ಸಣ್ಣಕಥೆ ಪ್ರಕಾರ ಸಮರ್ಥ ಬಳಕೆ
ಸಣ್ಣಕಥೆಗಳ ಪ್ರಕಾರವನ್ನು ಸಮರ್ಥವಾಗಿ ದುಡಿಸಿಕೊಂಡವರಲ್ಲಿ ಬೆಸಗರಹಳ್ಳಿ ರಾಮಣ್ಣ ಅವರದೂ ಪ್ರಮುಖ ಹೆಸರು. ವೃತ್ತಿಯಲ್ಲಿ ವೈದ್ಯರಾದ ಇವರದು ಸಾಹಿತ್ಯದಲ್ಲಿಯೂ ಚಿಕಿತ್ಸಕ ನೋಟ. ಗ್ರಾಮೀಣ ಬದುಕಿನ ಸೊಗಡನ್ನೂ, ವೃತ್ತಿ ಬದುಕಿನ ನೋಟಗಳನ್ನೂ ಸಮರ್ಥವಾಗಿ ಕಾಣಿಸಿದವರು.
ಗ್ರಾಮೀಣ ಕಥೆಗಳನ್ನು ರಚಿಸುವಾಗಲೂ ಏಕಪ್ರಕಾರದ ಕಥಾವಸ್ತುಗಳಿಗೆ ಜೋತು ಬೀಳದೇ ವೈವಿಧ್ಯದತ್ತ ಗಮನ ಕೊಟ್ಟವರು. ಇದರಿಂದ ಎರಡು ತಲೆಮಾರುಗಳ ಬದುಕಿನ ಕಥೆಗಳು ಶಕ್ತಿಶಾಲಿಯಾಗಿ ರೂಪುಗೊಂಡಿವೆ. ಮುಖ್ಯವಾಗಿ ಮಂಡ್ಯಸೀಮೆಯ ಕನ್ನಡ ಶೈಲಿಯನ್ನು ಸಮರ್ಥವಾಗಿ ದುಡಿಸಿಕೊಂಡಿರುವ ರೀತಿ ಅಚ್ಚರಿ ಮೂಡಿಸುತ್ತದೆ.
ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಕಲಿತ ಅವರು ಆಯ್ಕೆ ಮಾಡಿದ ಕಥಾವಸ್ತುಗಳನ್ನು ಶಿಷ್ಟಭಾಷೆಯಲ್ಲಿಯೇ ಬರೆಯಬಹುದಾಗಿತ್ತು. ಆದರೆ ಪ್ರಜ್ಞಾಪೂರ್ವಕವಾಗಿ ಗ್ರಾಮೀಣ ಆಡು ಮಾತಿನಲ್ಲಿ ಬರೆದು ಕಥೆಗಳ ಕಸುವು ಹೆಚ್ಚಿಸಿದ್ದಾರೆ. ಹೀಗೆಂದ ಮಾತ್ರಕ್ಕೆ ಅವರು ಶಿಷ್ಟಭಾಷೆಯಲ್ಲಿ ಬರೆಯಲಿಲ್ಲವೆಂದಲ್ಲ. ಆಯಾ ಪಾತ್ರಗಳ ತಕ್ಕಂತೆ ಬಳಸಿದ್ದಾರೆ. ಇಲ್ಲಿಯೂ ಗ್ರಾಮೀಣ – ಶಿಷ್ಟಶೈಲಿಗಳು ಬಾಗಿ ಬಳುಕಿವೆ. ಮೈಸೂರು ನಗರದ ಒಂದು ಕಾಲದ ಆಡುಮಾತಿನ ಶೈಲಿಯ ಪರಿಚಯವೂ ಆಗುತ್ತದೆ.
ರಾಮಣ್ಣ ಅವರು ಕಾದಂಬರಿಗಳೇ ಆಗಬಹುದಾಗಿದ್ದ ಕಥಾ ವಿಸ್ತಾರವನ್ನು ಸಣ್ಣಕಥೆಯ ಚೌಕಟ್ಟಿಗೆ ಹೊಂದಿಸಿದವರು. ಇದು ಕೂಡ ಗಮನಾರ್ಹ ಸಂಗತಿ. ಸಣ್ಣಕಥೆಗಳೇ ಆದರೂ ಅಲ್ಲಿ ಬರುವ ಪಾತ್ರಗಳ ಆಂತರಂಗ – ಬಹಿರಂಗವನ್ನು ಪರಿಪರಿಯಾಗಿ ತೆರೆದಿಡುತ್ತಾರೆ. ತೊರೆಯಂತೆ ಶುರುವಾಗುವ ಕಥೆ ಹೋಗುತ್ತಾ ಹೋಗುತ್ತಾ ನದಿಯಾಗುತ್ತವೆ. ಮುಗಿಯುವ ಹೊತ್ತಿನಲ್ಲಿ ಫಳಾರನೇ ಮಿಂಚು ಹೊಡೆದಂತ ಕಾಣ್ಕೆಯನ್ನು ಕಾಣಿಸುತ್ತವೆ. ಅವರ ಕಥೆಗಳು “ಕಣಜ” ಎಂಬ ಅರ್ಥಪೂರ್ಣ ಹೆಸರಿನಲ್ಲಿ ಒಟ್ಟುಗೂಡಿವೆ.
ಜಿಲ್ಲಾ ಆರೋಗ್ಯಾಧಿಕಾರಿಯಾಗಿ ನಿವೃತ್ತರಾದ ರಾಮಣ್ಣ ಅವರು ದಂತಗೋಪುರದಲ್ಲಿ ಕುಳಿತು ಬರೆದವರಲ್ಲ. ಸಮಾಜಮುಖಿ ಚಿಂತಕರು. ಅವರೊಡನೆ ಸಂವಾದಿಸಿರುವ ನನಗೆ ಗ್ರಾಮೀಣರ ಬಗ್ಗೆ ಅವರಿಗಿರುವ ಒಲವು ನಿಲುವು, ವ್ಯಕ್ತಿಯ ದೈಹಿಕ ಆರೋಗ್ಯದಷ್ಟೇ ಸಮಾಜದ ಆರೋಗ್ಯವೂ ಮುಖ್ಯ ಎನ್ನುವ ಕಾಳಜಿ, ರಾಜಕಾರಣದ ಬೆಳವಣಿಗೆಳತ್ತ ಅದಮ್ಯ ಕುತೂಹಲ ಅರ್ಥವಾಗಿದೆ. ಆದ್ದರಿಂದಲೇ ಅವರು ಬರೆದ ಕಥೆಗಳು ಕಥೆಗಳಷ್ಟೇ ಅಲ್ಲ; ಅವ್ಯವಸ್ಥೆಯತ್ತ ತೀಷ್ಣ ವಿಡಂಬನೆ, ಮೊನಚಾದ ವ್ಯಂಗ್ಯ! ಮನಃಶಾಸ್ತ್ರದ ವಿದ್ಯಾರ್ಥಿಯೂ ಆಗಿರುವ ನನಗೆ ಅವರ ಕಥೆಗಳನ್ನು ಓದಿದಾಗಲೆಲ್ಲ “ಒಂದು ವೇಳೆ ರಾಮಣ್ಣ ವೈದ್ಯರಾಗದಿದ್ದರೆ ಕ್ರಾಂತಿಕಾರಿಯಾಗಿರುತ್ತಿದ್ದರು” ಎನಿಸಿದೆ. ಅವರನ್ನು ಹತ್ತಿರದಿಂದ ಕಂಡವರಿಗೆ ಈ ಮಾತು ಬಹುಶಃ ಅಚ್ಚರಿ ತರಿಸುವುದಿಲ್ಲ!
ಇಂಥ ವಿಶಿಷ್ಟ ಕಥೆಗಾರ ರಾಮಣ್ಣ ಭೌತಿಕವಾಗಿ ನಮ್ಮೊಡನೆ ಇಲ್ಲವಾದರೂ ಅವರ ನೆನಪು ಸದಾ ಹಸಿರಾಗಿರುವಂತೆ ಅವರ ಕಥೆಗಳು ನಮ್ಮೊಡನೆ ಇವೆ. ಇದರೊಂದಿಗೆ ಅವರ ವೈಚಾರಿಕ ಚಿಂತನೆ, ಹೊಸ ಬರೆಹಗಾರರ ಬಗ್ಗೆ ಅವರಿಗಿದ್ದ ಕಾಳಜಿ, ನೀಡುತ್ತಿದ್ದ ಪ್ರೋತ್ಸಾಹವನ್ನು ಅವರ ನೆನಪಿನಲ್ಲಿ ರಚನೆಯಾಗಿರುವ ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನವು ಸಾಂಸ್ಥಿಕ ಸ್ವರೂಪದಲ್ಲಿ ಅರ್ಥಪೂರ್ಣವಾಗಿ ಮುಂದುವರಿಸಿದೆ.
“ಇವ ನಮ್ಮವ” ಎಂದೇಳಿಸದೇ, ಪಕ್ಷಪಾತವಿಲ್ಲದೇ, ವಶೀಲಿ ಬಾಜಿಗಳಿಗೆ ಅವಕಾಶವಿಲ್ಲದೇ ಉತ್ತಮ ಕಥೆಗಳು, ಸಾಹಿತ್ಯದ ಇತರ ಪ್ರಕಾರಗಳ ಗಮನಾರ್ಹ ಬರೆಹಗಳನ್ನು ಪ್ರತಿಷ್ಠಾನ ಗುರುತಿಸಿ ಪ್ರೋತ್ಸಾಹಿಸುತ್ತಿದೆ. ಪ್ರತಿವರ್ಷ ಉತ್ತಮ ಸಾಹಿತ್ಯ ಕೃತಿಗೆ ಬೆಸಗರಹಳ್ಳಿ ರಾಮಣ್ಣ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿದೆ. ಈ ಪ್ರಶಸ್ತಿ ಪಡೆದ ಸಾಹಿತ್ಯ ಕೃತಿಗಳು ಕನ್ನಡದಲ್ಲಿ ತಪ್ಪದೇ ಓದಲೇಬೇಕಾದ ಕೃತಿಗಳ ಸಾಲಿನಲ್ಲಿ ನಿಲ್ಲುತ್ತವೆ. ಇದಲ್ಲದೇ ಪ್ರತಿವರ್ಷ ಕುಪ್ಪಳಿಯಲ್ಲಿ ಕಥಾ ಶಿಬಿರಗಳು, ವಿಚಾರ ಕಮ್ಮಟಗಳನ್ನೂ ಆಯೋಜಿಸುತ್ತಿದೆ. ಇವು ಅಚ್ಚುಕಟ್ಟು ಮತ್ತು ಸಮಯಪಾಲನೆಗೂ ಹೆಸರಾಗಿವೆ.

ಈ ವರ್ಷ ಅಂದರೆ ೨೦೨೬ನೇ ಸಾಲಿನಲ್ಲಿ ಹಿರಿಯ ಪತ್ರಕರ್ತ ರಘುನಾಥ ಚ.ಹ. ಅವರ “ಇಲ್ಲಿಂದ ಮುಂದೆಲ್ಲ ಕಥೆ” ಕೃತಿಯು ರಾಮಣ್ಣ ಪ್ರಶಸ್ತಿಗೆ ಪಾತ್ರವಾಗಿದೆ. ಇದೇ ಸಂದರ್ಭದಲ್ಲಿ ತೆಲುಗಿನಿಂದ ಅನುವಾದಗೊಂಡಿರುವ “ಕಕರುಡಿ ಯುಗಾದಿ” ಕೃತಿಯೂ ಲೋಕಾರ್ಪಣೆಗೊಳ್ಳುತ್ತಿದೆ. ಈ ಸಮಾರಂಭ ಇದೇ ಜೂನ್ ೧೪ರಂದು ಬೆಳಗ್ಗೆ ಮಂಡ್ಯದ ಡಾ. ಅಂಬೇಡ್ಕರ್ ಭವನದಲ್ಲಿ ಆಯೋಜಿತವಾಗಿದೆ. ಆಹ್ವಾನ ಪತ್ರಿಕೆ ನಿಮ್ಮ ಮುಂದಿದೆ.
