ರಾಜಕೀಯ

ರಾಜಕೀಯ ನಾಯಕರ ಬದಲಾದ ಆಂಗಿಕ ಭಾಷೆ

ವಿದೇಶಗಳಲ್ಲಿ ಅಲ್ಲಿನ ರಾಜಕೀಯ ನಾಯಕರ ಮಾತುಗಳ ಬದಲಾವಣೆಗಳನ್ನು ಸೂಕ್ಷ್ಮವಾಗಿ ನೋಡುತ್ತಾರೆ. ಹಾಗೆಯೇ ಅವರ ಆಂಗಿಕ ಭಾಷೆ ಅಂದರೆ ಬಾಡಿ ಲಾಂಗ್ವೇಜ್‌ ಅನ್ನು ಅಧ್ಯಯನ ಮಾಡುತ್ತಾರೆ. ತಜ್ಞರು ಅವುಗಳನ್ನು ಟಿಪ್ಪಣಿ ಕೂಡ ಮಾಡುತ್ತಾರೆ. ಅಧಿಕಾರಕ್ಕೇರುವಾಗ, ಅಧಿಕಾರದಿಂದ ನಿರ್ಗಮಿಸುವಾಗ ಅವರ ದೇಹದ ಭಾಷೆಯಲ್ಲಾಗುವ ಬದಲಾವಣೆಗಳನ್ನು ಗಮನಿಸುತ್ತಿರುತ್ತಾರೆ. ವಿವಾದ – ಹಗರಣ ಕಾರಣಗಳಿಂದ ರಾಜಿನಾಮೆ ಕೊಡಬೇಕಾದ ಸಂದರ್ಭದಲ್ಲಿ ಅವರ ಮಾತು – ದೈಹಿಕ ಭಾಷೆಯ ಬದಲಾವಣೆಗಳನ್ನು ಗಮನಿಸುತ್ತಾರೆ. ಉದಾಹರಣೆಗೆ ಹೇಳುವುದಾದರೆ ೧೯೬೯ ರಿಂದ ೧೯೭೨ರ ತನಕ ಅಮೆರಿಕಾದ ಅಧ್ಯಕ್ಷರಾಗಿದ್ದ ರಿಚರ್ಡ್‌ ನಿಕ್ಸನ್‌ ಅವರು ವಾಟರ್‌ ಗೇಟ್‌ (ಪತ್ರಕರ್ತರ ತನಿಖಾ ವರದಿಯಿಂದ ಬಯಲಾಗಿದ್ದು) ಹಗರಣದ ಕಾರಣದಿಂದ ರಾಜಿನಾಮೆ ಕೊಡುವ ಸಂದರ್ಭ ಬಂತು. ಆಗ ಅವರ ದೈಹಿಕ ಭಾಷೆ ಅಚ್ಚರಿ ಎನ್ನುವಂತೆ ಬದಲಾಯಿತು.

ಸಾಮಾನ್ಯವಾಗಿ ಭಾರತೀಯ ರಾಜಕೀಯ ನಾಯಕರ ಆಂಗಿಕ ಭಾಷೆ ಅಂದರೆ ಬಾಡಿ ಲಾಂಗ್ವೇಜ್‌ ಬದಲಾಗುವುದಿಲ್ಲ. ಹಿಂದೆ ಇಂದಿರಾ ಗಾಂಧಿ, ಈಗ ಪ್ರಧಾನಿ ನರೇಂದ್ರ ಮೋದಿ ಎದುರಿಗೆ ಅವರವರ ಪಕ್ಷದವರ ಆಂಗಿಕ ಭಾಷೆ ಬದಲಾಗಿದ್ದು, ಬದಲಾಗುತ್ತಿರುವುದನ್ನು ನೋಡಿದ್ದೇವೆ.

ಒಂದು ವಿಶೇಷ ಸಂಗತಿ ಎಂದರೆ ವಿರೋಧ ಪಕ್ಷದವರಾಗಿ, ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರ ಆಂಗಿಕ ಭಾಷೆ ಪ್ರಧಾನಿ ಎದುರಿಗೂ ಬದಲಾಗಿರಲಿಲ್ಲ. ಅದೇ ಗತ್ತುಗೈರತ್ತು ಅವರಲ್ಲಿತ್ತು. ವಿನಯ ಮಾಯವಾಗಿರಲಿಲ್ಲ. ತಮ್ಮದೇ ಪಕ್ಷದ ಹೈ ಕಮಾಂಡ್‌ ಜೊತೆ ಮಾತನಾಡುವಾಗಲೂ ವಿನಯದ ಜೊತೆ ಎಂದಿನ ಗತ್ತು ಇರುತ್ತದೆ. ಹೀಗೆ ಇರಬೇಕು ಸಹ.

ಮುಖ್ಯಮಂತ್ರಿ ಅಧಿಕಾರ ಹಸ್ತಾಂತರ ವಿಷಯ ಪ್ರಸ್ತಾಪವಾದಾಗಲೂ ಸಿದ್ದರಾಮಯ್ಯ ತಮ್ಮ ಎಂದಿನ ಗತ್ತು-ಠೇಂಕಾರ ಬಿಟ್ಟುಕೊಟ್ಟಿರಲಿಲ್ಲ. ನಾನೇ ಐದು ವರ್ಷ ಮುಖ್ಯಮಂತ್ರಿ  ಎಂದು ಹೇಳಿದ್ದಾರೆ. ದೆಹಲಿಯಲ್ಲಿ ಪತ್ರಕರ್ತರ ಜೊತೆ ಮಾತನಾಡುವಾಗಲೂ “ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ಗೆ ಶಾಸಕರ ಬೆಂಬಲವಿಲ್ಲ” ಈಗಲೂ ಹೈ ಕಮಾಂಡ್‌ ಸಂಸ್ಕೃತಿ ಉಳಿದುಕೊಂಡಿರುವ ಕಾಂಗ್ರೆಸಿನಲ್ಲಿ ಹೀಗೆ ಹೇಳಬೇಕಾದರೆ ಎಂಟೆದೆ ಬೇಕು !

ಬೆಂಗಳೂರಿನಲ್ಲಿ ಯಾವಾಗ ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಜೊತೆ ಮಾತನಾಡಿದ ನಂತರ ಹೊರ ಬಂದ ಸಿದ್ದರಾಮಯ್ಯ ಎಂದಿನ ಸಿದ್ದರಾಮಯ್ಯ ಆಗಿರಲಿಲ್ಲ. ಅವರು ನಡೆಯುವ ಶೈಲಿ, ಮಾತನಾಡುವ ರೀತಿ ಬದಲಾಗಿತ್ತು. ಪತ್ರಕರ್ತರೊಂದಿಗೆ ಅವರು ಮಾತನಾಡುವ ಧಾಟಿಯೂ ಬದಲಾಗಿತ್ತು.

Siddaramaih And Dkshivakumar Breakfast

ಹೈ ಕಮಾಂಡ್‌ ಅಣತಿಯಂತೆ ಡಿ.ಕೆ. ಶಿವಕುಮಾರ್‌ ಅವರನ್ನು ತಮ್ಮ ಮನೆಗೆ ಉಪಹಾರಕ್ಕೆ ಆಹ್ವಾನಿಸಿದಾಗ ಅವರ ಎಂದಿನ ನಡೆನುಡಿ ಸಂಪೂರ್ಣವಾಗಿ ಬದಲಾಗಿದ್ದನ್ನು ಕಾಣಬಹುದು. ಇದು ಬಹಳ ಗಮನಾರ್ಹ. ಈ ಸಂದರ್ಭದಲ್ಲಿ ಕ್ಲಿಕ್‌ ಆಗಿರುವ ಪೋಟೋಗಳು ಕಥೆಗಳನ್ನೇ ಹೇಳುತ್ತವೆ. ಒಂದು ಚಿತ್ರವಂತೂ ಅಧಿಕಾರ ಹಸ್ತಾಂತರ ಸಮಯ ಸನ್ನಿಹಿತವಾಗಿದೆ ಎಂದು ಹೇಳುತ್ತಿತ್ತು.

ಡಿ.ಕೆ. ಶಿವಕುಮಾರ್‌ ಅವರಲ್ಲಿಯೂ ಗತ್ತುಗೈರತ್ತುಗಳಿವೆ. ಗೌಡಿಕೆ ಗತ್ತು ವಿಶೇಷವಾಗಿದೆ. ಇವೆಲ್ಲದರ ಜೊತೆಗೆ ಮಾತಿನಲ್ಲಿ ಉಢಾಪೆ ಧಾಟಿಯೂ ಇದೆ. ಇತ್ತೀಚಗೆ ಇವೆಲ್ಲವೂ ಕಡಿಮೆಯಾಗಿರುವುದನ್ನು ಕಾಣಬಹುದು. ಎದ್ದು ಕಾಣುವ ರೀತಿ ಅವರ ಬಾಡಿ ಲಾಂಗ್ವೇಜ್‌ ಬದಲಾಗಿದೆ.

ಬಹು ಗಮನಾರ್ಹ ಸಂಗತಿ ಎಂದರೆ ಮುಖ್ಯಮಂತ್ರಿ ಅಧಿಕಾರ ಹಸ್ತಾಂತರ ವಿಚಾರದಲ್ಲಿ ಅವರು ಎಂದಿಗೂ ಸಂಯಮ ಕಳೆದುಕೊಳ್ಳದೇ ಪಕ್ಷದ ಸಹ ಸದಸ್ಯರೊಂದಿಗೂ, ಪತ್ರಕರ್ತರಿಗೂ ಮಾತನಾಡುತ್ತಾ ಬಂದ ರೀತಿ. ನವದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ.ಕೆ. ಶಿವಕುಮಾರ್ಗೆ ಶಾಸಕರ ಬೆಂಬಲವಿಲ್ಲ ಎಂದಾಗಲೂ ಸಂಯಮ ಕಳೆದುಕೊಳ್ಳಲಿಲ್ಲ.

ಪಕ್ಷದ ಅಧ್ಯಕ್ಷರಾದವರಿಗೆ ಮುಖ್ಯಮಂತ್ರಿಗಿಂತಲೂ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಪಕ್ಷದ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಹೊಣೆಗಾರಿಕೆ ಇರುತ್ತದೆ. ಇದನ್ನೇ ಶಿವಕುಮಾರ್‌ ಜಪಿಸುತ್ತಾ ಬಂದರು. ಪಕ್ಷದ ಓರ್ವ ಅಧ್ಯಕ್ಷ ಹೇಗಿರಬೇಕೋ ಅದಕ್ಕೆ ಮಾದರಿ ಎನ್ನುವಂತೆ ನಡೆದುಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಬಣದ ಸಚಿವರು, ಶಾಸಕರು ಪದೇಪದೇ ಐದುವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಎಂದಾಗಲೂ ತಾಳ್ಮೆ ಕಳೆದುಕೊಂಡು ಪ್ರತಿಕ್ರಿಯೆ ನೀಡಲಿಲ್ಲ ಎಂಬುದೂ ಮುಖ್ಯ.

ಒಟ್ಟಿನಲ್ಲಿ ಹೇಳುವುದಾದರೆ ಮುಖ್ಯಮಂತ್ರಿ ಅಧಿಕಾರ ವಿಷಯದಲ್ಲಿಯಂತೂ ಮುತ್ಸದಿತನದ ರಾಜಕಾರಣವನ್ನೇ ಮಾಡುತ್ತಾ ಬಂದಿರುವ ಸಿದ್ದರಾಮಯ್ಯ ಅವರಿಗಿಂತಲೂ ಒಂದು ಕೈ ಹೆಚ್ಚು ಮುತ್ಸದಿತನ ಮೆರೆಯುತ್ತಿದ್ದಾರೆ ಎಂದರೆ ಉತ್ಪ್ರೇಕ್ಷೆಯಾಗಲಾರದು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಗೆ ಉಪಹಾರಕ್ಕೆ ಬಂದಾಗ ಆ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರ ಮುಖದ ಎಂದಿನ ಗಡಸುತನ ಇರಲಿಲ್ಲ. ಮುಖ್ಯಮಂತ್ರಿಗಳ ಮುಖದಲ್ಲಿಯೂ ಎಂದಿನ ಗಡಸುತನ, ಗತ್ತು ಇರಲಿಲ್ಲ.

Dk Shivakumar And Siddaramaih
ಸಾವಿರಕ್ಕೂ ಹೆಚ್ಚು ಪದಗಳಲ್ಲಿ ಹೇಳುವ ವಿವರಣೆಯನ್ನು ಇದೊಂದು ಚಿತ್ರವೇ ಹೇಳುತ್ತದೆ

ಡಿಸೆಂಬರ್‌ ೨, ೨೦೨೫ರಂದು ತಮ್ಮ ಮನೆಗೆ ಆಹ್ವಾನದಂತೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಬರಮಾಡಿಕೊಂಡ ರೀತಿ ಮಾಗಿದ ರಾಜಕಾರಣಿತನವನ್ನು ತೋರುತ್ತಿತ್ತು. ಸಿದ್ದರಾಮಯ್ಯ ಅವರ ಬಲಗೈಯನ್ನು ತಮ್ಮ ಎರಡು ಹಸ್ತಗಳಿಂದ ಹಿಡಿದು ಹಸ್ತಲಾಘವ ಮಾಡಿದ್ದು ಕೊಂಚ ಹೊತ್ತು ಕೈಗಳನ್ನು ಹಾಗೆ ಆತ್ಮೀಯ ಎನ್ನುವಂತೆ ಹಿಡಿದಿದ್ದೂ ಗಮನಾರ್ಹ

ಒಂದೇ ಪಕ್ಷದಲ್ಲಿ ಅಧಿಕಾರ ವಿಷಯಕ್ಕೆ ಭಿನ್ನಮತ ಗರಿಗೆದರಿದಾಗ ರಾಜಕಾರಣಿಗಳು ಹಾವು ಮುಂಗುಸಿಗಳಂತೆ ಆಡುತ್ತಾರೆ. ನಾವಿದನ್ನು ಬೇರೆಬೇರೆ ರಾಜಕಾರಣಿಗಳ ಸಂದರ್ಭದಲ್ಲಿ ಕಂಡಿದ್ದೇವೆ. ಈಗ ಕರ್ನಾಟಕದ ಸಂದರ್ಭದಲ್ಲಿ ಸಿದ್ದರಾಮಯ್ಯ – ಡಿ.ಕೆ. ಶಿವಕುಮಾರ್‌ ನಡೆದುಕೊಳ್ಳುತ್ತಿರುವ ರೀತಿ ಇತರರಿಗೂ ಮಾದರಿಯಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!