Home ಪ್ರಸ್ತುತKannadaಎಐ; ಭಾರತದ ದುಡಿಯುವ ವರ್ಗಗಳ ಭವಿಷ್ಯ ಅಪತ್ತಿನಲ್ಲಿ

ಎಐ; ಭಾರತದ ದುಡಿಯುವ ವರ್ಗಗಳ ಭವಿಷ್ಯ ಅಪತ್ತಿನಲ್ಲಿ

by Kumara Raitha
2 comments

ಆ ಮನೆಯ ಹಿತ್ತಲಿನಲ್ಲಿ ಮಜ್ಜಿಗೆ ಕಡೆಯುವಾಗಲೋ, ಅಡುಗೆಮನೆಯಲ್ಲಿ ಚಾಕುವಿನಿಂದ ತರಕಾರಿ ಹೆಚ್ಚುವಾಗಲೋ ಆ ಮಹಿಳೆಯ ಆ ಯುವಕನ ತಲೆಯ ಮೇಲೊಂದು ಕಪ್ಪು ಕ್ಯಾಮೆರಾ ಕಣ್ಣು ಬಿಟ್ಟು ನೋಡುತ್ತಿರುತ್ತದೆ. ಕೈಗಳ ಪ್ರತಿಯೊಂದು ಚಲನೆ, ಬೆರಳುಗಳ ಮಡಿಕೆ, ಮಣಿಕಟ್ಟಿನ ತಿರುವು—ಎಲ್ಲವೂ ಡಿಜಿಟಲ್ ಪರದೆಯ ಮೇಲೆ ಸೆರೆಯಾಗುತ್ತಿರುತ್ತವೆ. ಅವರಿಗೆ ಒಂದು ಗಂಟೆಗೆ ಇನ್ನೂರೈವತ್ತು ರೂಪಾಯಿಯಂತೆ ಲೆಕ್ಕ ಹಾಕಿ ಹಣ ಕೈಗಿಡಲಾಗುತ್ತಿದೆ. ಇದು ಸದ್ಯದ ಮಟ್ಟಿಗೆ ಸಂಸಾರದ ತಾಪತ್ರಯಗಳಿಂದ ಪಾರಾಗಲು ನೆರವಾಗುತ್ತಿರಬಹುದು. ಆದರೆ ಅವರು ನಗುತ್ತಲೇ ಮಾಡುತ್ತಿರುವ ಈ ಕೆಲಸ, ವಾಸ್ತವದಲ್ಲಿ ಜಾಗತಿಕ ತಂತ್ರಜ್ಞಾನದ ಇತಿಹಾಸದಲ್ಲೇ ಅತ್ಯಂತ ದೊಡ್ಡ ‘ಮೌನ ಮಾನವ ದುಡಿಮೆಯ ಶಿಕಾರಿ’ಯ ಭಾಗ ಎಂಬುದು ಅವರಿಗೆ ಗೊತ್ತಿಲ್ಲ.

ಇದು ಇಂದಿನ ಭಾರತದ ಡಿಜಿಟಲ್ ಮಾರುಕಟ್ಟೆಯ ಕಟು ವಾಸ್ತವ. ಅಮೆರಿಕದ ಸಿಲಿಕಾನ್ ವ್ಯಾಲಿಯ ದೈತ್ಯ ಐಟಿ ಕಂಪನಿಗಳು ತಮ್ಮ ‘ಕೃತಕ ಬುದ್ಧಿಮತ್ತೆ’ (AI) ಮತ್ತು ರೋಬೋಟ್‌ಗಳಿಗೆ ಜೀವ ತುಂಬಲು ಭಾರತದ ಸಾಮಾನ್ಯ ಜನರ ದಿನಚರಿಯನ್ನು ಕರಾರುವಾಕ್ಕಾಗಿ ಕದಿಯುತ್ತಿವೆ.

ಯಂತ್ರಕ್ಕೆ ಉಸಿರು ಕೊಡುತ್ತಿರುವ ಭಾರತೀಯ ಶ್ರಮಿಕರು

ಕೃತಕ ಬುದ್ಧಿಮತ್ತೆಗೆ ಸ್ವಂತ ಬುದ್ಧಿಯಿಲ್ಲ. ಅದಕ್ಕೆ ಕೋಟ್ಯಂತರ ಮಾನವ ಚಲನೆಗಳ ‘ಡೇಟಾ’ ಬೇಕು. ಮನುಷ್ಯ ಬಟ್ಟೆ ಮಡಚುವಾಗ ಉಂಟಾಗುವ ಬಟ್ಟೆಯ ಸುಕ್ಕುಗಳನ್ನು ಹೇಗೆ ಸರಿಪಡಿಸುತ್ತಾನೆ? ಚಹಾ ಸೋಸುವಾಗ ಕೈ ಹೇಗೆ ಅಲುಗಾಡುತ್ತದೆ? ದರ್ಜಿಗಳು ಹೇಗೆ ಕೌಶಲದಿಂದ ಬಟ್ಟೆ ಕತ್ತರಿಸಿ ಹೊಲಿಯುತ್ತಾರೆ ?ಈ ಸೂಕ್ಷ್ಮ ಸಂವೇದನೆಗಳನ್ನು ಯಂತ್ರಗಳಿಗೆ ಕಲಿಸಲು ಅಮೆರಿಕದ ಕಂಪನಿಗಳು ಭಾರತದ ಯುವಕರನ್ನು ಮತ್ತು ಗೃಹಿಣಿಯರನ್ನು ಬಳಸಿಕೊಳ್ಳುತ್ತಿವೆ.

ಇದಕ್ಕಾಗಿ ಕೃತಕ ಸ್ಟುಡಿಯೋಗಳನ್ನು ನಿರ್ಮಿಸಲಾಗಿದೆ. ಅಲ್ಲಿ ನಕಲಿ ಮನೆಗಳನ್ನು ಸೃಷ್ಟಿಸಿ, ದಿನವಿಡೀ ಮನುಷ್ಯರು ಮಾಡುವ ಕೆಲಸಗಳನ್ನು ಕ್ಯಾಮೆರಾ ಮುಂದೆ ಮಾಡಿಸಲಾಗುತ್ತದೆ. ಗಂಟೆಗೆ 250 ರೂಪಾಯಿ ಎಂಬ ಸಣ್ಣ ಆಮಿಷಕ್ಕೆ ಬಿದ್ದ ಭಾರತದ ಬಡ ಹಾಗೂ ಮಧ್ಯಮ ವರ್ಗದ ಶ್ರಮಿಕರು, ತಮ್ಮ ಅನನ್ಯವಾದ ಶಾರೀರಿಕ ಕೌಶಲಗಳನ್ನು ಡಿಜಿಟಲ್ ರೂಪದಲ್ಲಿ ಧಾರೆ ಎರೆಯುತ್ತಿದ್ದಾರೆ. ಮೇಲ್ನೋಟಕ್ಕೆ ಇದು ಮನೆಯಲ್ಲೇ ಕುಳಿತು ಮಾಡುವ ಸುಲಭದ ಕೆಲಸದಂತೆ ಕಂಡರೂ, ಆಳದಲ್ಲಿ ಇದು ಮಾನವ ಇತಿಹಾಸದ ಅತ್ಯಂತ ಅಗ್ಗದ ಶ್ರಮದ ಲೂಟಿ.

ನಾಳೆಯ ಹೊಟ್ಟೆಯ ಮೇಲೆ ಇಂದಿನ ಕಲ್ಲು

ಈ ವಿದ್ಯಮಾನದ ಹಿಂದೆ ಒಂದು ಭೀಕರವಾದ ವಿರೋಧಾಭಾಸವಿದೆ. ಇಂದು ಯಾವ ಭಾರತೀಯ ಯುವಕ ಅಥವಾ ಮಹಿಳೆ ಗಂಟೆಗೆ 250 ರೂಪಾಯಿ ಆಸೆಗೆ ಅಮೆರಿಕದ ರೋಬೋಟ್‌ಗಳಿಗೆ ‘ತರಬೇತಿ’ ನೀಡುತ್ತಿದ್ದಾರೋ, ಅದೇ ರೋಬೋಟ್‌ಗಳು ಪೂರ್ಣ ಪ್ರಮಾಣದಲ್ಲಿ ಸಿದ್ಧವಾದಾಗ ಮೊದಲ ಪೆಟ್ಟು ಬೀಳುವುದು ಇದೇ ಸಾಮಾನ್ಯ ಜನರ ಉದ್ಯೋಗಗಳ ಮೇಲೆ!

ಭಾರತದ ಆರ್ಥಿಕತೆಯ ನಿಜವಾದ ಶಕ್ತಿ ಇರುವುದು ಇಲ್ಲಿನ ಅಸಂಘಟಿತ ವಲಯದಲ್ಲಿ. ಹೋಟೆಲ್‌ಗಳಲ್ಲಿ ಆಹಾರ ಪೂರೈಕೆ ಮಾಡುವವರು, ಕಾರ್ಮಿಕರು, ಸಣ್ಣಪುಟ್ಟ ಕಾರ್ಖಾನೆಗಳ ಕಾರ್ಮಿಕರು, ಮನೆಗೆಲಸದವರು, ದರ್ಜಿಗಳು—ಹೀಗೆ ಕೋಟ್ಯಂತರ ಜನರ ಹೊಟ್ಟೆಪಾಡು ದೈನಂದಿನ ದೈಹಿಕ ಶ್ರಮದ ಮೇಲೆಯೇ ನಿಂತಿದೆ. ಒಮ್ಮೆ ಈ ಹ್ಯೂಮನಾಯ್ಡ್ (ಮಾನವ ರೂಪದ) ರೋಬೋಟ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟರೆ, ಈ ಎಲ್ಲಾ ಉದ್ಯೋಗಗಳು ಕ್ಷಣಾರ್ಧದಲ್ಲಿ ಅದೃಶ್ಯವಾಗಲಿವೆ. ಅಂದರೆ, ನಮ್ಮ ಜನರೇ ತಮ್ಮ ಕೈಯಾರೆ ತಮ್ಮ ಭವಿಷ್ಯದ ಉದ್ಯೋಗಗಳನ್ನು ಕೊಂದು ಯಂತ್ರಗಳಿಗೆ ಒಪ್ಪಿಸುತ್ತಿದ್ದಾರೆ.

ಡಿಜಿಟಲ್ ವಸಾಹತುಶಾಹಿಯ ಹೊಸ ರೂಪ

ಹಿಂದೊಮ್ಮೆ ಈಸ್ಟ್ ಇಂಡಿಯಾ ಕಂಪನಿ ಭಾರತಕ್ಕೆ ಬಂದು ನಮ್ಮ ಸಂಪತ್ತನ್ನು ದೋಚಿದ್ದಕ್ಕೂ, ಇಂದು ಅಮೆರಿಕದ ತಂತ್ರಜ್ಞಾನ ಕಂಪನಿಗಳು ನಮ್ಮ ಜನರ ದೈನಂದಿನ ಚಲನವಲನಗಳನ್ನು ಕರಾರುವಾಕ್ಕಾಗಿ ಅಗ್ಗದ ಬೆಲೆಗೆ ಖರೀದಿಸುತ್ತಿರುವುದಕ್ಕೂ ದೊಡ್ಡ ವ್ಯತ್ಯಾಸವೇನೂ ಇಲ್ಲ. ಇದು ‘ಡಿಜಿಟಲ್ ವಸಾಹತುಶಾಹಿ’ (Digital Colonialism).

ನಮ್ಮ ದೇಶದ ನೀತಿ ನಿರೂಪಕರು ಮತ್ತು ಸರ್ಕಾರಗಳು “AI ತಂತ್ರಜ್ಞಾನದಿಂದ ಪ್ರಗತಿಯಾಗುತ್ತದೆ” ಎಂದು ಭಾಷಣ ಬಿಗಿಯುತ್ತಿದ್ದಾರೆ. ಆದರೆ, ಈ ತಂತ್ರಜ್ಞಾನದ ತಳಹದಿಯಲ್ಲಿ ನಲುಗುತ್ತಿರುವ ಶ್ರಮಿಕ ವರ್ಗದ ಸುರಕ್ಷತೆಗೆ ಯಾವುದೇ ಗಟ್ಟಿಯಾದ ಕಾನೂನುಗಳಿಲ್ಲ. ಕಾರ್ಮಿಕರ ಹಕ್ಕುಗಳಾಗಲಿ ಅಥವಾ ಅವರ ಭವಿಷ್ಯದ ಭದ್ರತೆಯಾಗಲಿ ಈ ಜಾಗತಿಕ ಕಂಪನಿಗಳ ಕಾರ್ಯಸೂಚಿಯಲ್ಲೇ ಇಲ್ಲ.

ಬೆವರಿನ ಹನಿಗಳಿಗೆ ಬೆಲೆ ಕಟ್ಟಬಹುದು, ಆದರೆ ಮನುಷ್ಯನ ಸಹಜ ಕೌಶಲಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇಂದು ಸಿಗುತ್ತಿರುವ ಗಂಟೆಗೆ 250 ಎಂಬ ತಾತ್ಕಾಲಿಕ ಲಾಭ, ನಾಳೆ ನಮ್ಮ ಮುಂದಿನ ಪೀಳಿಗೆಯನ್ನು ನಿರುದ್ಯೋಗದ ಕತ್ತಲಿಗೆ ತಳ್ಳುವ ಮುನ್ಸೂಚನೆಯಾಗಿದೆ. ತಂತ್ರಜ್ಞಾನದ ಅತಿವೇಗದ ಓಟದಲ್ಲಿ ನಾವು ‘ಬುದ್ಧಿವಂತ ಯಂತ್ರ’ಗಳನ್ನು ಸೃಷ್ಟಿಸುವ ಭರದಲ್ಲಿ, ‘ಬದುಕಿಲ್ಲದ ಮನುಷ್ಯ’ರನ್ನಾಗಿ ಬದಲಾಗುತ್ತಿದ್ದೇವಾ ಎಂಬ ಪ್ರಶ್ನೆಗೆ  ಉತ್ತರ ಹುಡುಕಬೇಕಿದೆ.

You may also like

2 comments

N R vishukumar June 20, 2026 - 11:16 am

ನಿಜ .. ಇದು ಬಹಳ ಗಂಭೀರ ಸಮಸ್ಯೆ . ಇದು ನಮ್ಮ ಸರ್ಕಾರಗಳಿಗೆ ಏಕೆ ಅರ್ಥವಾಗುತ್ತಿಲ್ಲ . ಮನುಷ್ಯ ಹಸಿವೆಗೆ ಬಿದ್ದರೆ ಈ ಯಂತ್ರ ಮಾನವರನ್ನೇ ಅಟ್ಟಾಡಿಸಿಕೊಂಡು ಚಿಂದಿ ಉಡಾಯಿಸುವ ಕಾಲ ಬರುತ್ತದೆ .

Reply
Kumara Raitha June 20, 2026 - 3:15 pm

ಸರ್ಕಾರಗಳು ಎಐ ಸೆಂಟರ್‌, ಡಾಟಾ ಸೆಂಟರ್‌ ಗಳು ನಮ್ಮ ರಾಜ್ಯದಲ್ಲಿವೆ ಎಂದು ಸಂಭ್ರಮಿಸುತ್ತಿವೆ. ಅವುಗಳಿಗೆ ನೀರು ಪೂರೈಸಿಯೇ ಬಸವಳಿದು ಹೋಗುತ್ತೇವೆ ಎಂಬ ಸಂಗತಿಯೂ ಅರ್ಥವಾದಂತೆ ಕಾಣುತ್ತಿಲ್ಲ. ನೀರು ನುಂಗುತ್ತಿರುವ ಅವುಗಳು ಮುಂದೆ ಉದ್ಯೋಗಗಳನ್ನೂ ನುಂಗಲಿವೆ.ಸರ್ಕಾರಗಳು ಸಂಭ್ರಮಿಸುವುದನ್ನು ಬಿಟ್ಟು ಭವಿಷ್ಯವನ್ನು ಅರ್ಥೈಸುವುದನ್ನು ಕಲಿಯಬೇಕಾಗಿದೆ.

Reply

Leave a Comment

error: Content is protected !!