ಕಾಸರಗೋಡು ಜಿಲ್ಲೆಯ ಪೇರ್ಲ ಗ್ರಾಮದಲ್ಲಿರುವ ಪ್ರಗತಿಪರ ಕೃಷಿಕರ ಸಂದರ್ಶನಕ್ಕೆ ಹೋಗಿದ್ದೆ. ಅವರು ”  ಕೃಷಿಭವನದವರು ಚೆಂಡು ಹೂ ಬೆಳೆಯುವ ಬಗ್ಗೆ ಸಭೆ ಆಯೋಜಿಸಿದ್ದಾರೆ. ಹೋಗಿ ಬರೋಣ” ಎಂದರು.‌ ಪೆರ್ಲ ಗ್ರಾಮದಲ್ಲಿರುವ ಎಣ್ಮಕಜೆ ಗ್ರಾಮ ಪಂಚಾಯತ್‌ ಕಚೇರಿ ಆವರಣದಲ್ಲಿಯೇ ಕೃಷಿ ಕಚೇರಿಯೂ ಇದೆ. ಪಂಚಾಯತ್‌ ಕಟ್ಟಡದ ಮೊದಲನೇ ಅಂತಸ್ತಿನ ಸಭಾಂಗಣದಲ್ಲಿ ಮಾಹಿತಿ ಸಭೆ ಆರಂಭವಾಯಿತು.

ಗ್ರಾಮ ಪಂಚಾಯತ್‌ ಅಧ್ಯಕ್ಷ ಸೋಮಶೇಖರ್‌ ಜಿ.ಎಸ್.‌ ಸೇರಿದಂತೆ ಸ್ಥಳೀಯ ವಾರ್ಡುಗಳ ಸದಸ್ಯರು ಪ್ರಗತಿಪರ, ಸಾವಯವ ಕೃಷಿಯ ಅಗತ್ಯದ ಬಗ್ಗೆ ಕನ್ನಡದಲ್ಲಿ ಸೊಗಸಾಗಿ ಮಾತನಾಡಿದರು. ಬಳಿಕ ಸಂಪನ್ಮೂಲ ಅಧಿಕಾರಿ “ಚೆಂಡು ಹೂ ಬೆಳೆಯ ಲಾಭಗಳು, ಕೃಷಿ ವಿಧಾನ” ಕುರಿತು ಮಲೆಯಾಳದಲ್ಲಿ ಮಾತನಾಡಲು ತೊಡಗಿದರು. ಇಂಗ್ಲಿಷ್‌ ನಲ್ಲಿದ್ದ ಪವರ್‌ ಪಾಯಿಂಟ್‌ ಪ್ರೆಸೆಂಟೇಶನ್‌ ಗೆ ಮಲೆಯಾಳಂನಲ್ಲಿ ವಿವರಣೆ. ಕನ್ನಡದ ಒಂದೇ ಒಂದು ಶಬ್ದವೂ ಇಲ್ಲ.

ಕೇರಳ ಕೃಷಿ ಇಲಾಖೆ ಅಧಿಕಾರಿ ಮಾತನಾಡುತ್ತಿರುವುದು

ನನ್ನ ಅಕ್ಕಪಕ್ಕ ಕುಳಿತ ಕೃಷಿಕರಿಬ್ಬರು “ಅವರೆಂತ ಹೇಳೋದು. ನಮಗೆ ಸ್ವಲ್ಪವೂ ಅರ್ಥವಾಗುತ್ತಿಲ್ಲ” ಎಂದರು. ಅಧಿಕಾರಿ ಮಾತಿನ ನಡುವೆ ಕೃಷಿ ಕಚೇರಿಯ ಸಿಬ್ಬಂದಿ ತರಕಾರಿ ಬೀಜಗಳ ಪ್ಯಾಕೇಟುಗಳನ್ನು  ಉಚಿತವಾಗಿ ವಿತರಿಸಲು ಶುರು ಮಾಡಿದರು. ಇದ್ದ ಸಭಿಕರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿಕ ಮಹಿಳೆಯರೇ ಇದ್ದರು.  ಇಬ್ಬರು ಎದ್ದು ಆಯೋಜಕರ ಬಳಿ ಹೋಗಿ ಕನ್ನಡದಲ್ಲಿ “ನಾವು ಬೇಗ ಹೊರಡಬೇಕು. ತರಕಾರಿ ಬೀಜ ಕೊಡಿ” ಎಂದು ಕೇಳಿದರು. ಕೆಲವರಂತೂ ಅವುಗಳನ್ನು ತೆಗೆದುಕೊಳ್ಳದೇ ಹೊರಗೆ ಹೋದರು.

ನಾನು, ಪರಿಚಯದ ರೈತರು ಸಹ ಹೊರಗೆ ಬಂದೆವು. ಆಗ ಅವರು ಹೇಳಿದ್ದು “ನೋಡಿ, ಅವರು ಈ ಮಾಹಿತಿ ಕಾರ್ಯಕ್ರಮ ಮಾಡಿರುವುದು ಒಳ್ಳೆಯದೇ, ಆದರೆ ಅವರು ಮಲೆಯಾಳದಲ್ಲಿ ವಿವರಿಸುವುದು ಕನ್ನಡಿಗರಾದ ನಮಗೆ ಹೇಗೆ ಅರ್ಥವಾಗಬೇಕು. ಅವರು ಉಚಿತವಾಗಿ ಕೊಟ್ಟಿರುವ ತರಕಾರಿ ಬೀಜಗಳ ಪಾಕೀಟುಗಳ ಮೇಲಿನ ವಿವರ, ಮಲೆಯಾಳ ಭಾಷೆಯಲ್ಲಿ ಇದೆ. ಇದನ್ನು ನಾವು ಹೇಗೆ ಓದುವುದು. ಕೃಷಿ ಇಲಾಖೆಯ ಎಲ್ಲ ಕಾಗದ ಪತ್ರಗಳು, ಅರ್ಜಿ ನಮೂನೆಗಳು ಮಲೆಯಾಳಂ ಭಾಷೆಯಲ್ಲಿಯೇ ಇರುತ್ತವೆ. ಕನ್ನಡವನ್ನಷ್ಟೇ ಕಲಿತ ನಾವು ಅವುಗಳನ್ನು ಓದುವುದು, ಅರ್ಥ ಮಾಡಿಕೊಳ್ಳುವುದು ಹೇಗೆ ? ಇಲ್ಲಿ ವ್ಯವಹರಿಸುವುದು ನಮಗೆ ನರಕವೇ ಆಗಿದೆ” ಎಂದು ನಿಟ್ಟುಸಿರು ಬಿಟ್ಟರು.

ಕೇರಳ ಕೃಷಿ ಇಲಾಖೆ ಕನ್ನಡ ಪ್ರದೇಶದಲ್ಲಿ ವಿತರಿಸಿದ ತರಕಾರಿ ಬೀಜಗಳ ಮೇಲಿನ ವಿವರಣೆ ಮಲೆಯಾಳಂ ಭಾಷೆಯಲ್ಲಿ ಇದೆ. ಇದನ್ನು ಕನ್ನಡಿಗರು ಹೇಗೆ ಅರ್ಥೈಸಿಕೊಳ್ಳುವುದು ?

ಕೇರಳ ಸರ್ಕಾರದ ಕೃಷಿ ಇಲಾಖೆ ನೀಡುವ ಕೃಷಿ ಸಬ್ಸಿಡಿ, ಇತರ ಸೌಲಭ್ಯಗಳ ವಿತರಣೆ ಪಡೆಯಲು ಸಲ್ಲಿಸಬೇಕಾದ ನಮೂನೆಗಳು, ಜಮೀನಿನ ಸರ್ಕಾರಿ ದಾಖಲೆ ಪತ್ರಗಳಾದ ತೀರ್ವೇ (ಪಹಣಿ), ಪಟ್ಟಾ, ಖಾತೆ,ಕಿರ್ದಿ ಇತ್ಯಾದಿಗಳೆಲ್ಲವೂ ಮಲೆಯಾಳದಲ್ಲಿಯೇ ಇದೆ. ಗ್ರಾಮ ಪಂಚಾಯತ್‌ ಕಚೇರಿಗಳ ವ್ಯವಹಾರಗಳು ಸಹ ಇದಕ್ಕೆ ಹೊರತಲ್ಲ.

ಕೃಷಿ ಮಾಹಿತಿ ಸಭೆ

ಕಾಸರಗೋಡು ಜಿಲ್ಲೆಯ ಗ್ರಾಮ, ಹೋಬಳಿ, ತಾಲ್ಲೂಕು ಮತ್ತು ಜಿಲ್ಲಾ ಹಂತದ ಕಚೇರಿಗಳಲ್ಲಿ ಬಹುತೇಕ ಮಲೆಯಾಳಂ ಭಾಷೆಯ ಅಧಿಕಾರಿಗಳೇ ಇದ್ದಾರೆ. ಇವರೊಂದಿಗೆ ಕನ್ನಡ ಮಾಧ್ಯಮದಲ್ಲಿ ಕಲಿತ ಸ್ಥಳೀಯರು ಹೇಗೆ ವ್ಯವಹರಿಸುವುದು ? ಇದಕ್ಕಾಗಿ ಇವರು ಮಲೆಯಾಳಂ ಬಲ್ಲವರು ಪುರುಸೊತ್ತಾಗುವುದನ್ನೇ ಕಾಯ್ದು ಅವರಿಂದ ಅರ್ಜಿ ನಮೂನೆಗಳನ್ನು ಭರ್ತಿ ಮಾಡಿಸಿಕೊಳ್ಳಬೇಕು. ಕನ್ನಡ ಪ್ರದೇಶದಲ್ಲಿ ಕನ್ನಡಿಗರು ಅಕ್ಷರ ಕಲಿತು ಅದು ಪ್ರಯೋಜನಕ್ಕೆ ಬರುತ್ತಿಲ್ಲ ಎಂದರೆ ಇದಕ್ಕಿಂತ ಕ್ರೂರ ಅಣಕ ಇನ್ನೊಂದಿರಲು ಸಾಧ್ಯವೇ ?

“ಕೇರಳದಲ್ಲಿ ಕಾಂಗ್ರೆಸ್‌ ನೇತೃತ್ವದ  ಯು.ಡಿ.ಎಫ್‌. ಸರ್ಕಾರವಿದ್ದಾಗ ಈ ಪರಿಯ ಮಲೆಯಾಳೀಕರಣ ಕಾಸರಗೋಡು ಜಿಲ್ಲೆಯ ಕಾಸರಗೋಡು, ಮಂಜೇಶ್ವರ ಮತ್ತು ಹೊಸದುರ್ಗದಲ್ಲಿ ಆಗಿರಲಿಲ್ಲ. ಎಲ್‌. ಡಿ. ಎಫ್.‌ ಸರ್ಕಾರ ಕಳೆದ ಎರಡು ವಿಧಾನಸಭಾ ಅವಧಿಯಿಂದಲೂ ಅಧಿಕಾರದಲ್ಲಿದೆ. ಇದರ ಅವಧಿಯಲ್ಲಿ ಮಲೆಯಾಳೀಕರಣ ಅತಿಯಾಗಿದೆ. ಎಷ್ಟರ ಮಟ್ಟಿಗೆ ಎಂದರೆ ಕನ್ನಡ ಮಾಧ್ಯಮದ ಶಾಲೆಗಳಿಗೆ ಅದರಲ್ಲೂ ಕನ್ನಡ ಬೋಧನೆ ವಿಷಯಕ್ಕೂ ಮಲೆಯಾಳಂ ಭಾಷೆ ಬೋಧಿಸುವ ಉಪನ್ಯಾಸಕರನ್ನು ನೇಮಿಸುವ ಮಟ್ಟಿಗೆ. ಇಲ್ಲಿನ ಪರಿಸ್ಥಿತಿಯೇ ಉಸಿರುಗಟ್ಟಿಸುತ್ತಿದೆ” ಎಂದು ಹೇಳುತ್ತಾ  ಸ್ಥಳೀಯ ರೈತರು ಕಣ್ಣಲ್ಲಿ ನೀರು ತುಂಬಿಕೊಂಡರು.

ಕಾಸರಗೋಡಿಗೆ ಸಂವಿಧಾನಿಕವಾಗಿ ಭಾಷಾ ಅಲ್ಪಸಂಖ್ಯಾತ ಸ್ಥಾನಮಾನ ಪ್ರದತ್ತವಾಗಿದೆ. ಇದರ ಪ್ರಕಾರ ಸ್ಥಳೀಯ ಕನ್ನಡಿಗರಿಗೆ ಎಲ್ಲ ರೀತಿಯಲ್ಲಿಯೂ ಅನುಕೂಲವಾಗುವಂತೆ  ರಾಜ್ಯ, ಕೇಂದ್ರ ಸರ್ಕಾರದ ವ್ಯವಹಾರಗಳಿರಬೇಕು. ಆದರೆ ಕೇರಳ ಸರ್ಕಾರ ಇದನ್ನು ಗಾಳಿಗೆ ತೂರಿದೆ. ಕರ್ನಾಟಕ ಸರ್ಕಾರ ಅದಕ್ಕೂ ತನಗೂ ಸಂಬಂಧವೇ ಇಲ್ಲವೆನ್ನುವಂತೆ ಕಣ್ಮಚ್ಚಿಕೊಂಡು ಕುಳಿತಿದೆ.

Similar Posts

2 Comments

  1. ಸಾಂವಿಧಾನಿಕವಾಗಿ ಭಾಷಾ ಅಲ್ಪ ಸಂಖ್ಯಾತ ಸ್ಥಾನಮಾನ ….. ಇದರ ಬಗ್ಗೆ ಸ್ವಲ್ಪ ವಿವರಣೆ ಕೊಡಿ

    1. ಮುಂದಿನ ಪೋಸ್ಟ್‌ ನಲ್ಲಿ ವಿವರವಾಗಿ ಬರೆಯುತ್ತೇನೆ

Leave a Reply

Your email address will not be published. Required fields are marked *