Kannadaಸಿನಿಮಾ

ಸರ್ಕಾರಿ ಒಟಿಟಿ; ಚಿತ್ರರಂಗ ಆರ್ಥಿಕ ಸ್ಥಿರತೆ ಸಾಧಿಸಲು ಸಹಾಯಕವೇ ?

“ಬಹುರಾಷ್ಟ್ರೀಯ ಒಟಿಟಿ ಕಂಪನಿಗಳು ಕನ್ನಡ ಚಿತ್ರಗಳನ್ನು ಕಡೆಗಣಿಸುತ್ತಿವೆ, ಕನ್ನಡ ಚಿತ್ರರಂಗದ ಉಳಿವಿಗಾಗಿ ರಾಜ್ಯ ಸರ್ಕಾರ ಸರ್ಕಾರಿ ಒಟಿಟಿ ಆರಂಭಿಸಬೇಕು ಎಂದು ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಡಾ. ಜಯಮಾಲ ಅವರ ನೇತೃತ್ವದ ನಿಯೋಗ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದೆ. ಈ ಸಂದರ್ಭದಲ್ಲಿ ಸಣ್ಣ ಬಜೆಟ್ ಸಿನಿಮಾಗಳ ಬಗ್ಗೆಯೂ ಪ್ರಸ್ತಾಪವಾಗಿದೆ”
ಕನ್ನಡ ಸಿನಿಮಾಗಳ ಉಳಿವು, ಬೆಳವಣಿಗೆ ಮತ್ತು ಆರ್ಥಿಕ ಸ್ಥಿರತೆ ಬಗ್ಗೆ ಯೋಚಿಸಬೇಕಾದ್ದು ಚಲನಚಿತ್ರ ವಾಣಿಜ್ಯ ಮಂಡಳಿ ಕರ್ತವ್ಯ. ಆ ದಿಶೆಯಲ್ಲಿ ಡಾ. ಜಯಮಾಲ ಅವರ ಪ್ರಯತ್ನ ಶ್ಲಾಘನೀಯ. ಆದರೆ ಇಲ್ಲಿ ಬಹುಮುಖ್ಯವಾಗಿ ಎದುರಾಗುವ ಪ್ರಶ್ನೆ ಎಂದರೆ “ಸರ್ಕಾರಿ ಒಟಿಟಿ” ಮಾಡಿದಾಕ್ಷಣ ಆರ್ಥಿಕವಾಗಿ ಕನ್ನಡ ಚಿತ್ರರಂಗ ಸ್ಥಿರತೆ ಸಾಧಿಸಲು ಸಹಾಯವಾಗುತ್ತದೆಯೇ ಎಂಬ ಪ್ರಶ್ನೆ!
ಸಿನೆಮಾ ಎಂಬುದು ಕಲೆ ನಿಜ. ಆದರೆ ಅದರ ಹಿಂದೆ ಕೋಟ್ಯಂತರ ರೂಪಾಯಿಗಳ ಹೂಡಿಕೆ ಮತ್ತು ವ್ಯವಹಾರವಿರುತ್ತದೆ. ಹೀಗಿರುವಾಗ, “ಸರ್ಕಾರಿ ಒಟಿಟಿ ಯಶಸ್ವಿಯಾಗುತ್ತದೆಯೇ ಅಥವಾ ನಷ್ಟದ ಕೂಪವಾಗುತ್ತದೆಯೇ” ಮತ್ತು “ಖಾಸಗಿ ಒಟಿಟಿಗಳು ಸಣ್ಣ ಸಿನಿಮಾಗಳನ್ನು ಏಕೆ ಖರೀದಿಸುತ್ತಿಲ್ಲ” ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಒಟಿಟಿ ಸಂಸ್ಥೆಗಳ ಆರ್ಥಿಕ ಮತ್ತು ವ್ಯವಹಾರಿಕ ತರ್ಕವನ್ನು (Business Logic) ಅರ್ಥಮಾಡಿಕೊಳ್ಳುವುದು ಅಗತ್ಯ. ಈ ಹಿನ್ನೆಲೆಯಲ್ಲಿ ಒಟಿಟಿ ವೇದಿಕೆಗಳ ಆಂತರಿಕ ವ್ಯವಹಾರದ ಲೆಕ್ಕಾಚಾರವನ್ನು ವಿಶ್ಲೇಷಿಸುವ ಲೇಖನ ನಿಮ್ಮ ಮುಂದಿದೆ.
ಒಟಿಟಿ (OTT) ಲೋಕದ ವ್ಯವಹಾರಿಕ ತರ್ಕ
ಚಿತ್ರಮಂದಿರಗಳ ಕೊರತೆ ಮತ್ತು ಬದಲಾದ ಪ್ರೇಕ್ಷಕರ ಅಭಿರುಚಿಗೆ ಪರ್ಯಾಯವಾಗಿ ಬಂದಿದ್ದೇ ಒಟಿಟಿ ವೇದಿಕೆಗಳು. ಆದರೆ, ಇಂದು ಅದೇ ಒಟಿಟಿಗಳು ಸಣ್ಣ ಬಜೆಟ್ ಮತ್ತು ಸ್ಟಾರ್ ನಟರಿಲ್ಲದ ಸಿನಿಮಾಗಳಿಗೆ ಮರೀಚಿಕೆಯಾಗಿವೆ. ಇದರ ಹಿಂದೆ ಯಾವುದೇ ವೈಯಕ್ತಿಕ ದ್ವೇಷವಿರುವುದಿಲ್ಲ, ಬದಲಿಗೆ ಕೇವಲ ಲಾಭ-ನಷ್ಟದ ಲೆಕ್ಕಾಚಾರ ಮಾತ್ರ ಇರುತ್ತದೆ.
ಖಾಸಗಿ ಒಟಿಟಿಗಳ ಆರ್ಥಿಕ ಸೂತ್ರ (Business Model) ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ. ಖಾಸಗಿ ಒಟಿಟಿ ಸಂಸ್ಥೆಗಳು (ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್, ಜಿ೫ ಇತ್ಯಾದಿ) ಪ್ರಮುಖವಾಗಿ ಮೂರು ಅಂಶಗಳ ಮೇಲೆ ಹೂಡಿಕೆ ಮಾಡುತ್ತವೆ.
ಒಟಿಟಿ ಸಂಸ್ಥೆಗೆ ಚಂದಾದಾರ (Subscriber Acquisition)ರಿಂದಲೇ ಪ್ರಮುಖ ಆದಾಯ ಬರುತ್ತದೆ. ಒಂದು ಹೊಸ ಸಿನಿಮಾ ಪ್ರಸಾರವಾದಾಗ, ಆ ಸಿನಿಮಾವನ್ನು ನೋಡಲು ಎಷ್ಟು ಜನ ಹೊಸದಾಗಿ ಹಣ ನೀಡಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುತ್ತಾರೆ ಎಂಬುದು ಅವರ ಲೆಕ್ಕಾಚಾರ. ಸ್ಟಾರ್ ನಟರ ಸಿನಿಮಾಗಳಿಗೆ ಈ ಶಕ್ತಿ ಹೆಚ್ಚಿರುತ್ತದೆ.
ಡೇಟಾ ಮತ್ತು ಅಲ್ಗಾರಿದಮ್ (Data & Algorithms) ಎಂಬುದೂ ಮುಖ್ಯವಾದ ಸಂಗತಿ. ಪ್ರೇಕ್ಷಕರು ಯಾವ ರೀತಿಯ ಸಿನಿಮಾಗಳನ್ನು ಹೆಚ್ಚು ಹೊತ್ತು ನೋಡುತ್ತಾರೆ (Watch Time) ಎಂಬ ನಿಖರವಾದ ಡೇಟಾ ಒಟಿಟಿಗಳ ಬಳಿ ಇರುತ್ತದೆ. ಸಣ್ಣ ಸಿನಿಮಾಗಳಿಗೆ ಆರಂಭಿಕ ಪ್ರಚಾರ (Pre-release buzz) ಇಲ್ಲದಿದ್ದರೆ, ಪ್ರೇಕ್ಷಕರು ಅದನ್ನು ಕ್ಲಿಕ್ ಮಾಡುವುದೂ ಇಲ್ಲ.
ಆರ್.ಒ.ಐ ಅಂದರೆ Return on Investment ಒಂದು ಸಿನಿಮಾವನ್ನು ₹೫ ಕೋಟಿಗೆ ಖರೀದಿಸಿದರೆ, ಅದರಿಂದ ಕನಿಷ್ಠ ₹೭ ಕೋಟಿ ರೂಪಾಯಿಯಷ್ಟ ಹಣ ನೀಡುವಷ್ಟು ಸಂಖ್ಯೆಯ ಹೊಸ ಚಂದಾದಾರರು ಸಿಗಬೇಕು. ಈ ಭರವಸೆ ಇಲ್ಲದ ಸಿನಿಮಾಗಳನ್ನು ಖಾಸಗಿ ಸಂಸ್ಥೆಗಳು ಮುಟ್ಟುವುದಿಲ್ಲ.
ಸಣ್ಣ ಬಜೆಟ್ ಸಿನಿಮಾಗಳನ್ನು ಹೆಚ್ಚಾಗಿ ಖರೀದಿಸದಿರಲು ಮುಖ್ಯ ಕಾರಣಗಳೇನು ? ಮುಖ್ಯವಾಗಿ ಪ್ರಚಾರದ ಕೊರತೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಕನಿಷ್ಠ ಸದ್ದು ಮಾಡದ ಸಿನಿಮಾಗಳಿಗೆ ಒಟಿಟಿಯಲ್ಲಿ ವೀಕ್ಷಕರು ಸಿಗುವುದು ಕಷ್ಟ. ಕೇವಲ ಕಡಿಮೆ ಬಜೆಟ್ನಲ್ಲಿ ಮಾಡಲಾಗಿದೆ ಎಂಬ ಕಾರಣಕ್ಕೆ ಪ್ರೇಕ್ಷಕರು ಸಿನಿಮಾ ನೋಡುವುದಿಲ್ಲ. ಅದರಲ್ಲಿ ಹೊಸತನವಿಲ್ಲದಿದ್ದರೆ ಒಟಿಟಿಗಳು ಹೂಡಿಕೆ ಮಾಡಲು ಸಿದ್ಧವಿರುವುದಿಲ್ಲ.
ಕೋವಿಡ್ ಸಮಯದಲ್ಲಿ ಪ್ರಾಯೋಗಿಕವಾಗಿ ಎಲ್ಲ ಸಿನಿಮಾಗಳನ್ನು ಖರೀದಿಸುತ್ತಿದ್ದ ಒಟಿಟಿಗಳು, ಈಗ ಕೇವಲ ಥಿಯೇಟರ್ನಲ್ಲಿ ಯಶಸ್ವಿಯಾದ ಅಥವಾ ದೊಡ್ಡ ಸ್ಟಾರ್ಗಳ ಸಿನಿಮಾಗಳನ್ನು ಮಾತ್ರ ಖರೀದಿಸುವ ಕಟ್ಟುನಿಟ್ಟಿನ ನಿಯಮ ಮಾಡಿಕೊಂಡಿವೆ. ಬಾಲಿವುಡ್ ಅಥವಾ ದಕ್ಷಿಣ ಭಾರತದ ಇತರ ಚಿತ್ರರಂಗಗಳಿಗೆ ಹೋಲಿಸಿದರೆ ಕನ್ನಡದ ಸಣ್ಣ ಸಿನಿಮಾಗಳಿಗೆ ಮಾರುಕಟ್ಟೆ ಸದ್ಯಕ್ಕೆ ಸಣ್ಣದು. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರಿ ಒಟಿಟಿ ಆರಂಭಿಸಿದರೆ ಎದುರಾಗಬಹುದಾದ ಆರ್ಥಿಕ ಸವಾಲುಗಳು ಅನೇಕ
ತಾಂತ್ರಿಕ ಮತ್ತು ನಿರ್ವಹಣಾ ವೆಚ್ಚ (Technology & Infrastructure)
ಒಟಿಟಿ ಎಂದರೆ ಕೇವಲ ಸಿನಿಮಾಗಳನ್ನು ಅಪ್ಲೋಡ್ ಮಾಡುವ ವೆಬ್ಸೈಟ್ ಅಲ್ಲ. ಕೋಟ್ಯಂತರ ಜನ ಏಕಕಾಲಕ್ಕೆ ವೀಕ್ಷಿಸಿದಾಗಲೂ ಹ್ಯಾಂಗ್ ಆಗದಂತೆ ಸರ್ವರ್ಗಳನ್ನು ನಿರ್ವಹಿಸುವುದು, ಆ್ಯಪ್ ಅಪ್ಡೇಟ್ ಮಾಡುವುದು ಅತ್ಯಂತ ದುಬಾರಿ ಪ್ರಕ್ರಿಯೆ. ತಾಂತ್ರಿಕ ವೆಚ್ಚವೇ ಸರ್ಕಾರದ ಪಾಲಿಗೆ ದೊಡ್ಡ ಹೊರೆಯಾಗಬಹುದು.
ಕಂಟೆಂಟ್ ಆಯ್ಕೆಯ ಸವಾಲು
ಸರ್ಕಾರ ಯಾರ ಸಿನಿಮಾಗಳನ್ನು ಖರೀದಿಸಬೇಕು? ಎಲ್ಲ ಸಿನಿಮಾಗಳನ್ನು ಖರೀದಿಸಲು ಹೋದರೆ ಗುಣಮಟ್ಟವಿಲ್ಲದ ಸಿನಿಮಾಗಳೂ ಒಟಿಟಿ ಸೇರುತ್ತವೆ. ಇದರಿಂದ ಪ್ರೇಕ್ಷಕರು ಆ್ಯಪ್ನಿಂದ ದೂರ ಉಳಿಯುತ್ತಾರೆ. ಒಂದು ವೇಳೆ ಆಯ್ದ ಸಿನಿಮಾಗಳನ್ನು ಮಾತ್ರ ಖರೀದಿಸಿದರೆ, “ಸರ್ಕಾರ ಪಕ್ಷಪಾತ ಮಾಡುತ್ತಿದೆ” ಎಂಬ ಆರೋಪ ಕೇಳಿಬರುತ್ತದೆ.
ವಾಣಿಜ್ಯೋದ್ದೇಶದ ಕೊರತೆ (Lack of Commercial Mindset)
ಸರ್ಕಾರಗಳು ಸಾಮಾನ್ಯವಾಗಿ ಲಾಭದ ಉದ್ದೇಶದಿಂದ ಸಂಸ್ಥೆಗಳನ್ನು ನಡೆಸುವುದಿಲ್ಲ, ಬದಲಿಗೆ ಜನಕಲ್ಯಾಣದ ಉದ್ದೇಶ ಹೊಂದಿರುತ್ತವೆ. ಆದರೆ ಸಿನಿಮಾ ರಂಗ ಪಕ್ಕಾ ಬಿಸಿನೆಸ್ ಮಾದರಿ. ಪ್ರಚಾರ (Marketing) ಮತ್ತು ಆಕರ್ಷಕ ಕಂಟೆಂಟ್ ಇಲ್ಲದಿದ್ದರೆ ಸರ್ಕಾರಿ ಒಟಿಟಿ ಕೂಡ ನಷ್ಟದ ಹಾದಿ ಹಿಡಿಯುವ ಅಪಾಯವಿರುತ್ತದೆ ಉದಾಹರಣೆಗೆ ಹೇಳುವುದಾದರ ಕೇಂದ್ರ ಸರ್ಕಾರದ ‘ಪ್ರಸಾರ ಭಾರತಿ’ ಒಟಿಟಿ ಅಥವಾ ಕೇರಳ ಸರ್ಕಾರದ ‘CSpace’ ಒಟಿಟಿಗಳು ಇನ್ನೂ ನಿರೀಕ್ಷಿತ ವಾಣಿಜ್ಯ ಯಶಸ್ಸು ಕಂಡಿಲ್ಲ.
ಪರಿಹಾರ ಇದೆಯೇ?
ಟಿವಿಒಡಿ (TVOD – Transactional Video on Demand) ಮಾದರಿಯಲ್ಲಿ ಒಂದು ಸಿನಿಮಾ ನೋಡಲು ಸಿನಿಮಾಗೆ ಇಂತಿಷ್ಟು ಎಂದು ಟಿಕೆಟ್ ದರ ನಿಗದಿಪಡಿಸಬೇಕು. ಅದರಿಂದ ಬರುವ ಆದಾಯದಲ್ಲಿ ನಿರ್ದಿಷ್ಟ ಪಾಲನ್ನು ಚಿತ್ರದ ನಿರ್ಮಾಪಕರಿಗೆ ನೀಡಿ, ಉಳಿದದ್ದನ್ನು ಒಟಿಟಿ ನಿರ್ವಹಣೆಗೆ ಬಳಸಿಕೊಂಡರೆ ವ್ಯವಹಾರಿಕವಾಗಿಯೂ ಇದು ಯಶಸ್ವಿಯಾಗಬಹುದು ಮತ್ತು ಸಣ್ಣ ಸಿನಿಮಾಗಳಿಗೆ ಮಾರುಕಟ್ಟೆಯೂ ಸಿಗಬಹುದು.
ಚಿತ್ರರಂಗವನ್ನು ಉಳಿಸುವುದು ಸರ್ಕಾರದ ಆಶಯವಾಗಿದ್ದರೂ, ಒಟಿಟಿ ವೇದಿಕೆಯನ್ನು ಒಂದು ‘ಸರಕಾರಿ ಸಬ್ಸಿಡಿ ಯೋಜನೆ’ಯಂತೆ ನೋಡದೆ, ಪಕ್ಕಾ ‘ಡಿಜಿಟಲ್ ಬಿಸಿನೆಸ್’ ಮಾದರಿಯಲ್ಲಿ ರೂಪಿಸಿದರೆ ಮಾತ್ರ ನಷ್ಟದಿಂದ ಪಾರಾಗಲು ಸಾಧ್ಯ. ಇದೇ ಸಂದರ್ಭದಲ್ಲಿ ನಿರ್ಮಾಣವಾಗುವ ಎಲ್ಲ ಸಿನಿಮಾಗಳನ್ನು ಖರೀದಿಸಬೇಕೇ? ಖರೀದಿ ಸಮಿತಿ ಹೇಗಿರಬೇಕು ? ಅದರಲ್ಲಿ ಸದಸ್ಯರು ಯಾರಿರಬೇಕು ಎಂಬ ಪ್ರಶ್ನೆಗಳು ಉದ್ಬವವಾಗುತ್ತವೆ. ಪಕ್ಷಪಾತ ಧೋರಣೆ ಅನುಸರಿಸಿದರೆ ಇಡೀ ಮಾದರಿ ಹಳ್ಳ ಹಿಡಿಯುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಆದ್ದರಿಂದ ಸರ್ಕಾರವು ಒಟಿಟಿ ತಂಟೆಗೆ ಹೋಗದೇ ಇರುವುದು ಒಳಿತು. ಪರಿಹಾರ ಏನು ಅಂದರೆ ಪ್ರೇಕ್ಷಕರೇ ಕಾತರದಿಂದ ಕಾಯ್ದು ನೋಡುವ ಸಿನಿಮಾಗಳ ನಿರ್ಮಾಣ!!

Leave a Reply

Your email address will not be published. Required fields are marked *

error: Content is protected !!