ಮಾರ್ತಾಂಡ ಅಕಾಲಿಕ ದಾರುಣ ಸಾವಿಗೆ ಹೊಣೆ ಯಾರು ?
ಕೊಡಗಿನ ಪ್ರಸಿದ್ಧ ಪ್ರವಾಸಿ ತಾಣ ದುಬಾರೆ ಶಿಬಿರದಲ್ಲಿಮೇ 18, 2026 ರಂದು ‘ಕಂಜನ್’ ಆನೆಯಿಂದ ದಾಳಿಗೀಡಾಗಿದ್ದ ಮಾರ್ತಾಂಡ ಆನೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದೆ. ಇದರ ಅಕಾಲಿಕ, ದಾರುಣ ಸಾವಿಗೆ ಹೊಣೆ ಯಾರು ? ಹಾಸನ ಜಿಲ್ಲೆ ಆಲೂರಿನಲ್ಲಿ 2023 ರಲ್ಲಿ ಸೆರೆ ಹಿಡಿಯಲಾಗಿದ್ದ ಮಾರ್ತಾಂಡ 4500 ಕೆ.ಜಿ. ತೂಕವಿತ್ತು. ತಂಟೆಕೋರ ಸ್ವಭಾವವೇನೂ ಇರಲಿಲ್ಲ.
ಸೋಮವಾರ ಬೆಳಿಗ್ಗೆ ಸುಮಾರು 11:15 ರ ಸುಮಾರಿಗೆ ಕಾವೇರಿ ನದಿಯಲ್ಲಿ ಸಾಕಾನೆಗಳಿಗೆ ಸ್ನಾನ ಮಾಡಿಸುವ ಕಾರ್ಯ ನಡೆಯುತ್ತಿತ್ತು. ಈ ವೇಳೆ ದಸರಾ ಆನೆಗಳಾದ ಮಾರ್ತಾಂಡ (ಮಖ್ನಾ – ದಂತವಿಲ್ಲದ ಗಂಡಾನೆ) ಮತ್ತು 28 ವರ್ಷದ ಕಂಜನ್ ಆನೆಗಳು ಹತ್ತಿರದಲ್ಲೇ ಇದ್ದವು.

ಸ್ನಾನ ಮಾಡಿಸುವಾಗ ಮಾರ್ತಾಂಡ ಆನೆಯು ಆಕಸ್ಮಿಕವಾಗಿ ಕಂಜನ್ ಆನೆಗೆ ಸ್ಪರ್ಶಿಸಿದೆ. ಇದರಿಂದ ಇದ್ದಕ್ಕಿದ್ದಂತೆ ಆಕ್ರೋಶಗೊಂಡ ಕಂಜನ್ ಆನೆಯು ಮಾರ್ತಾಂಡನ ಮೇಲೆ ಭೀಕರವಾಗಿ ದಾಳಿ ಮಾಡಿದೆ. ದಂತಗಳಿಂದ ಮಾರ್ತಾಂಡ ಆನೆಯ ಹೊಟ್ಟೆ, ಕಿವಿ ಮತ್ತು ದೇಹದ ಇತರ ಭಾಗಗಳಿಗೆ ಬಲವಾಗಿ ತಿವಿದು ಗಂಭೀರವಾಗಿ ಗಾಯಗೊಳಿಸಿತು. ಕಂಜನ್ ಚಾರ್ಜ್ ಮಾಡಿದ ರಭಸಕ್ಕೆ ಮಾರ್ತಾಂಡ ಸಮತೋಲನ ತಪ್ಪಿ ನದಿಯಲ್ಲಿ ಬಿತ್ತು. ಸನಿಹದಲ್ಲಿಯೇ ಇದ್ದ ತಮಿಳುನಾಡು ಮೂಲದ ಪ್ರವಾಸಿ ತುಳಸಿ ಅವರು ಆನೆ ಅಡಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದರು.
ಕಂಜನ್ ಆನೆಯ ಭೀಕರ ದಾಳಿಯಿಂದಾಗಿ ಮಾರ್ತಾಂಡನ ದೇಹದ ಒಳಭಾಗಗಳಿಗೆ ತೀವ್ರವಾದ ಗಾಯಗಳಾಗಿದ್ದವು.ದುರ್ಘಟನೆಯ ನಂತರ ದುಬಾರೆ ಶಿಬಿರದ ವನ್ಯಜೀವಿ ವೈದ್ಯರಾದ ಡಾ. ಮುಜೀಬ್ ಮತ್ತು ಚಿಟ್ಟಿಯಪ್ಪ ಅವರ ನೇತೃತ್ವದ ತಂಡದವರು ಮಾರ್ತಾಂಡನಿಗೆ ತುರ್ತು ಚಿಕಿತ್ಸೆ ನೀಡಲು ಆರಂಭಿಸಿದ್ದರು.ಗಾಯಗಳು ಗಂಭೀರವಾಗಿದ್ದವು. ಒಳರಕ್ತಸ್ರಾವ ಹೆಚ್ಚಾಗಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೆ ಮಾರ್ತಾಂಡ ಆನೆಯು ಸಾವನ್ನಪ್ಪಿದೆ.
ಕಂಜನ್ ತಂಟೆಕೋರ ಗಂಡಾನೆ ಎಂಬುದು ಅರಣ್ಯಾಧಿಕಾರಿಗಳಿಗೆ ಗೊತ್ತಿದ್ದ ವಿಷಯ. 3 ಬಾರಿ ಮೈಸೂರು ದಸರಾ ಉತ್ಸವದಲ್ಲಿ ಇದನ್ನು ಬಳಸಲಾಗಿದೆ. ಆಗಲೂ ಕಾಲು ಕೆರೆದುಕೊಂಡು ಬೇರೆ ಆನೆಗಳ ಮೇಲೆ ಕಾದಾಟಕ್ಕೆ ಮುಂದಾಗಿದೆ. 2024-2025 ರ ದಸರಾ ಉತ್ಸವದ ಸಿದ್ಧತೆಯ ಸಮಯದಲ್ಲಿ ಮೈಸೂರು ಅರಮನೆಯ ಆವರಣದಲ್ಲಿ ಆಹಾರ ನೀಡುವಾಗ ಕಂಜನ್ ಮತ್ತು ಮತ್ತೊಂದು ದಸರಾ ಆನೆ ಧನಂಜಯನಡುವೆ ಕಾದಾಟ ನಡೆದಿತ್ತು. ಆಗ ಧನಂಜಯ ಆನೆಯು ಕಂಜನ್‌ನನ್ನು ಅಟ್ಟಿಸಿಕೊಂಡು ಹೋಗಿದ್ದರಿಂದ ಕಂಜನ್ ಅರಮನೆಯ ಪೂರ್ವ ದ್ವಾರದ ಮೂಲಕ ಹೊರಗೆ ಓಡಿಹೋಗಿ ಸಾರ್ವಜನಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು. ನಂತರ ಮಾವುತರು ಅದನ್ನು ನಿಯಂತ್ರಣಕ್ಕೆ ತಂದಿದ್ದರು.
ಇದಕ್ಕೂ ಮುನ್ನ ದುಬಾರೆ ಶಿಬಿರದಲ್ಲೂ ಕಂಜನ್ ಆನೆಯು ಧನಂಜಯ ಆನೆಯ ಮೇಲೆ ದಾಳಿ ನಡೆಸಿತ್ತು. ಆ ಕಾಳಗದಲ್ಲಿ ಕಂಜನ್ ಕಾಲಿಗೆ ಗಾಯ ಮಾಡಿಕೊಂಡಿತ್ತು. ಎನ್ನಲಾಗಿದೆ. ಇಂಥ ತಂಟೆಕೋರ, ಜಗಳಗಂಟ ಆನೆಯನ್ನು ಪ್ರವಾಸಿಗರು ಕಿಕ್ಕಿರಿದಿರುವಾಗ ಸ್ನಾನ ಮಾಡಿಸಲು ಕರೆ ತಂದಿದ್ದೇಕೆ ? ಇದಕ್ಕೆ ಅನುಮತಿ ನೀಡಿದವರು ಯಾರು ? ಪ್ರವಾಸಿ ತುಳಸಿ ಅವರ ಸಾವಿಗೂ ಇದೇ ಆನೆ ಕಾರಣವಾಗಿದೆ. ಈಕೆಯ ಪತಿ ಮತ್ತು ಮಗು ಸಾವಿನ ದವಡೆಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಇದೇ ಆನೆಯು ಮಾರ್ತಾಂಡ ಆನೆಯ ಸಾವಿಗೂ ಕಾರಣವಾಗಿದೆ. ಈ ಎರಡು ಸಾವಿಗೂ ಹೊಣೆ ಯಾರು ? ಇದೊಂದು ಆಕಸ್ಮಿಕ ಘಟನೆ ಎಂದು ಅರಣ್ಯ ಇಲಾಖೆ ಜಾರಿಕೊಳ್ಳಬಹುದು. ಆದರೆ ಕಂಜನ್ ಸ್ವಭಾವ ಗೊತ್ತಿದ್ದೂ ಅದನ್ನು ಇತರ ಆನೆಗಳ ನಡುವೆ ಬಿಟ್ಟಿದ್ದೇಕೆ. ಈ ಪ್ರಶ್ನೆಗಳಿಗೆ ಅರಣ್ಯ ಇಲಾಖೆಯೇ ಉತ್ತರದಾಯಿತ್ವ. ಅದರ ಹೊಣೆ ಹೊತ್ತ ಹಿರಿಯ ಅಧಿಕಾರಿಗಳೀಗ ಉತ್ತರಿಸಬೇಕಾಗಿದೆ.
ಚಿತ್ರಕೃಪೆ: ಅಂತರ್ಜಾಲ
