ಮತ್ತೆ ಕೇಂದ್ರದಿಂದ ಗ್ಯಾಸ್ ಶಾಕ್; ವಿಷಚಕ್ರ ತಪ್ಪಿಸಲು ಏನು ಕ್ರಮ ?
ಕೇಂದ್ರ ಸರ್ಕಾರ ಮತ್ತೆ ಗ್ಯಾಸ್ ಬೆಲೆ ಏರಿಸಿದೆ. ವಾಣಿಜ್ಯ ಬಳಕೆಯ ಗ್ಯಾಸ ಸಿಲಿಂಡರ್ ಬೆಲೆ ಜೂನ್ 1 ರಿಂದ 46 ರೂಪಾಯಿ ಹೆಚ್ಚಾಗಿದೆ. ಇದರಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇದರ ಬಲೆ 3,071 ರೂಪಾಯಿಯಿಂದ 3,113 ತಲುಪಿದೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ 3,152 ರೂಪಾಯಿಯಿಂದ 3,198.00 ರೂಪಾಯಿ ತಲುಪಿದೆ.
ವಾಣಿಜ್ಯ ಎಲ್ ಪಿ ಜಿ (LPG) ಸಿಲಿಂಡರ್ ಬೆಲೆ ಏರಿಕೆಯಿಂದ ಹೋಟೆಲ್, ರೆಸ್ಟೊರೆಂಟ್, ಧಾಬಾ, ಬೇಕರಿ ಹೀಗೆ ಆಹಾರೋದ್ಯಮ ಆಧಾರಿತ ಉದ್ದಿಮೆಗಳ ಉತ್ಪನ್ನಗಳ ಬೆಲೆ ಹೆಚ್ಚಾಗುತ್ತದೆ. ಇದರ ಭಾರ ಗ್ರಾಹಕರತ್ತ ವರ್ಗಾವಣೆಯಾಗುತ್ತದೆ. ಆದರೆ ಎಲ್ಲ ಭಾರವನ್ನೂ ಗ್ರಾಹಕರತ್ತ ವರ್ಗಾಯಿಸಲು ಸಾಧ್ಯವಿಲ್ಲ. ಇದರ ದುಷ್ಪರಿಣಾಮ ಭರಿಸಲಾಗದ ಆಹಾರಾಧಾರಿತ ಉದ್ದಿಮೆಗಳು ಮುಚ್ಚುತ್ತವೆ.ಕಾರ್ಮಿಕರು ನಿರುದ್ಯೋಗಿಗಳಾಗುತ್ತಾರೆ. ಹೆಚ್ಚಿನ ಮಾಲಿಕರು ಬ್ಯಾಂಕ್ ಸಾಲ ತೀರಿಸಲಾಗದೇ ಪರದಾಡುತ್ತಾರೆ. ಹಲವು ಸಣ್ಣ-ಮಧ್ಯಮ ಹೋಟೆಲುಗಳು ಮೆನು ಕಡಿಮೆ ಮಾಡಿವೆ, ಇನ್ನಷ್ಟು ಕಡಿಮೆ ಮಾಡುತ್ತವೆ, ಹೋಟೆಲ್ ತೆರೆದಿರುವ ಸಮಯ ಕಡಿಮೆ ಮಾಡುತ್ತಿವೆ. ಯಾವ ಕ್ರಮಗಳು ಪರಿಣಾಮಕಾರಿಯಾಗದಿದ್ದರೆ ಮುಚ್ಚುವ ಹೋಟೆಲ್ ಗಳ ಸಂಖ್ಯೆ ಹೆಚ್ಚಾಗುತ್ತದೆ. ಈ ವಿಷಚಕ್ರ ತಪ್ಪಿಸಲು ಏನು ಮಾಡಬಹುದು ? ಆಹಾರೋದ್ಯಮದ ಮೇಲೆ ಅಂದರೆ ಹೋಟೆಲ್, ರೆಸ್ಟೊರೆಂಟ್ ಗಳ ಮೇಲಿನ ಜಿ ಎಸ್ ಟಿ ಹೊರೆ ತಗ್ಗಿಸಲು ಸಾಧ್ಯವಿಲ್ಲವೇ ?
ತಜ್ಞರು ಜಿ ಎಸ್ ಟಿ ಹೊರೆ ತಗ್ಗಿಸಲು ಸಾಧ್ಯವಿದೆ ಮತ್ತು ಇದು ಒಂದು ಪರಿಹಾರವಾಗಬಹುದು ಎನ್ನುತ್ತಾರೆ. ಪ್ರಸ್ತುತ ಜಿ.ಎಸ್.ಟಿ ದರಗಳೆಂದರೆ ಸ್ಟ್ಯಾಂಡ್ಅಲೋನ್ ರೆಸ್ಟೋರೆಂಟ್ಗಳು 5% (ITC ಇಲ್ಲ). ವಸತಿ ಸಹಿತ ಇರುವ ರೆಸ್ಟೊರೆಂಟ್ ಗಳಲ್ಲಿ ಹೋಟೆಲ್ ರೂಮ್ ಟ್ಯಾರಿಫ್ 7,500 ರೂಪಾಯಿಗಿಂತ ಕಡಿಮೆ ಇದ್ದರೆ 5%, ಹೆಚ್ಚಿದ್ದರೆ 18% (ITC ಸಹಿತ)
ಎಲ್ಲ ಮಾದರಿಯ ಹೋಟೆಲ್ ಗಳು, ರೆಸ್ಟೊರೆಂಟ್ ಗಳಿಗೆ ಯುನಿಫಾರ್ಮ್ ಅಂದರೆ ಏಕರೂಪದ 5% GST ಮಾತ್ರ ವಿಧಿಸಬಹುದು. ಹೀಗೆ ಮಾಡಲು ಈಗಾಗಲೇ ಹೋಟೆಲಿಯರ್ಗಳು ಒತ್ತಾಯಿಸುತ್ತಿದ್ದಾರೆ. ಇದು ವಿಶೇಷವಾಗಿ ಮಧ್ಯಮ ಹೋಟೆಲುಗಳಿಗೆ ಸಹಾಯ ಮಾಡುತ್ತದೆ.
ಇಂಥ ಸಂದರ್ಭಗಳಲ್ಲಿ ಹೋಟೆಲ್ – ರೆಸ್ಟೊರೆಂಟ್ ಉದ್ದಿಮೆದಾರರ ಸಹಾಯಕ್ಕೆ ಕೇಂದ್ರ ಸರ್ಕಾರ ಧಾವಿಸಿ ಬರಲೇಬೇಕು. ಜಿ.ಎಸ್.ಟಿ ಕೌನ್ಸಿಲ್ನಲ್ಲಿ ಚರ್ಚಿಸಿ ಹೊರೆ ತಗ್ಗಿಸುವುದು ಸಾಧ್ಯವಿದೆ. ಇದು ತಕ್ಷಣದ ಪರಿಹಾರ ನೀಡುವುದರ ಜೊತೆಗೆ ಗ್ರಾಹಕರ ಮೇಲಿನ ಬೆಲೆ ಏರಿಕೆ ಒತ್ತಡವನ್ನು ಕಡಿಮೆ ಮಾಡುತ್ತದೆ.
ಕೇಂದ್ರ ಸರ್ಕಾರಕ್ಕೆ ತಾತ್ಕಾಲಿಕವಾಗಿ ಜಿ ಎಸ್ ಟಿ ಬಾಬ್ತಿನಿಂದ ಬರುವ ಆದಾಯ ಕಡಿಮೆಯಾಬಹುದು. ಆದರೆ ಹೋಟೆಲ್ ಉದ್ದಿಮೆದಾರರು, ಕಾರ್ಮಿಕರು ಒಂದಿಷ್ಟು ಸಮಾಧಾನ ಪಡುವಂಥ ಸ್ಥಿತಿ ನಿರ್ಮಾಣವಾಗುತ್ತದೆ. ಆರ್ಥಿಕ ಚಟುವಟಿಕೆಗೆ ಸಹಕಾರಿಯಾಗುತ್ತದೆ.
ಇದಲ್ಲದೇ ಇನ್ನೂ ಒಂದಿಷ್ಟು ಪರಿಹಾರಗಳಿವೆ. ವಾಣಿಜ್ಯ LPGಗೆ ವಿಶೇಷ ಸಬ್ಸಿಡಿ ಅಥವಾ ಟ್ಯಾಕ್ಸ್ ರಿಬೇಟ್ ಅಂದರೆ ಆಯಾತ ತೆರಿಗೆ ಕಡಿಮೆ ಮಾಡುವುದು. PNG (ಪೈಪ್ ಗ್ಯಾಸ್) ವಿಸ್ತರಣೆ ಮಾಡಬಹುದು. ಇದರಿಂದ ನಗರಗಳಲ್ಲಿ ಹೆಚ್ಚು ಹೋಟೆಲುಗಳಿಗೆ ಸಂಪರ್ಕ ನೀಡಬಹುದು. ಇಂಪೋರ್ಟ್ ಡೈವರ್ಸಿಫಿಕೇಷನ್ ಮತ್ತು ದೇಶೀಯ ಉತ್ಪಾದನೆ ಹೆಚ್ಚಿಸುವುದು. ಎಲೆಕ್ಟ್ರಿಕ್/ಇಂಡಕ್ಷನ್ ಸ್ಟೊವ್ ಗಳ ಖರೀದಿಗೆ ಸಬ್ಸಿಡಿ ನೀಡುವುದು ಅಥವಾ ವಿದ್ಯುತ್ ದರ ಕಡಿಮೆ ಮಾಡುವುದು.
ಗ್ರಾಹಕರ ಮೇಲೆ ಹೊರೆ ಬೀಳದಂತೆ ಹೋಟೆಲ್/ರೆಸ್ಟೋರೆಂಟ್ ಮಾಲೀಕರು ಸಹ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯವಿದೆ. ಮುಖ್ಯವಾಗಿ ಇಂಧನ ದಕ್ಷತೆ ಬಗ್ಗೆ ಗಮನ ಹರಿಸುವುದು, ಉಪಕರಣಗಳ ನಿರ್ವಹಣೆ ದಕ್ಷತೆ ಹೆಚ್ಚಿಸುವುದು. ಕಡಿಮೆ ಗ್ಯಾಸ್ ಬಳಸುವ ಆಹಾರಗಳ (ಇಂಧನ ಕಡಿಮೆ ಬಳಕೆ, ತ್ವರಿತ ತಯಾರಿಕೆ) ಕಡೆ ಗಮನ ನೀಡಬೇಕು. ಎಲೆಕ್ಟ್ರಿಕ್ + ಗ್ಯಾಸ್ + ಚಾರ್ಕೋಲ್/ಫೈರ್ವುಡ್ ಹೀಗೆ ಸಾಧ್ಯವಾದಷ್ಟೂ ಹೈಬ್ರಿಡ್ ಸಿಸ್ಟಂ ಅಳವಡಿಸಿಕೊಳ್ಳಬೇಕು.
ದೀರ್ಘಕಾಲೀನ ಪರಿಹಾರಗಳು ಸಹ ಇವೆ. ಸೋಲಾರ್ ಸಿಸ್ಟಂ ಅಳವಡಿಕೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರೋತ್ಸಾಹ ನೀಡಬೇಕು. ಬಯೋಗ್ಯಾಸ್ ಘಟಕಗಳಿಗೆ ಉತ್ತೇಜನ ನೀಡಬೇಕು. ಇವೆಲ್ಲದರ ಜೊತೆಗೆ ಹೋಟೆಲ್ ಉದ್ಯಮಕ್ಕೆ ಲೋನ್, ರಿಲೀಫ್ ಪ್ಯಾಕೇಜ್ ಗಳನ್ನು ನೀಡಬೇಕು.
ಕೇಂದ್ರ ಸರ್ಕಾರ ಇದ್ಯಾವುದನ್ನೂ ಮಾಡದೇ ಬೆಲೆ ಏರಿಕೆಯಷ್ಟೆ ನನ್ನ ಗುರಿ, ಕ್ರಮ ಎಂದುಕೊಂಡರೆ ಉದ್ದಿಮೆಗಳು ಸೊರಗುತ್ತವೆ, ಮುಚ್ಚುತ್ತವೆ, ಕಾರ್ಮಿಕರು ನಿರುದ್ಯೋಗಿಗಳಾಗುತ್ತಾರೆ. ಹೋಟೆಲ್, ಪಿಜಿ ಆಹಾರವನ್ನೇ ಅವಲಂಬಿಸಿರುವವರು ಬಸವಳಿದು ಹೋಗುತ್ತಾರೆ.

ಅಡುಗೆ ಅನಿಲ ಮತ್ತು ಇಂಧನಗಳು ಆಮದು ಮಾಡಿಕೊಳ್ಳ ಬೇಕಾದ ಸರಕu ಆಗಿರುವದರಿಂದ ಇವುಗಳ ಬೆಲೆ ನಿಯಂತ್ರಣದಲ್ಲಿ ಇಡಲು ಸಾಧ್ಯವಾಗುವುದಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸುವ ತೆರಿಗೆಯನ್ನು ಅಗತ್ಯ ಮತ್ತು ಮೂಲವಾಗಿ ಪ್ರತಿ ಮನೆಗೆ ಬೇಕಾದ ಅಡುಗೆ ಅನಿಲವೆಂದು ಪರಿಗಣಿಸಿ 5% ಕಡಿತಗೊಳಿಸಿ ಪ್ರಜೆಗಳಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾದ ಬಹುದು. ಇದರ ಅರ್ಥ ವಾಹನಕ್ಕೆ ಉಪಯೋಗಿಸುವ ಇಂಧನ ಮತ್ತು ಅಡುಗೆ ಅನಿಲವನ್ನು GST ಅಡಿ ತಂದಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುತ್ತದೆ.
ಇನ್ನು ಇಂಧನದಲ್ಲಿ ಆತ್ಮ ನಿರ್ಭರ ತರಲುಸಂಶೋಧನೆಗಳನ್ನು ಕಾರ್ಯರೂಪಕ್ಕೆ ಇಳಿಸಿ DMT ಅನಿಲ, hydrogen gas ಮುಂತಾದ ಅನಿಲಗಳ ಬಳಕೆಯನ್ನು ಕಾರ್ಯಸಾಧು ಮಾಡಿದಲ್ಲಿ ಪ್ರಜೆಗಳ ಕಷ್ಟವನ್ನು ನಿವಾರಿಸ ಬಹುದು.