Kannadaವನ್ಯಜೀವನ

ರೈತರ ವಿವೇಚನೆ ಧ್ವನಿ ಅಡಗಿಸಿ ಸಫಾರಿ ಆರಂಭಿಸಬೇಕಿತ್ತೆ ?

“ತಜ್ಞರ ಸಮಿತಿಯ ಶಿಫಾರಸಿನ ಮೇರೆಗೆ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ‘ಹುಲಿ ಸಫಾರಿ ಪುನರಾರಂಭ’ಕ್ಕೆ ರಾಜ್ಯ ಸರ್ಕಾರ ಚಾಲನೆ ನೀಡಿದೆ. ಜೀವವೈವಿಧ್ಯ ಸಂರಕ್ಷಣೆ ಹಾಗೂ ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಈ ಮಹತ್ವದ ಹೆಜ್ಜೆ, ಕರ್ನಾಟಕದ ಅರಣ್ಯ ಸಂಪತ್ತಿನ ಶ್ರೀಮಂತಿಕೆಯನ್ನು ಜಗತ್ತಿಗೆ ಪರಿಚಯಿಸಲಿದೆ” ಎಂಬ ಮಾತನ್ನು ರಾಜ್ಯ ಸರ್ಕಾರದ ಮುಖವಾಣಿಯಾದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸುದ್ದಿ – ಜಾಹಿರಾತು ಮೂಲಕ ಹೇಳಿದೆ.

ಕರ್ನಾಟಕದ ಅರಣ್ಯ ಸಂಪತ್ತಿನ ಶ್ರೀಮಂತಿಕೆಯನ್ನು ಜಗತ್ತಿಗೆ ಪರಿಚಯಿಸಲಿದೆ” ಎಂಬ ಮಾತನ್ನು ಪರಾಮರ್ಶೆಗೆ ಒಳಪಡಿಸಬೇಕಾಗಿದೆ. ಪ್ರಕೃತಿ – ಪರಿಸರ ಸಂಪತ್ತು ಇರುವುದು ಮನುಷ್ಯರ ಐಷಾರಾಮಿ ಬದುಕಿನ ಸಲುವಾಗಿಯೇ ಎಂಬುದನ್ನು ಈ ಸಾಲುಗಳು ಧ್ವನಿಸುತ್ತವೆ. ಸಂರಕ್ಷಣೆ ಬದಲು ಪ್ರದರ್ಶನಕ್ಕೆ ಹೆಚ್ಚು ಒತ್ತು ನೀಡಿದಂತಾಗುತ್ತದೆ.

ಜುಲೈ ೨೯, ಅಂತರಾಷ್ಟ್ರೀಯ ಹುಲಿದಿನ. ಜೀವವೈವಿಧಯತೆ ಸಂಕೇತವಾದ, ಕಾಡಿನ ವ್ಯವಸ್ಥೆಯ ಪ್ರಮುಖ ಕೊಂಡಿಯಾದ ಪರೋಕ್ಷವಾಗಿ ಜೀವಜಗತ್ತನ್ನು ಪೊರೆಯುತ್ತಿರುವ ಹುಲಿ ಸಂರಕ್ಷಣೆ ಹೇಗಿದೆ ಎಂಬುದನ್ನು ಕಠಿಣವಾಗಿ ವಿಮರ್ಶೆಗೆ ಒಳಪಡಿಸಬೇಕಾದ ಸಂದರ್ಭ. ಇದನ್ನು ಮಾಡುವುದರ ಬದಲು ರಾಜ್ಯದ ಅರಣ್ಯ ಇಲಾಖೆಯು ಸಫಾರಿ ಪುನರಾರಂಭದ ಸಂಭ್ರಮದಲ್ಲಿದೆ. ಇದು ದೊಡ್ಡ ದುರಂತವಲ್ಲವೇ ?

ಇದರ ಜೊತೆಗೆ ಮತ್ತೊಂದು ದುರಂತ ಎಂದರೆ ಕರ್ನಾಟಕದ ಅರಣ್ಯದಂಚಿನ ಗ್ರಾಮಗಳ ರೈತರ ವಿವೇಚನಾಶೀಲ, ಸಂವೇದನಾಶೀಲ ಧ್ವನಿಯನ್ನು ಅಡಗಿಸಿದ್ದು ! ಹುಲಿಗಳ ನಿರಂತರ ದಾಳಿಯಿಂದ ಕಂಗೆಟಿದ್ದ ರೈತರು “ಸಫಾರಿ ನಿಲ್ಲಿಸಿ” ಎಂದು ಧ್ವನಿಯೆತ್ತಿದ್ದರು. ಕಾಡುಗಳ ಒಳಗೆ ನಿರಂತರವಾಗಿ ವಾಹನಗಳು, ಪ್ರವಾಸಿಗರು ಹೋಗುತ್ತಿರುವುದರಿಂದ ಹುಲಿಗಳು ನಾಡಿನೊಳಗೆ ಬರುತ್ತಿವೆ. ಹಾಗಾಗಿ ಸಫಾರಿ ನಿಷೇಧಿಸಿ” ಎಂದು ಪ್ರತಿಭಟಿಸಿದರು. ಇದಕ್ಕೆ ಮಣಿದ ಸರ್ಕಾರ ತಾತ್ಕಾಲಿಕವಾಗಿ ಸಫಾರಿ ಬ್ಯಾನ್ ಮಾಡಿತು. ಕೆಲವು ದಿನಗಳ ಹಿಂದೆ ಮತ್ತೆ ಸಫಾರಿ ಪುನರಾರಂಭಿಸಿದೆ. ಇದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಸರ್ಕಾರಕ್ಕೆ ಕಿಂಚಿತ್ತೂ ಕಾಳಜಿಯಿಲ್ಲ ಎಂಬುದು ಸ್ಪಷ್ಟವಾಗಿದೆ.

ಸಫಾರಿ ಪುನರಾರಂಭ ಬೇಡ ಎಂಬ ರೈತರ ಕೂಗಿನಲ್ಲಿ “ನಮ್ಮನಷ್ಟೇ ರಕ್ಷಿಸಿ” ಎಂಬ ಧ್ವನಿ ಇರಲಿಲ್ಲ. ಅದರಲ್ಲಿ ನಮ್ಮನ್ನೂ, ಕಾಡನ್ನು, ಕಾಡಿನೊಳಗಿರುವಸಕಲ ಪ್ರಾಣಿಗಳನ್ನು ಸಂರಕ್ಷಿಸಿ” ಎಂಬ ಆಶಯವಿತ್ತು. ಈ ಸಲುವಾಗಿ ಅವರು ಆರಂಭಿಸಿದ ಪ್ರತಿಭಟನೆಯನ್ನು ರಾಜ್ಯ ಸರ್ಕಾರ ಪೊಲೀಸ್ ಬಲ ಬಳಸಿ ಹತ್ತಿಕ್ಕಿತು. ಮತ್ತೆ ಸಫಾರಿ ಶುರು ಮಾಡಿತು. ಸಫಾರಿಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಜ್ಞರು ಏನು ಹೇಳುತ್ತಾರೆ ಎಂಬುದನ್ನೂ ನೋಡೋಣ

ಇತ್ತೀಚಿನ ವರ್ಷಗಳಲ್ಲಿ ಅರಣ್ಯ ಪ್ರವಾಸೋದ್ಯಮ (Ecotourism) ಮತ್ತು ವನ್ಯಜೀವಿ ಸಫಾರಿಗಳ ಕ್ರೇಜ್ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ವಾರಾಂತ್ಯದಲ್ಲಿ ಅರಣ್ಯದ ಒಳಗೆ ಜೀಪುಗಳಲ್ಲಿ ಸಾಗುತ್ತಾ ಹುಲಿ, ಆನೆ ಮುಂತಾದ ಕಾಡುಪ್ರಾಣಿಗಳನ್ನು ಹತ್ತಿರದಿಂದ ನೋಡುವುದು ನಮಗೆ ರೋಮಾಂಚನಕಾರಿ ಅನುಭವ ನಿಜ. ಆದರೆ, ದಿನದಿಂದ ದಿನಕ್ಕೆ ನಿಯಂತ್ರಣವಿಲ್ಲದೆ ಸಾಗುತ್ತಿರುವ ಈ ಜೀಪ್ ಸಫಾರಿಗಳು ಕಾಡಿನ ನಿಜವಾದ ಒಡೆಯರಾದ ವನ್ಯಜೀವಿಗಳ ಮೇಲೆ, ವಿಶೇಷವಾಗಿ ಹುಲಿಗಳ ದಿನಚರಿ ಮತ್ತು ಮಾನಸಿಕ ಆರೋಗ್ಯದ ಮೇಲೆ ತೀವ್ರ ಕೆಟ್ಟ ಪರಿಣಾಮ ಬೀರುತ್ತಿವೆ ಎಂದು ಹಲವಾರು ಪರಿಸರ ಅಧ್ಯಯನಗಳು ಆತಂಕಕಾರಿ ವಿಷಯಗಳನ್ನು ಬಹಿರಂಗಪಡಿಸಿವೆ.

ತೀವ್ರ ಮಾನಸಿಕ ಒತ್ತಡ ಮತ್ತು ರಕ್ತದಲ್ಲಿ ‘ಕಾರ್ಟಿಸೋಲ್’ ಪ್ರಮಾಣ ಹೆಚ್ಚಳ

ಅನೇಕ ವೈಜ್ಞಾನಿಕ ಅಧ್ಯಯನಗಳ ಪ್ರಕಾರ (ಉದಾಹರಣೆಗೆ, ಜೀವವಿಜ್ಞಾನಿಗಳು ಹುಲಿಗಳ ಮಲವನ್ನು ಪರೀಕ್ಷಿಸಿ ನಡೆಸಿದ ಸಂಶೋಧನೆಗಳು), ಸಫಾರಿ ವಲಯಗಳಲ್ಲಿ ವಾಸಿಸುವ ಹುಲಿಗಳಲ್ಲಿ ಒತ್ತಡದ ಹಾರ್ಮೋನ್ ಆದ ಕಾರ್ಟಿಸೋಲ್ (Cortisol) ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿದೆ. ಪ್ರವಾಸಿಗರ ವಾಹನಗಳ ಸಾಲು, ಸತತ ಕಣ್ಣಾವಲು, ಪ್ರವಾಸಿಗರ ಗದ್ದಲ ಮತ್ತು ಕ್ಯಾಮೆರಾಗಳ ಶಬ್ದ ಹುಲಿಗಳಲ್ಲಿ ನಿರಂತರ ಭಯ ಮತ್ತು ಕಿರಿಕಿರಿ ಉಂಟುಮಾಡುತ್ತದೆ. ಈ ನಿರಂತರ ಒತ್ತಡವು ಹುಲಿಗಳ ರೋಗನಿರೋಧಕ ಶಕ್ತಿಯನ್ನು ಕುಗ್ಗಿಸಿ, ಅವುಗಳನ್ನು ಬಹುಬೇಗ ಅನಾರೋಗ್ಯಕ್ಕೆ ಈಡುಮಾಡುತ್ತದೆ.

ಬೇಟೆಯಾಡುವಿಕೆ ಮತ್ತು ಆಹಾರ ಕ್ರಮಕ್ಕೆ ಅಡ್ಡಿ

ಹುಲಿಗಳು ಮೂಲತಃ ಏಕಾಂಗಿ ಹಾಗೂ ಶಬ್ದ ಸೂಕ್ಷ್ಮ ಜೀವಿಗಳು. ಅವು ಬೇಟೆಯಾಡಲು ಕಾಯುವಾಗ ಅಥವಾ ಬೇಟೆಯ ಮೇಲೆ ದಾಳಿ ಮಾಡುವಾಗ ಪೂರ್ಣ ಏಕಾಗ್ರತೆ ಮತ್ತು ಶಬ್ದವಿಲ್ಲದ ವಾತಾವರಣ ಅಗತ್ಯ. ಜೀಪುಗಳ ಸಾಲು ಹುಲಿಯನ್ನು ಸುತ್ತುವರಿದಾಗ, ಅಥವಾ ಹುಲಿ ಚಲಿಸುವ ಹಾದಿಯಲ್ಲಿ ವಾಹನಗಳನ್ನು ಅಡ್ಡಲಾಗಿ ನಿಲ್ಲಿಸಿದಾಗ, ಹುಲಿಯ ಬೇಟೆಯ ತಂತ್ರಗಳು ವಿಫಲವಾಗುತ್ತವೆ. ಆಹಾರ ಸಿಗದೆ ಹುಲಿಗಳು ಹಸಿವಿನಿಂದ ಬಳಲುವಂತಾಗುತ್ತದೆ, ಇದು ಅವುಗಳ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ.

ಸಂತಾನೋತ್ಪತ್ತಿ ಮತ್ತು ಮರಿಗಳ ರಕ್ಷಣೆಗೆ ಕಂಟಕ

ಹುಲಿಗಳು ಪ್ರಜನನ ಅವಧಿಯಲ್ಲಿ ಸಂಪೂರ್ಣವಾಗಿ ಏಕಾಂತವನ್ನು ಬಯಸುತ್ತವೆ. ನಿರಂತರ ಜೀಪ್ ಸಂಚಾರ ಮತ್ತು ಜನಸಂದಣಿಯಿಂದಾಗಿ ಹುಲಿಗಳು ಸಂಗಾತಿಯನ್ನು ಹುಡುಕುವಲ್ಲಿ ಮತ್ತು ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ತೊಂದರೆ ಅನುಭವಿಸುತ್ತಿವೆ. ಮರಿಗಳಿಗೆ ಜನ್ಮ ನೀಡಿದ ತಾಯಿ ಹುಲಿ, ಸಫಾರಿ ವಾಹನಗಳ ಶಬ್ದಕ್ಕೆ ಹೆದರಿ ತನ್ನ ಮರಿಗಳನ್ನು ರಕ್ಷಿಸಲು ಸುರಕ್ಷಿತ ಜಾಗಕ್ಕೆ ಪದೇ ಪದೇ ಸ್ಥಳಾಂತರಿಸಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಮರಿಗಳು ಇತರ ಶಿಕಾರಿ ಪ್ರಾಣಿಗಳಿಗೆ ಬಲಿಯಾಗುವ ಅಥವಾ ತಾಯಿಯಿಂದ ಬೇರ್ಪಡುವ ಅಪಾಯ ಹೆಚ್ಚು.

ನೈಸರ್ಗಿಕ ನಡವಳಿಕೆ ಮತ್ತು ಭೂಪ್ರದೇಶದ (Territory) ಬದಲಾವಣೆ

ಪ್ರತಿಯೊಂದು ಹುಲಿಯೂ ತನಗೊಂದು ನಿರ್ದಿಷ್ಟ ಭೂಪ್ರದೇಶವನ್ನು (Territory) ಗುರುತಿಸಿಕೊಂಡಿರುತ್ತದೆ. ಸಫಾರಿ ವಾಹನಗಳು ನಿರಂತರವಾಗಿ ಸಂಚರಿಸುವ ಮಾರ್ಗಗಳನ್ನು ಹುಲಿಗಳು ಭೀತಿಯಿಂದಾಗಿ ತ್ಯಜಿಸಲು ಪ್ರಾರಂಭಿಸುತ್ತವೆ. ಇದರಿಂದಾಗಿ ಹುಲಿಗಳು ತಮ್ಮ ನೈಸರ್ಗಿಕ ಆವಾಸಸ್ಥಾನವನ್ನು ಬಿಟ್ಟು ಕಾಡಿನ ಅಂಚಿನ ಪ್ರದೇಶಗಳಿಗೆ ಧಾವಿಸುತ್ತವೆ. ಕಾಡಿನ ಅಂಚಿಗೆ ಬರುವ ಹುಲಿಗಳು ಮಾನವ-ವನ್ಯಜೀವಿ ಸಂಘರ್ಷಕ್ಕೆ (Human-Wildlife Conflict) ಕಾರಣವಾಗುತ್ತವೆ ಹಾಗೂ ಜಾನುವಾರು ಅಥವಾ ಮಾನವರ ಮೇಲೆ ದಾಳಿ ಮಾಡುವ ಸಾಧ್ಯತೆ ಹೆಚ್ಚಾಗುತ್ತದೆ.

ಧೂಳು, ಶಬ್ದ ಮಾಲಿನ್ಯ ಮತ್ತು ಆವಾಸಸ್ಥಾನದ ಹಾನಿ

ಕಾಡಿನ ಕಚ್ಚಾ ರಸ್ತೆಗಳಲ್ಲಿ ಸಾಲು ಸಾಲಾಗಿ ಚಲಿಸುವ ಜೀಪುಗಳಿಂದ ಏಳುವ ದಟ್ಟ ಧೂಳು ಮತ್ತು ಸಫಾರಿ ವಾಹನಗಳ ಇಂಜಿನ್ ಶಬ್ದವು ಕಾಡಿನ ನಿಸರ್ಗದತ್ತ ಶಾಂತತೆಯನ್ನು ಭಂಗಗೊಳಿಸುತ್ತದೆ. ಧೂಳಿನಿಂದಾಗಿ ಗಿಡಮರಗಳ ಎಲೆಗಳ ಮೇಲೆ ಧೂಳಿನ ಪದರ ಸಾಪಟ್ಟು ಸಸ್ಯಗಳ ದ್ಯುತಿಸಂಶ್ಲೇಷಣೆಗೆ ತೊಂದರೆಯಾಗುತ್ತದೆ. ಜೀಪ್ಗಳಿಂದ ಹೊರಸೂಸುವ ಹೊಗೆ ಮತ್ತು ಶಬ್ದವು ಹುಲಿಗಳಷ್ಟೇ ಅಲ್ಲದೆ ಕಾಡಿನ ಸಣ್ಣಪುಟ್ಟ ಕೀಟಗಳು, ಪಕ್ಷಿಗಳು ಮತ್ತು ಇತರ ಸಸ್ಯಾಹಾರಿ ಪ್ರಾಣಿಗಳಿಗೂ ತೊಂದರೆ ನೀಡುತ್ತದೆ.

ವನ್ಯಜೀವಿ ಪ್ರವಾಸೋದ್ಯಮವು ಅರಣ್ಯ ಸಂರಕ್ಷಣೆಗೆ ಆದಾಯ ತಂದುಕೊಡುತ್ತದೆ ನಿಜ, ಆದರೆ ಪ್ರಕೃತಿ ಮತ್ತು ಪ್ರಾಣಿಗಳ ಹಿತಾಸಕ್ತಿಯನ್ನು ಬಲಿ ಕೊಟ್ಟು ಮಾಡುವ ಪ್ರವಾಸೋದ್ಯಮವು ಅಂತಿಮವಾಗಿ ಕಾಡಿನ ನಾಶಕ್ಕೆ ದಾರಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಮತ್ತೆ ಭಾರಿ ದುರಂತಗಳು ಘಟಿಸುವ ಮುನ್ನ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಸಫಾರಿ ನಿಷೇಧಿಸಬೇಕು.

Leave a Reply

Your email address will not be published. Required fields are marked *

error: Content is protected !!