Home ರಾಜಕೀಯರಾಜ್ಯಪಾಲ‌‌ ಹುದ್ದೆ ಅವಶ್ಯಕತೆ‌ ಇದೆಯೇ

ರಾಜ್ಯಪಾಲ‌‌ ಹುದ್ದೆ ಅವಶ್ಯಕತೆ‌ ಇದೆಯೇ

by Kumara Raitha
0 comments

ಭಾರತದ ರಾಜ್ಯಗಳಲ್ಲಿ ರಾಜ್ಯಪಾಲರ (Governor) ಅವಶ್ಯಕತೆಯ ಬಗ್ಗೆ ದೀರ್ಘಕಾಲದಿಂದ ಚರ್ಚೆ ನಡೆಯುತ್ತಿದೆ. ಈ ಹುದ್ದೆ ಸಂವಿಧಾನದ ಭಾಗವಾಗಿದ್ದರೂ, ರಾಜಕೀಯ ದುರ್ಬಳಕೆಯ ಆರೋಪಗಳಿಂದಾಗಿ ರದ್ದುಪಡಿಸುವ ಅಥವಾ ಸುಧಾರಿಸುವ ವಾದಗಳು ಹಿಂದೆಯೂ ನಡೆದಿವೆ. ಈಗಲೂ ನಡೆಯುತ್ತಿವೆ.
ದಳಪತಿ ವಿಜಯ್ ನೇತೃತ್ವದ ಟಿವಿಕೆ, ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೂ‌ ಅಲ್ಲಿನ ರಾಜ್ಯಪಾಲ, ನೆಪಗಳನ್ನು ಹೇಳಿ ಸರ್ಕಾರ ರಚನೆಗೆ ಅವಕಾಶ ನೀಡಿಲ್ಲ ಎಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲ ಹುದ್ದೆ ಬೇಕೇ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.
ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದರ ಜೊತೆ ಮಾತನಾಡಿರುವ ಡಿಎಂಕೆ ಸಂಸದೆ ಕನ್ನಿಮೋಳಿ, ರಾಜ್ಯಕ್ಕೆ ಅದರಲ್ಲಿಯೂ ತಮಿಳುನಾಡಿಗೆ ರಾಜ್ಯಪಾಲ ಹುದ್ದೆ ಅಗತ್ಯವಿಲ್ಲ. ಈ ಸ್ಥಾನದಲ್ಲಿರುವವರು ಕೇಂದ್ರದಲ್ಲಿ ಅಧಿಕಾರ ಹಿಡಿದ ರಾಜಕೀಯ ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು‌ ಆರೋಪಿಸಿದ್ದಾರೆ.
ರಾಜ್ಯದಲ್ಲಿ ರಾಜ್ಯಪಾಲರನ್ನು ನೇಮಕ ಮಾಡುವ ಕುರಿತು ಸಂವಿಧಾನ ಏನು‌ ಹೇಳುತ್ತದೆ ?
ಆರ್ಟಿಕಲ್ 153 ಪ್ರತಿ ರಾಜ್ಯಕ್ಕೆ ಓರ್ವ ರಾಜ್ಯಪಾಲರನ್ನು ನೇಮಕ‌ ಮಾಡುವುದು ಕಡ್ಡಾಯ ಎಂದು ಹೇಳುತ್ತದೆ.
ಆರ್ಟಿಕಲ್ 154 ರಾಜ್ಯದ ಕಾರ್ಯನಿರ್ವಹಣಾ ಅಧಿಕಾರ ರಾಜ್ಯಪಾಲರಲ್ಲಿದೆ, ಆದರೆ ಸಾಮಾನ್ಯವಾಗಿ ಮಂತ್ರಿಮಂಡಲದ ಸಲಹೆಯಂತೆ ಕಾರ್ಯನಿರ್ವಹಿಸುತ್ತಾರೆ ಎಂದು ವಿವರಿಸುತ್ತದೆ.
ರಾಜ್ಯಪಾಲರ ಹುದ್ದೆ ಅವಶ್ಯಕತೆ ಇದೆಯೇ 
ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ‌ ಕಾರ್ಯನಿರ್ವಹಿಸುತ್ತಾರೆ.‌ ಬಿಲ್‌ಗಳಿಗೆ ಅನುಮೋದನೆ ನೀಡುವುದು, ವಿಧಾನಸಭೆ‌‌ ಅಧಿವೇಶನ‌ ಕರೆಯುವುದು, ರಾಷ್ಟ್ರಪತಿ ಆಡಳಿತ ಶಿಫಾರಸು ಮಾಡುವುದು, ತುರ್ತು ಪರಿಸ್ಥಿತಿಗಳಲ್ಲಿ ವಿವೇಚನಾ ಅಧಿಕಾರ ಇತ್ಯಾದಿ‌ ಅಧಿಕಾರ ಇರುತ್ತವೆ.ಮುಖ್ಯವಾಗಿ ರಾಜ್ಯ ಮತ್ತು ಕೇಂದ್ರ ನಡುವಿನ ಸೇತುವೆಯಾಗಿ, ಸಂವಿಧಾನ ರಕ್ಷಣೆ ಮತ್ತು ಸಮತೋಲನ ಕಾಯ್ದುಕೊಳ್ಳುವಿಕೆ‌ ಈ ಹುದ್ದೆಯಲ್ಲಿರುವವರ ಜವಾಬ್ದಾರಿ‌!
ತಜ್ಞರು ಮತ್ತು ಆಯೋಗಗಳ ಅಭಿಪ್ರಾಯವೇನು‌?
ಸರ್ಕಾರಿಯಾ ಆಯೋಗ (1988) ಮತ್ತು ಪುಂಚ್ಚಿ ಆಯೋಗ (2010) ರಾಜ್ಯಪಾಲರ ಹುದ್ದೆ ಬೇಕು ಎಂದು ಹೇಳಿದ್ದಾರೆ, ಮುಖ್ಯವಾಗಿ ಸುಧಾರಣೆಗಳು ಅಗತ್ಯ ಎಂದು ಹೇಳಿದ್ದಾರೆ. ರಾಜ್ಯಪಾಲರು ರಾಜಕೀಯವಾಗಿ ನಿಷ್ಪಕ್ಷಪಾತವಾಗಿರಬೇಕು, ರಾಜ್ಯದ ಹೊರಗಿನವರು, ಇತ್ತೀಚಿನ ವರ್ಷಗಳಲ್ಲಿ ರಾಜಕೀಯದಲ್ಲಿ ತೊಡಗಿರದ ಗಣ್ಯರು ನೇಮಕವಾಗಬೇಕು,
ಆಯಾ ರಾಜ್ಯದ ಮುಖ್ಯಮಂತ್ರಿಯನ್ನು ಸಂಪರ್ಕಿಸಿ ನೇಮಕಾತಿ ಮಾಡಬೇಕು.ನಿಶ್ಚಿತ ಅವಧಿ (5 ವರ್ಷ) ಇರಬೇಕು. ತೆಗೆದುಹಾಕುವುದು ಕಷ್ಟಕರವಾಗಿರಬೇಕು.ಬಿಲ್‌ಗಳಿಗೆ ನಿಶ್ಚಿತ ಸಮಯದಲ್ಲಿ ಅನುಮೋದನೆ ನೀಡಬೇಕು. ನಿರಾಕರಿಸಿದರೆ ಸಕಾರಣಗಳನ್ನು ನೀಡಬೇಕು. ವಿಶ್ವವಿದ್ಯಾಲಯಗಳ ಚಾನ್ಸಲರ್ ಹುದ್ದೆಯನ್ನು ಸೀಮಿತಗೊಳಿಸಬೇಕು ಇತ್ಯಾದಿ
ಅನೇಕ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಸಹ  ರಾಜ್ಯಪಾಲರು ಕೇಂದ್ರದ ಏಜೆಂಟ್ ಅಲ್ಲ, ಇದು ಸ್ವತಂತ್ರ ಸಂವಿಧಾನಾತ್ಮಕ ಹುದ್ದೆ. ಬಿಲ್‌ಗಳನ್ನು ಅನಿರ್ದಿಷ್ಟಕಾಲ ತಡೆಹಿಡಿಯುವುದು ಸರಿಯಲ್ಲ ಎಂದು  ತೀರ್ಪುಗಳನ್ನು‌ನೀಡಿದೆ (ತಮಿಳುನಾಡು, ಕೇರಳ, ಪಂಜಾಬ್ ಪ್ರಕರಣಗಳು)

ಪ್ರಾದೇಶಿಕ ಪಕ್ಷಗಳ ಅಭಿಪ್ರಾಯವೇನು ?

ಪ್ರಾದೇಶಿಕ ಪಕ್ಷಗಳು ರಾಜ್ಯಪಾಲರ ಹುದ್ದೆ ರದ್ದು ಅಥವಾ ತೀವ್ರ ಸುಧಾರಣೆಗೆ ಬೇಡಿಕೆ ಇಟ್ಟಿವೆ. ತಮಿಳುನಾಡಿನ ಡಿಎಂಕೆ ಪಾರ್ಟಿಯು ಬಿಲ್‌ಗಳ ತಡೆಯಿಂದಾಗಿ ರದ್ದುಪಡಿಸುವ ರೆಸಲ್ಯೂಶನ್ ಪಾಸ್ ಮಾಡಿದೆ. ರಾಜ್ಯಪಾಲ‌‌ಹುದ್ದೆ “ಕಾಲೋನಿಯಲ್ ಅವಶೇಷ” ಎಂದು ವಿರೋಧ ವ್ಯಕ್ತಪಡಿಸಿದೆ. ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಸಹ ರಾಜ್ಯಪಾಲರ ಹುದ್ದೆ ರದ್ದು ಮಾಡಬೇಕು ಎಂದು ಹೇಳಿದೆ.ರಾಜ್ಯಪಾಲ ಹುದ್ದೆ ಬಿಳಿಯಾನೆ, ನಿರ್ವಹಣೆ ದುಬಾರಿ. ಈ ದೃಷ್ಟಿಯಿಂದಲೂ ರದ್ದಾಗಬೇಕು‌ ಎಂಬ ಅಭಿಪ್ರಾಯವಿದೆ.
ಟಿವಿಕೆಗೆ ಸರ್ಕಾರ ರಚನೆಗೆ ಅವಕಾಶ ನೀಡದ ತಮಿಳುನಾಡು ರಾಜ್ಯಪಾಲ ನಿಲುವು ತೀವ್ರ ಟೀಕೆಗೆ ಒಳಗಾಗಿದೆ. ರಾಜ್ಯಪಾಲ ಹುದ್ದೆ ಬೇಕೇ ಎಂಬ ಚರ್ಚೆ ಮುನ್ನೆಲೆಗೆ ಬರಲು ಸಹ ಕಾರಣಕರ್ತರಾಗಿದ್ದಾರೆ.

You may also like

Leave a Comment

error: Content is protected !!