Kannadaಸಿನಿಮಾ

ಬಲರಾಮನ ದಿನಗಳು; ಚಿತ್ರಕಥೆ – ನಿರ್ದೇಶನದ ʼಚೈತನ್ಯʼ ಇದೆಯೇ ?

ಬೆಂಗಳೂರು; ಎಂಬತ್ತು – ತೊಂಬತ್ತರ ದಶಕಗಳ ದಿನಗಳಲ್ಲಿ ಭೂಗತ ಜಗತ್ತಿನ ಆರ್ಭಟ ಕಂಡಿದೆ. ಹಲವು ರೌಡಿಗಳು ಬಂದು ಹೇಳಹೆಸರಿಲ್ಲದಂತೆ ಹೊರಟು ಹೋಗಿದ್ದಾರೆ. ಕೆಲವರ ಹೆಸರಷ್ಟೆ ನೆನಪಿನಲ್ಲಿ ಉಳಿದಿವೆ. ಅವುಗಳಲ್ಲಿ ಬಲರಾಮದ್ದೂ ಒಂದು. ಅಳುಕದ, ಸಾಂಪ್ರದಾಯಿಕ ಶೈಲಿಯ ಸ್ಟ್ರೀಟ್ ಫೈಟರ್ ಎಂಬುದು ಆತನ ಹೆಸರಿನೊಂದಿಗೆ ಅಂಟಿಕೊಂಡಿದೆ. ಅಂದಿನ ಭೂಗತ ಜಗತ್ತಿನ ಕುಖ್ಯಾತ ನಾಮರೊಂದಿಗೆ ನಂಟಿದೆ. ಆತನಿಗಿದ್ದ ವರ್ಣರಂಜಿತ ಖದರ್ ಆತನ ಹೆಸರಿನಲ್ಲಿ ಸಿನಿಮಾ ಮಾಡುವ ಎದೆಗಾರಿಕೆ ನೀಡಿದೆ.
ಇವೆಲ್ಲದರ ಜೊತೆಗೆ ಆ ಕಥೆ ಸಮರ್ಥ ಸಿನಿಮಾ ಆಗಿ ರೂಪಾಂತವಾಗಿದೆಯೇ ? ಎಂಬ ಪ್ರಶ್ನೆ ನಮ್ಮೆದುರು ಮೂಡುತ್ತದೆ. ಕಥೆ ಎಷ್ಟೆ ಬಲಿಷ್ಠವಾಗಿದ್ದರೂ ಚಿತ್ರಕಥೆ ಪೇಲವವಾಗಿದ್ದರೆ ಸಿನಿಮಾ ಅಷ್ಟೆ ದುರ್ಬಲವಾಗುತ್ತದೆ. ಅದರ ಜೊತೆಗೆ ಅಶಕ್ತ ನಿರ್ದೇಶನ ಇದ್ದರಂತೂ ಆ ಸಿನಿಮಾ ಹೇಗಿರುತ್ತದೆ ಎಂಬುದನ್ನು ಅಂದಾಜಿಸಬಹುದು.
ಕೆ.ಎಂ ಚೈತನ್ಯ ಕಥೆ – ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ ಎಂಬ ಕಾರಣಕ್ಕೆ “ಬಲರಾಮನ ದಿನಗಳು” ನೋಡಿದೆ. ಇದೇ ನಿರ್ದೇಶಕರು “ ಆ ದಿನಗಳು” ಸಿನಿಮಾದಲ್ಲಿ ಮಾಡಿದ್ದ ಮ್ಯಾಜಿಕ್ ಇನ್ನೂ ನನ್ನ ನೆನಪಿನಲ್ಲಿದೆ. ಅದು ಮತ್ತಷ್ಟೂ ಪಕ್ವವಾಗಿರಬಹುದು ಎಂಬ ನಿರೀಕ್ಷೆ ಇತ್ತು.
ಸಿನಿಮಾದ ಓಪನಿಂಗ್ ಮುಂದೆ ಇಡೀ ಸಿನಿಮಾ ಹೇಗಿರಬಹುದು ಎಂಬ ಝಲಕ್ ಕಾಣಿಸುತ್ತದೆ. ನಿರೀಕ್ಷೆಯಂತೆ ಸಿನಿಮಾ ಬೆಳಯದೇ ಕುಗ್ಗುತ್ತಾ ಹೋಗುತ್ತದೆ. ಕಲಾವಿದರ ಉತ್ತಮ ಅಭಿನಯ ಸಹ ಚಿತ್ರಕ್ಕೆ “ಚೈತನ್ಯ” ತುಂಬಿಲ್ಲ. ಒಂದೆರಡು ದೃಶ್ಯಗಳ ಮಾದರಿ ನಿಮ್ಮ ಮುಂದಿಡುತ್ತೇನೆ. ೮೦ರ ದಶಕದ ಖಾಲಿಖಾಲಿ ರಸ್ತೆಯ ದಿನಗಳಲ್ಲಿ ಮೋಟರ್ ಬೈಕ್ ಗಳು ವೇಗವಾಗಿ ಸಾಗಬಹುದಿತ್ತು. ಹೀಗಿರುವಾಗ ತಮ್ಮದೇ ಗ್ಯಾಂಗಿನ ಇನ್ನೂ ಆತ್ಮೀಯರಾಗಿರದ್ದಿದ್ದ ರೌಡಿಗಳ ಬೈಕುಗಳನ್ನು ಬಲರಾಮನ ಲೂನಾ ಸರಿಗಟ್ಟಿ ಅವರಿದ್ದ ಜಾಗಕ್ಕೆ ತಲುಪುತ್ತದೆ !!
ಪೊಲೀಸ್ ಕಾರ್ಯವೈಖರಿ, ಅಧಿಕಾರಿಗಳ ಭುಜಕೀರ್ತಿಗಳ ಅಧ್ಯಯನ ಆಗಿರಲೇಬೇಕು, ಈ ಸಿನಿಮಾ ಸಂದರ್ಭದಲ್ಲಿ ಅದ್ಯಾವುದೂ ಆಗಿಲ್ಲ. ಅಂದಿನ ದಿನಗಳಲ್ಲಿ ಸಬ್ ಇನ್ಸ್ ಪೆಕ್ಟರ್ ದರ್ಜೆಯವರು ಪೊಲೀಸ್ ಠಾಣಾಧಿಕಾರಿ ಆಗಿರುತ್ತಿದ್ದರು. ಆದರೆ ಇಲ್ಲಿ ಆ ಅಧಿಕಾರಿಗೆ ಸಿಂಗಲ್ ಸ್ಟಾರ್ ( ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್) ಇದೆ. ಇದೇ ಅಧಿಕಾರಿಗೆ ಮುಂದೆ ಡಬ್ಬಲ್ ಸ್ಟಾರ್, ತ್ರಿಬ್ಬಲ್ ಸ್ಟಾರ್ ಬರುತ್ತದೆ. ಓರ್ವ ಸಹನಾಶೀಲ ನಿರ್ದೇಶಕ ದೃಶ್ಯಗಳ ಕಂಟಿನ್ಯೂಟಿಯತ್ತ ಗಮನ ಹರಿಸಬೇಕಲ್ಲವೇ ಇಲ್ಲಿ ಇದ್ಯಾವುದೂ ಇಲ್ಲ.
ಸಿನಿಮಾವನ್ನು ರೋಮ್ಯಾಂಟಿಸೈಸ್ ಮಾಡಿದರೆ ಮಾತ್ರ ಸಕ್ಸಸ್ ಆಗುತ್ತದೆ ಎಂಬ ಭ್ರಮೆಗಳಿಂದ ಕೆ.ಎಂ ಚೈತನ್ಯ ಇನ್ನೂ ಹೊರ ಬಂದಿಲ್ಲ. ಆದ್ದರಿಂದಲೇ ರೋಮ್ಯಾಂಟಿಸೈಸ್ ಅಸಹಜ ಎನಿಸುತ್ತದೆ. ಇದರ ಜೊತೆಗೆ ಭೂಗತ ಜಗತ್ತಿನ ಕುರಿತ ಭಾರತೀಯ ಚಾರಿತ್ರಿಕ ಸಿನಿಮಾ “ನಾಯಗನ್” ನೆರಳೂ ಇಲ್ಲಿದೆ. ಆದರೆ ಅದು ಪರಿಣಾಮಕಾರಿಯಾಗದೇ ಅತೀ ಪೇಲವವಾಗಿದೆ. ಹೀಗೆ ಚಿತ್ರಕಥೆ- ನಿರ್ದೇಶಕರ ವಿಫಲತೆಗಳ ಬಗ್ಗೆ ಹೇಳುತ್ತಾ ಹೋಗಬಹುದು. ಚಿತ್ರಕಥೆ ಜೊತೆಗೆ ಛಾಯಾಗ್ರಹಣ- ಸಂಕಲನ – ಹಿನ್ನೆಲೆ ಸಂಗೀತವನ್ನು ಬಿಗಿಬಂಧದಲ್ಲಿ ದುಡಿಸಿಕೊಳ್ಳಲು ವಿಫಲರಾಗಿರುವ ಕೆ.ಎಂ. ಚೈತನ್ಯ ತೀವ್ರ ನಿರಾಶೆ ಮೂಡಿಸಿದರು ಎಂದಷ್ಟೆ ಹೇಳಬಹುದು

Leave a Reply

Your email address will not be published. Required fields are marked *

error: Content is protected !!