೂಳಿಗೆ ಸಮಾನ ಎಂದರೆ ಖಂಡಿತ ಉತ್ಪ್ರೇಕ್ಷೆಯಲ್ಲ.
ಮುಖ್ಯವಾಗಿ “ಟಾಕ್ಸಿಕ್” (Toxic) ಸಿನಿಮಾದ ಮೇಲೆ ಮೆಕ್ಸಿಕೋ ಹಾಗೂ ಲ್ಯಾಟಿನ್ ಅಮೆರಿಕಾದ ಕಾರ್ಟೆಲ್ ಜಗತ್ತನ್ನು ಆಧರಿಸಿದ ಪ್ರಭಾವಿ ಸಿನಿಮಾಗಳು ಮತ್ತು ವೆಬ್ ಸರಣಿಗಳ ದಟ್ಟ ಪ್ರಭಾವವಿದೆ.

“ಟಾಕ್ಸಿಕ್” (Toxic) ಸಿನಿಮಾದ ಉಪಶೀರ್ಷಿಕೆ ‘A Fairy Tale for Grown-ups’ ಎಂದಿದ್ದರೂ, ಇದರ ಕಥಾಹಂದರವು ಗೋವಾ ಹಾಗೂ ಅಂತಾರಾಷ್ಟ್ರೀಯ ಡ್ರಗ್, ಗ್ಯಾಬ್ಲಿಂಗ್ ನೆಟ್ವರ್ಕ್ಗಳ ಸುತ್ತ ಸಾಗುತ್ತದೆ. ಮೆಕ್ಸಿಕನ್ ಕಾರ್ಟೆಲ್ ಕಥೆಗಳಲ್ಲಿ ಕಂಡುಬರುವ ನೆರಳಿನ ಸಾಮ್ರಾಜ್ಯ (Cartel) ಹಾಗೂ ಸಿಂಡಿಕೇಟ್ ಕಾನ್ಸೆಪ್ಟ್ ಇಲ್ಲೂ ಪ್ರಮುಖವಾಗಿದೆ.

‘ನಾರ್ಕೋಸ್’ ಅಥವಾ ‘ಸಿಕಾರಿಯೋ’ ನಂತಹ ಕಾರ್ಟೆಲ್ ಆಧಾರಿತ ವೆಬ್ ಸರಣಿ/ಸಿನಿಮಾಗಳಲ್ಲಿ ಬಳಸಲಾಗುವ ‘ಡಾರ್ಕ್’, ‘ಗ್ರೂಮಿ’ ಮತ್ತು ‘ನಿಯಾನ್/ಸೇಪಿಯಾ ಟೋನ್’ ಶೈಲಿಯನ್ನು ಈ ಚಿತ್ರದ ಮೇಕಿಂಗ್ನಲ್ಲಿ ಬಳಸಲಾಗಿದೆ. ಕಾರ್ಟೆಲ್ ಶೈಲಿಯ ಕಥೆಗಳಲ್ಲಿ ನಾಯಕ ಬರಿ ಗೂಂಡಾ ಆಗಿರದೆ, ಸಾಮ್ರಾಜ್ಯ ಕಟ್ಟುವ ಒಬ್ಬ ತಂತ್ರಜ್ಞ ಅಥವಾ ಕ್ರೂರ ಸಾಮ್ರಾಟ. “ಟಾಕ್ಸಿಕ್” (Toxic) ಸಿನಿಮಾದಲ್ಲಿ ಯಶ್ ಅವರ ಲುಕ್, ಹ್ಯಾಟ್, ಸಿಗಾರ್ ಮತ್ತು ವಿಂಟೇಜ್ ಗನ್ ಬಳಕೆಯು ಕ್ಲಾಸಿಕ್ ಹಾಲಿವುಡ್ ಕಾರ್ಟೆಲ್ ಮತ್ತು ಗ್ಯಾಂಗ್ಸ್ಟರ್ ಲುಕ್ ಅನ್ನು ನೆನಪಿಸುತ್ತದೆ.

ಮೆಕ್ಸಿಕನ್ ಕಾರ್ಟೆಲ್ ಸಿನಿಮಾಗಳ ಮೂಲ ಸೂತ್ರವೇ ‘ಕುಟುಂಬ, ಸಾಮ್ರಾಜ್ಯ ಮತ್ತು ದ್ರೋಹ’. ಟಾಕ್ಸಿಕ್ನಲ್ಲೂ ಸಹೋದರಿ ಅಥವಾ ಕುಟುಂಬದ ಬಾಂಧವ್ಯದ ಹಿನ್ನೆಲೆಯಲ್ಲಿ ಆಂತರಿಕ ಯುದ್ಧ ನಡೆಯುತ್ತದೆ ಎಂಬುದು ಗಮನಾರ್ಹ!

ಮೂಲಕಥೆ ಗೀತು ಮೋಹನ್ ದಾಸ್ ಅವರದ್ದಾದರೂ ಇದನ್ನು ಸಿನಿಮ್ಯಾಟಿಕ್ ಕಥನವಾಗಿ ಕಟ್ಟುವ ಕಾರ್ಯದಲ್ಲಿ ನಟ ಯಶ್ ಕೂಡ ಭಾಗಿಯಾಗಿದ್ದಾರೆ. ಬರೆವಣಿಗೆಯಲ್ಲಿಯೂ ಅವರ ಪಾಲ್ಗೊಳ್ಳುವಿಕೆ ಇದೆ. ನಿರ್ಮಾಣದಲ್ಲಿಯೂ ವೆಂಕಟ್ ಕೆ ನಾರಾಯಣ ಅವರ ಜೊತೆ ಪಾಲುದಾರಿಕೆ ಇದೆ ಎಂಬುದು ಗಮನಾರ್ಹ ಸಂಗತಿ

“ಟಾಕ್ಸಿಕ್” (Toxic) ಯಶ್, ಟಿಕೇಟ್ ಪಾತ್ರಧಾರಿಯ ಬಾಲ್ಯದ ವರ್ಶನ್ ಪಾತ್ರಧಾರಿ ಕಬೀರ್ ಪಾವ್ಹಾ, ನಾಡಿಯಾ ಪಾತ್ರಧಾರಿ ಕಿಯಾರಾ ಅಡ್ವಾಣಿ ಆವರಿಸಿಕೊಂಡಿದ್ದಾರೆ. ಉಳಿದಂತೆ ನಯನಾ ತಾರಾ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ, ಹುಮಾ ಖುರೇಷಿ ಪಾತ್ರಗಳ ಔಚಿತ್ಯ ಅರಿತು ನಟಿಸಿದ್ದಾರೆ.

“ಟಾಕ್ಸಿಕ್” (Toxic) ಸಿನಿಮಾಗೆ ನೀಡಿರುವ ಹಿನ್ನೆಲೆ ಸಂಗೀತ, ಹಾಡಿನ ಧಾಟಿ ಸಹ ಕಾರ್ಟೆಲ್ ಜಗತ್ತು ಕುರಿತ ಪಾಶ್ಚಿಮಾತ್ಯ ಸಿನಿಮಾ, ಬೆಬ್ ಸರಣಿಗಳ ಸಂಗೀತವನ್ನೇ ಅನುಕರಿಸಿದೆ. ಈ ಕೆಲಸವನ್ನು ಹಿನ್ನೆಲೆ ಸಂಗೀತ ನಿರ್ದೇಶಕರ ತಂಡ ಅಚ್ಚುಕಟ್ಟಾಗಿ ಮಾಡಿದೆ. ಸಂಕಲನಕಾರ ಉಜ್ವಲ್ ಕುಲಕರ್ಣಿ ತಮ್ಮ ಕೆಲಸವನ್ನು ಉತ್ತಮವಾಗಿ ಮಾಡಿದ್ದಾರೆ.

“ಟಾಕ್ಸಿಕ್” (Toxic) ಸಿನಿಮಾದಲ್ಲಿ Vfx ಅನ್ನು ಅತೀ ಎನಿಸುವಷ್ಟು ಮಟ್ಟಿಗೆ ಬಳಸಲಾಗಿದೆ. ಕ್ಲೈಮಾಕ್ಸ್ ಅನ್ನು ಅನಗತ್ಯವಾಗಿ ಲಂಬಿಸಲಾಗಿದೆ. ಈ ವಿಷಯಗಳಲ್ಲಿ ಸಿನಿಮಾ ತಂತ್ರಜ್ಞರ ತಂಡ ಕೊಂಚ ಸಂಯಮ ತೋರಬಹುತ್ತಿತ್ತು. ಕಾರ್ಟೆಲ್ ಜಗತ್ತಿನ ಜೊತೆ ಹೆಣೆದುಕೊಂಡ ಭಾವ – ಭಾವನೆಗಳನ್ನು “ಟಾಕ್ಸಿಕ್” (Toxic) ಸಿನಿಮಾ ಉತ್ತಮವಾಗಿ ನಿರೂಪಿಸಿದೆ ಎಂಬುದು ಮುಖ್ಯ!

You may also like

Leave a Comment

error: Content is protected !!