ಚಾರಣವೇ ಅಪೂರ್ವ ಅನುಭವಗಳನ್ನು ನೀಡುತ್ತದೆ. ಅದರಲ್ಲಿಯೂ ನದಿದಂಡೆಯಲ್ಲಿ ಚಾರಣ ಮಾಡುವುದು ಅನನ್ಯ ಅನುಭವಗಳನ್ನು ಕಟ್ಟಿಕೊಡುತ್ತದೆ. ಅಲ್ಲಿಯ ಸಸ್ಯವೈವಿಧ್ಯತೆ, ನದಿ ದಂಡೆಯಲ್ಲಿ ಬೆಳೆದ ಊರುಗಳು, ಅಲ್ಲಿಯ ಜನಜೀವನ, ಆಹಾರ ಪದ್ಧತಿಗಳ ಪರಿಚಯ ಆಗುತ್ತದೆ. ಇವೆಲ್ಲಕ್ಕಿಂತ ಮಿಗಿಲಾಗಿ ಜೀವದಾಯಿನಿ ನದಿ ಜೊತೆ ನಡೆದಾಡುವುದೇ ಮೈಮನಗಳನ್ನು ಪುಳಕಿತಗೊಳಿಸುತ್ತದೆ.
ಆಗುಂಬೆಯನ್ನು ಕರ್ನಾಟಕದ ಚಿರಾಪುಂಜಿ ಎಂದು ಕರೆಯಲಾಗುತ್ತದೆ. ಅತ್ಯಧಿಕ ಮಳೆ ಬೀಳುವ ಪ್ರದೇಶವಿದು. ಇದರ ಸನಿಹದಲ್ಲಿಯೇ ನರಸಿಂಹಪರ್ವತವಿದೆ. ಇದು ಕೂಡ ಚಾರಣಿಗರಿಗೆ ಅತ್ಯಂತ ಪ್ರಿಯವಾದ ಪರ್ವತ. ಇದನ್ನು ಏರಿ ಕಿಲೋಮೀಟರ್ ಗಟ್ಟಲೆ ಶ್ರಮದಾಯಕ ಹಾದಿಯಲ್ಲಿ ನಡೆಯುವುದೆಂದರೆ ಬಲು ಖುಷಿ ನೀಡುವ ಸಂಗತಿ. ಇಂಥ ಪ್ರದೇಶದಲ್ಲಿ ಸೀತಾನದಿ ಜನ್ಮ ತಳೆಯುತ್ತದೆ.


ಆಗುಂಬೆ ತಪ್ಪಲಿನಲ್ಲಿ ಹರಿಯುವ ಮೋಹಕ ನದಿ ಸೀತಾ. ಕೆಲವಾರು ನದಿಗಳು ಬಹು ರೌದ್ರವಾಗಿ ಹರಿಯುತ್ತವೆ. ಆದರೆ ಹೆಸರಿಗೆ ತಕ್ಕಹಾಗೆ ಸೀತಾನದಿ ಸೌಮ್ಯ. ಮಳೆಗಾಲದಲ್ಲಿ ಇದರ ವೈಭವ ಅಪಾರ. ಇಂಥ ನದಿಯ ಜಾಡಿನಲ್ಲಿ ಬಲುದೂರ ಸಾಗಬೇಕು ಎಂಬುದು ಬಹಳ ದಿನಗಳ ಕನಸು. ಈ ಬಾರಿಯ ಮಳೆಗಾಲದಲ್ಲಿ ಅತ್ತ ಹೊರಟ್ಟಿದ್ದಾಯಿತು.
ನರಸಿಂಹ ಪರ್ವತ ಪ್ರದೇಶದಲ್ಲಿ ಜನ್ಮ ತಳೆಯುವ ಸೀತಾನದಿ ಕಾಡುಮೇಡುಗಳಲ್ಲಿ ಹರಿಯುತ್ತದೆ. ತಾನು ಹರಿಯುವ ಪ್ರದೇಶಗಳಲ್ಲಿ ರಮ್ಯ ಪರಿಸರವನ್ನು ಉಂಟು ಮಾಡಿದೆ. ಸೀತಾನದಿ ಗ್ರಾಮ, ಹೆಬ್ರಿ, ಬಾರ್ಕೂರು ಪ್ರದೇಶಗಳ ಮೂಲಕ ಸಾಗಿ ಸುವರ್ಣ ನದಿಯಲ್ಲಿ ಸಂಗಮವಾಗುತ್ತದೆ. ನಂತರ ಅರಬ್ಬಿ ಸಮುದ್ರದಲ್ಲಿ ಲೀನವಾಗುತ್ತದೆ. ತಾನು ಸಾಗುವ ಹಾದಿಯಲ್ಲಿ ಮೋಹಕ ಜಲಪಾತಗಳನ್ನು ಸೃಷ್ಟಿಸುತ್ತದೆ.
ಉಡುಪಿ ಜಿಲ್ಲೆ, ಕಾರ್ಕಳ ತಾಲ್ಲೂಕಿನ ಹೆಬ್ರಿ ಸನಿಹದಲ್ಲಿ ಆಗುಂಬೆಗೆ ಹೋಗುವ ಮಾರ್ಗದಲ್ಲಿದೆ ಸೀತಾನದಿ ಗ್ರಾಮ. ಮಗ್ಗುಲಿನಲ್ಲಿಯೇ ಹರಿಯುವ ಜೀವದಾಯಿನಿಯಿಂದಾಗಿ ಗ್ರಾಮಕ್ಕೆ ಈ ಹೆಸರು ಬಂದಿದೆ. ಇದೊಂದು ಪುಟ್ಟಹಳ್ಳಿ. ಇಲ್ಲಿಗೆ ಬಂದಿಳಿದಾಗ ಮುಂಗಾರು ಮಾರುತಗಳು ಭುವಿಯತ್ತ ವರ್ಷಧಾರೆ ಹರಿಸುತ್ತಿದ್ದವು. ಈ ಪರಿಯ ಮಳೆ ಬಯಲುಸೀಮೆಯಲ್ಲಿ ಅಪರೂಪ. ಸುತ್ತಲೂ ಅಡಿಕೆ-ತೆಂಗು ತೋಟಗಳಿಂದ ಆವೃತ್ತವಾದ ಸ್ಥಳದಲ್ಲಿ ನಿಂತು ಮಳೆಯ ವೈಭವ ನೋಡುವುದೇ ಸಂತಸದ ಸಂಗತಿ
ಅಡಿಕೆ-ತೆಂಗು ತೋಟಗಳ ನಡುವಿನ ಹಾದಿಯಲ್ಲಿ ಮುಂಜಾನೆ ಎದ್ದು ವಾಯು ವಿಹಾರ ಮಾಡುವುದು ಮೈಮನಸನ್ನು ಅರಳಿಸುತ್ತದೆ. ಹಕ್ಕಿಗಳ ಚಿಲಿಪಿಲಿ ಗಾನ ಕೇಳುತ್ತಾ ಸಾಗುವುದು ಮುದ ನೀಡುತ್ತದೆ. ಹೀಗೆ ಸಾಗಿದಾಗ ದಾರಿಬದಿಯಲ್ಲಿ ಕೋಳಿಗಳ ಹಿಂಡು, ಕಾಡುಹೂಗಳು ಕಾಣುತ್ತವೆ. ಬಲು ಮೋಹಕ ಹೂಗಳ ಮೇಲೆ ಪತಂಗವೊಂದು ಹಾರಾಡುತ್ತಾ ಮಕರಂದ ಹೀರುವುದು ಗಮನ ಸೆಳೆಯುತ್ತದೆ.
ನದಿಜಾಡಿನಲ್ಲಿ ಸಾಗುವಾಗ ದಂಡೆಗೆ ಹೋಗಬೇಕಾದರೆ ಹಸಿರು ಪೊದೆಗಳ ನಡುವೆ ಸಾಗಬೇಕು. ಹೀಗೆ ಹೋಗುವಾಗ ಮಳೆನೀರು ಹರಿದು ಹೋಗುವ ತಗ್ಗುಗಳಲ್ಲಿ ಚೆಕ್ ಡ್ಯಾಮ್ ಗಳನ್ನು ಕಟ್ಟಿದ್ದಾರೆ. ಪೊದೆಗಳನ್ನು ದಾಟಿ ಸಾಗಿದರೆ ವಿಶಾಲವಾಗಿ ಹರಿಯುವ ನದಿ ಕಾಣುತ್ತದೆ. ಸನಿಹದಲ್ಲಿಯೇ ಸೇತುವೆ ಇರುವುದು ಕಾಣುತ್ತದೆ. ಅಲ್ಲಿಗೆ ಕುರುಚಲು ಗಿಡಗಳ ನಡುವೆ ನಡೆದಿದ್ದಾಯ್ತು
ಇಲ್ಲಿ ಹೆಬ್ರಿ ಮತ್ತು ಆಗುಂಬೆಗೆ ಸಂಪರ್ಕ ಕಲ್ಪಿಸುವ ಎರಡು ಸೇತುವೆಗಳಿವೆ. ಒಂದು ಸೇತುವೆ ಕಬ್ಬಿಣದ್ದು. ಇದನ್ನು ಬಹಳ ಹಿಂದೆಯೇ ಕಟ್ಟಲಾಗಿದೆ. ಈ ಮಾರ್ಗದಲ್ಲಿ ವಿರಳ ಸಂಖ್ಯೆಯಲ್ಲಿ ವಾಹನಗಳ ಸಂಚಾರ ಇದ್ದಾಗ ಈ ಸೇತುವೆಯನ್ನೇ ಬಳಸಲಾಗುತ್ತಿತ್ತು. ವಾಹನಗಳ ಸಂಖ್ಯೆ ಹೆಚ್ಚಿದ ನಂತರ ಮಗ್ಗುಲಲ್ಲಿಯೇ ವಿಶಾಲ ಸೇತುವೆ ನಿರ್ಮಿಸಲಾಗಿದೆ. ಹಳೇ ಸೇತುವೆ ಮೇಲೆ ವಾಹನಗಳ ಸಂಚಾರ ನಿರ್ಭಂದಿಸಲಾಗಿದೆ
ಮಳೆಗಾಲದಲ್ಲಿ ಮಳೆ ತೀವ್ರತೆ ಹೆಚ್ಚಾದರೆ ಸೇತುವೆ ಮಟ್ಟದವರೆಗೂ ನೀರು ಹರಿಯುತ್ತದೆ. ಸೇತುವೆಗಳ ಕೆಳಗೆ ದೃಷ್ಟಿ ಹಾಯಿಸಿದಾಗ ಬಲು ರಭಸದಿಂದ ನೀರು ಹರಿಯುವುದು ಕಾಣುತ್ತದೆ. ನದಿ ಸಾಗುವ ಇಕ್ಕೆಲ್ಲಗಳಲ್ಲಿಯೂ ದಟ್ಟವಾದ ಸಸ್ಯರಾಶಿ ಇದೆ. ಇಲ್ಲಿನ ಮರಗಳು ಮುಗಿಲಿನೆತ್ತರಕ್ಕೂ ಚಾಚಿಕೊಂಡಿವೆ. ಎರಡು ದಂಡೆಯಲ್ಲಿಯೂ ಇರುವ ಮರಗಳ ನಡುವೆ ನದಿ ಹರಿಯುವಿಕೆ ರಮ್ಯವಾಗಿ ಕಾಣುತ್ತದೆ.
ರಿವರ್ ರ್ಯಾಪ್ಟಿಂಗ್ ಒಂದು ಸಾಹಸ ಕ್ರೀಡೆ. ವಿದೇಶಗಳಲ್ಲಿ ಬಹು ಜನಪ್ರಿಯವಾಗಿರುವ ಇದು ಇತ್ತೀಚಿನ ವರ್ಷಗಳಲ್ಲಿ ನಮ್ಮಲ್ಲಿಯೂ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಬಲು ರಭಸವಾಗಿ ಹರಿಯುವ ನದಿಗಳಲ್ಲಿ ರಿವರ್ ರ್ಯಾಪ್ಟಿಂಗ್ ಮಾಡುತ್ತಾರೆ. ಇದು ಸೀತಾನದಿಯಲ್ಲಿಯೂ ನಡೆಯುತ್ತದೆ.
ರಿವರ್ ರ್ಯಾಪ್ಟಿಂಗ್ ಅಪಾಯ ಸಾಧ್ಯತೆಗಳ್ಳುಳ್ಳ ಕ್ರೀಡೆಯೂ ಹೌದು. ರೌದ್ರನರ್ತನ ಮಾಡುತ್ತಾ ಹರಿಯುವ ನದಿಯಲ್ಲಿ ಮಾಡುವಾಗ ಅಪಾಯಗಳು ಹೆಚ್ಚು. ಆದರೆ ಸೀತಾನದಿಯಂಥ ನದಿಗಳಲ್ಲಿ ಇಂಥ ಅಪಾಯಗಳ ಸಾಧ್ಯತೆ ಬಹುಕಡಿಮೆ. ಈ ಕಾರಣದಿಂದಲೇ ಇಲ್ಲಿ ರ್ಯಾಪ್ಟಿಂಗ್ ಮಾಡಲು ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ.
ಸೇತುವೆಗಳ ಬಳಿಯಿಂದಲೇ ರಿವರ್ ರ್ಯಾಪ್ಟಿಂಗ್ ಶುರುವಾಗುತ್ತದೆ. ಇದಕ್ಕೆ ಬೇಕಾದ ರಬ್ಬರ್ ಬೋಟ್ ಗಳನ್ನು ಹೊತ್ತು ತಂದ ವಾಹನ ಅಲ್ಲಿಯೇ ನಿಂತಿರುವುದು ಕಂಡಿತು. ಈ ಕ್ರೀಡೆಯನ್ನು ನಡೆಸಲು ಅತ್ಯಂತ ನುರಿತ ಸಿಬ್ಬಂದಿ ಬೇಕು. ಇವರು ಈಜುಪಟುಗಳಾಗಿರಬೇಕು. ರ್ಯಾಪ್ಟಿಂಗ್ ಮಾಡುತ್ತಿರುವ ವ್ಯಕ್ತಿಗಳು ನೀರಿಗೆ ಬಿದ್ದರೆ ಅವರನ್ನು ರಕ್ಷಿಸಲು ಇದು ಅಗತ್ಯ.
ಗುಣಮಟ್ಟದ ರಬ್ಬರಿನಿಂದ ಮಾಡಿದ ಬೋಟ್ ಗಳಲ್ಲಿ ಕುಳಿತವರೆಲ್ಲರೂ ನೀರಿಗೆ ಬಿದ್ದರೆ ತೇಲಿಸುವ ಲೈಫ್ ಜಾಕೇಟ್ ಧರಿಸುವುದು ಕಡ್ಡಾಯ. ಜೊತೆಗೆ ತಲೆಗೆ ಹೆಲ್ಮೆಟ್ ಹಾಕಿರಬೇಕು. ಒಂದು ವೇಳೆ ಬೋಟ್ ಬಂಡೆಗೆ ತಗುಲಿದರೆ ತಲೆ ರಕ್ಷಿಸಿಕೊಳ್ಳಲು ಇದು ಅತ್ಯಗತ್ಯ. ಬೋಟಿನಲ್ಲಿ ಕುಳಿತವರೆಲ್ಲರೂ ಕೈಯಲ್ಲಿ ಹುಟ್ಟುಗಳನ್ನು ಹಿಡಿದಿರಬೇಕು. ನೀರಿನ ರಭಸಕ್ಕೆ ತಕ್ಕಂತೆ ಹುಟ್ಟು ಹಾಕಿ ಬೋಟ್ ನಿಯಂತ್ರಿಸಬೇಕು.
ನದಿಯ ಜಾಡಿನಲ್ಲಿ ಸಾಗುವಾಗ ಕೆಲವೊಮ್ಮೆ ಅಡಿಕೆ-ತೆಂಗು ತೋಟಗಳ ನಡುವೆ, ಕೆಲವೊಮ್ಮೆ ಕಾಡಿನಲ್ಲಿ, ಕೆಲವೊಮ್ಮೆ ರಸ್ತೆಯಂಚಿನಲ್ಲಿ ಸಾಗಬೇಕಾಗುತ್ತದೆ. ಈ ಎಲ್ಲ ಮಾರ್ಗಗಳು ವಿಶಿಷ್ಟ. ಕಾಡಿನ ಹಾದಿಯಲ್ಲಿ ನಡೆಯುವಾಗ ಎಚ್ಚರಿಕೆಯಿಂದ ಹೆಜ್ಜೆ ಹಾಕುವುದು ಸೂಕ್ತ. ಗದ್ದಲ, ಅವಸರ ಮಾಡದೇ ಮುನ್ನಡೆಯಬೇಕು. ಎತ್ತರದ ದಂಡೆಯಲ್ಲಿ ನದಿ ಅಂಚಿನಲ್ಲಿ ಸಾಗುವಾಗ ಮತ್ತಷ್ಟೂ ಎಚ್ಚರ ಅಗತ್ಯ.
ನದಿಜಾಡಿನಲ್ಲಿ ನಡೆಯುತ್ತಾ ಸಾಗಬೇಕಾದರೆ ಮಳೆ ತೀವ್ರತೆ ಹೆಚ್ಚಾಗುತ್ತದೆ. ಅಂಥ ಸಂದರ್ಭದಲ್ಲಿ ಹತ್ತಿರದಲ್ಲಿಯೇ ತಂಗುದಾಣವೊಂದು ಕಂಡಿತು. ಅಲ್ಲಿ ಹೋಗಿ ನಿಲ್ಲುತ್ತಿದ್ದಂತೆ ಮಳೆಯ ತೀವ್ರತೆ ಹೆಚ್ಚಾಯಿತು. ಸುತ್ತಲೂ ಇದ್ದ ತೋಟ ಮತ್ತು ಮಳೆ ಅಲ್ಲಿ ವಿಶಿಷ್ಟ ಪರಿಸರ ಉಂಟು ಮಾಡಿತ್ತು. ಆ ಮಳೆಯ ರಭಸ ನೋಡುತ್ತಾ, ಅದರ ನಿನಾದ ಕೇಳುತ್ತಾ ಬಿಸಿಬಿಸಿ ಕಾಫಿ ಕುಡಿಯುವುದು ಖುಷಿಯ ಸಂಗತಿ.
ಕೆಲವೆಡೆ ನದಿಪಾತ್ರ ಹೆಚ್ಚು ಅಗಲ ಮತ್ತು ಆಳ. ಅಲ್ಲಿ ನಿಂತು ನದಿಯನ್ನು ನೋಡುತ್ತಾ ನಿಲ್ಲುವುದು ಪರವಶತೆಯನ್ನು ಉಂಟು ಮಾಡುತ್ತದೆ. ಆದರೆ ಈ ಪರವಶತೆಯಲ್ಲಿ ನದಿಗೆ ಇಳಿದು ಈಜಲು ಹೋಗುವುದು ಅಪಾಯಕಾರಿ. ನೀರಿನ ಸೆಳೆತ ತೀವ್ರವಾಗಿರುತ್ತದೆ. ಆದ್ದರಿಂದ ದಂಡೆಯಲ್ಲಿ ನಿಂತಾಗ ತೀರಾ ಅಂಚಿನಲ್ಲಿ ನಿಲ್ಲುವುದು ಸೂಕ್ತವಲ್ಲ. ಏಕೆಂದರೆ ಕೆಲವೊಮ್ಮೆ ನೀರಿನ ರಭಸಕ್ಕೆ ಮಣ್ಣು ಕುಸಿಯುವ ಸಾಧ್ಯತೆ ಇರುತ್ತದೆ.


ನದಿಯ ಜಾಡಿನಲ್ಲಿ ಕಾಡಿನಲ್ಲಿ ನಡೆಯುವಾಗ ಮುಗಿಲೆತ್ತರಕ್ಕೆ ಚಾಚಿದ ಮರಗಳು ಅಸಂಖ್ಯಾತ. ಈ ಹಾದಿಯಲ್ಲಿ ನಡೆಯುವಾಗ ಜೀರುಂಡೆಗಳ ಸದ್ದು ತಾರಕಕ್ಕೇರುತ್ತದೆ. ಅವುಗಳಲ್ಲಿಯೇ ಒಂದೊಂದು ಗುಂಪು. ಒಂದು ಸಮೂಹದ ಸದ್ದು ನಿಲ್ಲುತ್ತಿದ್ದಂತೆ ಮತ್ತೊಂದು ಸಮೂಹದ ಸದ್ದು ಶುರುವಾಗುತ್ತದೆ. ಕಾಡಿನ ಈ ಚಟುವಟಿಕೆಗಳನ್ನು ಕೇಳುತ್ತಾ ನಡೆಯುತ್ತಾ ಹೋಗಬೇಕು. ಅಲ್ಲಲ್ಲಿ ಮರದ ಎಲೆಗಳ ಮೇಲೆ ಬಿಳಿನೊರೆಗಳು ಕಾಣುತ್ತದೆ.
ಕಾಡಿನ ನಡುವೆ ಬಲು ರಭಸ ಮತ್ತು ಗಾಂಭೀರ್ಯದಿಂದ ಸೀತಾನದಿ ಹರಿಯುತ್ತದೆ. ದಂಡೆಯನ್ನು ನದಿ ಕೊಚ್ಚಿಕೊಂಡು ಹೋಗದಂತೆ ಮರಗಳ ಸಾಲು ರಕ್ಷಣೆ ಒದಗಿಸಿವೆ. ಮರಗಳ ಪೊಟರೆಗಳ ಒಳಗೆ ನೀರು ನುಗ್ಗುತ್ತಿರುತ್ತದೆ. ನೀರಿನ ತೀವ್ರ ಸೆಳೆತದಲ್ಲಿಯೂ ಮರಗಳು ಭದ್ರವಾಗಿ ತಲೆಯೆತ್ತಿ ನಿಂತಿವೆ. ಅಲ್ಲಿಯೇ ನೀರಿನ ಅಲೆಗಳನ್ನು ಎದುರಿಸುತ್ತಾ ದೃಢವಾಗಿ ನಿಂತ ಪುಟ್ಟ ಸಸಿಯೊಂದು ಗಮನ ಸೆಳೆಯುತ್ತದೆ. ಕಾಡಿನ ಸಸ್ಯಗಳ ಅಚಲತೆಯನ್ನು ಅದು ಪರಿಚಯಿಸುತ್ತದೆ. ವಯಸ್ಸಾದ ನಂತರ ಮರಗಳು ಉರುಳುವುದು ಸಹಜ. ಅಲ್ಲಲ್ಲಿ ಬುಡ ಸಮೇತ ಮರಗಳು ಉರುಳಿ ಬಿದ್ದಿರುವುದು ಕಾಣುತ್ತದೆ.
ನದಿಜಾಡಿನಲ್ಲಿ ಸಾಗುವಾಗ ಅಡಿಕೆ ತೋಟದ ಅಚ್ಚುಕಟ್ಟಾದ ಸಾಲುಗಳು ಗಮನ ಸೆಳೆಯುತ್ತವೆ. ಕಿಂಚಿತ್ತೂ ಒರೆಕೋರೆಯಾಗದಂತೆ ಅವುಗಳನ್ನು ನಾಟಿ ಮಾಡಿ ಬೆಳೆಸಿದ್ದಾರೆ. ಆ ಮರಗಳಿಗೆ ಮೆಣಸಿನ ಬಳ್ಳಿಗಳನ್ನು ಹಬ್ಬಿಸಿದ್ದಾರೆ. ಅಲ್ಲಲ್ಲಿ ತೋಟಗಳ ಒಳಗೆ ಹಸುಗಳು ಹುಲ್ಲು ಮೇಯುತ್ತಿರುವುದು ಕಾಣುತ್ತದೆ. ಆ ದೃಶ್ಯಗಳು ನುರಿತ ಕಲಾವಿದ ರಚಿಸಿದ ವರ್ಣಚಿತ್ರಗಳಂತೆ ಕಾಣುತ್ತವೆ.
ನದಿ ಜಾಡಿನಲ್ಲಿ ಸುದೀರ್ಘ ನಡಿಗೆ ನಂತರ ಅರಣ್ಯ ಇಲಾಖೆಯ ನೇಚರ್ ಕ್ಯಾಂಪಿಗೆ ತಲುಪಿದ್ದಾಯ್ತು. ಅರಣ್ಯದ ನಡುವೆ ಬಲು ಚೆಂದದ ಶಿಬಿರವನ್ನು ನಿರ್ಮಿಸಿದ್ದಾರೆ. ಇಲ್ಲಿ ನೇಚರ್ ವಾಕ್, ಚಾರಣ, ಪಕ್ಷಿ ವೀಕ್ಷಣೆ ಏರ್ಪಡಿಸುತ್ತಾರೆ. ಮಳೆಗಾಲದ ನಂತರ ಇಲ್ಲಿ ವೈವಿಧ್ಯಮಯ ಪಕ್ಷಿಗಳನ್ನು ಕಾಣಬಹುದು ಎಂದು ಹೇಳಲಾಗುತ್ತದೆ.

ನದಿ ಜಾಡಿನಲ್ಲಿ ನಡೆದಿದ್ದು ಅನನ್ಯ ಅನುಭವಗಳನ್ನು ಕಟ್ಟಿಕೊಟ್ಟಿತ್ತು. ಬಹುಮುಖ್ಯವಾಗಿ ಸೀತಾನದಿ ಹರಿಯುವ ಜಾಡಿನಲ್ಲಿ ದಂಡೆಗಳಲ್ಲಿನ ವೈಶಿಷ್ಟತೆಗಳ ಪರಿಚಯವಾಯಿತು. ಸಸ್ಯವೈವಿಧ್ಯತೆ ಅಪಾರವಾಗಿರುವುದು ತಿಳಿಯಿತು. ನದಿ ಹಲವೆಡೆ ವಿಶಾಲವಾಗಿ, ಕೆಲವೊಮ್ಮೆ ಕಿರುದಾರಿಯಲ್ಲಿ ರಭಸದಿಂದ ಹರಿಯುತ್ತಾ ಗಮ್ಯದೆಡೆಗೆ ಸಾಗುವುದನ್ನು ನೋಡುತ್ತಾ ನಡೆಯುವುದು ಅವಿಸ್ಮರಣಿಯ ಸಂಗತಿ.

Similar Posts

1 Comment

  1. ಅದ್ಭುತವಾದ ಚಾರಣ. ಲೇಖನ ತುಂಬಾ ಚೆನ್ನಾಗಿದೆ. ಓದುತ್ತ ಹೋದಂತೆ ಲೇಖಕನ ಜೊತೆಗೆ ನಾವು ನಡೆದಂತೆ ಭಾಸವಾಗುತ್ತದೆ.

Leave a Reply

Your email address will not be published. Required fields are marked *