ವನ್ಯಜೀವನ

ಕಾಡುಕೋಣಗಳ ಸ್ಥಳಾಂತರ ಅವೈಜ್ಞಾನಿಕ ಅಪಾಯಕಾರಿ

ಇತ್ತೀಚೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಕುಶಾಲನಗರ ಸನಿಹದ ದುಬಾರೆಯಲ್ಲಿ ತೂಗು ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದರು. “ವನ್ಯಜೀವಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಜನರ ಅಮೂಲ್ಯ ಜೀವ, ಬೆಳೆ ಹಾನಿ ತಪ್ಪಿಸಲು ಆಯ್ದ ಪ್ರದೇಶದಲ್ಲಿ, ಆಯ್ದ ವನ್ಯಜೀವಿಗಳ ಸಂತಾನ ನಿಯಂತ್ರಣದ ಸಲಹೆಗಳು ಬಂದಿವೆ. ಈ ಬಗ್ಗೆ ಸಾರ್ವಜನಿಕವಾಗಿ ತಜ್ಞರ ಮಟ್ಟದಲ್ಲಿ ಚರ್ಚೆ ಆಗುವ ಅಗತ್ಯವಿದೆ “ ಎಂದರು.
ಮೇಲ್ನೋಟ್ಟದಲ್ಲಿಯೇ ಇದು ಅರಣ್ಯಾಧಿಕಾರಿಗಳು ಹೇಳಿಕೊಟ್ಟ ಹೇಳಿಕೆಯ ಪುನುರುಚ್ಚಾರ ಎನಿಸುವುದಿಲ್ಲವೇ ? ಯಾವ ಆಧಾರದಲ್ಲಿ ವನ್ಯಪ್ರಾಣಿಗಳ ಸಂಖ್ಯೆ ಹೆಚ್ಚಾಗಿದೆ ಎಂದರು ? ಇಂತಿಷ್ಟು ಜನಸಂಖ್ಯೆಗೆ ಇಂತಿಷ್ಟೆ ವನ್ಯಪ್ರಾಣಿ ಇರಬೇಕೆಂಬ ನಿಯಮವೇನಾದರೂ ಇದೆಯೇ ? ಎಲ್ಲಿ ನೋಡಿರದರಲ್ಲಿ ಮನುಷ್ಯರೇ ತುಂಬಿರುವಾಗ ಅಪರೂಪಕ್ಕೆ ಕಾಣುವ ಕಾಡುಪ್ರಾಣಿಗಳ ಸಂಖ್ಯೆ ಹೆಚ್ಚಿದೆ ಎನಿಸುವುದು ಸಹಜ ತಾನೇ ?
ಈಗ ಚಿಕ್ಕಮಗಳೂರು ಜಿಲ್ಲೆಗೆ ಬರೋಣ. ಅರಣ್ಯ ಇಲಾಖೆ ಇಲ್ಲಿನ ಕೊಪ್ಪದಲ್ಲಿ ಕಂಡ ಕಾಡುಕೋಣಗಳನ್ನು ಹಿಡಿದು ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸುವ ಕಾರ್ಯ ಕೈಗೊಂಡಿದೆ. ಇದು ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ನಡೆಯುತ್ತಿರುವ ವೈಜ್ಞಾನಿಕ ಕಾಡುಕೋಣಗಳ ಸ್ಥಳಾಂತರ ಯೋಜನೆ ಎಂದು ತನ್ನ ಬೆನ್ನು ತಾನೇ ತಟ್ಟಿಕೊಂಡಿದೆ. ಕಾಡುಕೋಣಗಳು ಕಾಫಿ ತೋಟ ಮತ್ತು ಜನವಸತಿ ಪ್ರದೇಶಗಳಿಗೆ ನುಗ್ಗಿ ಹಾನಿ ಉಂಟುಮಾಡುತ್ತಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಒಕ್ಕಣೆ ಬೇರೆ ಇದೆ. ಈ ಕಾಡುಕೋಣಗಳು ಎಲ್ಲಿಂದ ಬಂದವು ? ಇಷ್ಟು ಎಲ್ಲಿದ್ದವು, ಇವುಗಳನ್ನು ಸ್ಥಳಾಂತರಿಸಿದರೆ ಆಗುವ ಪರಿಣಾಮಗಳೇನು ? ಇದ್ಯಾವುದನ್ನು ಅರಣ್ಯ ಇಲಾಖೆ ಯೋಚಿಸಿಯೇ ಇಲ್ಲ. ಕಾಫಿತೋಟಗಳಿಗೆ ಹಾನಿ ಆಗುತ್ತಿದೆ ಎಂಬುದಷ್ಟೇ ಇಲಾಖೆ ಆತಂಕ ! ಆ ಕಾಫಿತೋಟಗಳು ಅರಣ್ಯದ ಒತ್ತುವರಿಗಳಾಗಿರಬಾರದೇಕೆ ಎಂದು ಆಲೋಚಿಸಿ, ಪರಿಶೀಲಿಸುವ ಗೋಜಿಗೂ ಹೋಗಿಲ್ಲ !
ಕಾಡುಕೋಣಗಳ (ಗೌರ್ ಅಥವಾ ಕಾಟಿ) ಸ್ಥಳಾಂತರವು ಪರಿಸರ ವಿಜ್ಞಾನ ಮತ್ತು ವನ್ಯಜೀವಿ ನಿರ್ವಹಣೆಯ ದೃಷ್ಟಿಯಿಂದ ಅತ್ಯಂತ ಸಂಕೀರ್ಣವಾದ ವಿಷಯ ! ಯಾವುದೇ ಒಂದು ನಿರ್ದಿಷ್ಟ ವನ್ಯಜೀವಿ ಸಮಸ್ಯೆಗೆ ಸ್ಥಳಾಂತರ (Translocation) ಕೊನೆಯ ಆಯ್ಕೆಯಾಗಿರಬೇಕೇ ಹೊರತು, ಮೊದಲ ಪರಿಹಾರವಾಗಬಾರದು ಎಂಬುದು ಬಹುತೇಕ ವನ್ಯಜೀವಿ ವಿಜ್ಞಾನಿಗಳ ಅಭಿಪ್ರಾಯ. ಆದರೆ ಅರಣ್ಯ ಇಲಾಖೆಗೆ ಇದೇ ಕೊನೆಯ ಪರಿಹಾರ ಆಗಿರುವುದು ಏಕೆ ?
ಸ್ಥಳಾಂತರವು ತಪ್ಪು ಎನ್ನಲು ವೈಜ್ಞಾನಿಕ ಕಾರಣಗಳಿವೆ. ವನ್ಯಜೀವಿ ವಿಜ್ಞಾನದ ಪ್ರಕಾರ, ವನ್ಯಪ್ರಾಣಿಗಳನ್ನು ಅವುಗಳ ಮೂಲ ಆವಾಸಸ್ಥಾನದಿಂದ ಮತ್ತೊಂದು ಕಡೆಗೆ ಸ್ಥಳಾಂತರಿಸುವುದು ತಾತ್ಕಾಲಿಕ ಉಪಶಮನವಷ್ಟೇ, ಅದರಿಂದ ದೀರ್ಘಕಾಲೀನ ಪ್ರಯೋಜನಗಳಿಗಿಂತ ನಷ್ಟವೇ ಹೆಚ್ಚು. ಏಕೆಂದರೆ ಮೂಲಭೂತವಾಗಿ ಅವುಗಳಿಗೆ ಇರುವ ಸ್ಥಳೀಯ ಜ್ಞಾನದ ನಷ್ಟ (Loss of Homing Instinct & Territory) ಉಂಟಾಗುತ್ತದೆ.
ಕಾಡುಕೋಣಗಳು ತಮ್ಮ ಆವಾಸಸ್ಥಾನದ ಭೌಗೋಳಿಕತೆ, ನೀರಿನ ಮೂಲಗಳು ಮತ್ತು ಆಹಾರ ಸಿಗುವ ಜಾಗಗಳ ಬಗ್ಗೆ ಸಂಪೂರ್ಣ ಜ್ಞಾನ ಹೊಂದಿರುತ್ತವೆ. ಅವುಗಳನ್ನು ಅಪರಿಚಿತ ಕಾಡಿಗೆ ಬಿಟ್ಟಾಗ, ಅವು ದಿಗಿಲುಗೊಂಡು (Disorientation) ಮತ್ತೆ ತಮ್ಮ ಹಳೆಯ ಜಾಗಕ್ಕೆ ಬರಲು ಯತ್ನಿಸುತ್ತವೆ. ಈ ಪ್ರಕ್ರಿಯೆಯಲ್ಲಿ ಅವು ಕಾಡಿನಿಂದ ಹೊರಬಂದು ಹೆದ್ದಾರಿಗಳು ಅಥವಾ ಹೊಸ ಹಳ್ಳಿಗಳಿಗೆ ನುಗ್ಗಿ ಮತ್ತಷ್ಟು ಸಂಘರ್ಷಕ್ಕೆ ಕಾರಣವಾಗುತ್ತವೆ.
ಕಾಡುಕೋಣಗಳಂತಹ ಬೃಹತ್ ಪ್ರಾಣಿಗಳಿಗೆ ಅರಿವಳಿಕೆ (Anesthesia) ನೀಡಿ, ಸೆರೆಹಿಡಿದು, ಲಾರಿಯಲ್ಲಿ ಸಾಗಿಸುವುದು ಅವುಗಳಲ್ಲಿ ತೀವ್ರ ಮಾನಸಿಕ ಮತ್ತು ದೈಹಿಕ ಒತ್ತಡವನ್ನು ಉಂಟುಮಾಡುತ್ತದೆ. ವಿಜ್ಞಾನದಲ್ಲಿ ಇದನ್ನು *’ಕ್ಯಾಪ್ಚರ್ ಮಯೋಪತಿ’* ಎನ್ನಲಾಗುತ್ತದೆ. ಈ ಒತ್ತಡದಿಂದಾಗಿ ಪ್ರಾಣಿಗಳು ಹೃದಯಾಘಾತದಿಂದ ಅಥವಾ ಸ್ಥಳಾಂತರಗೊಂಡ ಕೆಲವು ದಿನಗಳಲ್ಲೇ ಸಾವನ್ನಪ್ಪುವ ಸಾಧ್ಯತೆ ಅತ್ಯಧಿಕ. ಇಂಥ ದುರ್ಘಟನೆಗಳು ನಡೆದಿವೆ.
ಒಂದು ಕಾಡಿಗೆ ಅಲ್ಲಿನ ಪರಿಸರ ವ್ಯವಸ್ಥೆ ಸಾಕಬಹುದಾದಷ್ಟೇ ಪ್ರಾಣಿಗಳನ್ನು ಹೊರುವ ಸಾಮರ್ಥ್ಯವಿರುತ್ತದೆ (Carrying Capacity). ಈಗಾಗಲೇ ಕಾಡುಕೋಣಗಳಿರುವ ಭದ್ರಾ ಅಥವಾ ಇತರ ಅಭಯಾರಣ್ಯಗಳಿಗೆ ಕೊಪ್ಪದಿಂದ ತಂದ ಕಾಡುಕೋಣಗಳನ್ನು ಬಿಟ್ಟರೆ, ಅಲ್ಲಿ ಸಂಪನ್ಮೂಲಗಳಿಗಾಗಿ (ಆಹಾರ ಮತ್ತು ಜಾಗ) ಸ್ಥಳೀಯ ಪ್ರಾಣಿಗಳು ಮತ್ತು ಹೊಸದಾಗಿ ಬಂದ ಪ್ರಾಣಿಗಳ ನಡುವೆ ಸಂಘರ್ಷ ಶುರುವಾಗುತ್ತದೆ. ಇದರ ಜೊತೆಗೆ ಒಂದು ವಲಯದ ಪ್ರಾಣಿಗಳಲ್ಲಿರುವ ಸೂಕ್ಷ್ಮಾಣು ಜೀವಿಗಳು ಅಥವಾ ರೋಗಗಳು, ಸ್ಥಳಾಂತರದ ಮೂಲಕ ಮತ್ತೊಂದು ವಲಯದ ಆರೋಗ್ಯವಂತ ವನ್ಯಜೀವಿಗಳಿಗೆ ಹರಡುವ ಅಪಾಯವಿರುತ್ತದೆ.
ವನ್ಯಪ್ರಾಣಿಗಳು ನಾಡಿಗೆ ಬರಲು ಅನೇಕ ಕಾರಣಗಳಿವೆ. ಮುಖ್ಯವಾಗಿ ಕಾಡಿನ ಒತ್ತುವರಿ, ಕಾರಿಡಾರ್ಗಳ ನಾಶ ಮತ್ತು ಕಾಡಿನಲ್ಲಿ ಲಂಟಾನಾದಂತಹ ಕಳೆಗಿಡಗಳು ಬೆಳೆದು ಆಹಾರದ ಕೊರತೆಯಾಗಿರುವುದು ಮುಖ್ಯ ಕಾರಣ. ಪ್ರಾಣಿಗಳನ್ನು ಸ್ಥಳಾಂತರಿಸುವುದರಿಂದ ಈ ಮೂಲ ಸಮಸ್ಯೆಗಳು ಬಗೆಹರಿಯುವುದಿಲ್ಲ. ಖಾಲಿಯಾದ ಜಾಗಕ್ಕೆ ಪಕ್ಕದ ಕಾಡಿನಿಂದ ಮತ್ತೊಂದು ಹಿಂಡು ಬಂದು ಸೇರಿಕೊಳ್ಳುತ್ತದೆ.
ವನ್ಯಜೀವಿ ಸಂರಕ್ಷಣಾ ನಿಯಮಾವಳಿಗಳ ಪ್ರಕಾರ, ಸ್ಥಳಾಂತರವನ್ನು ಅತ್ಯಂತ ವಿರಳ ಮತ್ತು ವೈಜ್ಞಾನಿಕವಾಗಿ ಯೋಜಿತ ಸಂದರ್ಭಗಳಲ್ಲಿ ಮಾತ್ರ ಮಾಡಬೇಕು. ಪ್ರಭೇದಗಳ ಪುನರುಜ್ಜೀವನ (Reintroduction) ಸಂದರ್ಭದಲ್ಲಿ ಮಾಡಬಹುದು. ಮಧ್ಯಪ್ರದೇಶದ ಬಾಂಧವಗಡದಲ್ಲಿ ಕಾಡುಕೋಣಗಳು ಸಂಪೂರ್ಣವಾಗಿ ಅಳಿದುಹೋಗಿದ್ದಾಗ, ಕನ್ಹಾ ರಾಷ್ಟ್ರೀಯ ಉದ್ಯಾನವನದಿಂದ ವೈಜ್ಞಾನಿಕವಾಗಿ ಕಾಡುಕೋಣಗಳನ್ನು ತಂದು ಬಿಡಲಾಯಿತು. ಇದು ಯಶಸ್ವಿ ಪ್ರಯೋಗ.
ಪ್ರಸ್ತುತ ಮಲೆನಾಡು ಭಾಗದಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ವನ್ಯಪ್ರಾಣಿಗಳನ್ನು ಸ್ಥಳಾಂತರಿಸುವುದು ಶಾಶ್ವತ ಪರಿಹಾರವಲ್ಲ. ಇದರ ಬದಲು ಅರಣ್ಯ ಒತ್ತುವರಿಯನ್ನು ಕಟ್ಟುನಿಟ್ಟಾಗಿ ತೆರವುಗೊಳಿಸುವುದು.ವನ್ಯಜೀವಿ ಕಾರಿಡಾರ್ಗಳನ್ನು ಪುನಃಸ್ಥಾಪಿಸುವುದು. ಕಾಡಿನೊಳಗೆ ಸ್ವಾಭಾವಿಕ ಹುಲ್ಲುಗಾವಲುಗಳನ್ನು ಬೆಳೆಸಿ, ಕಳೆಗಿಡಗಳನ್ನು ನಾಶಪಡಿಸುವುದು. ಈ ಕಾರ್ಯಗಳನ್ನು ಮಾಡುವುದರತ್ತ ಅರಣ್ಯ ಇಲಾಖೆ ಗಮನ ಹರಿಸಬೇಕು. ಇದರ ಬದಲು ಕಾಡೆಮ್ಮೆ – ಕೋಣಗಳನ್ನು ಲಾರಿಯಲ್ಲಿ ತುಂಬಿ ಸಾಗಿಸುವುದರಿಂದ ಸಮಸ್ಯೆ ಒಂದು ಕಾಡಿನಿಂದ ಮತ್ತೊಂದು ಕಾಡಿಗೆ ವರ್ಗಾವಣೆಯಾಗುತ್ತದೆಯೇ ಹೊರತು ಬಗೆಹರಿಯುವುದಿಲ್ಲ.

ಚಿತ್ರಕೃಪೆ: ಅಂತರ್ಜಾಲ

Leave a Reply

Your email address will not be published. Required fields are marked *

error: Content is protected !!