ಸಾಹಿತ್ಯ

ಭಾರತದ ಜೀವಾಳವೇ ಬಹುತ್ವ ಆದರೆ …

ಭಾರತದಲ್ಲಿ ಕೋಮು ಸೌಹಾರ್ದ – ಸಾಮರಸ್ಯ ಹೊಸದೇನಲ್ಲ. ಸ್ವಾತಂತ್ರ್ಯ ನಂತರದಲ್ಲಿಯೂ ಅನೇಕ ನಿದರ್ಶನಗಳು‌ ದೊರೆಯುತ್ತವೆ. ಕೆಲವು ನಿದರ್ಶನಗಳನ್ನು ನಿಮ್ಮ ಮುಂದೆ ಇಡುತ್ತೇನೆ.
2005 ರಲ್ಲಿ, ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ನವದೆಹಲಿಯಲ್ಲಿ ಭಾರತದ ಅತೀ‌ದೊಡ್ಡ ಹಿಂದೂ ದೇಗುಲಗಳ ಸಂಕೀರ್ಣವಾದ ಸ್ವಾಮಿನಾರಾಯಣ ಅಕ್ಷರಧಾಮ ದೇವಾಲಯವನ್ನು ಉದ್ಘಾಟಿಸಿದರು. ವಿವಿಧ ಧರ್ಮಿಯರು ಸಾಮರಸ್ಯದಿಂದ ಭಾಗವಹಿಸಿದ್ದರು.
ಜಮ್ಮು ಮತ್ತು ಕಾಶ್ಮೀರದ ಬುಡ್ಗಾಮ್ ಜಿಲ್ಲೆಯಲ್ಲಿ 35 ವರ್ಷಗಳ ಕಾಲ ಮುಚ್ಚಲ್ಪಟ್ಟಿದ್ದ ಶಾರದಾ ಭವಾನಿ ದೇವಾಲಯವನ್ನು 2025 ರ ಆರಂಭದಲ್ಲಿ ಮತ್ತೆ ತೆರೆಯಲಾಯಿತು. ಸ್ಥಳಾಂತರಗೊಂಡಿದ್ದ ಕಾಶ್ಮೀರಿ ಹಿಂದೂ ಪಂಡಿತರೊಂದಿಗೆ ಸ್ಥಳೀಯ ಮುಸ್ಲಿಮರು ಮುಖ್ಯ ಅತಿಥಿಗಳಾಗಿ ಸೇವೆ ಸಲ್ಲಿಸಿದರು. ಪ್ರಾಣ ಪ್ರತಿಷ್ಠಾ (ವಿಗ್ರಹ ಪ್ರತಿಷ್ಠಾಪನೆ) ಸಮಾರಂಭದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.ದೇವಾಲಯದ ಪುನರುಜ್ಜೀವನ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ತಮಿಳುನಾಡಿನ ಊಟಪಾಳ್ಯದಲ್ಲಿ, ಮುಸ್ಲಿಮರು ವಿನಾಯಕ ದೇವಾಲಯಕ್ಕೆ ತಮ್ಮ ಭೂಮಿ ದಾನ ಮಾಡಿದ್ದಾರೆ. ಸಾಂಪ್ರದಾಯಿಕ ಕಾಣಿಕೆಗಳನ್ನು ಅರ್ಪಿಸಿದ್ದಾರೆ. ಹಿಂದೂಗಳೊಂದಿಗೆ ಸಾಮುದಾಯಿಕ ಭೋಜನದಲ್ಲಿಯೂ ಪಾಲ್ಗೊಳ್ಳುತ್ತಾರೆ.
ಉತ್ತರ ಪ್ರದೇಶದ ಮೀರತ್‌ನಲ್ಲಿ, ಜಾಮಾ ಮಸೀದಿ ಶಿವ ಭಂಡಾರವನ್ನು ಆಯೋಜಿಸಿತು, ಇದು ಶಿವರಾತ್ರಿಯಂತಹ ಹಬ್ಬಗಳಿಗೆ ಸಂಬಂಧಿಸಿದ ಹಿಂದೂ ಹಬ್ಬ. ಸುಮಾರು 2,000 ಜನರು ಭಾಗವಹಿಸಿದ್ದರು. ಮಸೀದಿ ನಿರ್ವಹಣೆ‌ ಮಾಡುವವರು ಹಿಂದೂ ಆಚರಣೆಗಳಿಗೆ ತಮ್ಮ ಸ್ಥಳವನ್ನು ಮುಕ್ತಗೊಳಿಸುವ ಮೂಲಕ ಸಾಮರಸ್ಯ ಬಿಂಬಿಸಿದರು.
ಕರ್ನಾಟಕದಲ್ಲಿಯೂ ಇರುವ ಹಿಂದೂ ಮುಸ್ಲೀಮ್ ಸಾಮರಸ್ಯದ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲದಿದ್ದರೂ ಒಂದು ಪ್ರಮುಖ ನಿದರ್ಶನ ನೀಡುತ್ತೇನೆ.
ಬೆಂಗಳೂರು ಕರಗ ಉತ್ಸವದಲ್ಲಿ ವಿಶೇಷವಾಗಿ ಕರಗಧಾರಿಗಳು ಮಸ್ತಾನ್ ಸಾಬ್ ದರ್ಗಾಕ್ಕೆ ಭೇಟಿ ನೀಡುತ್ತಾರೆ. ಅಲ್ಲಿ ಧೂಪಾರತಿ ಸ್ವೀಕರಿಸಿ ನಗರ ಪ್ರದಕ್ಷಿಣೆಗೆ ಹೊರಡುತ್ತಾರೆ. ಇದು ಕರಗದ ಪ್ರಮುಖ ಸಂಪ್ರದಾಯ.
2027ರಲ್ಲಿ ನಿತ್ಯೋತ್ಸವ ಕವಿ ನಿಸಾರ್ ಅಹಮದ್ ಅವರು ದಸರಾ ಉದ್ಘಾಟಿಸಿದರು. ಆಗ ಭಿನ್ನಸ್ವರ ಮೂಡಲಿಲ್ಲ. ಇದು‌ ನಾಡಿನಲ್ಲಿ ಅಂತರ್ಗತವಾಗಿರುವ ಕೋಮು‌‌ಸೌಹಾರ್ದತೆ ಬಿಂಬ
ಹೀಗಿರುವಾಗ 2025ರ ದಸರಾ ಉದ್ಘಾಟಿಸಲು ಸಾಹಿತಿ, ಮಾಜಿ ರಾಜಕಾರಣಿ ಬಾನು ಮುಷ್ತಾಕ್ ಅವರಿಗೆ ಆಹ್ವಾನ ನೀಡಿದ ಕೂಡಲೇ ಭಿನ್ನಸ್ವರಗಳು ಹೊರಟಿರುವುದೇಕೆ ? ಬೂಕರ್ ಪ್ರೈಜ್ ಬಂದಾಗ ಅಭಿನಂದಿಸಿದ್ದ ಬಲಪಂಥೀಯ ರಾಜಕಾರಣಿಗಳೂ ವಿರೋಧಿಸಿರುವುದೇಕೆ ? 2023ರ ಜನನ ಸಾಹಿತ್ಯ ಸಮ್ಮೇಳನದಲ್ಲಿ ಬಾನು ಮುಷ್ತಾಕ್ ಅವರು ನಾಡದೇವಿ, ಕನ್ನಡಾಂಬೆ ಭುವನೇಶ್ವರಿ, ಕನ್ನಡ ಬಾವುಟ ಪರಿಕಲ್ಪನೆಗಳನ್ನು ಬಹುತ್ವದಿಂದ ನೋಡದೇ ಸಂಕುಚಿತ ದೃಷ್ಟಿಯಿಂದ ನೋಡಿದ ಕಾರಣದಿಂದಲೇ ಅಲ್ಲವೇ ?
ಕನ್ನಡ ಸಂಘಟನೆಗಳು ‌ಸಹ ಈ ಹೇಳಿಕೆಯನ್ನು ವಿರೋಧಿಸಿವೆ. ಯಾವುದೇ ಸಂದರ್ಭದಲ್ಲಿಯೂ ಸಮಚಿತ್ತದಿಂದ ಮಾತನಾಡುವ ಕನ್ನಡ ಚಳವಳಿಗಾರ ನಾರಾಯಣ ಗೌಡ ಅವರು ಬಾನು‌ಮುಷ್ತಾಕ್ ದಸರಾ ಉದ್ಘಾಟಿಸಲು ತಕರಾರು ತೆಗೆಯದಿದ್ದರೂ ಹೇಳಿಕೆಯನ್ನು ಪ್ರಬಲವಾಗಿ ವಿರೋಧಿಸಿದ್ದಾರೆ.
ನಾಡಿನ ಪ್ರಮುಖ ಪತ್ರಿಕೆ ವಿಜಯ ಕರ್ನಾಟಕದವರು ಆನ್ ಲೈನ್ ಮೂಲಕ ನಡೆಸಿದ ಸಮೀಕ್ಷೆಯಲ್ಲಿ ಹೆಚ್ಚಿನವರು ಬಾನು‌ಮುಷ್ತಾಕ್ ಅವರು ದಸರಾ ಉದ್ಘಾಟಿಸುವುದನ್ನು ವಿರೋಧಿಸಿದ್ದಾರೆ. ನಿವೃತ್ತ ದಕ್ಷ ಪೊಲೀಸ್ ಅಧಿಕಾರಿ ಅಬ್ದುಲ್ ಅಜೀಂ ಅವರು ಸಹ ವಿರೋಧ ವ್ಯಕ್ತಪಡಿಸಿದ್ದಾರೆ.‌ ಮುಸ್ಲೀಮ್ ಸಮುದಾಯದ ಸಾಮಾನ್ಯ ಜನತೆ ಸಹ ದಸರಾ ‌ಉದ್ಘಾಟನೆಗೆ ಬಾನು‌ ಮುಷ್ತಾಕ್ ಅವರನ್ನು ಆಹ್ವಾನಿಸುವ ಅಗತ್ಯವಿರಲಿಲ್ಲ ಎಂದಿದ್ದಾರೆ. ಈಗ ಮಾಜಿ ಸಂಸದ‌‌ ಪ್ರತಾಪ್ ಸಿಂಹ ಹೈಕೋರ್ಟಿನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದಾರೆ.
ಬಲಪಂಥೀಯ ರಾಜಕಾರಣವೂ ಅಸ್ತಿತ್ವದಲ್ಲಿರುವುದನ್ನು, ಧಾರ್ಮಿಕ ವಿವಾದಗಳು ಉಂಟಾದಾಗ ಅದು ತೆಗೆದುಕೊಳ್ಳಬಹುದಾದ ಆಯಾಮಗಳನ್ನು ಆಡಳಿತಗಾರರು ಗಮನಿಸುತ್ತಲೇ ಇರಬೇಕು. ಇಂಥ ಸಂದರ್ಭಗಳಲ್ಲಿ ನಾಡಿನ ಜನತೆಯ ಅಭಿಪ್ರಾಯಗಳ ನಾಡಿಮಿಡಿತವನ್ನೂ ಅರಿಯಬೇಕು. ರಾಜಕೀಯ ವಾಸ್ತವಗಳನ್ನರಿಯದೇ ಇದ್ದಾಗ ಬಲಪಂಥೀಯ ರಾಜಕಾರಣ ಸಕ್ರಿಯವಾಗಲು ಹಾದಿ ‌‌ಮಾಡಿದಂತೆ ಆಗುತ್ತದೆ.
ನಾಡಿನಲ್ಲಿ ಭಿನ್ನಸ್ವರ ಹೊರಟಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ನಿಲುವು ಬದಲಿಸುವ ಅಗತ್ಯವಿತ್ತು ಅಥವಾ ಬಾನು‌ಮುಷ್ತಾಕ್ ಅವರಾದರೂ ಸರ್ಕಾರದ ಆಹ್ವಾನವನ್ನು ಬೇಡ ಎನ್ನಬಹುದಿತ್ತು. ಎರಡೂ ಆಗಿಲ್ಲ.
ಈಗ ವಿವಾದ ನ್ಯಾಯಾಲಯದ ಅಂಗಳ ತಲುಪಿಯಾಗಿದೆ. ಆದೇಶ ಹೇಗೆ ಬಂದರೂ ಸಹ ಬಲಪಂಥೀಯ ಸಂಘಟನೆ ಅದರ ಪ್ರಯೋಜನ ಪಡೆಯುತ್ತದೆ.

Leave a Reply

Your email address will not be published. Required fields are marked *

error: Content is protected !!