Kannadaಕೃಷಿ

ವಿಶ್ವ ಗ್ರಾಮೀಣಾಭಿವೃದ್ಧಿ ದಿನದ ಕಣ್ಣೀರು

ಇಂದು ಜುಲೈ 6, “ವಿಶ್ವ ಗ್ರಾಮೀಣಾಭಿವೃದ್ಧಿ ದಿನ” “ಸ್ವಚ್ಛ ಗ್ರಾಮ, ಸುಂದರ ಗ್ರಾಮ, ವಿಕಸಿತ ಗ್ರಾಮ” ಎಂಬ ಘೋಷಣೆಗಳು ಕೇಳಳು ಆಕರ್ಷಕ. ಆದರೆ ವಾಸ್ತವದಲ್ಲಿ ? ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ಎಂಬತ್ತು ವರ್ಷಗಳಾಗಿವೆ. ದಶಕಗಳು ಕಳೆಯುತ್ತಿದ್ದರೂ, ಹಳ್ಳಿಗಳ ನಿಜವಾದ ಪರಿಸ್ಥಿತಿ ಬದಲಾಗಿಲ್ಲ ಎಂಬುದು ಕಟು ವಾಸ್ತವ.
ಗ್ರಾಮೀಣ ಭಾರತದ ಇಂದಿನ ದುಸ್ಥಿತಿ
“ಭಾರತದ ಆತ್ಮ ಹಳ್ಳಿಗಳಲ್ಲಿದೆ” ಎಂದಿದ್ದರು ಮಹಾತ್ಮಾ ಗಾಂಧೀಜಿ. ಆದರೆ ಅದೇ ಆತ್ಮಕ್ಕೆ ಬಡತನ, ನಿರ್ಲಕ್ಷ್ಯ ಮತ್ತು ಭ್ರಷ್ಟಾಚಾರದ ಕುತ್ತು ಬಂದೊದಗಿದೆ. ಪ್ರತಿ ವರ್ಷ ಜುಲೈ 6 ಬರುತ್ತದೆ, ಗ್ರಾಮೀಣಾಭಿವೃದ್ಧಿಯ ಭಾಷಣಗಳು ಮೊಳಗುತ್ತವೆ, “ಬಡತನ, ಹಸಿವು ನಿವಾರಣೆಯಾಗಲಿ ಮತ್ತು ಮೂಲಸೌಕರ್ಯಗಳು ಹೆಚ್ಚು ದೊರಕಲಿ” ಎಂದು ಘೋಷಣೆ ಕೂಗಲಾಗುತ್ತದೆ. ಈ ಘೋಷಣೆಗಳು ಕೇವಲ ಆಶಯಗಳಾಗಿ ಉಳಿದಿವೆಯೇ ಹೊರತು ಸಂಪೂರ್ಣ ಅನುಷ್ಠಾನಕ್ಕೆ ಬಂದಿಲ್ಲ.
ರಾಜಕೀಯ ಇಚ್ಛಾಶಕ್ತಿಯ ಕೊರತೆ ಮತ್ತು ಭ್ರಷ್ಟಾಚಾರ
ಹಳ್ಳಿಗಳ ಅಭಿವೃದ್ಧಿಗೆಂದು ಸರ್ಕಾರಗಳು ಕೋಟ್ಯಂತರ ರೂಪಾಯಿಗಳ ಯೋಜನೆಗಳನ್ನು ಘೋಷಿಸುತ್ತವೆ. ಆದರೆ, ಆ ಹಣ ಹಳ್ಳಿಯ ಕಟ್ಟಕಡೆಯ ವ್ಯಕ್ತಿಯನ್ನು ತಲುಪುವಷ್ಟರಲ್ಲಿ ಅರ್ಧಕ್ಕಿಂತ ಹೆಚ್ಚು ಹಣ ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಮಧ್ಯವರ್ತಿಗಳ ಪಾಲಾಗಿರುತ್ತದೆ. ಕಳಪೆ ರಸ್ತೆಗಳು, ಅರ್ಧಕ್ಕೆ ನಿಂತ ಕುಡಿಯುವ ನೀರಿನ ಯೋಜನೆಗಳೇ ಇದಕ್ಕೆ ಸಾಕ್ಷಿ.
ಮೂಲಸೌಕರ್ಯಗಳ ತಾರತಮ್ಯ
ದೇಶದ ಬಜೆಟ್ ಮತ್ತು ಅಭಿವೃದ್ಧಿ ಯೋಜನೆಗಳು ಹೆಚ್ಚಾಗಿ ನಗರ ಕೇಂದ್ರಿತವಾಗಿವೆ. ಫ್ಲೈಓವರ್ಗಳು, ಮೆಟ್ರೋ ರೈಲುಗಳು, ಐಟಿ ಪಾರ್ಕ್ಗಳಿಗೆ ನೀಡುವ ಆದ್ಯತೆಯನ್ನು ಹಳ್ಳಿಗಳ ಗುಣಮಟ್ಟದ ರಸ್ತೆಗಳಿಗೆ, ನಿರಂತರ ವಿದ್ಯುತ್ ಸಂಪರ್ಕಕ್ಕೆ ಮತ್ತು ಶುದ್ಧ ಕುಡಿಯುವ ನೀರಿಗೆ ನೀಡುತ್ತಿಲ್ಲ. ಇಂದಿಗೂ ಅನೇಕ ಹಳ್ಳಿಗಳಲ್ಲಿ ತುರ್ತು ಚಿಕಿತ್ಸೆಗೆ ಆಂಬ್ಯುಲೆನ್ಸ್ ಬರಲು ರಸ್ತೆಗಳಿಲ್ಲದ ಪರಿಸ್ಥಿತಿ ಇದೆ.
ಕೃಷಿ ಕ್ಷೇತ್ರದ ಅವನತಿ ಮತ್ತು ಉದ್ಯೋಗದ ಅಭಾವ
ಹಳ್ಳಿಯ ಜನರ ಪ್ರಮುಖ ಜೀವನಾಡಿ ಕೃಷಿ. ಆದರೆ ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಗದೆ, ನೀರಾವರಿ ಸೌಲಭ್ಯಗಳಿಲ್ಲದೆ, ಸಾಲದ ಬಾಧೆಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹಳ್ಳಿಗಳಲ್ಲಿ ಕೃಷಿಯನ್ನು ಹೊರತುಪಡಿಸಿ ಬೇರೆ ಯಾವುದೇ ಸಣ್ಣ ಕೈಗಾರಿಕೆಗಳು ಅಥವಾ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿಲ್ಲ. ಇದರಿಂದಾಗಿ ಯುವ ಪೀಳಿಗೆ ನಗರಗಳಿಗೆ ವಲಸೆ ಹೋಗುತ್ತಲೇ ಇದ್ದಾರೆ.
ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಯ ದುಸ್ಥಿತಿ
ಯಾವುದೇ ಒಂದು ಸಮಾಜ ಉದ್ಧಾರವಾಗಬೇಕಾದರೆ ಶಿಕ್ಷಣ ಮತ್ತು ಆರೋಗ್ಯ ಮುಖ್ಯ. ಆದರೆ ಹಳ್ಳಿಗಳ ಸರ್ಕಾರಿ ಶಾಲೆಗಳಲ್ಲಿ ಇಂದಿಗೂ ಸರಿಯಾದ ಶಿಕ್ಷಕರಿಲ್ಲ, ಶೌಚಾಲಯಗಳಿಲ್ಲ, ಡಿಜಿಟಲ್ ಮೂಲಸೌಕರ್ಯಗಳಿಲ್ಲ. ಇನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳ (primary health centre) ಕಥೆಯಂತೂ ಕೇಳುವುದೇ ಬೇಡ; ವೈದ್ಯರಿರುವುದಿಲ್ಲ, ಇದ್ದರೂ ಔಷಧಿ ಇರುವುದಿಲ್ಲ. ಸಣ್ಣ ಕಾಯಿಲೆಗೂ ಹಳ್ಳಿಯ ಜನ ಸಾಲ ಮಾಡಿ ನಗರದ ಖಾಸಗಿ ಆಸ್ಪತ್ರೆಗಳಿಗೆ ಓಡಬೇಕಾಗಿದೆ.
ಕೇವಲ ‘ಮತಬ್ಯಾಂಕ್’ ಆದ ಹಳ್ಳಿಗಳು ಮತ ಪಡೆದು ಗೆದ್ದ ನಂತರ, ಮುಂದಿನ ಐದು ವರ್ಷಗಳ ಕಾಲ ಹಳ್ಳಿಯ ಮುಖವನ್ನೂ ನೋಡುವುದಿಲ್ಲ. ಜನರಿಗೆ ಉಚಿತ ಯೋಜನೆಗಳ (Freebies) ಆಮಿಷ ಒಡ್ಡಿ ಅವರ ಸ್ವಾವಲಂಬನೆಯನ್ನು ಕಸಿದುಕೊಳ್ಳಲಾಗುತ್ತಿದೆ.
ಗ್ರಾಮೀಣ ಪ್ರದೇಶದಲ್ಲಿ ಹಸಿವು, ಬಡತನ ನೀಗಬೇಕಾದರೆ ಕೇವಲ ದಿನಾಚರಣೆಗಳ ಶುಭಾಶಯಗಳು ಸಾಲದು. ಕಾಗದದ ಮೇಲಿರುವ ಯೋಜನೆಗಳು ಪ್ರಾಮಾಣಿಕವಾಗಿ ನೆಲದ ಮೇಲೆ ಅನುಷ್ಠಾನಕ್ಕೆ ಬರಬೇಕು. ಗ್ರಾಮ ಪಂಚಾಯತಿ ಮಟ್ಟದಿಂದ ಹಿಡಿದು ಸರ್ಕಾರದ ಉನ್ನತ ಮಟ್ಟದವರೆಗೆ ಭ್ರಷ್ಟಾಚಾರ ಮುಕ್ತ ಆಡಳಿತ ಸಿಕ್ಕಾಗ ಮಾತ್ರ ಹಳ್ಳಿಗಳು ಅಭಿವೃದ್ಧಿಯಾಗಲು ಸಾಧ್ಯ. ಅಲ್ಲಿಯವರೆಗೆ “ಗ್ರಾಮಾಭಿವೃದ್ಧಿ” ಎನ್ನುವುದು ಕನಸು ಮಾತ್ರ !

ವಿಶ್ವ ಗ್ರಾಮೀಣಾಭಿವೃದ್ಧಿ ದಿನವನ್ನು ಪ್ರತಿ ವರ್ಷ ಜುಲೈ 6 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಸೆಪ್ಟೆಂಬರ್ 2024ರಲ್ಲಿ ಈ ದಿನವನ್ನು ಅಧಿಕೃತವಾಗಿ ಘೋಷಿಸಿತು. ಗ್ರಾಮೀಣ ಸಮುದಾಯಗಳು ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ ಕಂಡುಹಿಡಿಯುವುದು, ಸುಸ್ಥಿರ ಅಭಿವೃದ್ಧಿ ಗುರಿಗಳನ್ನು  ಸಾಧಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

Leave a Reply

Your email address will not be published. Required fields are marked *

error: Content is protected !!