ನನಗೆ ಬ್ಲಾಕ್ ಕಾಫಿ ಕುಡಿಯುವ ಅಭ್ಯಾಸ ಬಾಲ್ಯದಿಂದಲೇ ಶುರುವಾಯಿತು. ಬೆಲ್ಲ ತಯಾರಿಸುವ ನಮ್ಮ ಆಲೆಮನೆ ದಿನದ  24 ಗಂಟೆಯೂ ಕಾರ್ಯಾಚರಣೆ ಮಾಡುತ್ತಿತ್ತು. ಕುರಿಕಾಲು, ಅಚ್ಚು, ಬಕೇಟ್ ಬೆಲ್ಲ ಹೀಗೆ ವಿವಿಧ ರೂಪದ ಬೆಲ್ಲ ತಯಾರಾಗುತ್ತಿತ್ತು. ಅದನ್ನು ಆಲೆಮನೆ ಎನ್ನುವುದಕ್ಕಿಂತಲೂ ಕಾರ್ಖಾನೆ ಎಂದರೆ ಸೂಕ್ತ.

ಕಬ್ಬು ನುರಿಯುವ ಯಂತ್ರ ಒಂದು ಕಡೆ, ಅಲ್ಲಿ ನುರಿದ ಕಬ್ಬಿನ ಹಾಲು ತುಸು ದೂರದಲ್ಲಿ ಇದ್ದ ಕೊಪ್ಪರಿಕೆಗಳಿಗೆ ಬಂದು ಬೀಳುತ್ತಿತ್ತು. ಹಾಲು ತುಂಬಿಸಿಕೊಳ್ಳುವ ಕೊಪ್ಪರಿಗೆಗಳು ಒಂದೆಡೆ, ಸದಾ ಮಧ‍್ಯಮ ಬಿಸಿಯಾಗಿರುತ್ತಿದ್ದ ಹಾಲು ತುಂಬಿದ ಕೊಪ್ಪರಿಕೆಗಳು ಒಂದು ಕಡೆ, ಪಾಕ ತಯಾರು ಮಾಡುವ ಕೊಪ್ಪರಿಕೆಗಳು ಒಂದೆಡೆ, ವಿವಿಧ ಆಕಾರ ಮಣೆಗಳು, ಕಬ್ಬಿಣದ ಬಕೇಟುಗಳು, ಬೆಲ್ಲದ ಪಾಕ ತುಂಬಿದ ಖಾನೆಗಳು, ಅವೆಲ್ಲದರಿಂದಲೂ ಏಳುವ ಹೊಗೆ, ಕಾರ್ಮಿಕರ ಮಾತು,ಕೂಗಾಟ.

ಮಳೆಗಾಲದಲ್ಲಿ ರಾತ್ರಿಯ ವೇಳೆ ವಿಶಾಲ ಆಲೆಮನೆಯ ಪಾರ್ಶ್ವದಲ್ಲಿ ಇದ್ದ ಮನೆಯ ಮಂಚದಲ್ಲಿ ಮಲಗುವುದೆಂದರೆ ನನಗೆ ಖುಷಿ. ಮನೆ- ಆಲೆಮನೆ ನಡುವೆ ವಿಶಾಲವಾದ ಕಬ್ಬಿಣದ ಜಾಲರಿ. ಅಲ್ಲಿಂದ ಎಲ್ಲ ಚಟುವಟಿಕೆ ನೋಡಬಹುದಾಗಿತ್ತು. ಗುಡುಗುಡು ಸದ್ದು ಮಾಡುವ ಯಂತ್ರ, ಹೊರಗೆ ಬೀಳುವ ಮಳೆ, ಆಲೆಮನೆಯ ಬಿಸಿ ವಾತಾವರಣ ಹೀಗೆ ಅದೊಂದು ಲೋಕ.

ರಾತ್ರಿ ಒಂದು ಹೊತ್ತಿನಲ್ಲಿ ಕಾರ್ಮಿಕರು ತುಸು ಹೊತ್ತು ವಿರಾಮ ತೆಗೆದುಕೊಳ್ಳುತ್ತಿದ್ದರು. ಯಂತ್ರದ ಗುಡುಗುಡು ನಿಂತ ಕೂಡಲೇ ನನಗೆ ಎಚ್ಚರವಾಗುತ್ತಿತ್ತು (ಕಮಲಹಾಸನ್ ನಟನೆಯ “ಪುಷ್ಪಕ ವಿಮಾನ ನೆನಪು ಮಾಡಿಕೊಳ್ಳಿ)

ಕಾರ್ಮಿಕರಿಗೆ ಕೊಡುತ್ತಿದ್ದ ಹಾಲೆಲ್ಲ ಸಂಜೆ ವೇಳೆಗೆ ಮುಗಿದಿರುತ್ತಿತ್ತು. ರಾತ್ರಿ ವೇಳೆ ಹಾಲು ಹಾಕಿರದ ಕಾಫಿಯೋ ಟೀಯೋ ಮಾಡಿಕೊಳ್ಳುತ್ತಿದ್ದರು. ಆಗ ನಾನು ಎದ್ದು ಹೋಗಿ ಲೋಟಕ್ಕೆ ಹಾಕಿಸಿಕೊಂಡು ಕುಡಿಯುತ್ತಿದ್ದೆ. ಹಾಲು ಹಾಕಿರದೇ ಇದ್ದರು ಹೊರಗೆ ಧೋ ಎಂದು ಸುರಿಯುವ ಮಳೆಯಲ್ಲಿ ಕುಡಿಯುವುದು ಮಜಾವಾಗಿರುತ್ತಿತ್ತು. ಬರುಬರುತ್ತಾ ಹಾಲು ಹಾಕದೇ ಕುಡಿಯುವ ಕಾಫಿಯೇ ಅಭ್ಯಾಸವಾಯಿತು. ಕಾಲೇಜಿಗೆ ಬಂದ ನಂತರ ಬೆಲ್ಲ/ ಸಕ್ಕರೆ ಹಾಕಿಕೊಳ್ಳುವುದು ನಿಂತು ಹೋಯಿತು.

ನಾನು ಹಾಲು, ಬೆಲ್ಲ ಅಥವಾ ಸಕ್ಕರೆ ಹಾಕದ ಕಾಫಿ ಕುಡಿಯುವುದನ್ನು ನೋಡಿ ಕುಟುಂಬದವರು ಮೊದಲೆಲ್ಲ ಮುಖ ಕಿವುಚಿಕೊಳ್ಳುತ್ತಿದ್ದರು. ಈಗಲೂ ನನ್ನ ಅನೇಕ ಸ್ನೇಹಿತರು ಈ ಕಹಿಯನ್ನ ಹೇಗೆ ಕುಡಿತೀಯಾ ಅಂತಾರೆ.

ಸಕ್ಕರೆ ಬೆರೆಸಿರದ ಶೇಕಡ 99ರಷ್ಟು ಕೊಕೋ ಇರುವ ಡಾರ್ಕ್ ಚಾಕೊಲೆಟ್ ಅನ್ನು ಬ್ಲಾಕ್ ಕಾಫಿ ಕುಡಿಯುತ್ತಾ ತಿನ್ನುವುದೆಂದರೆ ಭಾರಿ ಇಷ್ಟ. ಈ ಅಭ್ಯಾಸ ಹೇಗೆ ಶುರುವಾಯಿತೋ ಗೊತ್ತಿಲ್ಲ. ಇವೆರಡೂ ನಮ್ಮ ಕುಟುಂಬದವರಿಗೆ ಇಷ್ಟವಿಲ್ಲ. ಅವರಿಗೆ ಕಾಫಿ ಎಂದರೆ ಹಾಲು, ಬೆಲ್ಲ ಅಥವಾ ಸಕ್ಕರೆ ಹಾಕಿರಬೇಕು, ಚಾಕೊಲೆಟ್ ಎಂದರೆ ತುಂಬ ಸಿಹಿಯಾಗಿರಬೇಕು.

ಕೃಷಿಕರ ಮನೆಯೆಂದರೆ  ನಾಯಿಗಳು, ಬೆಕ್ಕುಗಳು ಇರಲೇಬೇಕಲ್ಲವೇ ! ನಾನು ಏನಾದರೂ ತಿನಿಸು ತಿನ್ನುತ್ತಿದ್ದರೆ ಮಧ್ಯೆ ಮಧ್ಯೆ ಅವುಗಳಿಗೂ ಕೊಟ್ಟು ತಿನ್ನಬೇಕು. ಕೊಡದಿದ್ದರಂತೂ ಅವುಗಳು ಮುನಿಸಿಕೊಂಡಂತೆ ನಟಿಸುತ್ತವೆ.

ಇವತ್ತು ನನ್ನ ಫೇವರಿಟ್ ಬ್ಲಾಕ್ ಕಾಫಿ ಜೊತೆಗೆ ಡಾರ್ಕ್ ಚಾಕೊಲೆಟ್ ಸವಿಯುತ್ತಿದ್ದೆ. ಯಥಾ ಪ್ರಕಾರ ಬೆಕ್ಕುಗಳು, ನಾಯಿಗಳು ಸುತ್ತ  ಮುಂಗಾಲುಗಳನ್ನು ಊರಿ ಕುಳಿತವು. ಎಂದೂ ಅವುಗಳಿಗೆ ಚಾಕೊಲೆಟ್ ಹಾಕಿರಲಿಲ್ಲ. ಇಂದು ತೀರಾ ಸಣ್ಣ ಎರಡು ತುಂಡುಗಳನ್ನು  ಅವುಗಳತ್ತ  ಹಾಕಿದೆ. ಲೀಡರ್ ಬೆಕ್ಕು ಮೊದಲು ಮೂಸಿ ನೋಡಿತು. ಒಂದು ಕ್ಷಣ ನನ್ನ ಮುಖವನ್ನು ಇನ್ನೊಂದು ಕ್ಷಣ ಚಾಕೊಲೆಟ್ ಅನ್ನು ಪಿಳಪಿಳನೇ  ನೋಡಿ ಅಲ್ಲಿಂದ ಪೇರಿ ಕಿತ್ತಿತು. ಎರಡನೇಯ ಬೆಕ್ಕಿನದು ಇದೇ ಪ್ರತಿಕ್ರಿಯೆ.  ನಾಯಿಗಳದ್ದು ಇದಕ್ಕಿಂತ ತುಸು ಭಿನ್ನ ಸ್ಪಂದನೆ ! ಲೀಡರ್ ನಾಯಿ ಚಾಕೊಲೆಟ್ ಅನ್ನು ನಾಲಿಗೆಯಿಂದ ಸವರಿತು. ತಕ್ಷಣ ನನ್ನತ್ತ ನೋಡಿ ಬೊಗಳಿ ಓಡಿತು. ಉಳಿದ ನಾಯಿಗಳಿಗೆ ಅದೇನರ್ಥವಾಯಿತೋ ಅವುಗಳು ತಿರುಗಿ ತಿರುಗಿ ನನ್ನತ್ತ ನೋಡಿ ಪೇರಿ ಕಿತ್ತವು.

“ಇವ್ನು ಈ ಪಾಟಿ ಕಹಿ ತಿಂತಾವ್ನಲ್ಲ, ತಾನು ತಿನ್ನೋದಲ್ಲದೇ ನಮಗೂ ಕೊಡ್ತಿದ್ದಾನೆ” ಅಂತ ಲೀಡರ್ ನಾಯಿ, ಬೆಕ್ಕು ಬಯ್ದುಕೊಂಡಿರಬಹುದು. ಇನ್ನು ತಮಾಷೆ ಎಂದರೆ  ಮಧ್ಯಾಹ್ನ ಚಿಕನ್ ತಿನ್ನುತ್ತಿದ್ದರೆ ಸುಮಾರು ಹೊತ್ತು ದೂರದಿಂದ ಗಮನಿಸುತ್ತಿದ್ದವು. ಹತ್ತಿರ ಬರಲು ಏನೋ ಅಳುಕು ಇರುವಂತೆ ಕಾಣುತ್ತಿತ್ತು. ಅಂತೂ ಅವುಗಳ ಸ್ಥಿತಿ ಬಿಸಿ ಹಾಲು ಕುಡಿದು ಹೆದರಿದ ತೆನಾಲಿ ರಾಮನ ಬೆಕ್ಕಿನಂತಾಯಿತು !!    ಅಂತೂ ನಾಯಿ, ಬೆಕ್ಕುಗಳಿಗೂ ಕಹಿ ಇಷ್ಟವಾಗುವುದಿಲ್ಲ ಅನ್ನುವುದಂತೂ ಅರ್ಥವಾಯಿತು.

 ಕಹಿ ಅಂಶ ಇರುವುದನ್ನು ನಾಯಿ, ಬೆಕ್ಕು ಸಾಮಾನ್ಯವಾಗಿ ತಿನ್ನುವುದಿಲ್ಲ. ಸಿಹಿ ಅಂಶ ಇರುವ ಚಾಕೊಲೆಟ್‌ ಹಾಕಿದ್ದರೆ ಅವುಗಳ ಪ್ರತಿಕ್ರಿಯೆ ಏನಿರುತ್ತಿತ್ತೊ ಗೊತ್ತಿಲ್ಲ. ಆದರೆ ಅವುಗಳಿಗೆ ಚಾಕೊಲೆಟ್‌ ಕೊಡಬಾರದು. ಇದರಿಂದ ಅವುಗಳ ಆರೋಗ್ಯ ಹದಗೆಡಬಹುದು. ಸಿಹಿ ಪದಾರ್ಥಗಳನ್ನು ಕೊಡುವುದರಿಂದ ಅವುಗಳಲ್ಲಿ ಜಂತುಹುಳುಗಳ ಬಾಧೆ ಹೆಚ್ಚುತ್ತದೆ. ಇದರಿಂದ ಸೊರಗುತ್ತವೆ. ಕ್ರಮೇಣ ಕೂದಲು ಉದುರಬಹುದು.

Similar Posts

Leave a Reply

Your email address will not be published. Required fields are marked *