ನಾವಿರುವುದಷ್ಟೇ ಜಗತ್ತಲ್ಲ; ಪರ್ಯಾಯವಾದ ಜಗತ್ತುಗಳು ಅನೇಕ. ಇಂಥವುಗಳೆಲ್ಲದರ ಬಗ್ಗೆಯೂ ನಮಗೆ ಅರಿವಿರುವುದಿಲ್ಲ. ಅನುಭವಿಸಿದವರು ಹೇಳುವುದನ್ನು ಕೇಳಿದಾಗ ಉತ್ಪ್ರೇಕ್ಷೆ ಮಾಡುತ್ತಿದ್ದರೆ ಎಂಬ ಭಾವ ಮೂಡಬಹುದು. ಎಷ್ಟೋ ಬಾರಿ ಗೊತ್ತಿಲ್ಲದ ಸತ್ಯ; ಸುಳ್ಳೆಂದೇ ಭಾಸವಾಗುತ್ತದೆ. ಆದರೆ ಆ ಪರ್ಯಾಯ ಪ್ರಪಂಚಕ್ಕೆ ತುಸುವೇ ಹೆಜ್ಜೆ ಇಟ್ಟರೂ ಆಶ್ಚರ್ಯಚಕಿತಗೊಳ್ಳಿಸುವ ರೋಚಕ ವಿಷಯಗಳು ಗೊತ್ತಾಗುತ್ತವೆ.

ವನ್ಯಲೋಕವೆಂಬ ಪರ್ಯಾಯ ಜಗತ್ತಿನಲ್ಲಿ ದಶಕಗಳಿಂದ ಕೆಲಸ ಮಾಡುತ್ತಿರುವ ವ್ಯಕ್ತಿ ಜೊತೆ ನಿರಂತರ ಒಡನಾಡಿ ಅಲ್ಲಿಯ ರೋಚಕ ಸಂಗತಿಗಳನ್ನು ನಮ್ಮೆದುರಿಗೆ ನಡೆಯುತ್ತಿದೆಯೇನೋ ಎಂಬಂತೆ ಪತ್ರಕರ್ತ ಕಟ್ಟೆ ಗುರುರಾಜ್ “ಆನೆ ಡಾಕ್ಟ್ರ ಆತ್ಮಕಥೆ” ಪುಸ್ತಕದ ಮೂಲಕ ಕಟ್ಟಿಕೊಟ್ಟಿದ್ದಾರೆ. ಕಾಡಿನ ಪ್ರಾಣಿಗಳಲ್ಲಿಯೇ ಆನೆಗಳು ಬಹು ಬುದ್ದಿವಂತ ಸಸ್ತನಿಗಳು. ಇವುಗಳ ವಿಶ್ವಾಸ ಗಳಿಸಿಕೊಳ್ಳುವುದು ಕಠಿಣ. ಒಮ್ಮೆ ಅವುಗಳಿಗೆ ನಂಬಿಕೆ ಮೂಡಿದರೆ ಅದು ಅಳಿಸುವುದಿಲ್ಲ.
ಇಂಥ ಜೀವಿಗಳ ಜೊತೆ ನಿರಂತರ ಒಡನಾಟ ಇಟ್ಟುಕೊಂಡ ವ್ಯಕ್ತಿಗಳ ನಂಬಿಕೆ ಗಳಿಸಿಕೊಳ್ಳುವುದೂ ಕಷ್ಟ. ನಿರಂತರ ಪ್ರಾಮಾಣಿಕ ಪ್ರಯತ್ನ ಅಗತ್ಯ. ಇಂಥ ಯತ್ನಗಳ ಮೂಲಕ ಆನೆಡಾಕ್ಟ್ರು ಚೆಟ್ಟಿಯಪ್ಪ ಅವರ ವಿಶ್ವಾಸ ಗಳಿಸಿಕೊಂಡ ಕಟ್ಟೆ, ಅಪೂರ್ವ ಎನಿಸುವಂಥ ಮಾಹಿತಿಗಳ ಕಟ್ಟೆಯನ್ನೇ ಕಟ್ಟಿದ್ದಾರೆ.
ಕೊಡಗಿನ ಕಾಡಿನ ಪರಿಸರದಿಂದ ಬಂದ ಡಾ. ಚೆಟ್ಟಿಯಪ್ಪ ಪಶುವೈದ್ಯರು. ತಮಗಿದ್ದ ಮೂಲಭೂತ ಆಸಕ್ತಿಯಿಂದ ಅರಣ್ಯ ಇಲಾಖೆಗೆ ನಿಯೋಜನೆ ಮೇಲೆ ತೆರಳುತ್ತಾರೆ. ಅಲ್ಲಿಂದ 30 ವರ್ಷ ಇವರು ವನ್ಯಜೀವಿಗಳೊಂದಿಗೆ ಅದರಲ್ಲಿಯೂ ಆನೆಗಳ ಮುಖಾಮುಖಿ ಒಡನಾಟದಲ್ಲಿ ಗಳಿಸಿದ ಅನುಭವಗಳು ಅತ್ಯಮೂಲ್ಯ.
ಕಾಡಿನಲ್ಲಿರುವ ಆನೆಗಳ ಸ್ವಭಾವಕ್ಕೂ ನಾಡಿಗೆ ಕರೆತಂದು ಪಳಗಿಸಿದ ಆನೆಗಳ ವರ್ತನೆಗಳಿಗೂ ಇರುವ ವೆತ್ಯಾಸ ಅಗಾಧ. ಇವೆಲ್ಲವುಗಳನ್ನು ಚೆನ್ನಾಗಿ ಅರಿತುಕೊಂಡವರು ಚೆಟ್ಟಿಯಪ್ಪ. ಫಟ್ಟಿಂಗ ಆನೆಗಳನ್ನು ಪಳಗಿಸಿದವರು. ವಿಶೇಷ ಸಂಗತಿ ಎಂದರೆ 30 ವರ್ಷ ಇವರು ಪಳಗಿಸಿದ ಆನೆಗಳೇ ಮೈಸೂರು ದಸರಾದಲ್ಲಿ ಅಂಬಾರಿ ಹೊತ್ತಿವೆ. ಇಂಥ ಆನೆಗಳನ್ನು ಅವರು ಪಳಗಿಸಿದ ವಿವರ ಕೇಳುವಾಗ ( ಈ ಪುಸ್ತಕ ಓದುವಾಗ ಚೆಟ್ಟಿಯಪ್ಪ ನಮ್ಮೆದುರಿಗೆ ಕುಳಿತು ಅವರ ಅನುಭವ ಹೇಳುತ್ತಿದ್ದಾರೇನೋ ಎನ್ನಿಸುತ್ತದೆ) ಮೈ ಜುಮ್ ಎನ್ನುತ್ತದೆ.


ಈ ಪುಸ್ತಕ ಆನೆಗಳ ಸ್ವಭಾವಗಳನ್ನು ಎಷ್ಟು ಸೂಕ್ಷ್ಮವಾಗಿ ಕಟ್ಟಿಕೊಡುತ್ತದೆ ಎಂದರೆ ಇದಕ್ಕೆ “ಆನೆಗಳ ಆತ್ಮಕಥೆ” ಎಂದಿಟ್ಟಿದ್ದರೂ ಅನ್ವರ್ಥಕವಾಗುತ್ತಿತ್ತು. ಡಾ. ಚೆಟ್ಟಿಯಪ್ಪ ತಮ್ಮ ವಿಶಿಷ್ಟ ಅನುಭವಗಳನ್ನು ಹೇಳಿಕೊಳ್ಳುತ್ತಾ ಹೋಗುವ ಮೂಲಕ ಆನೆಗಳ ಆತ್ಮಕಥೆಯನ್ನು ಮತ್ತು ಕೇಳುಗರಿಗೆ ನಿಗೂಢ ಜಗತ್ತಿಗೆ ಪ್ರವೇಶಿಕೆಯನ್ನು ಒದಗಿಸಿಕೊಟ್ಟಿದ್ದಾರೆ.


ಕನ್ನಡದ ಪುಸ್ತಕ ಜಗತ್ತಿಗೆ ಇದೊಂದು ವಿಶಿಷ್ಟ ಕಾಣಿಕೆ. ಆನೆಗಳ ಸ್ವಭಾವ ಅರಿಯುವ ಆಸಕ್ತಿ ಇರುವವರು, ವನ್ಯಜೀವಿ ಲೋಕದಲ್ಲಿ ಅಡ್ಡಾಡುವವರು ಓದಲೇ ಬೇಕು ಎನಿಸುವಂಥ ಈ ಪುಸ್ತಕವನ್ನು “ಶ್ರೀನಿಧಿ ಪಬ್ಲಿಕೇಷನ್ಸ್” ಹೊರತಂದಿದೆ. 172 ಪುಟಗಳಿರುವ ಈ ಕೃತಿಯ ಬೆಲೆ 120 ರೂ. ಮಾತ್ರ. ಆಸಕ್ತರು ದೂರವಾಣಿ 080 – 4111 8646 ಸಂಖ್ಯೆಗೆ ಕರೆ ಮಾಡಬಹುದು.

Similar Posts

2 Comments

  1. Sir ,how can I purchase this book aane doctor aatmakate , please share some information about that

    1. ದೂರವಾಣಿ 080 – 4111 8646 ಸಂಖ್ಯೆಗೆ ಕರೆ ಮಾಡಬಹುದು.

Leave a Reply

Your email address will not be published. Required fields are marked *