Kannadaರಾಜಕೀಯ

ಮುಖ್ಯಮಂತ್ರಿ ಶಿವಕುಮಾರ್‌ ದೇವತಾ ಮನುಷ್ಯ ಇರಬಹುದೇ ?

ಇತ್ತೀಚೆಗೆ ತಮಗಾಗಿ ಆಯೋಜಿತವಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಭಾಗವಹಿಸಿದ್ದರು. ತಮ್ಮ ನಾಯಕ, ಮಖ್ಯಮಂತ್ರಿಯಾದ ಸಂಭ್ರಮಾಚರಣೆಯನ್ನು ಅಭಿಮಾನಿಗಳು ಸಡಗರದಿಂದ ಮಾಡಿದ್ದರು. ಕ್ರೇನ್‌ ಮೂಲಕ ಸಾಂಕೇತಿಕವಾಗಿ ಸೇಬುಹಣ್ಣುಗಳಿಂದ ಮಾಡಿದ ಹಾರ ಹಾಕಲು ಯೋಜಿಸಿದ್ದರು. ತಮ್ಮತ್ತ ಬಂದ ಹಾರದಿಂದ ಒಂದು ಸೇಬು ಕಿತ್ತು ಕಚ್ಚಿ ತಿಂದ ಶಿವಕುಮಾರ್‌ ಅವರು ಅದನ್ನು ಜನರತ್ತ ಎಸೆದರು.

ಸಾಧುಸಂತರು ತಾವು ಎಂಜಲು ಮಾಡಿದ ಹಣ್ಣುಗಳನ್ನು ಜನರಿಗೆ ನೀಡುವುದು ಸಾಮಾನ್ಯ. ಇಲ್ಲಿ ಭಕ್ತರನ್ನು ಅಗೌರವಿಸುವ ಗುಣವಿರುವುದಿಲ್ಲ. ಇಂಥವರನ್ನು ಭಕ್ತರು ದೈವಾಂಶ ಸಂಭೂತರು ಎಂದು ಭಾವಿಸುತ್ತಾರೆ. ಆದ್ದರಿಂದ ಅವರು ಎಂಜಲು ಮಾಡಿದ್ದನ್ನು ಪ್ರಸಾದವೆಂದು ಸ್ವೀಕರಿಸುತ್ತಾರೆ. ಭಾರತೀಯ ಪರಂಪರೆಯಲ್ಲಿ ಇಂಥ ರೂಢಿ ಇದೆ.

ವಂಶಪಾರಂಪರ್ಯವಾಗಿ ಬರುವ ಅಧಿಕಾರ ಅನುಭವಿಸುವ ರಾಜವಂಶಗಳ ಆಳ್ವಿಕೆಯಲ್ಲಿಯೂ ಇಂಥ ವರ್ತನೆ ಅನಿರೀಕ್ಷಿತವಲ್ಲ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಪ್ರತಿಯನ್ನು ಹಿಡಿದು ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿ ಇಂಥ ವರ್ತನೆ ತೋರುತ್ತಾರೆ ಎಂದರೆ ಅಚ್ಚರಿ ಜೊತೆಗೆ ಆಘಾತ ಆಗುತ್ತದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪರಮೋಚ್ಚ. ಈ ವ್ಯವಸ್ಥೆಯಲ್ಲಿ ಅಧಿಕಾರಿಯಾಗಲಿ, ಮಂತ್ರಿಯಾಗಲಿ, ಮುಖ್ಯಮಂತ್ರಿ ಹೀಗೆ ಯಾರೇ ಆಗಲಿ ಜನಸೇವಕರೇ ಹೊರತು ಮಾಲಿಕರಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ನೆಚ್ಚಿನ ನಾಯಕ ಗೆದ್ದಾಗ ಅಭಿಮಾನಿಗಳು ಸಹಜವಾಗಿಯೇ ಸಂಭ್ರಮಿಸುತ್ತಾರೆ. ಅವರನ್ನು ಗೌರವದಿಂದ ಕಾಣುವುದು ನಾಯಕರ ಕರ್ತವ್ಯ. ಇದರ ಬದಲು ಅಗೌರವ ತೋರಿಸಿದರೆ ?

shivakumar apple
ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು ತಾವು ಕಚ್ಚಿ ತಿಂದ ಸೇಬಿನ ಹಣ್ಣನ್ನು ಜನರತ್ತ ಎಸೆಯುತ್ತಿರುವುದು

ರಾಜಕಾರಣಿಗಳು ಸಾರ್ವಜನಿಕವಾಗಿ ನಡೆದುಕೊಳ್ಳುವ ವಿಚಿತ್ರ ಅಥವಾ ವಿವಾದಾತ್ಮಕ ನಡವಳಿಕೆಗಳನ್ನು ಮನಃಶಾಸ್ತ್ರ ಮತ್ತು ಸಾಮಾಜಿಕ ದೃಷ್ಟಿಕೋನದಿಂದ ಬೇರೆ ಬೇರೆ ರೀತಿಯ ವ್ಯಕ್ತಿತ್ವದ ಲಕ್ಷಣಗಳಾಗಿ ವಿಶ್ಲೇಷಿಸಬಹುದು. ಇಂತಹ ವರ್ತನೆಗಳು ಸಾಮಾನ್ಯವಾಗಿ ಈ ಮುಂದಿನ ಮೂರು ಪ್ರಮುಖ ವ್ಯಕ್ತಿತ್ವದ ಗುಣಗಳನ್ನು ಪ್ರತಿಬಿಂಬಿಸುತ್ತವೆ.

ಅತಿರೇಕದ ಹೆಮ್ಮೆ ಅಥವಾ ಅಹಂಕಾರ (Arrogance & Entitlement)

ಸಾರ್ವಜನಿಕ ಜೀವನದಲ್ಲಿ ಇರುವವರು ತಾವು ತಿಂದ ವಸ್ತುವನ್ನು ಬೇರೆಯವರತ್ತ ಎಸೆಯುವುದು ಬೇರೆಯವರ ಘನತೆಗೆ (Dignity) ಗೌರವ ಕೊಡದಿರುವುದನ್ನು ತೋರಿಸುತ್ತದೆ. “ನಾನು ಕೊಟ್ಟರೆ ಜನ ಯಾವುದನ್ನಾದರೂ ಪ್ರಸಾದದಂತೆ ಸ್ವೀಕರಿಸುತ್ತಾರೆ” ಎನ್ನುವ ಅತಿಯಾದ ಆತ್ಮವಿಶ್ವಾಸ ಇಂತಹ ನಡವಳಿಕೆಗೆ ಕಾರಣವಾಗಿರಬಹುದು.

ಪ್ರಚಾರ ಮತ್ತು ನಾಟಕೀಯತೆ (Showmanship & Attention Seeking)

ಕೆಲವೊಮ್ಮೆ ಇಂತಹ ವರ್ತನೆಗಳು ಯಾವುದೇ ದುರುದ್ದೇಶದಿಂದ ಕೂಡಿರದೆ, ಕೇವಲ ಜನರ ಗಮನ ಸೆಳೆಯಲು ಅಥವಾ ತಮ್ಮ ಸಾರ್ವಜನಿಕ ಇಮೇಜ್ ಅನ್ನು “ಮಾಸ್ ಲೀಡರ್” (Mass Leader) ತರಹ ಬಿಂಬಿಸಿಕೊಳ್ಳಲು ಮಾಡುವ ಹಠಾತ್ ಪ್ರಯತ್ನವಾಗಿರಬಹುದು. ಅಭಿಮಾನಿಗಳ ಜೊತೆ ತೀರಾ ಆಪ್ತವಾಗಿದ್ದೇನೆ ಎಂದು ತೋರಿಸಿಕೊಳ್ಳುವ ಭರದಲ್ಲಿ, ಸಾರ್ವಜನಿಕವಾಗಿ ಅದು ಹೇಗೆ ಕಾಣಿಸುತ್ತದೆ ಎನ್ನುವ ವಿವೇಚನೆ ಇಲ್ಲದೆ ಮಾಡುವ ಅಪಕ್ವ ವರ್ತನೆ (Impulsive Behavior) ಸಹ ಆಗಿರಬಹುದು.

ಅಭಿಮಾನಿಗಳು ತಮ್ಮ ನಾಯಕರನ್ನು ಅತಿಯಾಗಿ ಆರಾಧಿಸುತ್ತಾರೆ ಎಂಬುದು ರಾಜಕಾರಣಿಗಳಿಗೆ ಚೆನ್ನಾಗಿ ಗೊತ್ತಿರುತ್ತದೆ. ಈ ಅತಿಯಾದ ಅಭಿಮಾನವನ್ನು ತಮ್ಮ ಸ್ವಾರ್ಥಕ್ಕೆ ಅಥವಾ ತಮ್ಮ ಅಧಿಕಾರ ಪ್ರದರ್ಶನಕ್ಕೆ ಬಳಸಿಕೊಳ್ಳುವ ವ್ಯಕ್ತಿತ್ವ ಇದಾಗಿರಬಹುದು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳಾದವರು ಸಾರ್ವಜನಿಕವಾಗಿ ಅತ್ಯಂತ ಜವಾಬ್ದಾರಿಯುತವಾಗಿ ಮತ್ತು ಪರರ ಗೌರವಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳುವುದು ಅಗತ್ಯ. ಇಂತಹ ವರ್ತನೆಗಳು ನಾಯಕರಲ್ಲಿ ಇರಬೇಕಾದ ಸಂವೇದನಾಶೀಲತೆ (Empathy) ಮತ್ತು ಸ್ಥಿತಪ್ರಜ್ಞತೆಯ  ಕೊರತೆಯನ್ನು ಎತ್ತಿ ತೋರಿಸುತ್ತವೆ ಅಲ್ಲವೇ ?

2 thoughts on “ಮುಖ್ಯಮಂತ್ರಿ ಶಿವಕುಮಾರ್‌ ದೇವತಾ ಮನುಷ್ಯ ಇರಬಹುದೇ ?

  • Jayaramu Ankanahalli

    ಗದ್ದುಗೆ ಏರಿರುವ ಅಹಮಿಕೆ ತೋರ್ಪಡಿಕೆಯ ಜೊತೆಗೆ ತನ್ನ ಪ್ರಚಾರದ ಅಬ್ಬರ ಹಾಗೂ ಅಪಕ್ವ ವ್ಯಕ್ತಿತ್ವದ ಅನಾವರಣದ ಪರಿಣಾಮವೇ ಈ ಘಟನೆಯಾಗಿದೆ .

    Reply
    • Kumara RaithaPost author

      ಹೌದು, ಅಧಿಕಾರದ ಗದ್ದುಗೆ ಏರಿದವರಿಗೆ ಪ್ರಜೆಗಳ ಕುರಿತು ಅಪರಿಮಿತ ಗೌರವವಿರಬೇಕು. ಇಲ್ಲಿ ವರ್ತನೆ ತದ್ವಿರುದ್ದವಾಗಿದೆ.

      Reply

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!