“ಕರ್ನಾಟಕ ರಾಜ್ಯ ಮಾವು ಮಂಡಳಿ, ಬೆಳೆಗಾರರು ಗುಣಮಟ್ಟದ ಮಾವು ಬೆಳೆಯುವ ದಿಶೆಯಲ್ಲಿ ಅಗತ್ಯವಾದ ಪ್ರೋತ್ಸಾಹ ನೀಡುತ್ತಿದೆ. ಇದರ ಜೊತೆಗೆ ಮಾರುಕಟ್ಟೆ ವಿಸ್ತರಿಸಲೂ ಕ್ರಮ ಕೈಗೊಳ್ಳುತ್ತಿದೆ. ಇದರ ಗರಿಷ್ಠ ಪ್ರಯೋಜನಗಳನ್ನು ಬೆಳೆಗಾರರು ಪಡೆದುಕೊಳ್ಳಬೇಕಾದ ಅಗತ್ಯವಿದೆ” ಹೀಗೆಂದು ಮಾವು ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಡಾ. ನಾಗರಾಜು ಅಭಿಪ್ರಾಯಪಡುತ್ತಾರೆ.
ಗುಣಮಟ್ಟದ ಮಾವು ಪಡೆದುಕೊಳ್ಳಬೇಕಾದರೆ ಸಸಿಯ ಆರಂಭಿಕ ಹಂತದಿಂದಲೂ ಗಮನ ನೀಡಬೇಕು. ಆಯಾ ಅವಧಿಗೆ ಪೋಷಕಾಂಶ ನೀಡಬೇಕು. ಅವಶ್ಯಕವಿರುವಷ್ಟೇ ನೀರುಪೂರೈಕೆ ಅಗತ್ಯ. ಕಾಯಿ ಬಿಡಲು ಆರಂಭವಾಗುವ ಹಂತದಲ್ಲಿಯೇ ಕೀಟಬಾಧೆ ನಿಯಂತ್ರಿಸಬೇಕು. ರೋಗಗಗಳನ್ನು ತಡೆಗಟ್ಟಬೇಕು. ಇತ್ತೀಚಿನ ವರ್ಷಗಳಲ್ಲಿ ಗ್ರಾಹಕರು ಹಣ್ಣಿನ ಗುಣಮಟ್ಟದ ಬಗ್ಗೆ ಹೆಚ್ಚೆಚ್ಚು ಕಾಳಜಿ ತೆಗೆದುಕೊಳ್ಳುತ್ತಿದ್ದಾರೆ. ಹೊರದೇಶಗಳಿಗೆ ರಫ್ತು ಮಾಡುವ ಸಂಸ್ಥೆಗಳು ಮತ್ತು ಆಮದು ಮಾಡಿಕೊಳ್ಳುವ ಸಂಸ್ಥೆಗಳು ಸಹ ಈ ಬಗ್ಗೆ ಹೆಚ್ಚು ಗಮನ ನೀಡುತ್ತವೆ. ಗುಣಮಟ್ಟವಿಲ್ಲವೆಂದು ಖಾತ್ರಿಯಾದರೆ ನೀಡಿದ ಸಲ್ಲಿಸಿದ ಬೇಡಿಕೆಯನ್ನು ವಾಪ್ಪಸು ತೆಗೆದುಕೊಳ್ಳುತ್ತವೆ. ಈ ಎಲ್ಲ ಹಿನ್ನೆಲೆಯಲ್ಲಿ ಮಾವು ಬೆಳೆಯುವ ಪ್ರತಿಹಂತದಲ್ಲಿಯೂ ಜಾಗರೂಕತೆ ವಹಿಸಬೇಕಾದ ಅಗತ್ಯವಿದೆ ಎಂದು ಡಾ. ನಾಗರಾಜು ಹೇಳುತ್ತಾರೆ.
ಮಾವು ಮಾರುಕಟ್ಟೆಯಲ್ಲಿ ದೊರೆಯುವ ಉತ್ತಮ ಬೆಲೆಯ ಗರಿಷ್ಠ ಅಂಶ ಬೆಳೆಗಾರರಿಗೆ ದೊರಕುವ ನಿಟ್ಟಿನಲ್ಲಿ ಮಂಡಳಿ ಶ್ರಮವಹಿಸುತ್ತಿದೆ. ಮುಖ್ಯವಾಗಿ ಮಾರುಕಟ್ಟೆ ವಿಸ್ತರಣೆಯತ್ತ ಗಮನಹರಿಸಲಾಗುತ್ತಿದೆ. ಇದಕ್ಕಾಗಿ ಆಸಕ್ತ ಬೆಳೆಗಾರರಿಗೆ ತರಬೇತಿ ನೀಡಲಾಗಿದೆ ಇದನ್ನು ಮುಂದುವರಿಸಿಕೊಂಡು ಹೋಗಲಾಗುತ್ತದೆ. ಹೊರದೇಶದ ರಾಯಭಾರಿ ಕಚೇರಿಗಳು, ಪ್ರಮುಖ ವ್ಯಾಪಾರಿ ಸಂಸ್ಥೆಗಳೊಂದಿಗೆ ಅವರಿಗೆ ನೇರ ಸಂಪರ್ಕ ದೊರೆಯುವಂತೆ ಮಾಡಲಾಗುತ್ತಿದೆ. ಈಗಾಗಲೇ ಹದಿನೈದಕ್ಕೂ ಹೆಚ್ಚು ರಾಯಭಾರಿ ಕಚೇರಿಗಳು ಈ ಬಗ್ಗೆ ಆಸಕ್ತಿ ವ್ಯಕ್ತಪಡಿಸಿವೆ. ಈಗಾಗಲೇ ಯುವ ಬೆಳೆಗಾರರೊಬ್ಬರು ಈ ಸದವಕಾಶ ಬಳಸಿಕೊಂಡು ಆಸ್ಟ್ರೇಲಿಯಾಕ್ಕೆ ಮಾವು ರಫ್ತು ಮಾಡಿದ್ದಾರೆ.
ಕೆಲವು ಹೊರದೇಶಗಳಿಗೆ ಮಾವು ಕಳಿಸಬೇಕಾದರೆ ನಿರ್ದಿಷ್ಟ ಸಂಸ್ಕರಣೆ ಮತ್ತು ಪ್ಯಾಕಿಂಗ್ ವಿಧಾನಗಳನ್ನು ಅನುಕರಿಸಬೇಕಾಗುತ್ತದೆ. ಇದು ಮಾವು ದರ ದುಬಾರಿಯಾಗಲು ಕಾರಣವಾಗುತ್ತದೆ. ಆಸ್ಟ್ರೇಲಿಯಾಕ್ಕೆ ಮಾವು ಕಳಿಸಬೇಕಾದರೆ ಪ್ರತಿಕೆಜಿಗೆ 110 ರೂ ಸಾಗಣೆ ವೆಚ್ಚವೇ ತಗುಲುತ್ತದೆ. ಇಷ್ಟೆಲ್ಲ ಶ್ರಮವಹಿಸಿ, ಅಧಿಕಬೆಲೆ ಭರಿಸಿ ಕಳಿಸಿದಾಗ ಅಲ್ಲಿಯೂ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎಂಬುದು ಸಮಾಧಾನಕರ ಅಂಶ ಎಂದು ನಾಗರಾಜ್ ಹೇಳುತ್ತಾರೆ.
ಮಾವಿನಲ್ಲಿ ಪ್ರತಿವರ್ಷ ಏಕಪ್ರಮಾಣದ ಇಳುವರಿ ದೊರೆಯುವುದಿಲ್ಲ. ಒಂದು ವರ್ಷ ಏರುಹಂಗಾಮು ಮರುವರ್ಷ ಇಳಿಹಂಗಾಮು. ಕಳೆದ ಬಾರಿ ಏರುಹಂಗಾಮು. ಗುಣಮಟ್ಟದ ಹಣ್ಣುಗಳನ್ನು ಪಡೆಯಲು ಬೆಳೆಗಾರರಿಗೆ ನೀಡಿದ ತರಬೇತಿ, ಪ್ರೋತ್ಸಾಹಕರ ಕ್ರಮಗಳು ಫಲನೀಡಿದ್ದವು. ಗರಿಷ್ಠ ಪ್ರಮಾಣದ ಇಳುವರಿ ದೊರೆತ್ತಿತ್ತು. ಆದರೆ ನಿಫಾ ವೈರಸ್ ಬಗ್ಗೆ ಮಾಧ್ಯಮಗಳು ಸೂಕ್ತವಾಗಿ ಅರಿಯದೇ ಪ್ರಚಾರ ಮಾಡಿದ್ದು ಮಾರುಕಟ್ಟೆಗೆ ಮುಳುವಾಯಿತು. ಮಂಡಳಿಯ ಕಾಳಜಿ, ಬೆಳೆಗಾರರ ಶ್ರಮ ವ್ಯರ್ಥವಾಯಿತು. ನಿಫಾ ವೈರಸ್ ಮಾವಿನ ಹಣ್ಣುಗಳಿಗಾಗಲಿ, ಇತರ ಯಾವುದೇ ಹಣ್ಣುಗಳಿಗಾಗಲಿ ಬಾಧೆ ಉಂಟು ಮಾಡಿರಲಿಲ್ಲ. ಆದರೆ ಮಾಧ್ಯಮ ಮಾಡಿದ ಪ್ರಚಾರದಿಂದ ಅಂಜಿದ ಹೆಚ್ಚಿನ ಗ್ರಾಹಕರು ಖರೀದಿಯಿಂದ ದೂರವೇ ಉಳಿದರು ಎಂದು ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರು ವಿಷಾದ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಬೆಳೆಯುವ ವೈವಿಧ್ಯಮಯ ತಳಿಗಳ ಮಾವಿಗೆ ಆಂತರಿಕ ಮತ್ತು ಬಾಹ್ಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಇದನ್ನು ಮತ್ತಷ್ಟೂ ಬಳಸಿಕೊಳ್ಳುವ ನಿಟ್ಟಿನಲ್ಲಿ “ ಕಾರ್ ಸಿರಿ” ಅಂದರೆ ಕರ್ನಾಟಕ ಸಿರಿ ಎಂಬ ಬ್ರಾಂಡ್ ಹೆಸರಿನಲ್ಲಿ ಮಾರಾಟ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ನಿರ್ದಿಷ್ಟ ಲೋಗೋ ರಚನೆಯಾಗಿದೆ. ಇದರಿಂದ ನಮ್ಮ ಬೆಳೆಗಾರರು ಬೆಳೆದ ಹಣ್ಣುಗಳನ್ನು ಗ್ರಾಹಕರು ಗುರುತಿಸಿ ಖರೀದಿಸಲು ಸಹಾಯಕವಾಗುತ್ತದೆ ಎಂದು ನಾಗರಾಜ್ ಹೇಳಿದರು.
ಕರ್ನಾಟಕದಲ್ಲಿ ಮಾವು ಬೆಳೆಯುವ ಜಿಲ್ಲೆಗಳಲ್ಲಿ ಕೋಲಾರ ಮೊದಲನೇಯ ಸ್ಥಾನ, ರಾಮನಗರ ಎರಡನೇಯ ಸ್ಥಾನದಲ್ಲಿದೆ. ಇದಲ್ಲದೇ ಮಾವು ಬೆಳೆಯುವ ಇತರ ಜಿಲ್ಲೆಗಳನ್ನು ಗುರುತಿಸಲಾಗಿದೆ. ಇಲ್ಲಿ ಬೆಳೆಗಾರರ ತೋಟಗಳಿಗೆ ತೋಟಗಾರಿಕೆ ಇಲಾಖೆ ಮತ್ತು ಮಾವು ಮಂಡಳಿಯಿಂದ ತಜ್ಞರು ಹೋಗಿ ತರಬೇತಿ ನೀಡುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ಇದಕ್ಕೆ ಬೆಳೆಗಾರರಿಂದಲೂ ಉತ್ತಮ ಸ್ಪಂದನೆ ದೊರೆತಿದೆ ಎಂದು ಡಾ. ನಾಗರಾಜ್ ಹೇಳಿದರು.
ಗುಣಮಟ್ಟದ ಮಾವಿನ ಹಣ್ಣುಗಳ ಮಾರಾಟದ ಜೊತೆಗೆ ಅದರ ಮೌಲ್ಯವರ್ಧನೆಗೂ ಮಂಡಳಿ ಗಮನ ಹರಿಸಿದೆ. ಪ್ರಸ್ತುತ ಆಂಧ್ರಪ್ರದೇಶದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಮೌಲ್ಯವರ್ಧಿತ ಘಟಕಗಳಿವೆ. ಕರ್ನಾಟಕದಲ್ಲಿ ಇವುಗಳ ಸಂಖ್ಯೆ 7 ದಾಟಿಲ್ಲ. ಈ ಸಂಖ್ಯೆಯನ್ನು ಹೆಚ್ಚಿಸಲು ಮಾವು ಮಂಡಳಿ ಕ್ರಮಗಳನ್ನು ಕೈಗೊಂಡಿದೆ. ಆಸಕ್ತಕರಿಗೆ ಬೇಕಾದ ಎಲ್ಲ ರೀತಿಯ ಪ್ರೋತ್ಸಾಹವನ್ನೂ ನೀಡಲು ಉತ್ಸುಕವಾಗಿದೆ ಎಂದು ಹೇಳುತ್ತಾರೆ.
ಬೆಳೆಗಾರರಿಗೆ ಉತ್ತಮ ಬೆಲೆ ದೊರಕಿಸುವ ನಿಟ್ಟಿನಲ್ಲಿ ಮಾವು ಮಂಡಳಿಯೇ ನೇರ ಮಾವು ಮೇಳಗಳನ್ನು ಆಯೋಜಿಸುತ್ತಿದೆ. ಇದಕ್ಕೆ ಬೆಳೆಗಾರರು ಮತ್ತು ಗ್ರಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಇದಲ್ಲದೇ ಮ್ಯಾಂಗೋ ಪಿಕ್ಕಿಂಗ್ ಟೂರಿಸಂ ಪರಿಕಲ್ಪನೆಯನ್ನೂ ಜಾರಿಗೊಳಿಸಿದೆ. ಆಸಕ್ತ ಗ್ರಾಹಕರು ಮಾವು ಕೊಯ್ಲು ಹಂತದಲ್ಲಿ ತೋಟಗಳಿಗೆ ಭೇಟಿನೀಡಿ ತಾವೇ ಹಣ್ಣುಗಳನ್ನು ಆಯ್ದು ಕೊಯ್ಲು ಮಾಡುವ ಸ್ಥಳದಲ್ಲಿಯೇ ಸೇವಿಸುವ, ಖರೀದಿ ಮಾಡುವ ಅವಕಾಶ ದೊರೆಯುತ್ತದೆ. ಇದಕ್ಕೆ ಬೆಂಗಳೂರು ನಗರದ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ.
ಬೆಳೆಗಾರರು ಗುಣಮಟ್ಟದ ಮಾವು ಬೆಳೆಯಬೇಕು. ಅದಕ್ಕೆ ಗರಿಷ್ಠ ಪ್ರಮಾಣದ ಬೆಲೆ ದೊರೆಯಬೇಕು. ಮಾರಾಟವಾಗದ ಹಣ್ಣುಗಳು ವ್ಯರ್ಥವಾಗದೇ ಮೌಲ್ಯವರ್ಧನೆಯಾಗಬೇಕು. ಇವೆಲ್ಲದರ ಜೊತೆಗೆ ಗ್ರಾಹಕರು ಉತ್ತಮ ಹಣ್ಣುಗಳನ್ನು ಸವಿದು ಸಂತೃಪ್ತರಾಗಬೇಕು ಎಂಬುದು ಮಾವು ಮಂಡಳಿ ಸದಾಶಯ. ಈ ದಿಶೆಯಲ್ಲಿ ನಮ್ಮ ಕಾರ್ಯಕ್ರಮಗಳು ಜಾರಿಯಲ್ಲಿವೆ ಎಂದು ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಡಾ. ನಾಗರಾಜ್ ನುಡಿದರು
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ಲ್ಯಾಂಡ್ ಲೈನ್: 080-22236837
ಮೊಬೈಲ್: 9148447032
Mango grading unit for Karnataka. Scope & prospectus.
Moringa development & marketing scope & marketing.