Home ವನ್ಯಜೀವನKannadaಹನೂರು ಶೂಟೌಟ್‌ ಸಂದರ್ಭ ಬಳಸಿದ ಗನ್‌, ಬಂದೂಕು ಬಗ್ಗೆ ಗೊತ್ತೆ ?

ಹನೂರು ಶೂಟೌಟ್‌ ಸಂದರ್ಭ ಬಳಸಿದ ಗನ್‌, ಬಂದೂಕು ಬಗ್ಗೆ ಗೊತ್ತೆ ?

ಗನ್‌ ಬಂದೂಕು ಡಬ್ಬಲ್‌ ಬ್ಯಾರೆಲ್‌ ಗನ್‌ ಗಳ ತಾಂತ್ರಿಕ ಮಾಹಿತಿ ಅನಾವರಣ

by Kumara Raitha
0 comments

ನಾನು ಎನ್.ಸಿ.ಸಿ. ಅಂಡರ್‌ ಆಫೀಸರ್‌ ಆಗಿದ್ದ ಸಂದರ್ಭದಲ್ಲಿ ನಾನಾ ರೀತಿಯ ಕ್ಯಾಂಪುಗಳಲ್ಲಿ ಭಾಗವಹಿಸಿದ್ದೇನೆ. ಅವುಗಳಲ್ಲಿ ಮಿಲಿಟರಿ ಅಟ್ಯಾಚ್‌ ಮೆಂಟ್‌ ಕ್ಯಾಂಪ್‌ ಸಹ ಪ್ರಮುಖ. ಇಲ್ಲಿ ನಮಗೆ ಮಿಲಿಟರಿಯಲ್ಲಿ ಬಳಸುವ ವಿವಿಧ ಮಾದರಿಯ ಆಯುಧಗಳ ಬಳಕೆ ಹೇಗೆ ಎಂಬ ತರಬೇತಿಯನ್ನು ನೀಡುತ್ತಾರೆ. ಅವುಗಳಲ್ಲಿ ಲೈಟ್‌ ಮೆಷಿನ್‌ ಗನ್‌, ೯ ಎಂ.ಎಂ ಕಾರ್ಬಲ್‌ ಮೆಷಿನ್‌ ಗನ್‌, ಎಸ್.ಎಲ್.ಆರ್.‌ (ಸೆಲ್ಫ್‌ ಲೋಡೆಡ್‌ ರೈಫಲ್‌ ) ಇತ್ಯಾದಿ. ೩೦೩ ರೈಫಲ್‌ ಬಳಕೆಯಂತೂ ಸಾಮಾನ್ಯ. ಇದನ್ನು ಅದೆಷ್ಟೂ ಸಲ ಗುರಿಗಾಗಿ ಜೀವಂತ ಗುಂಡುಗಳೊಂದಿಗೆ ಬಳಸಿದ್ದೇನೋ ಲೆಕ್ಕವಿಲ್ಲ. ಹೀಗಾಗಿ ಗನ್‌, ಪಿಸ್ತೂಲ್‌, ರಿವಾಲ್ವರ್‌ ಎಂದರೆ ಅವುಗಳ ಬಗ್ಗೆ ಆಕರ್ಷಣೆ ಇದೆ. ಈ ಸಂದರ್ಭದಲ್ಲಿ ಹೇಳಬೇಕಾದ್ದೇನೆಂದರೆ ನಾನು ಉತ್ತಮ ಗುರಿಕಾರ ಸಹ.

ಕಾವೇರಿ ವನ್ಯಜೀವಿಧಾಮದ ಹನೂರು ಉಪ ವಿಭಾಗದ ಶಾಗ್ಯ ವಲಯದಲ್ಲಿ ಹೊಳೆಮರದಟ್ಟಿ ಕಳ್ಳಬೇಟೆ ತಡೆ ಶಿಬಿರದ ಸನಿಹ ನಡೆದ ಎನ್‌ ಕೌಂಟರಿನಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಈ ಸಂದರ್ಭದಲ್ಲಿ ಕಾಡಿಗೆ ಅಕ್ರಮವಾಗಿ ನುಸುಳಿದ್ದವರ ಬಳಿ ಎರಡು ನಾಡ ಬಂದೂಕುಗಳಿದ್ದವು. ಸಾಮಾನ್ಯವಾಗಿ ಹಿಂದೆ ಅರಣ್ಯ ಇಲಾಖೆಯವರಿಗ ಡಬ್ಬಲ್‌ ಬ್ಯಾರೆಲ್‌ ಗನ್‌ ಕೊಡುತ್ತಿದ್ದರು. ಇದರಲ್ಲಿ ಒಮ್ಮೆಗೆ ಎರಡು ನಾಟಾ ಹಾಕಬಹುದು. ಇದನ್ನೇ ಎನ್‌ ಕೌಂಟರಿಗೆ ಬಳಸಿರಬಹುದೇ ಎನಿಸಿತು. ಆದರೆ ಈಗ ಹೆಚ್ಚಾಗಿ ಆ ಮಾದರಿಯ ಗನ್‌ ಬಳಕೆಯಲಿಲ್ಲ. ಆದ್ದರಿಂದ ಯಾವ ಮಾದರಿಯ ಆಯುಧ ಬಳಸಿರಬಹುದು ಎನಿಸಿತು.

ಎನ್‌ ಕೌಂಟರ್‌ ನಡೆದ ನಂತರ  ಸಂಬಂಧಿತ ಮಾಹಿತಿ ಸಂಗ್ರಹಣೆಗಾಗಿಯೇ ನಾನು, ಗೆಳೆಯ ವನ್ಯಜೀವಿ ಛಾಯಾಗ್ರಹಕ ಸಿದ್ದಪ್ಪ ಮಳವಳ್ಳಿ ಘಟನೆ ನಡೆದ ವಲಯದ ಕ್ಷೇತ್ರ ಭೇಟಿ ಮಾಡಿದೆವು. ಆಗ ತಿಳಿದಿದ್ದು ಅರಣ್ಯ ಸಿಬ್ಬಂದಿ  ಸ್ಲೈಡ್ ಆಕ್ಷನ್ (Slide-Action) ಶಾಟ್‌ಗನ್‌ ಬಳಸಿದ್ದಾರೆ ಎಂಬುದು ತಿಳಿಯಿತು. ಇದು ಕೂಡ ಅತ್ಯಾಧುನಿಕ ಗನ್‌ ಏನಲ್ಲ. ಆದರೆ ಕಾಡು ಕಾಯಲು, ವನ್ಯ ಸಂಪತ್ತು ರಕ್ಷಿಸಲು, ಆತ್ಮರಕ್ಷಣೆಗೆ ಸಮರ್ಥವಾಗಿದೆ. ಕೆಲವರು ಈ ಗನ್‌ ಬಗ್ಗೆ ಮಾಹಿತಿ ಕೇಳಿದರು. ಈ ಹಿನ್ನೆಲೆಯಲ್ಲಿ ಮಾಹಿತಿ ನೀಡಲಾಗಿದೆ.

ಹನೂರು (ಶಾಗ್ಯ) ಅರಣ್ಯ ವಲಯದ ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆಯ ಸಿಬ್ಬಂದಿ ಪಾಯಿಂಟ್‌ 12 ಬೋರ್ ಪಂಪ್-ಆಕ್ಷನ್ ಶಾಟ್‌ಗನ್ (12-Gauge Pump-Action Shotgun) ಶಸ್ತ್ರಾಸ್ತ್ರವನ್ನು ಬಳಸಿದ್ದಾರೆ.  ತಾಂತ್ರಿಕ ವಿವರಗಳು ಎಂದರೆ ಶಸ್ತ್ರದ ಪ್ರಕಾರ, ಪಂಪ್-ಆಕ್ಷನ್ ಶಾಟ್‌ಗನ್ (Pump-Action Shotgun) ಬೋರ್/ಕ್ಯಾಲಿಬರ್: .12 ಬೋರ್ (12-Gauge)

​ಬಳಸುವ ಗುಂಡುಗಳು (Amunition): ಇವುಗಳಲ್ಲಿ ಸಾಮಾನ್ಯವಾಗಿ ‘ಎಲ್‌ಜಿ’ (LG) ಅಥವಾ ‘ಎಸ್‌ಜಿ’ (SG) ಕಾರ್ಟ್ರಿಡ್ಜ್‌ಗಳನ್ನು ಬಳಸಲಾಗುತ್ತದೆ. ಒಂದು ಕಾರ್ಟ್ರಿಡ್ಜ್‌ನೊಳಗೆ ಒಂದೇ ಗುಂಡಿನ ಬದಲಿಗೆ 9 ರಿಂದ 12 ಸಣ್ಣ ಸಣ್ಣ ಸಸೆಯಂತಹ ಪ್ರಸರಣಗೊಳ್ಳುವ ಸಸೆಯಂತಹ ತುಣುಕುಗಳು (Lead Pellets/Buckshot) ಇರುತ್ತವೆ. ಇವುಗಳನ್ನು ಚರ್ರೆಗಳು/ ಪೆಲೆಟ್ಸ್‌ ಎಂದು ಸಹ ಕರೆಯಲಾಗುತ್ತದೆ. ಪ್ರತಿ ಬಾರಿ ಫೈರ್ ಮಾಡಿದ ನಂತರ ಕೈಯಿಂದ ಹ್ಯಾಂಡಲ್ ಹಿಡಿದು ಹಿಂದೆ-ಮುಂದೆ ಎಳೆಯುವ ಮೂಲಕ (Pump action) ಹೊಸ ಕಾರ್ಟ್ರಿಡ್ಜ್ ಲೋಡ್ ಮಾಡಬೇಕಾಗುತ್ತದೆ.

​ಒಮ್ಮೆ ಫೈರ್ ಮಾಡಿದರೆ ಆಗುವ ಪರಿಣಾಮಗಳು

​ಚರ್ರೆಗಳು ಅಂದರೆ ಸಣ್ಣಸಣ್ಣ ಗುಂಡುಗಳು ಚದುರುತ್ತವೆ.  (Spread Effect)  ಶಾಟ್‌ಗನ್‌ನಿಂದ ಫೈರ್ ಮಾಡಿದಾಗ ಒಳಗಿರುವ ಪೆಲೆಟ್‌ಗಳು (Pellets) ಬಂದೂಕಿನ ನಳಿಕೆಯಿಂದ ಹೊರಬರುತ್ತಿದ್ದಂತೆ ಶಂಕುವಿನಾಕಾರದಲ್ಲಿ (Cone shape) ಚದುರಿಕೊಂಡು ಸಾಗುತ್ತವೆ. ಹತ್ತಿರದ ಅಂತರದಿಂದ (0-15 ಮೀಟರ್) ಫೈರ್ ಮಾಡಿದರೆ, ಎಲ್ಲ ಪೆಲೆಟ್‌ಗಳು ಒಂದೇ ಜಾಗಕ್ಕೆ ತಗುಲಿ ದೇಹವನ್ನು ಸಂಪೂರ್ಣವಾಗಿ ರಂಧ್ರಗೊಳಿಸಿ ತಕ್ಷಣದ ಸಾವಿಗೆ ಕಾರಣವಾಗುತ್ತವೆ. ದೂರ ಹೆಚ್ಚಾದಂತೆ ಪೆಲೆಟ್‌ಗಳು ಅಗಲವಾಗಿ ಹರಡುವುದರಿಂದ ಒಂದಕ್ಕಿಂತ ಹೆಚ್ಚು ವ್ಯಕ್ತಿಗಳು ಅಥವಾ ವಿಶಾಲ ವ್ಯಾಪ್ತಿಯ ಗುರಿಗೆ ಏಕಕಾಲದಲ್ಲಿ ತಗುಲುವ ಸಾಧ್ಯತೆ ಇರುತ್ತದೆ.

ಶಾಟ್‌ ಗನ್‌ ಗಳಲ್ಲಿ ಬಳಕೆಯಾಗುವ ಕಾಟ್ರಿಡ್ಜ್‌ ಗಳ ಮಾದರಿ

30 ರಿಂದ 40 ಮೀಟರ್ (ಸುಮಾರು 100 ರಿಂದ 130 ಅಡಿ). ಈ ಅಂತರದೊಳಗೆ ಇವು ಅತ್ಯಂತ ಮಾರಕ ಹಾಗೂ ಪ್ರಾಣಾಪಾಯ ಉಂಟುಮಾಡುವ ಸಾಮರ್ಥ್ಯ ಹೊಂದಿರುತ್ತವೆ. ಗಾಳಿಯಲ್ಲಿ ಇವುಗಳ ಪೆಲೆಟ್‌ಗಳು ಸುಮಾರು 200 ರಿಂದ 300 ಮೀಟರ್‌ವರೆಗೂ (ಸುಮಾರು 600-900 ಅಡಿ) ಚಿಮ್ಮಬಲ್ಲವು. ಆದರೆ ಅಷ್ಟು ದೂರ ಸಾಗಿದಾಗ ಅವುಗಳ ವೇಗ ಹಾಗೂ ಭೇದಿಸುವ ಸಾಮರ್ಥ್ಯ (Impact Power) ಗಣನೀಯವಾಗಿ ಕಡಿಮೆಯಾಗುತ್ತದೆ.

ಮಾಧ್ಯಮಗಳಲ್ಲಿ  ಪಂಪ್ ಆಕ್ಷನ್ (Pump-Action) ಮತ್ತು ಸ್ಲೈಡ್ ಆಕ್ಷನ್ (Slide-Action) ಶಾಟ್‌ಗನ್‌ ಎಂದು ಹೇಳಲಾಗಿದೆ. ಇವೆರಡೂ ಎರಡೂ ಸಂಪೂರ್ಣವಾಗಿ ಒಂದೇ ಶಾಟ್‌ ಗನ್‌. ‘ಸ್ಲೈಡ್ ಆಕ್ಷನ್’ ಎಂಬುದು ‘ಪಂಪ್ ಆಕ್ಷನ್’ ತಂತ್ರಜ್ಞಾನಕ್ಕೆ ಇರುವ ಮತ್ತೊಂದು ಪರ್ಯಾಯ ಹೆಸರು.ಎರಡೂ ಮಾದರಿಗಳಲ್ಲಿ ಬಂದೂಕಿನ ಕೆಳಭಾಗದಲ್ಲಿರುವ ಫೋರ್-ಎಂಡ್ (Fore-end) ಅಥವಾ ಸ್ಲೈಡರ್ ಅನ್ನು ಕೈಯಿಂದ ಹಿಂದೆ ಮತ್ತು ಮುಂದೆ ಎಳೆಯುವ (ಪಂಪ್ ಮಾಡುವ) ಮೂಲಕ ಖಾಲಿ ಕ್ಯಾಟ್ರಿಡ್ಜ್ ಹೊರಹಾಕಿ, ಹೊಸ ಗುಂಡನ್ನು ಚೇಂಬರ್‌ಗೆ ಲೋಡ್ ಮಾಡಲಾಗುತ್ತದೆ.

​ಯಾಂತ್ರಿಕವಾಗಿ (Mechanically) ಈ ಬಂದೂಕಿನ ಹ್ಯಾಂಡಲ್ ಅನ್ನು ಹಿಂದೆ-ಮುಂದೆ ಚಲಿಸುವುದರಿಂದ ಅದನ್ನು ‘ಸ್ಲೈಡ್ ಆಕ್ಷನ್’ ಎಂದೂ, ಆ ಪ್ರಕ್ರಿಯೆಯು ಪಂಪ್ ಮಾಡಿದಂತೆ ಕಾಣುವುದರಿಂದ ‘ಪಂಪ್ ಆಕ್ಷನ್’ ಎಂದೂ ಕರೆಯಲಾಗುತ್ತದೆ.ಆದ್ದರಿಂದ ಇವೆರಡೂ ಒಂದೇ ತಂತ್ರಜ್ಞಾನ ಹಾಗೂ ಕಾರ್ಯವಿಧಾನವನ್ನು ಹೊಂದಿರುವ ಶಾಟ್‌ಗನ್‌ಗಳಾಗಿವೆ.

ಬೇಟೆಗಾರರ ಬಳಿಯಿದ್ದ ನಾಡಬಂದೂಕುಗಳು

ಬೇಟೆಗಾರರು ಬಳಸಿರುವುದು ಸಹ ಶಕ್ತಿಶಾಲಿ ಬಂದೂಕು:

ಎನ್‌ ಕೌಂಟರಿನಿಂದ ಸಾವಿಗೀಡಾದವರ ಬಳಿ ಇದ್ದಿದ್ದು ಸಾಂಪ್ರದಾಯಿಕ ಮಾದರಿಯ ನಾಡ ಬಂದೂಕುಗಳು. ಇವುಗಳನ್ನು ವ್ಯವಸ್ಥಿತವಾದ ಆಯುಧ ತಯಾರಿಕಾ ಕಾರ್ಖಾನೆಗಳಲ್ಲಿ ತಯಾರಿಸುವುದಿಲ್ಲ. ಸ್ಥಳೀಯ ನುರಿತ ಕಮ್ಮಾರರು ಕುಲುಮೆ ಮತ್ತು ಸ್ಥಳೀಯವಾಗಿ ಲಭ್ಯವಿರುವ ಗುಣಮಟ್ಟದಲ್ಲದ ಪರಿಕರಗಳನ್ನು ಬಳಸಿ ಇವುಗಳನ್ನು ತಯಾರಿಸುತ್ತಾರೆ. ಹೀಗಾಗಿ ಅವುಗಳನ್ನು ಕಂಟ್ರಿ ಮೇಡ್ ಮಜ್ಲ್ ಲೋಡಿಂಗ್ ಗನ್ (Muzzle-Loading Guns) ಅಥವಾ ಸ್ಥಳೀಯವಾಗಿ ಕರೆಯಲಾಗುವ ನಾಡ ಬಂದೂಕುಗಳು (Single Barrel Muzzle Loader – SBML) ಎಂದು ಹೇಳಲಾಗುತ್ತದೆ

​Muzzle-Loader Gun ಅಂದರೆ ಮುಂಭಾಗದಿಂದ ಮದ್ದು ತುಂಬುವ ಬಂದೂಕು.  ಆಧುನಿಕ ಬಂದೂಕುಗಳಂತೆ ಹಿಂಭಾಗದಿಂದ (Breech) ಕ್ಯಾಟ್ರಿಡ್ಜ್ ಅಥವಾ ಗುಂಡು (Bullet) ತುಂಬಲು ಸಾಧ್ಯವಿಲ್ಲ. ನಳಿಕೆಯ ಮುಂಭಾಗದ ತುದಿಯಿಂದಲೇ ಮದ್ದು ಮತ್ತು ಗುಂಡುಗಳನ್ನು ತುಂಬಬೇಕಾಗುತ್ತದೆ. ಒಮ್ಮೆ ಮದ್ದು ತುಂಬಿ ಫೈರ್ ಮಾಡಿದ ನಂತರ, ಮತ್ತೆ ಶೂಟ್ ಮಾಡಲು ಮರು-ಲೋಡ್ (Reload) ಮಾಡಬೇಕು. ಎರಡನೇ ಬಾರಿಗೆ ಲೋಡ್ ಮಾಡಲು ಸಾಕಷ್ಟು ಸಮಯ ಬೇಕಾಗುತ್ತದೆ.

​ಈ ಬಂದೂಕುಗಳಲ್ಲಿ ಟ್ರಿಗರ್ ಎಳೆದಾಗ ಹ್ಯಾಮರ್ (ಸುರಿಗೆ) ಹೋಗಿ ಸಣ್ಣ ‘ಕ್ಯಾಪ್’ (ತೋಟಾ/ಪಟಾಕಿ ಮಾದರಿಯ ಕ್ಯಾಪ್) ಮೇಲೆ ಹೊಡೆಯುತ್ತದೆ. ಅದರಿಂದ ಬರುವ ಕಿಡಿ ಒಳಗಿನ ಕಪ್ಪು ಮದ್ದಿಗೆ (Black Powder) ಬೆಂಕಿ ತಗುಲಿಸುತ್ತದೆ. ಇವುಗಳಲ್ಲಿ ರೈಫ್ಲಿಂಗ್ (ಬ್ಯಾರೆಲ್ ಒಳಗಿನ ಸುರುಳಿ ಗೆರೆಗಳು) ಇರುವುದಿಲ್ಲ (Smoothbore). ಹಾಗಾಗಿ ಇವುಗಳ ಗುರಿ ನಿಖರವಾಗಿರುವುದಿಲ್ಲ ಮತ್ತು ಕಡಿಮೆ ದೂರಕ್ಕೆ ಮಾತ್ರ (ಸಾಮಾನ್ಯವಾಗಿ 30-50 ಮೀಟರ್) ಪರಿಣಾಮಕಾರಿ.

​ಬ್ಯಾರೆಲ್‌ನ ಮುಂಭಾಗದಿಂದ (Muzzle) ಅಗತ್ಯವಿರುವಷ್ಟು ಕಪ್ಪು ಮದ್ದನ್ನು (Black Powder) ಒಳಗೆ ಹಾಕಲಾಗುತ್ತದೆ.ಮದ್ದು ಹೊರಗೆ ಬರದಂತೆ ಮತ್ತು ಗಟ್ಟಿಯಾಗಿ ಹಿಡಿದಿಡಲು ಹತ್ತಿ, ಬಟ್ಟೆ ಅಥವಾ ತೆಂಗಿನ ನಾರನ್ನು ಹಾಕಿ ರಾಮ್‌ರಾಡ್ (Ramrod) ಎಂಬ ಕಬ್ಬಿಣದ ಕಡ್ಡಣಿಯಿಂದ ಬ್ಯಾರೆಲ್ ಒಳಗೆ ಗಟ್ಟಿಯಾಗಿ ತಳ್ಳಲಾಗುತ್ತದೆ ​ಗುಂಡು/ಛರ್ರೆ ಹಾಕುವುದು: ಆ ನಂತರ ಕಬ್ಬಿಣದ ಸಣ್ಣ ಛರ್ರೆಗಳು (Lead Pellets) ಅಥವಾ ಕಬ್ಬಿಣದ ಗೋಲಿಗಳನ್ನು ಹಾಕಲಾಗುತ್ತದೆ. ಅದರ ಮೇಲೆಯೂ ಬಟ್ಟೆ/ಹತ್ತಿ ಹಾಕಿ ಕಡ್ಡಣಿಯಿಂದ ಚಚ್ಚಿ ಗಟ್ಟಿಗೊಳಿಸಲಾಗುತ್ತದೆ. ಬಂದೂಕಿನ ಹಿಂಭಾಗದ ನಿಪ್ಪಲ್ (Nipple) ಮೇಲೆ ಕಿಡಿ ಬರಿಸುವ ಸಣ್ಣ ಕ್ಯಾಪ್ ಇಡಲಾಗುತ್ತದೆ. ಟ್ರಿಗರ್ ಎಳೆದಾಗ ಹ್ಯಾಮರ್ ಕ್ಯಾಪ್‌ಗೆ ಹೊಡೆದು ಕಿಡಿ ಉತ್ಪತ್ತಿಯಾಗಿ, ಬ್ಯಾರೆಲ್‌ನಲ್ಲಿರುವ ಮದ್ದು ಸ್ಫೋಟಗೊಂಡು ಛರ್ರೆಗಳು ಹೊರಬರುತ್ತವೆ. ಸಾಮಾನ್ಯವಾಗಿ ಈ ಮಾದರಿಯ ಬಂದೂಕುಗಳನ್ನು ಕಾಡಿನಲ್ಲಿ ವನ್ಯಜೀವಿಗಳ ಬೇಟೆಗೆ ಹಾಗೂ ಅರಣ್ಯ ಸಿಬ್ಬಂದಿ,  ಪೊಲೀಸರ ವಿರುದ್ಧ ಕಾನೂನುಬಾಹಿರವಾಗಿ ಬಳಸಲಾಗುತ್ತದೆ. ಸಮಾಜಘಾತುಕ ಕೃತ್ಯಗಳನ್ನು ಮಾಡುವವರು ಸಹ ಬಳಸುತ್ತಾರೆ.

ಈ ನಾಡ ಬಂದೂಕುಗಳು ಬಹು ಶಕ್ತಿಯುತ. ೧೦೦ ಅಡಿ ಅಂತರದಿಂದ ಫೈರ್‌ ಮಾಡಿದರೆ ಕಾಟಿ ಅಂದರೆ ಕಾಡೆಮ್ಮೆಯಂಥ ಬೃಹತ್‌ ದೇಹಿ ನೆಲಕ್ಕೆ ಉರುಳಿ ಸಾವನ್ನಪ್ಪುತ್ತದೆ. ಅಂದು ಶಾಗ್ಯದಲ್ಲಿ ಹೊಳೆಮರದಟ್ಟಿ ಕಳ್ಳಬೇಟೆ ತಡೆ ಶಿಬಿರ ಸಮೀಪ ನಡೆದ ಎನ್‌ ಕೌಂಟರಿನಲ್ಲಿ ಬೇಟೆಗಾರರ ಬಂದೂಕಿನಿಂದ ಆದ ಫೈರ್‌ ಗುರಿ ತಪ್ಪದಿದ್ದರೆ ಅರಣ್ಯ ಇಲಾಖೆಯ ನೌಕರರು ಸಾವನ್ನಪ್ಪುತ್ತಿದ್ದರು. ಅದೃಷ್ಟವಶಾತ್‌ ಬಚಾವ್‌ ಆಗಿದ್ದಾರೆ.

You may also like

Leave a Comment

error: Content is protected !!