Home ಸಿನಿಮಾKannadaದೃಶ್ಯ ವೈಭವದ ನಡುವೆ ಕಳೆದುಹೋಯ್ತೆ ರಾಮಾಯಣ ಕಥೆಯ ಆತ್ಮ ?

ದೃಶ್ಯ ವೈಭವದ ನಡುವೆ ಕಳೆದುಹೋಯ್ತೆ ರಾಮಾಯಣ ಕಥೆಯ ಆತ್ಮ ?

ಯಶ್ ಅಭಿನಯದ ರಾಮಾಯಣ ಚಿತ್ರದ ಒಂದು ವಿಮರ್ಶಾತ್ಮಕ ನೋಟ

by Kumara Raitha
0 comments

ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತ ಆಧರಿಸಿ ಅನೇಕ ಚಲನಚಿತ್ರಗಳು – ಟೆಲಿವಿಷನ್‌ ಧಾರವಾಹಿಗಳು ಬಂದಿವೆ. ಹಲವು ಪ್ರೇಕ್ಷಕರ ಮನಗೆದ್ದಿವೆ. ಇವುಗಳ ಜೊತೆಗೆ ಇಲ್ಲಿಯ ಪಾತ್ರಗಳನ್ನು ಆಧರಿಸಿ ಹೊಸಹೊಸ ಕಥಾನಕಗಳು ಕನ್ನಡವೂ ಸೇರಿದಂತೆ ಭಾರತೀಯ ಇತರ ಭಾಷೆಗಳಲ್ಲಿಯೂ ಬಂದಿದೆ. ನನಗೆ ತಕ್ಷಣ ನೆನಪಾಗುವುದು ಕುವೆಂಪು ಅವರ ರಾಮಾಯಣ ದರ್ಶನಂ, ಎಸ್.ಎಲ್.‌ ಭೈರಪ್ಪ ಅವರ ಪರ್ವ. ಇದಲ್ಲದೇ ಒಂದೊಂದು ಪಾತ್ರಗಳನ್ನು ಆಧರಿಸಿ ಕಥೆಗಳು, ಕಾದಂಬರಿಗಳು ರಚನೆಯಾಗಿವೆ. ಹಾಗಾಗಿ ಈ ಮಹಾಕಾವ್ಯಗಳ ಬಗ್ಗೆ ಭಾರತೀಯರದು ತಣಿಯದ ಆಸಕ್ತಿ

ರಾಮಾಯಣ ಎಂದರೆ ಕೇವಲ ರಾಮ ಮತ್ತು ರಾವಣರ ನಡುವಿನ ಯುದ್ಧದ ಕಥೆಯಲ್ಲ. ಅದು ಸಂಬಂಧಗಳ ಸಂಕೀರ್ಣತೆ, ಧರ್ಮಸಂಕಟ, ತ್ಯಾಗ, ನಿಷ್ಠೆ, ಶೌರ್ಯ ಮತ್ತು ಮಾನವೀಯ ಮೌಲ್ಯಗಳ ಮಹಾಕಾವ್ಯ. ಇಂತಹ ಮಹಾಕಾವ್ಯವನ್ನು ಸಿನಿಮಾ ರೂಪದಲ್ಲಿ ಕಟ್ಟಿಕೊಡುವುದು ಸುಲಭದ ಕೆಲಸವಲ್ಲ. ಅದರಲ್ಲೂ ಇಂದಿನ ಆಧುನಿಕ ತಂತ್ರಜ್ಞಾನ, ಅದ್ಧೂರಿ ದೃಶ್ಯಸಂಯೋಜನೆ ಮತ್ತು ಜಾಗತಿಕ ಸಿನಿಮಾ ಮಾರುಕಟ್ಟೆಯ ನಿರೀಕ್ಷೆಗಳ ನಡುವೆ ರಾಮಾಯಣವನ್ನು ಮರುಸೃಷ್ಟಿಸುವ ಪ್ರಯತ್ನ ದೊಡ್ಡ ಸವಾಲೇ ಸರಿ.

ಯಶ್ ಅವರ ರಾಮಾಯಣ ಚಿತ್ರವನ್ನು ವೀಕ್ಷಿಸಿದಾಗ ಅದರ ದೃಶ್ಯ ವೈಭವ, ತಾಂತ್ರಿಕ ಪ್ರಯೋಗಗಳು ಮತ್ತು ಪಾತ್ರಗಳ ನಿರೂಪಣೆಯ ಬಗ್ಗೆ ಹಲವು ಪ್ರಶ್ನೆಗಳು ಮೂಡುತ್ತವೆ. ಅದ್ಧೂರಿತನದ ಹಿಂದೆ ಕಥೆಯ ಭಾವನಾತ್ಮಕ ಆಳ ಮತ್ತು ಪಾತ್ರಗಳ ಸಹಜತೆ ಎಷ್ಟು ಉಳಿದಿವೆ ಎಂಬುದೇ ಈ ಚಿತ್ರದ ಕುರಿತ ನನ್ನ ಮುಖ್ಯ ಪ್ರಶ್ನೆ.

ರಾಮ-ರಾವಣ: ಸಮಾನ ಪ್ರಾಮುಖ್ಯತೆಯ ಪ್ರಯತ್ನ!

ಚಿತ್ರದಲ್ಲಿ ರಾಮ ಮತ್ತು ರಾವಣ ಇಬ್ಬರ ಪಾತ್ರಗಳಿಗೂ ಬಹುತೇಕ ಸಮಾನ ಪ್ರಾಮುಖ್ಯತೆ ನೀಡುವ ಪ್ರಯತ್ನ ಕಾಣಿಸುತ್ತದೆ. ರಾಮಾಯಣದ ಕಥೆಯಲ್ಲಿ ರಾವಣ ಕೇವಲ ಖಳನಾಯಕನಲ್ಲ. ಆತ ಪರಾಕ್ರಮಿ, ಪಾಂಡಿತ್ಯಶಾಲಿ, ಶಿವಭಕ್ತ ಮತ್ತು ಅಪಾರ ಸಾಮರ್ಥ್ಯವುಳ್ಳ ಅರಸ. ಆತನ ವ್ಯಕ್ತಿತ್ವದ ಹಲವು ಆಯಾಮಗಳನ್ನು ತೆರೆದಿಡುವುದು ತಪ್ಪಲ್ಲ.  ರಾಮನ ಧರ್ಮನಿಷ್ಠೆ, ತ್ಯಾಗ, ಆದರ್ಶ ಮತ್ತು ಮಾನವೀಯ ಗುಣಗಳಷ್ಟೆ ರಾವಣನ ವ್ಯಕ್ತಿತ್ವವೂ ಅಷ್ಟೇ ಕೇಂದ್ರಸ್ಥಾನ ಪಡೆಯುವಂತೆ ನಿರೂಪಿಸುವ ಪ್ರಯತ್ನ ಕುತೂಹಲಕ್ಕೂ, ಮೆಚ್ಚುಗೆಗೂ ಪಾತ್ರವಾಗುತ್ತದೆ. ಆದರೆ ಮುಖ್ಯವಾಗಿ ಮೂಡುವ ಪ್ರಶ್ನೆ ಎಂದರೆ ಎರಡೂ ಪಾತ್ರಗಳ ಮಹತ್ವವನ್ನು ತೋರಿಸುವುದಕ್ಕೂ, ಎರಡನ್ನೂ ಸಮಾನ ಕಥಾನಾಯಕರನ್ನಾಗಿ ರೂಪಿಸುವುದಕ್ಕೂ ವ್ಯತ್ಯಾಸವಿದೆ. ಈ ಸೂಕ್ಷ್ಮತೆಯನ್ನು ಚಿತ್ರಕಥೆ ಎಚ್ಚರಿಕೆಯಿಂದ ನಿರ್ವಹಿಸಬೇಕಿತ್ತು.

VFX ವೈಭವವೇ ಅಭಿನಯವನ್ನು ಮರೆಮಾಡಿದೆಯೇ?

ಚಿತ್ರದ ಬಹುತೇಕ  ದೃಶ್ಯಗಳಲ್ಲಿ VFX ಮತ್ತು ಗ್ರಾಫಿಕ್ಸ್ ಬಳಕೆ ಎದ್ದು ಕಾಣುತ್ತದೆ. ಪೌರಾಣಿಕ ಕಥೆಗೆ ಅದ್ಭುತ ಲೋಕಗಳನ್ನು ಸೃಷ್ಟಿಸುವುದು ಅಗತ್ಯವೇ. ಆದರೆ ತಂತ್ರಜ್ಞಾನ ಕಥೆಗೆ ಪೂರಕವಾಗಬೇಕೇ ಹೊರತು ಕಥೆಯನ್ನೇ ಮೀರಿಸಬಾರದು. ಒಂದು ಪಾತ್ರದ ಕಣ್ಣಿನಲ್ಲಿರುವ ನೋವು, ಮುಖದಲ್ಲಿನ ಭಾವನೆ, ಸಂಭಾಷಣೆಯಲ್ಲಿನ ತೂಕ ಮತ್ತು ಮೌನದಲ್ಲಿನ ಅರ್ಥ ಇವೆಲ್ಲವೂ ಪ್ರೇಕ್ಷಕರ ಮನಸ್ಸಿಗೆ ತಲುಪಬೇಕು. ಆದರೆ ದೃಶ್ಯ ವೈಭವವೇ ಗಮನ ಸೆಳೆಯುವಂತಾದರೆ ಕಲಾವಿದರ ಅಭಿನಯದ ಸೂಕ್ಷ್ಮತೆಗಳು ಹಿನ್ನೆಲೆಗೆ ಸರಿಯುತ್ತವೆ. ರಾಮಾಯಣದಂತಹ ಕಥೆಗೆ ಕೇವಲ ಅದ್ಭುತ ದೃಶ್ಯಗಳಲ್ಲ, ಹೃದಯವನ್ನು ತಟ್ಟುವ ಭಾವನಾತ್ಮಕ ದೃಶ್ಯಗಳೂ ಅಷ್ಟೇ ಮುಖ್ಯ.

ಸೀತೆಯ ಪಾತ್ರ ನಿರೂಪಣೆಯಲ್ಲಿ ವೈರುಧ್ಯ!

ಸೀತೆಯ ಪಾತ್ರದ ನಿರೂಪಣೆಯಲ್ಲಿಯೂ ಒಂದು ವೈರುಧ್ಯ ಕಾಣಿಸುತ್ತದೆ. ರಾಜಕುಮಾರಿಯಾಗಿ ಬೆಳೆದ ಸೀತೆ ಶಸ್ತ್ರವಿದ್ಯೆಯಲ್ಲಿ ತರಬೇತಿ ಪಡೆದಿದ್ದಾಳೆ ಎಂಬ ಪರಿಕಲ್ಪನೆ ಸಹಜವಾಗಿಯೇ ಸ್ವೀಕಾರಾರ್ಹ. ಚಿತ್ರದಲ್ಲಿಯೂ ಆಕೆ ರಾಕ್ಷಸರ ವಿರುದ್ಧ ಹೋರಾಡುವ ಸಾಮರ್ಥ್ಯವುಳ್ಳವಳಾಗಿ ಕಾಣಿಸುತ್ತಾಳೆ. ಆದರೆ ರಾವಣನ ಅಪಹರಣದ ಸಂದರ್ಭದಲ್ಲಿ ಆಕೆಯ ಪಾತ್ರವನ್ನು ಹೆಚ್ಚು ಅಸಹಾಯಕಳಂತೆ ತೋರಿಸಿರುವುದು ಪ್ರಶ್ನಾರ್ಹ.

ಇಲ್ಲಿ ಒಂದು ಸೃಜನಾತ್ಮಕ ಸಾಧ್ಯತೆ ಇತ್ತು. ಜಟಾಯುವಿನ ವೀರೋಚಿತ ಹೋರಾಟದ ಜೊತೆಗೆ ಸೀತೆಯೂ ತನ್ನ ಶಕ್ತಿಮೀರಿ ರಾವಣನನ್ನು ಎದುರಿಸುವಂತೆ, ಕೊನೆಯವರೆಗೂ ಹೋರಾಡಿ ಬಂಧನಕ್ಕೆ ಒಳಗಾಗುವಂತೆ ದೃಶ್ಯವನ್ನು ಕಟ್ಟಬಹುದಿತ್ತು. ಇದರಿಂದ ಸೀತೆಯ ಆತ್ಮಗೌರವ, ಧೈರ್ಯ ಮತ್ತು ಪ್ರತಿರೋಧದ ಗುಣಗಳು ಹೆಚ್ಚು ಪರಿಣಾಮಕಾರಿಯಾಗಿ ಮೂಡಿಬರುತ್ತಿದ್ದವು.

ಚಿತ್ರಕಥೆಯ ಬಂಧ ಎಲ್ಲಿ ಕಳೆದುಹೋಯಿತು?

ಚಿತ್ರದ ಮತ್ತೊಂದು ಪ್ರಮುಖ ಸಮಸ್ಯೆ ಎಂದರೆ ಕಥೆಯ ನಿರೂಪಣೆಯಲ್ಲಿ ಏಕಸೂತ್ರತೆಯ ಕೊರತೆ. ರಾಮನ ಸುತ್ತ ನಡೆಯುವ ಘಟನೆಗಳು ಒಂದು ಪ್ರತ್ಯೇಕ ಚಿತ್ರಕಥೆಯ ಭಾಗಗಳಂತೆ ಕಂಡರೆ, ರಾವಣನ ಬದುಕು ಮತ್ತು ಆತನ ಸುತ್ತಲಿನ ಘಟನೆಗಳು ಮತ್ತೊಂದು ಪ್ರತ್ಯೇಕ ಚಿತ್ರದ ಕಥೆಯಂತೆ ಭಾಸವಾಗುತ್ತವೆ.

ಒಂದು ಮಹಾಕಾವ್ಯವನ್ನು ಸಿನಿಮಾ ಮಾಡುವಾಗ ವಿಭಿನ್ನ ಪಾತ್ರಗಳ ಬದುಕನ್ನು ಪ್ರತ್ಯೇಕವಾಗಿ ತೋರಿಸುವುದು ಸಹಜ. ಆದರೆ ಆ ಪಾತ್ರಗಳ ನಡುವಿನ ಸಂಘರ್ಷ, ಭಾವನಾತ್ಮಕ ಸಂಬಂಧ ಮತ್ತು ಕಥೆಯ ಬೆಳವಣಿಗೆ ಒಂದೇ ಕೇಂದ್ರಬಿಂದುವಿನತ್ತ ಸಾಗಬೇಕು. ಪ್ರೇಕ್ಷಕನಿಗೆ ಎರಡು ವಿಭಿನ್ನ ಕಥೆಗಳನ್ನು ನೋಡುತ್ತಿರುವ ಅನುಭವವಾಗಬಾರದು. ರಾಮ ಮತ್ತು ರಾವಣರ ಬದುಕುಗಳು ಹೇಗೆ ಒಂದಕ್ಕೊಂದು ಬೆಸೆದುಕೊಳ್ಳುತ್ತವೆ ಎಂಬುದನ್ನು ಚಿತ್ರಕಥೆ ಸಹಜವಾಗಿ ಕಟ್ಟಿಕೊಡಬೇಕಿತ್ತು.

ರಾಮನ ಪಾದುಕೆಗಳ ಪ್ರಸಂಗ: ಸಣ್ಣ ದೃಶ್ಯ, ದೊಡ್ಡ ಪ್ರಶ್ನೆಗಳು!

ಚಿತ್ರದಲ್ಲಿ ಭರತನು ವನವಾಸದಲ್ಲಿರುವ ರಾಮನನ್ನು ಭೇಟಿಯಾಗಿ, ಆತನ ಪಾದುಕೆಗಳನ್ನು ಕೇಳುವ ಪ್ರಸಂಗವಿದೆ. ರಾಮನ ಪಾದುಕೆಗಳನ್ನು ಸಿಂಹಾಸನದ ಮೇಲಿಟ್ಟು, ಹದಿನಾಲ್ಕು ವರ್ಷಗಳ ಕಾಲ ಆತನ ಪ್ರತಿನಿಧಿಯಾಗಿ ರಾಜ್ಯಭಾರ ನಡೆಸುವುದಾಗಿ ಭರತ ಹೇಳುತ್ತಾನೆ. ರಾಮನೂ ಪಾದುಕೆಗಳನ್ನು ನೀಡುತ್ತಾನೆ. ಇದು ರಾಮಾಯಣದ ಅತ್ಯಂತ ಭಾವನಾತ್ಮಕ ಮತ್ತು ಸಾಂಕೇತಿಕ ಮಹತ್ವವುಳ್ಳ ಪ್ರಸಂಗ. ಆದರೆ ಈ ದೃಶ್ಯದ ನಿರೂಪಣೆ ಕೆಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ಮೊದಲನೆಯದಾಗಿ, ದಶರಥ ಮಹಾರಾಜರು ಕುಳಿತಿದ್ದ ಸಿಂಹಾಸನದ ಮೇಲೆ ತನ್ನ ಪಾದುಕೆಗಳನ್ನು ಇಡುವುದು ಸೂಕ್ತವೇ ಎಂಬ ಧರ್ಮಸಂಕಟವನ್ನು ರಾಮ ವ್ಯಕ್ತಪಡಿಸುವುದಿಲ್ಲವೇಕೆ? ತಂದೆಯ ಸ್ಥಾನಮಾನಕ್ಕೆ ಮತ್ತು ರಾಜಸಿಂಹಾಸನದ ಗೌರವಕ್ಕೆ ರಾಮ ನೀಡುವ ಮಹತ್ವವನ್ನು ಇಲ್ಲಿ ಸಂಭಾಷಣೆಯ ಮೂಲಕ ಹೆಚ್ಚು ಪರಿಣಾಮಕಾರಿಯಾಗಿ ತೋರಿಸಬಹುದಿತ್ತು.

ಎರಡನೆಯದಾಗಿ, ಭರತನು ರಾಮನ ಪಾದುಕೆಗಳನ್ನು ಕೇಳುತ್ತಾನೆಯೇ ಹೊರತು, ಇನ್ನು ಮುಂದೆ ಪಾದರಕ್ಷೆಗಳನ್ನು ಧರಿಸಬಾರದು ಎಂದು ಯಾವುದೇ ಷರತ್ತು ವಿಧಿಸುವುದಿಲ್ಲ. ಆದರೂ ಆ ಪ್ರಸಂಗದ ನಂತರ ರಾಮ ಪಾದರಕ್ಷೆಗಳನ್ನು ಧರಿಸುವುದೇ ಇಲ್ಲ ಎಂಬಂತೆ ತೋರಿಸಿರುವುದು ವಿಚಿತ್ರ ಎನಿಸುತ್ತದೆ!

ರಾಮನ ಬಳಿ ಇದ್ದ ಪಾದರಕ್ಷೆಗಳು ಕಳೆದುಹೋದವೇ? ಅಥವಾ ಹದಿನಾಲ್ಕು ವರ್ಷಗಳ ಕಾಲ ಸವೆಯದಂತಹ ವಿಶೇಷ ಪಾದರಕ್ಷೆಗಳಾಗಿದ್ದವೇ? ಇದು ಸಣ್ಣ  ಪ್ರಶ್ನೆಯಂತೆ ಕಂಡರೂ, ದೃಶ್ಯಗಳಲ್ಲಿನ ನಿರಂತರತೆ ಮತ್ತು ಪಾತ್ರಗಳ ದೈನಂದಿನ ಬದುಕಿನ ಸಹಜತೆಯನ್ನು ನಿರ್ದೇಶಕರು ಗಮನಿಸಿಲ್ಲವೆಂದು ಸೂಚಿಸುತ್ತದೆ.

ಮೂರನೆಯದಾಗಿ, ರಾಮ ಒಬ್ಬ ಪರಾಕ್ರಮಿ ಯೋಧ. ವನವಾಸದ ಅವಧಿಯಲ್ಲಿ ರಾಕ್ಷಸರನ್ನು ಎದುರಿಸಬೇಕು, ಕಾಡುಪ್ರಾಣಿಗಳಿಂದ ರಕ್ಷಿಸಿಕೊಳ್ಳಬೇಕು, ಕಲ್ಲುಮುಳ್ಳುಗಳ ನಡುವೆ ಸಂಚರಿಸಬೇಕು. ಇಂತಹ ಸಂದರ್ಭದಲ್ಲಿ ಯುದ್ಧ ಮತ್ತು ಅರಣ್ಯ ಸಂಚಾರಕ್ಕೆ ಅನುಕೂಲವಾಗುವ ಪಾದರಕ್ಷೆಗಳ ಬದಲು, ಋಷಿಮುನಿಗಳು ಧರಿಸುವ ಮಾದರಿಯ ಮರದ ಪಾದುಕೆಗಳನ್ನು ಬಳಸುವುದು ಎಷ್ಟು ಪ್ರಾಯೋಗಿಕ? ಪಾದುಕೆಗಳು ಕೇವಲ ಪಾದರಕ್ಷೆಗಳಲ್ಲ, ರಾಮನ ಅಧಿಕಾರ, ಧರ್ಮನಿಷ್ಠೆ ಮತ್ತು ಭರತನ ನಿಷ್ಠೆಯ ಸಂಕೇತ. ಆದರೆ ಆ ಸಂಕೇತವನ್ನು ತೆರೆಯ ಮೇಲೆ ತೋರಿಸುವಾಗಲೂ ಪಾತ್ರದ ಬದುಕಿನ ವಾಸ್ತವಿಕತೆಯನ್ನು ಮರೆಯಬಾರದು.

ಅಭಿನಯ, ಛಾಯಾಗ್ರಹಣ, ಸಂಕಲನ ಮತ್ತು ಕಲಾ ನಿರ್ದೇಶನ

ಅಭಿನಯದ ವಿಚಾರಕ್ಕೆ ಬಂದರೆ, ಇಂತಹ ಮಹಾಕಾವ್ಯದಲ್ಲಿ ಕಲಾವಿದರಿಗೆ ಕೇವಲ ಸಂಭಾಷಣೆಗಳನ್ನು ಹೇಳುವ ಜವಾಬ್ದಾರಿಯಷ್ಟೇ ಇರುವುದಿಲ್ಲ. ಪಾತ್ರದ ಒಳಜಗತ್ತನ್ನು ಅಭಿವ್ಯಕ್ತಿಸುವ ಹೊಣೆಗಾರಿಕೆಯೂ ಇರುತ್ತದೆ. ರಾಮನ ಸಂಯಮ, ಭರತನ ನಿಷ್ಠೆ, ಸೀತೆಯ ಆತ್ಮಗೌರವ ಮತ್ತು ರಾವಣನ ಅಹಂಕಾರ ಇವೆಲ್ಲವೂ ಮುಖಭಾವ, ದೇಹಭಾಷೆ ಮತ್ತು ಮೌನದ ಮೂಲಕವೂ ವ್ಯಕ್ತವಾಗಬೇಕು. ಆದರೆ ಅತಿಯಾದ ದೃಶ್ಯ ಪರಿಣಾಮಗಳ ನಡುವೆ ಈ ಸೂಕ್ಷ್ಮ ಅಭಿನಯಕ್ಕೆ ಸಾಕಷ್ಟು ಅವಕಾಶ ಸಿಕ್ಕಿದೆಯೇ ಎಂಬ ಪ್ರಶ್ನೆ ಉಳಿಯುತ್ತದೆ. ಆದರೆ ಪ್ರತಿಯೊಂದು ದೃಶ್ಯವೂ ಅದ್ಧೂರಿಯಾಗಿರಬೇಕೆಂದಿಲ್ಲ. ಕೆಲವೊಮ್ಮೆ ಸರಳವಾದ ಫ್ರೇಮ್, ಬೆಳಕು-ನೆರಳಿನ ಸಂಯೋಜನೆ ಮತ್ತು ಪಾತ್ರಗಳ ಮುಖದ ಮೇಲಿನ ಕ್ಲೋಸ್‌ಅಪ್‌ಗಳೇ ಹೆಚ್ಚು ಪರಿಣಾಮಕಾರಿಯಾಗಬಲ್ಲವು.

ಸಂಕಲನದಲ್ಲಿ ಕಥೆಯ ವೇಗ ಮತ್ತು ಭಾವನಾತ್ಮಕ ನಿರಂತರತೆ ಅತ್ಯಂತ ಮುಖ್ಯ. ರಾಮನ ಕಥೆಯಿಂದ ರಾವಣನ ಕಥೆಗೆ ಬದಲಾಗುವಾಗ ಪ್ರೇಕ್ಷಕನ ಆಸಕ್ತಿ ಮತ್ತು ಕಥೆಯ ಹರಿವು ತುಂಡಾಗದಂತೆ ನೋಡಿಕೊಳ್ಳಬೇಕು. ದೃಶ್ಯಗಳ ವೈಭವಕ್ಕಿಂತ ಅವುಗಳ ನಡುವಿನ ಸಂಬಂಧವೇ ಚಿತ್ರದ ನಿರೂಪಣೆಯನ್ನು ಬಲಪಡಿಸುತ್ತದೆ.

ತಂತ್ರಜ್ಞಾನಕ್ಕಿಂತ ಮುಖ್ಯವಾದುದು ಕಥೆಯ ಆತ್ಮ!

ರಾಮಾಯಣದಂತಹ ಮಹಾಕಾವ್ಯವನ್ನು ಆಧುನಿಕ ತಂತ್ರಜ್ಞಾನದ ನೆರವಿನಿಂದ ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಪ್ರಯತ್ನ ಸ್ವಾಗತಾರ್ಹ. ಅದ್ಧೂರಿ ಸೆಟ್‌ಗಳು, VFX, ಗ್ರಾಫಿಕ್ಸ್ ಮತ್ತು ದೃಶ್ಯ ವೈಭವ ಇವೆಲ್ಲವೂ ಚಿತ್ರದ ಆಕರ್ಷಣೆಯನ್ನು ಹೆಚ್ಚಿಸಬಹುದು. ಆದರೆ ಇವುಗಳೆಲ್ಲವೂ ಕಥೆಯ ಆತ್ಮಕ್ಕೆ ಪೂರಕವಾಗಿರಬೇಕು.ಪ್ರೇಕ್ಷಕ ಚಿತ್ರಮಂದಿರದಿಂದ ಹೊರಬಂದ ನಂತರ ನೆನಪಿನಲ್ಲಿ ಉಳಿಸಿಕೊಳ್ಳಬೇಕಾದದ್ದು ಕೇವಲ ಅದ್ಭುತ ಗ್ರಾಫಿಕ್ಸ್ ದೃಶ್ಯಗಳನ್ನಲ್ಲ. ರಾಮನ ಧರ್ಮಸಂಕಟ, ಭರತನ ನಿಸ್ವಾರ್ಥ ನಿಷ್ಠೆ, ಸೀತೆಯ ಆತ್ಮಗೌರವ, ಲಕ್ಷ್ಮಣನ ಸಹೋದರ ಪ್ರೀತಿ ಮತ್ತು ರಾವಣನ ವ್ಯಕ್ತಿತ್ವದ ಸಂಕೀರ್ಣತೆ.

ಮಹಾಕಾವ್ಯವನ್ನು ತೆರೆಯ ಮೇಲೆ ತರುವುದು ಎಂದರೆ ಅದರ ಘಟನೆಗಳನ್ನು ಅದ್ಧೂರಿಯಾಗಿ ಮರುಸೃಷ್ಟಿಸುವುದಷ್ಟೇ ಅಲ್ಲ; ಅದರ ಭಾವನೆ, ತಾತ್ವಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಹೊಸ ತಲೆಮಾರಿಗೆ ತಲುಪಿಸುವುದೂ ಹೌದು. ರಾಮಾಯಣದ ಮಹತ್ವ ಅದರ ಯುದ್ಧಗಳಲ್ಲಷ್ಟೇ ಇಲ್ಲ; ಆ ಯುದ್ಧಗಳಿಗೆ ಕಾರಣವಾದ ಮೌಲ್ಯಗಳಲ್ಲಿದೆ. ತಂತ್ರಜ್ಞಾನ ಕಣ್ಣಿಗೆ ಹಬ್ಬ ನೀಡಬಹುದು. ಆದರೆ ಕಥೆಯ ಆತ್ಮ ಮಾತ್ರ ಹೃದಯದಲ್ಲಿ ಉಳಿಯುತ್ತದೆ.

You may also like

Leave a Comment

error: Content is protected !!