ವನ್ಯಜೀವನ

ಅರಣ್ಯ ಸಚಿವರೇ ಇಲಾಖೆಯು ಬುದ್ದಿ ಕಲಿಯಲು ಅನಾಹುತವೇ ಆಗಬೇಕೇ

ಕರ್ನಾಟಕ ಅರಣ್ಯ ಇಲಾಖೆಯ ನಡವಳಿಕೆಗಳನ್ನು ಗಮನಿಸಿದಾಗ ಅನಾಹುತ ಅದರಲ್ಲಿಯೂ ಭಾರೀ ಅನಾಹುತ ಆದ ಮೇಲೆಯೇ ಬುದ್ದಿ ಕಲಿತಂತೆ ನಟಿಸುವುದು ತಿಳಿಯುತ್ತದೆ. ಸಾರ್ವಜನಿಕರ ನೆನಪಿನ ಶಕ್ತಿ ಕಡಿಮೆ ಎಂದು ಅರಿತಿರುವ ಇಲಾಖೆ ಮತ್ತದೇ ಹಳೆಯ ಚಾಳಿ ಮುಂದುವರಿಸುತ್ತದೆ. ಇದಕ್ಕೆ ಸೇರ್ಪಡೆ ದುಬಾರೆ ಅನಾಹುತ !

ಮೇ ೧೮, ೨೦೨೬. ದುಬಾರೆಯಲ್ಲಿ ಪ್ರವಾಸಿಗರ ಪಾಲಿಗೆ ಈ ದಿನ ಎಂದಿನ ಸಾಮಾನ್ಯ ದಿನಗಳಂತೆ ಆಗಲಿಲ್ಲ. ಇಂದು ಬೆಳಗ್ಗೆ ಮಾವುತರು ಸಾಕಾನೆಗಳಿಗೆ ಕಾವೇರಿನದಿಯಲ್ಲಿ ಸ್ನಾನ ಮಾಡಿಸುತ್ತಿದ್ದರು. ಆನೆಗಳಿಗೆ ಸ್ನಾನ ಮಾಡಿಸುವ ಸಲುವಾಗಿಯೇ ದುಬಾರೆಯಲ್ಲಿ ದುಬಾರಿ ಬೆಲೆಯ ಟಿಕೇಟ್‌ ಖರೀದಿಸಿದ ಪ್ರವಾಸಿಗರು ಸಹ ಆನೆಗಳ ಮೈ ಉಜ್ಜುವುದು, ನೀರೆರೆಚುವುದರಲ್ಲಿ ತೊಡಗಿಸಿಕೊಂಡಿದ್ದರು. ಆಗ

ಇದಕ್ಕಿದ್ದಂತೆ ಕಂಜನ್‌ ಆನೆ ಕೆರಳಿದೆ. ಸನಿಹದಲ್ಲಿಯೇ ಇದ್ದ ಮಾರ್ತಾಂಡ ಆನೆಯ ಮೇಲೆ ಮುಗಿ ಬಿದ್ದಿದೆ. ಇದು ಗುದ್ದಿದ ರಭಸಕ್ಕೆ ಮಾರ್ತಾಂಡ ಕೆಳಗೆ ಬಿದ್ದಿದೆ. ಸನಿಹದಲ್ಲಿಯೇ ಇದ್ದ ತಮಿಳುನಾಡಿನಿಂದ ಬಂದಿದ್ದ ಪ್ರವಾಸಿ ಮಹಿಳೆ ತುಳಸಿ (೩೩ ವರ್ಷ) ಆನೆ ಕೆಳಗೆ ಸಿಲುಕಿದ್ದಾರೆ. ಕೋಪೋದ್ರಿಕ್ತ ಕಂಜನ್‌ ಆನೆ, ಮಾರ್ತಾಂಡ ಆನೆಯ ಮೇಲೆ ಬಿದ್ದು ದಂತಗಳಿಂದ ಹೊಸಕಿ ಹಾಕಿದೆ. ಸರಿ ಸುಮಾರು ಆರು ಟನ್‌ (ವಯಸ್ಕ ಆನೆ ೩ ರಿಂದ ೬ ಟನ್‌ ತೂಗುತ್ತದೆ) ತೂಕವಿರುವ ಆನೆ ಮೇಲೆ ಮತ್ತೊಂದಾನೆ ಬಿದ್ದಾಗ ಕೆಳಗೆ ಸಿಲುಕಿದವರು ಬದುಕಲು ಸಾಧ್ಯವೇ ?

ಸ್ಥಳದಲ್ಲಿಯೇ ತುಳಸಿ ಸಾವನ್ನಪ್ಪಿದ್ದಾರೆ. ಮಗುವನ್ನೆತ್ತಿಕೊಂಡಿದ್ದ ಆಕೆಯ ಪತಿಯು ಪತ್ನಿಯನ್ನು ಎಳೆಯಲು ಯತ್ನಿಸಿದ್ದಾರೆ. ಮಾವುತರು, ಕಾವಾಡಿಗಳು ಕಲ್ಲು ಬೀಸಿದರೂ ಕಂಜನ್‌ ರೋಷ ಕಡಿಮೆಯಾಗಿಲ್ಲ. ಈ ಸಮಯದಲ್ಲಿ ಕಂಜನ್‌ ಸೊಂಡಿಲು ಬೀಸಿದ್ದರೂ ತುಳಸಿ ಅವರ ಪತಿ, ಮಗು ಬದುಕುಳಿಯುವುದು ಸಾಧ್ಯವಿರಲಿಲ್ಲ. ಕಂಜನ್‌ ತನ್ನ ಸಂಪೂರ್ಣ ಗಮನವನ್ನು ಮಾರ್ತಾಂಡನತ್ತ ಕೇಂದ್ರೀಕರಿಸಿದ್ದರಿಂದ ಅವರಿಬ್ಬರೂ ಅದೃಷ್ಟವಶಾತ್‌ ಬದುಕುಳಿದ್ದಿದ್ದಾರೆ.

ಕಂಜನ್‌ ಆನೆ ಪದೇಪದೇ ಕೆರಳುವುದು,ಅಕ್ಕಪಕ್ಕದ ಆನೆಗಳ ಮೇಲೆ ದಾಳಿ ಮಾಡಿದ ಉದಾಹರಣೆಗಳಿವೆ. ಇಂಥ ಆನೆಗಳನ್ನು ಸಾರ್ವಜನಿಕರು ಇರುವ ಸ್ಥಳಗಳತ್ತ ಬಿಡುವುದು ಅಪಾಯಕಾರಿ. ಆದರೂ ಅರಣ್ಯಾಧಿಕಾರಿಗಳು ದಸರಾದಲ್ಲಿಯೂ ಭಾಗವಹಿಸಲು ಬಿಡುತ್ತಿದ್ದಾರೆ. ದುಬಾರೆಯಲ್ಲಿ ಪ್ರವಾಸಿಗರು ಸ್ನಾನ ಮಾಡಿಸಲು ಅವಕಾಶ ನೀಡಿದ್ದಾರೆ.

dubare elephant kanjan

ಕಂಜನ್‌ ಆಗಲಿ ಯಾವುದೇ ಆನೆಯೇ ಆಗಲಿ ಸಾರ್ವಜನಿಕರು ಅವುಗಳ ಮೈ ಮುಟ್ಟಲು, ಹತ್ತಿರ ಹೋಗಲು ಅವಕಾಶ ನೀಡುವುದೇ ತಪ್ಪು. ಆನೆಗಳು ಸಾಕಿದ ಮಾವುತರು, ಕಾವಾಡಿಗಳ ಮೇಲೆಯೇ ಚಾರ್ಜ್‌ ಮಾಡಿ ಸಾಯಿಸಿರುವ ಉದಾಹರಣೆಗಳಿವೆ.

ಹೀಗಿರುವಾಗ ಪ್ರವಾಸಿಗರು ದುಬಾರಿ (ಒಂದು ಟಿಕೇಟಿಗೆ ೩೦೦ ರೂಪಾಯಿ) ಟಿಕೇಟ್‌ ಖರೀದಿಸಿ ಸಾಕಾನೆಗೆ ಸ್ನಾನ ಮಾಡಿಸಬಹುದು ಎಂಬ ಪರಿಕಲ್ಪನೆಯೇ ಅನಾಹುತಕಾರಿ ಹಾಗೂ ಅಪಾಯಕಾರಿ. ಇಂಥ ಪರಿಕಲ್ಪನೆ ಮುಂದಿಟ್ಟ ಅರಣ್ಯಾಧಿಕಾರಿ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುವುದು ಸರ್ಕಾರದ ಕರ್ತವ್ಯ.

ಎಂದಿನಂತೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ತಿಪ್ಪೆ ಸಾರಿಸಿದ್ದಾರೆ. “ಆನೆಗಳು ಸೇರಿದಂತೆ ವನ್ಯಜೀವಿಗಳನ್ನು ಎಷ್ಟೇ ಪಳಗಿಸಿದ್ದರೂ, ಪ್ರಾಣಿಗಳ ಸ್ವಭಾವವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟಸಾಧ್ಯವಾಗಿದ್ದು, ಅವು ಯಾವಾಗ ಯಾವ ರೀತಿ ವರ್ತಿಸುತ್ತವೆ ಎಂದು ಊಹಿಸುವುದೂ ಕಷ್ಟವಾಗುತ್ತದೆ. ಹೀಗಾಗಿ ಆನೆಗಳ ಸೊಂಡಿಲು ಮುಟ್ಟುವುದು, ಪಕ್ಕದಲ್ಲಿ ನಿಂತು ಫೋಟೋ ತೆಗೆಸಿಕೊಳ್ಳುವುದು, ಪ್ರವಾಸಿಗರಿಗೆ ಆನೆ ಮೈ ತೊಳೆಯಲು ಅವಕಾಶ ನೀಡುವುದು, ಅವರಿಂದ ಬೆಲ್ಲ, ಬಾಳೆಹಣ್ಣು ಇತ್ಯಾದಿ ಆಹಾರ ತಿನ್ನಿಸುವುದನ್ನು ನಿರ್ಬಂಧಿಸಲು ಕ್ರಮ ವಹಿಸುವಂತೆ ಮತ್ತು ವನ್ಯಜೀವಿಗಳಿಂದ ಪ್ರವಾಸಿಗರು ನಿರ್ದಿಷ್ಟ ಅಂತರ ಕಾಯ್ದುಕೊಳ್ಳುವಂತೆ ಕ್ರಮ ವಹಿಸುವಂತೆ ಸೂಚಿಸಿದ್ದಾರೆ.

ಈ ಸೂಚನೆಯನ್ನು ಮುಂಚಿತವಾಗಿ ನೀಡಿದ್ದರೆ ಅಮೂಲ್ಯ ಜೀವ ಉಳಿಯುತ್ತಿತ್ತು. ಸಫಾರಿ ಸಮಯದಲ್ಲಿ ಕಾಡಾನೆಗಳು ಪ್ರವಾಸಿಗರು ಇರುವ ವಾಹನಗಳ ಮೇಲೆ ಚಾರ್ಜ್‌ ಮಾಡಲು ಮುನ್ನುಗಿದ ಉದಾಹರಣೆಗಳಿವೆ. ಆದ್ದರಿಂದ ಸಫಾರಿಯನ್ನೂ ಸ್ಥಗಿತಗೊಳಿಸಬೇಕು. ಆಗ ಸಾವುನೋವು ಉಂಟಾದರೆ ಅರಣ್ಯ ಸಚಿವರು ತಿಪ್ಪೆ ಸಾರಿಸುವುದು ತಪ್ಪುತ್ತದೆ.

ಮುಖ್ಯವಾಗಿ ಮಾವುತರ ಮಾತು ಆಲಿಸದೇ ಕಂಜನ್‌ ಆನೆಯನ್ನು ಪ್ರವಾಸಿಗರು ಇರುವ ಸ್ಥಳದತ್ತ ಕರೆದುಕೊಂಡು ಹೋಗಲು ಅವಕಾಶ ನೀಡಿದ ಅರಣ್ಯಾಧಿಕಾರಿ ವಿರುದ್ಧ ಗಂಭೀರ ಶಿಸ್ತು ಕ್ರಮ ಆಗಲೇಬೇಕು. ಕ್ರಮ ಜರುಗಿಸುತ್ತೀರಾ ಅರಣ್ಯ ಸಚಿವರೇ

Leave a Reply

Your email address will not be published. Required fields are marked *

error: Content is protected !!