Kannadaಸಾಹಿತ್ಯ

ಬರೆಯುವವರ ಅಬ್ಬರದಲ್ಲಿ ಓದುಗರು ಕಣ್ಮರೆಯಾಗುತ್ತಿದ್ದಾರೆಯೇ ?

ʼದಿ ಸ್ಟೇಟ್ಸ್‌ ಮನ್‌ʼ ಪತ್ರಿಕೆಯಲ್ಲಿ “ಬರೆಯುವವರು ಹೆಚ್ಚಾಗುತ್ತಿದ್ದಾರೆ; ಓದುಗರು ಕಡಿಮೆಯಾಗುತ್ತಿದ್ದಾರೆ” ಎಂಬ ಲೇಖನ ಓದಿದೆ. ಅರೇ ಹೌದಲ್ಲವೇ ಎನಿಸಿತು. ಇದಕ್ಕೆ ಹಲವಾರು ಕಾರಣಗಳಿವೆ. ಏನವು ? ನಿಮ್ಮ ಮುಂದೆ ವಿವರಣೆಯಿದೆ.

ನಾವು ಇತಿಹಾಸದಲ್ಲೇ ಹಿಂದೆಂದೂ ಕಾಣದ ‘ಬರಹಗಾರರ ಸುವರ್ಣ ಯುಗ’ದಲ್ಲಿದ್ದೇವೆ. ಇಂದು ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್‌ಫೋನ್  ಎಂಬ ಒಂದು ಸಣ್ಣ ಡಿಜಿಟಲ್ ಮುದ್ರಣಾಲಯವಿದೆ  ಸಾಮಾಜಿಕ ಜಾಲತಾಣಗಳ ಬಯೋಗಳು, ವಾಟ್ಸಾಪ್ ಸ್ಟೇಟಸ್‌ಗಳು, ರೀಲ್ಸ್‌ಗಳ ಅಡಿಬರಹಗಳು, ಕವಿತೆಗಳು, ವಿಮರ್ಶೆಗಳು, ಬ್ಲಾಗ್‌ಗಳು!! ಹೀಗೆ ಜಗತ್ತಿನಾದ್ಯಂತ ಪ್ರತಿದಿನ ಶತಕೋಟಿ ಪದಗಳು ಸೃಷ್ಟಿಯಾಗುತ್ತಿವೆ. ಎಲ್ಲರೂ ತಮ್ಮ ಆಲೋಚನೆಗಳನ್ನು, ತಲ್ಲಣಗಳನ್ನು ಅಕ್ಷರ ರೂಪಕ್ಕೆ ತರಲು ಹಾತೊರೆಯುತ್ತಿದ್ದಾರೆ. ಆದರೆ, ಈ ಮಹಾ ಅಕ್ಷರಜಾತ್ರೆಯ ನಡುವೆ ಒಂದು ಗಂಭೀರವಾದ ಪ್ರಶ್ನೆ ಎದುರಾಗಿದೆ: “ಬರೆಯುವವರ ಸಂಖ್ಯೆ ಗಗನಕ್ಕೇರುತ್ತಿದ್ದರೆ, ಅದನ್ನು ಓದುವವರ ಸಂಖ್ಯೆ ಪಾತಾಳಕ್ಕೆ ಕುಸಿಯುತ್ತಿರುವುದೇಕೆ?

ನಾವು ಪ್ರಸ್ತುತ ಅತಿಯಾದ ಸಾಹಿತ್ಯಿಕ ಪೂರೈಕೆ (Supply) ಮತ್ತು ಅತ್ಯಂತ ಕನಿಷ್ಠ ಬೇಡಿಕೆಯ (Demand) ವಿಲಕ್ಷಣ ಸ್ಥಿತಿಯಲ್ಲಿದ್ದೇವೆ. ಇಡೀ ಜಗತ್ತು ಒಂದು ದೊಡ್ಡ ಗುಂಪು ಸಂಭಾಷಣೆಯಾಗಿ (Group Chat) ಮಾರ್ಪಟ್ಟಿದೆ. ಇಲ್ಲಿ ಹಲವರಿಗೆ ತಾವೇ ಮಾತನಾಡಬೇಕೆಂಬ ಹಂಬಲವಿದೆಯೇ ಹೊರತು, ಎದುರಿಗಿರುವವರು ಏನು ಹೇಳುತ್ತಿದ್ದಾರೆ ಎಂದು ಕೇಳಿಸಿಕೊಳ್ಳುವ ತಾಳ್ಮೆಯಿಲ್ಲ!

ಓದಿನ ಹವ್ಯಾಸಕ್ಕೆ ಡಿಜಿಟಲ್ ಗ್ರಹಣ

ಒಂದು ಕಾಲವಿತ್ತು, ಕೈಯಲ್ಲೊಂದು ಇನ್ನೂರು – ಮುನ್ನೂರು ಪುಟಗಳ ಕಾದಂಬರಿ ಹಿಡಿದು ಬಸ್ಸಿನಲ್ಲೋ, ಟ್ರೈನಿನಲ್ಲಿಯೋ ಪ್ರಯಾಣಿಸುತ್ತಿದ್ದರೆ ಅದೊಂದು ಬೌದ್ಧಿಕತೆಯ ಸಂಕೇತವಾಗಿತ್ತು. ಆದರೆ ಇಂದು ಸಾರ್ವಜನಿಕ ಸ್ಥಳದಲ್ಲಿ ಪುಸ್ತಕ ತೆರೆದು ಕುಳಿತರೆ ಯಾವುದೋ ಹಿಂದಿನ ಶತಮಾನದ ಅಪರೂಪದ ಪ್ರಾಣಿಯನ್ನು ನೋಡಿದಂತೆ ಹಲವರು ನೋಡುತ್ತಾರೆ. ಕಣ್ಣುಗಳು ಈಗ ಕಾಗದದ ಮೇಲಿನ ಕಪ್ಪು ಅಕ್ಷರಗಳನ್ನು ಬಿಟ್ಟು, ಮೊಬೈಲ್ ಸ್ಕ್ರೀನ್‌ನಿಂದ ಸೂಸುವ ಪ್ರಕಾಶಮಾನವಾದ ಬೆಳಕಿಗೆ ಒಗ್ಗಿಕೊಂಡಿವೆ.

ಸಾಹಿತ್ಯ ಕೃತಿಯೊಂದನ್ನು ಓದುವುದು ಎಂದರೆ ಅಪರಿಚಿತ ವ್ಯಕ್ತಿಯ ಆಲೋಚನೆಗಳೊಂದಿಗೆ ಸಂವಾದದಲ್ಲಿ ತೊಡಗಿದಂತೆ. ಅದಕ್ಕೆ ಕಲ್ಪನೆ, ಸಮಯ ಮತ್ತು ಏಕಾಗ್ರತೆ ಬೇಕು. ಆದರೆ, ಕೇವಲ ೩೦ ಸೆಕೆಂಡುಗಳ ಇನ್‌ಸ್ಟಾಗ್ರಾಮ್ ರೀಲ್ಸ್ ಅಥವಾ ಯೂಟ್ಯೂಬ್ ಶಾರ್ಟ್ಸ್‌ಗಳು ಮೆದುಳಿಗೆ ತಕ್ಷಣವೇ ‘ಡೋಪಮೈನ್’ (Dopamine) ಎಂಬ ಹಾರ್ಮೋನ್ ಕಿಕ್‌ ನೀಡುತ್ತಿರುವಾಗ, ಪುಟ ತಿರುಗಿಸುವ ನಿಧಾನಗತಿಯ ಶ್ರಮವನ್ನು ಯಾರು ತಾನೆ ವಹಿಸುತ್ತಾರೆ?

ಆಳವಾದ ಅಧ್ಯಯನದಿಂದ ಮೇಲ್ಪದರದ ಹುಡುಕಾಟ

ತಂತ್ರಜ್ಞಾನವು ನಮ್ಮ ಓದಿನ ಶೈಲಿಯನ್ನೇ ಬದಲಾಯಿಸಿದೆ. ನಾವು ಇಂದು ನಿರಾಳವಾಗಿ ಕುಳಿತು ಸಾಹಿತ್ಯವನ್ನು ಆಸ್ವಾದಿಸುತ್ತಿಲ್ಲ. ಇಂದಿನ ಓದುಗರಾದ ನಾವು ಡಿಜಿಟಲ್ ಕಾಡಿನಲ್ಲಿ ಬಾಣ ಹಿಡಿದು ಬೇಟೆಯಾಡುವ ಬೇಟೆಗಾರರಂತಾಗಿದ್ದೇವೆ. ಕಣ್ಣಿಗೆ ಬೀಳುವ ನೂರಾರು ನೋಟಿಫಿಕೇಶನ್‌ಗಳು, ಆಕರ್ಷಕ ಹೆಡ್‌ಲೈನ್‌ಗಳು (Clickbaits) ಮತ್ತು ಜಾಹೀರಾತುಗಳ ನಡುವೆ ನಮಗೆ ಬೇಕಾದ ಮುಖ್ಯಾಂಶಗಳನ್ನು (Bullet points) ಮಾತ್ರ ಆಯ್ದುಕೊಂಡು ಮುಂದೆ ಸಾಗುತ್ತಿದ್ದೇವೆ.

ಪುಸ್ತಕವೊಂದರ ಪ್ಯಾರಾಗ್ರಾಫ್‌ಗಳು ದೀರ್ಘವಾಗಿದ್ದರೆ ಮೆದುಳು ತಕ್ಷಣವೇ ನಿರಾಸಕ್ತಿ ತಳೆದು, ವಾಟ್ಸಾಪ್ ಇನ್‌ಬಾಕ್ಸ್, ಫೇಸ್ಬುಕ್‌, ಇನ್ಸ್ಟಾಗ್ರಾಮ್ ಕಡೆಗೆ ಮುಖ ಮಾಡುತ್ತದೆ. ಅಂದರೆ, ಅಕ್ಷರ ಜ್ಞಾನವಿಲ್ಲದೆ ಓದು ನಿಂತಿಲ್ಲ; ಬದಲಿಗೆ, ತದೇಕಚಿತ್ತದಿಂದ ಗಂಟೆಗಟ್ಟಲೆ ಒಂದು ವಿಷಯದ ಮೇಲೆ ಗಮನ ಹರಿಸುವ ನಮ್ಮ ಸಾಮರ್ಥ್ಯ ಕರಗಿಹೋಗಿದೆ. ಬಹುತೇಕರು ವೇದಿಕೆಯ ಮೇಲೆ ನಿಂತು ಏಕಕಾಲಕ್ಕೆ ತಮ್ಮದೇ ಕವಿತೆಯನ್ನು ಜೋರಾಗಿ ವಾಚಿಸುತ್ತಾ, “ಯಾರೂ ನನ್ನ ಕವನ ಕೇಳ್ತಿಲ್ಲ” ಎಂದು ಪರಸ್ಪರ ದೂರಿಕೊಳ್ಳುವ  ಸ್ಥಿತಿ ನಿರ್ಮಾಣವಾಗಿದೆ.

ಸ್ವಾವಲಂಬಿ ಪ್ರಕಾಶನ ಮತ್ತು ಬರಹಗಾರರ ಹೊಸ ಸಂಕಟ

ಇಂದು ಪುಸ್ತಕ ಪ್ರಕಟಿಸುವುದು ಕಷ್ಟದ ಕೆಲಸವಾಗಿ ಉಳಿದಿಲ್ಲ. ಸ್ವಯಂ-ಪ್ರಕಾಶನ (Self-publishing) ಮತ್ತು ಇ-ಪುಸ್ತಕಗಳ ಸೌಲಭ್ಯದಿಂದಾಗಿ ಯಾರೂ ಬೇಕಾದರೂ ಲೇಖಕರಾಗಬಹುದು. ಆದರೆ ಅಸಲಿ ಕಷ್ಟ ಶುರುವಾಗುವುದೇ ಪುಸ್ತಕ ಬಿಡುಗಡೆಯಾದ ನಂತರ. ಇಂದು ಒಬ್ಬ ಲೇಖಕ ತನ್ನ ಸಮಯದ ಶೇಕಡಾ ೧೦ ರಷ್ಟು ಭಾಗವನ್ನು ಬರೆಯಲು ಬಳಸಿದರೆ, ಉಳಿದ ಶೇಕಡಾ ೯೦ ರಷ್ಟು ಭಾಗವನ್ನು ತನ್ನ ಪುಸ್ತಕವನ್ನು ಕೊಂಡುಕೊಳ್ಳಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರ ಬಳಿ ಕೋರುವಿಕೆಗೆ (Marketing) ಬಳಸಬೇಕಾಗಿದೆ. ಓದುಗರಿಲ್ಲದ ಶೂನ್ಯ ಜಗತ್ತಿಗೆ ಅಕ್ಷರಗಳನ್ನು ಎಸೆಯುವ ದುರಂತ ಇದು.

ಪುಸ್ತಕಗಳ ಯುಗ ಮುಗಿಯುತ್ತಿದೆ ಎಂದರೆ ಕಥೆಗಳ ಯುಗ ಮುಗಿಯುತ್ತಿದೆ ಎಂದಲ್ಲ. ಮನುಷ್ಯ ಕಥೆಗಳತ್ತ ಗಮನಹರಿಸುವುದನ್ನು ನಿಲ್ಲಿಸಿಲ್ಲ, ಬದಲಿಗೆ ತನ್ನ ಕಲ್ಪನಾ ಶಕ್ತಿಯನ್ನು ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಅಥವಾ ಯೂಟ್ಯೂಬ್‌ಗಳಿಗೆ ‘ಔಟ್‌ಸೋರ್ಸ್’ ಮಾಡಿದ್ದೇವೆ! ಪುಸ್ತಕ ಓದುವಾಗ ನಮ್ಮ ಮೆದುಳು ಪಾತ್ರಗಳನ್ನು ಸೃಷ್ಟಿಸಬೇಕಿತ್ತು, ದೃಶ್ಯಗಳಿಗೆ ಬಣ್ಣ ಹಚ್ಚಬೇಕಿತ್ತು. ಈಗ ಆ ಕೆಲಸವನ್ನು ಪರದೆಯ ಮೇಲಿನ ದೃಶ್ಯಗಳು ಮಾಡುತ್ತಿವೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!