ಇತರೆ

ಈ ಬಾರಿಯಾದರೂ ಕಲರ್‌ ಕಲರ್ ಮೂರ್ತಿಗಳ ತಯಾರಿಕೆ ನಿಲ್ಲುವುದೇ ?

ನಾಡಿನೆಲ್ಲೆಡೆ ಉತ್ಸಾಹದಿಂದ ಆಚರಿಸುವ ಗಣೇಶೋತ್ಸವಕ್ಕೆ ಇನ್ನೂ ಒಂದು ತಿಂಗಳು ಬಾಕಿಯಿದೆ. (ಆಗಸ್ಟ್‌ 27) ಈಗಾಗಲೇ ಗಣೇಶ ಮೂರ್ತಿಗಳ ತಯಾರಿಕೆಯೂ ಆರಂಭವಾಗಿದೆ. ಯಾವುದೇ ಕೃತಕ ಬಣ್ಣ ಬಳಸದೇ ಮಣ್ಣಿನಿಂದ ರೂಪಿಸುವ ಗಣೇಶ ಮೂರ್ತಿಗಳ ಜೊತೆಗೆ ಪಿಒಪಿ ಅಂದರೆ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ನಿಂದ ಕೂಡ ತಯಾರಿಕೆ ಆರಂಭವಾಗಿರುತ್ತದೆ.

ಈಗಾಗಲೇ ಬಹಳಷ್ಟು ಜನರಿಗೆ ಕೃತಕ ರಾಸಾಯನಿಕ ಬಣ್ಣಗಳಿಂದ ಲೇಪಿತವಾದ ಪಿಒಪಿ ಮೂರ್ತಿಗಳ ಅಪಾಯದ ಬಗ್ಗೆ ಅರಿವಿದೆ. ಇವರು ಇಂಥವುಗಳನ್ನು ಮನೆಗೆ ತೆಗೆದುಕೊಂಡು ಹೋಗುವುದಿಲ್ಲ. ಮಣ್ಣಿನ ವಿಗ್ರಹಗಳನ್ನೇ ಇಟ್ಟು ಪೂಜಿಸುತ್ತಾರೆ. ಸಾಮಾನ್ಯವಾಗಿ ಮನೆಯಲ್ಲಿ ಸಣ್ಣ ಮಕ್ಕಳು ಇದ್ದರೆ ನೋಡಲು ಆಕರ್ಷಕವಾಗಿ ಕಾಣುವ ಕಲರ್‌ ಕಲರ್‌ ಮೂರ್ತಿಗಳನ್ನೇ ಇಷ್ಟಪಡುತ್ತಾರೆ. ಅವರಿಗೆ ತಿಳಿವಳಿಕೆ ಹೇಳಿದರೂ ತಿಳಿದುಕೊಳ್ಳುವಷ್ಟು ವಯಸ್ಸಾಗಿರುವುದಿಲ್ಲ. ಆದ್ದರಿಂದ ಕೆಲವು ಪೋಷಕರು ಇಷ್ಟವಿಲ್ಲದಿದ್ದರೂ ಪಿಒಪಿ ಮೂರ್ತಿಗಳನ್ನೇ ತೆಗೆದುಕೊಂಡು ಹೋಗುತ್ತಾರೆ.

ಇನ್ನು ಸಾರ್ವಜನಿಕವಾಗಿ ಗಣೇಶ ಕೂರಿಸುವವರಲ್ಲಿ ಹೆಚ್ಚಾಗಿ ಕಲರ್‌ ಕಲರ್‌ ಮೂರ್ತಿಗಳನ್ನೇ ತೆಗೆದುಕೊಂಡು ಹೋಗುತ್ತಾರೆ. ಇದಕ್ಕೆ ಮುಖ್ಯ ಕಾರಣ ಜಗಮಗಿಸುವ ಲೈಟುಗಳ ಬೆಳಕಿನಲ್ಲಿ ಕಲರ್‌ ಮೂರ್ತಿ ಮತ್ತಷ್ಟೂ ಸುಂದರವಾಗಿ ಕಾಣುತ್ತದೆ ಎಂಬುದೇ ಆಗಿರುತ್ತದೆ.

ನೈಸರ್ಗಿಕ ಬಣ್ಣಗಳನ್ನು ಬಳಸಿ ಮಣ್ಣಿನ ಮೂರ್ತಿಗಳನ್ನು ಅಲಂಕಾರ ಮಾಡಬಹುದು. ಆದರೆ ಇದಕ್ಕೆ ತುಂಬ ವೆಚ್ಚವಾಗುತ್ತದೆ. ಆದ್ದರಿಂದ ತಯಾರಕರು ಸಹ ಎಲ್ಲಿ ಮಾರಾಟವಾಗದೇ ಉಳಿದು ಬಿಡಬಹುದೋ ಎಂಬ ಆತಂಕದಿಂದ ಅವುಗಳನ್ನು ಹೆಚ್ಚಾಗಿ ತಯಾರಿಸುವುದಿಲ್ಲ. ಮುಂಚಿತವಾಗಿ ಆರ್ಡರ್‌ ಬಂದರೆ ಮಾತ್ರ ರೂಪಿಸುತ್ತಾರೆ.

ಕೃತಕ ಕಲರ್‌ ಕಲರ್ ಪಿಒಪಿ‌ ಮೂರ್ತಿಗಳಿಗೆ ನಿಷೇಧವಿದೆ. ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯು ತನ್ನ ಮೇ 09, 2023ರ ಆದೇಶದಲ್ಲಿ ಇದನ್ನು ಹೇಳಿದೆ. ಇದಾದ ನಂತರ ಕರ್ನಾಟಕ ಸರ್ಕಾರದ ಅರಣ್ಯ ಸಚಿವಾಲಯ ಸಹ ಸೆಪ್ಟೆಂಬರ್‌ 09, 2023ರ ಆದೇಶದಲ್ಲಿ ಇದರ ಬಗ್ಗೆ ಹೇಳಿದೆ.   ಆದರೂ ಸಹ ಮೇಲಿನ ಎಲ್ಲ ಹಿನ್ನೆಲೆಯಲ್ಲಿ ಗಣೇಶೋತ್ಸವ ಸಂದರ್ಭದಲ್ಲಿ ಇಂಥ ಮೂರ್ತಿಗಳೇ ಹೆಚ್ಚಾಗಿ ಲಭ್ಯವಿರುತ್ತವೆ. ಮಾರುಕಟ್ಟೆ ಇರುವ ಸ್ಥಳಗಳ ಅಕ್ಕಪಕ್ಕ ಇವುಗಳೇ ರಾರಾಜಿಸುತ್ತಿರುತ್ತವೆ.

ಕಟ್ಟುನಿಟ್ಟಾಗಿ ಆದೇಶ ಜಾರಿಯಾಗದ ಕಾರಣ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಮತ್ತೊಮ್ಮೆ ಸೂಚನೆ ನೀಡಿದ್ದಾರೆ. ಪಿಓಪಿ ಮೂರ್ತಿಗಳ ತಯಾರಿಕೆ,  ದಾಸ್ತಾನು ಮತ್ತು ಮಾರಾಟಕ್ಕೆ ಕಡಿವಾಣ ಹಾಕಲು ಸೂಚನೆ ನೀಡಿದ್ದಾರೆ.  ಪರಿಸರ ಸ್ನೇಹಿ ಗಣಪನ ಮಾರಾಟಕ್ಕೆ ಉತ್ತೇಜನ ಅಗತ್ಯ ಎಂದು ಪ್ರತಿಪಾದಿಸಿದ್ದಾರೆ.

ಪರಿಸರಕ್ಕೆ ಮತ್ತು ಜಲ ಮೂಲಗಳಿಗೆ ಮಾರಕವಾದ ರಾಸಾಯನಿಕ ಬಣ್ಣ ಲೇಪಿತ ಪಿಓಪಿ ಮೂರ್ತಿಗಳ ಬದಲಿಗೆ ಪರಿಸರ ಸ್ನೇಹಿ ಬಣ್ಣ ರಹಿತ ಮಣ್ಣಿನ ಗಣಪ ಮತ್ತು ಗೌರಿಯ ಮೂರ್ತಿಗಳ ದಾಸ್ತಾನು, ಸಾಗಾಟ ಮತ್ತು ಮಾರಾಟಕ್ಕೆ ಉತ್ತೇಜನ ನೀಡಲು ಕ್ರಮವಹಿಸುವಂತೆ ಸಂಬಧಿಸಿದ ಇಲಾಖೆಗಳಿಗೆ ಸೂಚನೆ ನೀಡಿದ್ದಾರೆ.

ಪಿಓಪಿ ಗಣೇಶ ವಿಗ್ರಹಗಳನ್ನು ಕ್ಯಾಲ್ಷಿಯಂ, ಸಲ್ಫೇಟ್, ಹೆಮಿಹೈಡ್ರೇಟ್ ಯುಕ್ತ ಪುಡಿಯಿಂದ ತಯಾರಿಸಲಾಗುತ್ತದೆ. ಇದರಲ್ಲಿ ಗಂಧಕ, ರಂಜಕ, ಜಿಪ್ಸಮ್ ಮತ್ತು ಮ್ಯಾಗ್ನೀಷಿಯಂ ಸೇರಿದಂತೆ ಅನೇಕ ಅಪಾಯಕಾರಿ ಅಂಶಗಳಿರುತ್ತವೆ. ಇಂತಹ ಮೂರ್ತಿಗಳಿಗೆ ಪಾದರಸ, ಕ್ಯಾಡ್ಮಿಯಂ, ಸೀಸ ಮತ್ತು ಇಂಗಾಲ ಒಳಗೊಂಡ ರಾಸಾಯನಿಕ ಬಣ್ಣ ಲೇಪಿಸಲಾಗುತ್ತದೆ. ಇದನ್ನು ಕೆರೆ, ಬಾವಿ, ನದಿಯಲ್ಲಿ ವಿಸರ್ಜಿಸಿದಾಗ ಭಾರ ಲೋಹ ಕರಗಿ ಜನರು,  ಜಾನುವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಜಲಚರಗಳ ಸಾವಿಗೆ ಸಹ  ಕಾರಣವಾಗುತ್ತದೆ. ಹೀಗಾಗಿ ಜನ ಜಾಗೃತಿ ಮೂಡಿಸಲು ಪರಿಸರ ಇಲಾಖೆಗೆ ಸೂಚನೆ ನೀಡಲಾಗಿದೆ. ಸ್ಥಳೀಯ ಸಂಸ್ಥೆಗಳು ಸಹ ಕಟ್ಟುನಿಟ್ಟಾಗಿ ಜಾರಿ ಮಾಡಬೇಕು ಎಂದಿದ್ದಾರೆ.

ಬಹುಮಹಡಿ ಕಟ್ಟಡ, ವಸತಿ ಸಮುಚ್ಚಯಗಳು ಮತ್ತು ವಿವಿಧ ಬಡಾವಣೆಯಲ್ಲಿರುವ ಕ್ಷೇಮಾಭಿವೃದ್ಧಿ ಸಂಘಗಳನ್ನು ಸಂಪರ್ಕಿಸಬೇಕು. ಪಿಓಪಿ ಗಣಪತಿ ಮೂರ್ತಿಗಳ ಬದಲು ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನು ಮಾತ್ರ ಪೂಜಿಸುವಂತೆ ತಮ್ಮ ಸದಸ್ಯರಿಗೆ ತಿಳಿಸುವಂತೆ ಮನವಿ ಮಾಡಲೂ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಈಶ್ವರ ಖಂಡ್ರೆ ಹೇಳಿದ್ದಾರೆ.

ಜಲಮೂಲಗಳು ಮಾಲಿನ್ಯವಾಗದಂತೆ ತಡೆಯುವುದು ಮುಖ್ಯ. ಗಣೇಶೋತ್ಸವಕ್ಕೆ ಇನ್ನೂ ಒಂದು ತಿಂಗಳು ಬಾಕಿಯಿದೆ. ಪರಿಸರ ಇಲಾಖೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಸ್ಥಳೀಯ ಪುರಸಭೆ, ನಗರಸಭೆ ಮತ್ತು ಪಾಲಿಕೆಗಳು ಯಾವ ರೀತಿ ಕೃತಕ ಕಲರ್‌ ಕಲರ್‌ ಪಿಒಪಿ ಮೂರ್ತಿಗಳಿಗೆ ನಿಯಂತ್ರಣ ಹಾಕುತ್ತಾರೆ ಎಂಬುದು ಕುತೂಹಲಕಾರಿ !!

Leave a Reply

Your email address will not be published. Required fields are marked *

error: Content is protected !!