ಮಹಿಳೆಯ ಭಾವನಾತ್ಮಕ ಸಂಘರ್ಷದ ಸಶಕ್ತ ಚಿತ್ರಣ
ಮೇಸೂನ್ (Maysoon) ಸಿನಿಮಾ, ಜರ್ಮನಿಯ ಬರ್ಲೀನ್ ನಗರದಲ್ಲಿ ನಡೆಯುವ ಕಥಾ ಹಂದರ ಹೊಂದಿದೆ. ಲೀವಿಂಗ್ ಟುಗೆದರ್ ಸಂಬಂಧದಲ್ಲಿ ಪಾಲುದಾರನೊಂದಿಗೆ ಇಬ್ಬರು ಮಕ್ಕಳನ್ನು ಪಡೆದ ಮಹಿಳೆಯ ಭಾವನಾತ್ಮಕ ಸಂಘರ್ಷವನ್ನು ಎಳೆಎಳೆಯಾಗಿ ಚಿತ್ರಿಸಲಾಗಿದೆ.
ಸಿನಿಮಾಗಳ ಸಾಮಾನ್ಯ ಫಾರ್ಮುಲಾದಲ್ಲಿ ವಿಲನ್ ಅಥವಾ ವಿಲನ್ ಗಳು ಇರುತ್ತಾರೆ. ಆದರೆ ಇಲ್ಲಿ ಸನ್ನಿವೇಶಗಳೇ ಖಳನಾಯಕರ ಸ್ಥಾನವನ್ನು ತುಂಬಿರುವುದು ಗಮನಾರ್ಹ ! ಲೀವಿಂಗ್ ಟುಗೆದರ್ ಸಂಬಂಧವೇ ಆದರೂ ಇಬ್ಬರ ನಡುವೆಯೂ ಅಲಿಖಿತ ಒಪ್ಪಂದಗಳಿವೆ. ಇಂಥ ಸಂದರ್ಭದಲ್ಲಿ ಪಾಲುದಾರ ಟೋಬಿಗೆ ಮತ್ತೋರ್ವ ಮಹಿಳೆ ಅದೂ ಆತನ ಬಾಸ್ ಜೊತೆ ದೈಹಿಕ ಸಂಬಂಧವಿದೆ ಎಂಬ ಸಂಗತಿ ತಿಳಿಯುತ್ತಿದ್ದಂತೆ ಬಿರುಗಾಳಿ ಎದ್ದೇಳುತ್ತದೆ.
ಆ ಸುಂಟರಗಾಳಿ ಅವಳೊಂದಿಗೆ ಅವಳ ಜೊತೆಜೊತೆಯಲ್ಲಿಯೇ ಹೆಜ್ಜೆ ಹಾಕತೊಡಗುತ್ತದೆ. ಅವಳ ಹೊರಗೆ ಮತ್ತು ಹೊರಗೆ ನಡೆಯುವ ಸಂಘರ್ಷಗಳನ್ನು ಮನೋಜ್ಞವಾಗಿ ಹೇಳಲಾಗಿದೆ. ಮೂಲತಃ ಈಜಿಪ್ಟ್ ದೇಶದ ಮೇಸೂನ್, ಪುರಾತತ್ವ ಶಾಸ್ತ್ರಜ್ಞೆ. ಬರ್ಲೀನ್ ನಗರದ ಮ್ಯೂಸಿಯಂನಲ್ಲಿ ಉದ್ಯೋಗ ! ವೀಸಾ ಅವಧಿ ಮುಕ್ತಾಯವಾಗಲು ಕೆಲವೇ ದಿನ ಬಾಕಿಯಿದೆ ! ಇದರ ನಡುವೆ ತನ್ನ ಮೂಲಬೇರುಗಳನ್ನು ಕಡಿದುಕೊಂಡಂತೆ ಜೀವನ ! ಘಟನೆಗಳು – ದುರ್ಘಟನೆಗಳು ಒಂದಕ್ಕೊಂದು ತಳಕು ಹಾಕಿಕೊಂಡಂತೆ ನಡೆಯತೊಡಗುತ್ತವೆ.
ತಾನಾಗಿ ದೂರ ಸರಿಸಿದ ಪಾಲುದಾರ ಟೋಬಿಯೊಂದಿಗೆ ಮತ್ತೆ ಜೀವನ ಶುರು ಮಾಡುವುದೋ ಬೇಡವೋ ಎಂದು ಮನಸು ಹೋಯ್ದಾಡುತ್ತದೆ ! ಪ್ರಕ್ಷುಬ್ಧ ಮನಸಿನ ಕಾರಣದಿಂದ ಪುಟ್ಟ ಮಕ್ಕಳು ಬೆದರುತ್ತಾರೆ. ಅವರೂ ದೂರಾಗುತ್ತಿರುವ ಆತಂಕ ಕಾಡತೊಡಗುತ್ತದೆ. ಇವರನ್ನು ಬಿಟ್ಟು ಮೂಲದೇಶಕ್ಕೆ ತೆರಳುವ ಮನಸಿಲ್ಲ !! ಪರಿಹಾರವೇನು ?
ಮುಂದೆ ಬರುವ ಸಲಹೆ – ಪರಿಹಾರಗಳನ್ನು ಒಪ್ಪಲು ತಯಾರಿಲ್ಲ. ಮನಸಿನೊಳಗೂ ಹೊರಗೂ ಬಿರುಗಾಳಿ. ಇದನ್ನು ಮೇಸೂನ್ ಹೇಗೆ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದು ? ಆಕೆಯ ಮುಂದೆ ಪ್ರಶ್ನೆಗಳು – ಉತ್ತರಗಳು ಮತ್ತು ಪರಿಹಾರಗಳೂ ಇವೆ. ಆಕೆಯ ನಿರ್ಧಾರವೇನಾಗುತ್ತದೆ ?
ಈ ಎಲ್ಲ ಬೆಳವಣಿಗಳನ್ನು ಚಿತ್ರಕಥೆಯನ್ನೂ ರಚಿಸಿರುವ ನಿರ್ದೇಶಕಿ ನ್ಯಾನ್ಸಿ ಬಿನಿಯಾಡಕಿ ಅವಸರಕ್ಕೆ ಎಡೆಯಿಲ್ಲದಂತೆ 2 ಗಂಟೆ 1 ನಿಮಿಷ (121 ನಿಮಿಷಗಳು) ಅವಧಿಯಲ್ಲಿ ಚಿತ್ರಿಸಿದ್ದಾರೆ. ಮಹಿಳಾ ನಿರ್ದೇಶಕಿಯೇ ಆದರೂ women empowerment ನತ್ತ ಗಮನ ನೀಡದೇ “ಬದುಕು” ಎನ್ನುವುದರತ್ತ ಮಾತ್ರ ಗಮನ ನೀಡಿದ್ದಾರೆ ಎನಿಸುತ್ತದೆ. ಚಿತ್ರಕಥೆಗೆ ಪೂರಕವಾಗಿ ಜೀನ್-ಮಾರ್ಕ್ ಜುಂಗೆ ಛಾಯಾಗ್ರಹಣ ಮಾಡಿದ್ದಾರೆ. ಮೇಸೂನ್ ಪಾತ್ರದ ಮುಖಚಹರೆಯತ್ತಲೇ ಹೆಚ್ಚು ಕ್ಯಾಮೆರಾ ಕ್ಲೋಸ್ ಅಫ್ ಶಾಟ್ ಗಳಿವೆ. ಒಟ್ಟಾರೆ ಸಿನಿಮಾದಲ್ಲಿ ಲಾಂಗ್ ಶಾಟ್ ಗಳಿಗಿಂತಲೂ ಕ್ಲೋಸಫ್, ಮಿಡ್, ಸೆಮಿ ಮಿಡ್ ಶಾಟ್ ಗಳಿವೆ ! ಪ್ಯಾನೋಸ್ ವೌಟ್ಸರಾಸ್ ಸಂಕಲನವೂ ಚಿತ್ರಕಥೆಗೆ ಪೂರಕವಾಗಿದೆ. ಎಲ್ಲಿಯೂ ಅವಸರವಿಲ್ಲ.
ನಟನೆ ಬಗ್ಗೆ ಹೇಳುವುದಾದರೆ ಮೇಸೂನ್ ಪಾತ್ರಧಾರಿ ಸಬ್ರಿನಾ ಅಮಾಲಿ ಅವರ ಅಭಿನಯ ಅನನ್ಯ. ಇವರು ಇಡೀ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ಪ್ರಕ್ಷುಬ್ಧ ಮನಸ್ಥಿತಿಯ ಮಹಿಳೆಯೇ ತಾವಾಗಿದ್ದಾರೆ. ಅವರ ಅಪರೂಪದ ಭಾವಪೂರ್ಣ ಕಂಗಳೇ ಮಾತನಾಡುತ್ತವೆ. ಟೋಬಿ ಪಾತ್ರಧಾರಿ ಫ್ಲೋರಿಯನ್ ಸ್ಟೆಟ್ಟರ್ ಅವರ ಅಭಿನಯ ಸಹ ಉತ್ತಮ.
೧೭ನೇ ಬೆಂಗಳೂರು ಫಿಲ್ಮ್ ಫೆಸ್ಟಿವಲ್ ನಲ್ಲಿ ಮೇಸೂನ್ ನೋಡಿದೆ. ನಿರ್ದೇಶಕಿ ನ್ಯಾನ್ಸಿ ಬಿನಿಯಾಡಕಿ ಚಿತ್ರವನ್ನು ನಿರ್ದೇಶಿಸಿರುವ ರೀತಿ, ಸಬ್ರಿನಾ ಅಮಾಲಿ ಅವರ ಅಭಿನಯದ ಗುಂಗು ಬಹಳ ಹೊತ್ತು ಆವರಿಸಿಕೊಂಡಿತ್ತು.
