ಮಲೆಗಳಲ್ಲಿ ಮದುಮಗಳು; ಸಂಸ್ಕೃತಿ, ಪ್ರತಿ ಸಂಸ್ಕೃತಿ ಮತ್ತು ಪಲ್ಲಟ
ಕುವೆಂಪು ರಚಿಸಿದ “ಮಲೆಗಳಲ್ಲಿ ಮದುಮಗಳು”ಕೃತಿ ಸ್ವಾತಂತ್ರ್ಯಪೂರ್ವದ ಮೈಸೂರು ರಾಜ್ಯದ ಮಲೆನಾಡಿನ ಸಮಾಜಶಾಸ್ತ್ರೀಯ ಅಧ್ಯಯನದ ದೃಷ್ಟಿಯಿಂದಲೂ ಮುಖ್ಯವಾಗಿದೆ. ೧೯ನೇ ಶತಮಾನದ ಉತ್ತರಾರ್ಧದಲ್ಲಿ ೨೦ನೇ ಶತಮಾನದ ಪೂರ್ವಾರ್ಧದಲ್ಲಿ ಬೀಸತೊಡಗಿದ್ದ ಬದಲಾವಣೆಯ ಗಾಳಿಯ ಅಲೆಗಳನ್ನು ಗುರುತಿಸಿದೆ.
ಕೃತಿಯ ಆರಂಭದಲ್ಲಿಯೇ ಪ್ರಸ್ತಾಪವಾಗುವ ಹಳೇಪೈಕ ಅಂದರೆ ದೀವರು ಅಥವಾ ಈಡಿಗರ ಜಾತಿಯರು ಅನುಕೂಲಸ್ಥರಾಗಿದ್ದರೂ ತಮ್ಮ ಕುಟುಂಬದವರ ಮದುವೆ ಸಂದರ್ಭದ ರೀತಿ ರಿವಾಜುಗಳಲ್ಲಿ ಮೇಲುಜಾತಿಗಳನ್ನು ಅನುಕರಿಸಬಾರದಾಗಿತ್ತು ಎಂಬುದು ಅಂದಿನ ಸರ್ಕಾರವೇ ಅನುಮೋದಿಸಿದ ಕಾನೂನಾಗಿತ್ತು ! ಇದು ಅಂದಿಗೆ ಇದ್ದ, ಇಂದಿಗೂ ಬಲಿಷ್ಠರನ್ನು ಎದುರು ಹಾಕಿಕೊಳ್ಳಲಾಗದ ಸರ್ಕಾರಗಳ ನೀತಿಯಾಗಿಯೇ ಕಾಣಿಸುತ್ತದೆ. ಇದರ ವಿವರಗಳು ಕಾದಂಬರಿಯಲ್ಲಿಯೇ ಬರುತ್ತದೆ. ಅದು ಮುಂದಿದೆ.
“ಲಕ್ಕುಂದದ ಜಮೀನಿನಲ್ಲಿ ಮುಕ್ಕಾಲುಪಾಲು ಸಿಂಬಾವಿ ಭರಮೈ ಹೆಗ್ಗಡೆಯವರಿಗೆ ಸೇರಿತ್ತು. ಇನ್ನುಳಿದ ಕಾಲುಪಾಲು ಹಳೆಪೈಕದ ಸೇಸನಾಯ್ಕನ ಸ್ವಂತದ್ದಾಗಿತ್ತು. ಸಾಧಾರಣವಾಗಿ ಒಕ್ಕಲಿಗ ಒಡೆಯರ ಒಕ್ಕಲುಗಳಾಗಿದ್ದುಕೊಂಡು, ಬಗನಿಯ ಮರದಿಂದ ಕಳ್ಳು ಇಳಿಸಿ ಕುಡಿದು, ಮಾರಿ, ಜೀವನ ಮಾಡುವ ಕಳೆಪೈಕದವರಿಗೆ (ಅವರಿಗೆ “ದೀವರು” ಎಂದು ಹೆಸರೂ ಉಂಟು) ಸ್ವಂತ ಜಮೀನಿರುವುದು ಬಹಳ ಅಪೂರ್ವ; ಮಹಾ ಅನಾಚಾರವೆಂದೂ ಅನೇಕರ ಮನಸ್ಸು. ವೇದ ಕಲಿಯುವುದು ಶೂದ್ರರಿಗೆ ಹೇಗೆ ನಿಷಿದ್ದವೋ ಹಾಗೆಯೇ ಸ್ವಂತ ಜಮೀನು ಮಾಡುವುದು ಹಳೆಪೈಕದವರಿಗೆ ನಿಷಿದ್ದ ಎಂದು ಒಕ್ಕಲಿಗರಾಗಿದ್ದ ಹೆಗ್ಗಡೆ ಗೌಡ ನಾಯಕರುಗಳೆಲ್ಲ ಸೇರಿ ತೀರ್ಮಾನಮಾಡಿದ್ದರು. ಅಷ್ಟೇ ಅಲ್ಲದೆ, ಮದುವೆ ಮೊದಲಾದ ಸಂಭ್ರಮಗಳಲ್ಲಿ ಹಳೆಪೈಕದವರು ಒಕ್ಕಲಿಗರನ್ನು ಯಾವ ವಿಧದಲ್ಲಿಯೂ ಅನುಕರಿಸಕೂಡದೆಂದೂ ಮಾಮೂಲು ಕಟ್ಟಾಗಿತ್ತು. ದಿಬ್ಬಣದಲ್ಲಿ ಮದುವೆಯ ಗಂಡು ಕುದುರೆಯ ಮೇಲೆ ಸವಾರಿ ಮಾಡಬಾರದು: ದಂಡಿಗೆಯ ಮೇಲೆ ಕೂತರಂತೂ ಮದುಮಕ್ಕಳಿಗೂ ದಿಬ್ಬಣದವರಿಗೂ ಉಳಿಗತಿಯಿರಲಿಲ್ಲ. ಈ ಚರ್ಚೆ ಸರ್ಕಾರದವರೆಗೂ ಹೋಗಿ, ಅದೂ ಒಕ್ಕಲಿಗರ ಪರವಾಗಿಯೇ ತೀರ್ಮಾನ ಕೊಟ್ಟಿದ್ದರಿಂದ ಮಾಮೂಲಿಗೂ ಮಾತ್ಸರ್ಯಕ್ಕೂ ಕಾನೂನಿನ ಮುದ್ರೆ ಬೇರೆ ಬಿದ್ದಿತ್ತು. ಸರ್ಕಾರದ ಇತ್ಯರ್ಥಕ್ಕೆ ಕಾರಣ ನ್ಯಾಯಪಕ್ಷಪಾತವಾಗಿರಲಿಲ್ಲ: ಬಲ ಪಕ್ಷಪಾತವಾಗಿತ್ತು. ಬಲಿಷ್ಠರೂ ಬಹುಸಂಖ್ಯೆಯವರೂ ಆದವರ ಕಡೆ ಸರ್ಕಾರವಿದ್ದರೆ ಅದಕ್ಕೂ ಕ್ಷೇಮ; ನ್ಯಾಯ ರಕ್ಷಣೆಯೂ ಸುಲಭಸಾಧ್ಯ. ಅದರಲ್ಲಿಯೂ ಮೈಸೂರು ಸಂಸ್ಥಾನದ ಅಂಚಾಗಿ, ದುರ್ಗಮವಾದ ಪರ್ವತಾರಣ್ಯಗಳ ಬೀಡಾಗಿ, ಆಗತಾನೆ ನಗರ, ಕೌಲೆದುರ್ಗ ಮೊದಲಾದ ಪಾಳೆಯ ಪಟ್ಟುಗಳ ಕಿರುಕುಳದಿಂದ ಪಾರಾಗಿದ್ದ ಮಲೆನಾಡಿಗೆ ಅಲ್ಲಿದ್ದ ಬಹುಸಂಖ್ಯೆಯ ಬಲಿಷ್ಠರ ಇಚ್ಚೆಯಂತೆ ಸರ್ಕಾರದ ಕಾನೂನಾದುದ್ದರಲ್ಲಿ ಆಶ್ಚರ್ಯವೇನಿಲ್ಲ
ಮೇಲುಜಾತಿ ಅಥವಾ ಭಲಾಡ್ಯ ಒಕ್ಕಲಿಗರ ಒಟ್ಟು ಸಂಸ್ಕೃತಿಯ ಒಳಗೆ ಬರುವ ವಿವಾಹ ಸಂದರ್ಭದ ಆಚರಣೆಗಳನ್ನು ಕೆಳಜಾತಿ ಅಥವಾ ದುರ್ಬಲ ಜಾತಿಗಳವರು ಅನುಕರಿಸದಂಥ ದುಸ್ಥಿತಿ ಅಂದು ಇತ್ತು ಎಂಬುದನ್ನು ಕಾದಂಬರಿ ಚಿತ್ರಿಸುತ್ತದೆ.
ಮದುವೆಯ ಸಂದರ್ಭದ ಆಚರಣೆಗಳಿರಲಿ, ಕೆಳಜಾತಿಯವರು ಸ್ವಂತ ಜಮೀನು ಹೊಂದಿರುವುದು, ಅನುಕೂಲಸ್ಥರಾಗಿರುವುದು ಸಹ ಫ್ಯೂಢಲ್ ಜಾತಿಗಳವರಿಗೆ ಸಹಿಸಲಾಗದ ಸಂಗತಿಯಾಗಿತ್ತು ಎಂಬುದರ ಚಿತ್ರಣವೂ ಇಲ್ಲಿದೆ. ಆಳರಸರ ಬೆಂಬಲವೂ ಇಲ್ಲದ ಅಂದಿನ ಕೆಳಜಾತಿಗಳವರ ಪಾಡು ನೆನಸಿಕೊಂಡರು ಅವರು ಅನುಭವಿಸುತ್ತಿದ್ದ ಕಿರುಕುಳಗಳು ಅರಿವಿಗೆ ಬರುತ್ತದೆ.
ಮದುವೆ ಎನ್ನುವುದು ಒಟ್ಟು ಸಂಸ್ಕೃತಿಯ ಒಳಗೆ ಬರುವ ಕಾರಣ ಹಳೇಪೈಕದವರು ಅನುಕರಿಸಬಾರದ ಆಚರಣೆಗಳೆಂದು ಸ್ಥಳೀಯ ಭಲಾಢ್ಯರು, ರಾಜಾಜ್ಞೆಯೂ ಇದ್ದ ಕಾರಣ ಈ ಸಂಗತಿಯನ್ನು ಸಂಸ್ಕೃತಿಯ ಚೌಕಟ್ಟಿನಲ್ಲಿಯೇ ಗುರುತಿಸಿದ್ದೇನೆ. ಇಂಥವುಗಳ ವಿರುದ್ಧ ಪ್ರತಿಭಟನೆಯ ಸೊಲ್ಲು ಸಹ ಎದ್ದೇಳತೊಡಗಿದ್ದನ್ನು ಕೃತಿ ಗುರುತಿಸುತ್ತದೆ.
ಸಮಾಜಶಾಸ್ತ್ರಜ್ಞ ಎಂ. .ಎನ್. ಶ್ರೀನಿವಾಸನ್ ಗುರುತಿಸುವ “ಸಂಸ್ಕೃತೀಕರಣ” ಪ್ರಭಾವವೂ ಫ್ಯೂಢಲ್ ಜಾತಿಗಳ ಮೇಲೆ ಶುರುವಾದ ಹಂತವನ್ನು ಮಲೆಗಳಲ್ಲಿ ಮದುಮಗಳು ಗುರುತಿಸುತ್ತದೆ. ನಾನು ಇದನ್ನು “ಸಂಸ್ಕೃತೀಕರಣ” ಎನ್ನುವುದಿಲ್ಲ. ಬದಲಾಗಿ “ಬ್ರಾಹ್ಮಣೀಕರಣ” ಎನ್ನುತ್ತೇನೆ.
ಹಳೇಮನೆಯ ಶಂಕರಪ್ಪ ಹೆಗ್ಗಡೆ ಸಂಪೂರ್ಣವಾಗಿ “ಬ್ರಾಹ್ಮಣೀಕರಣ”ಕ್ಕೆ ಒಳಗಾಗಿರುತ್ತಾರೆ. ನಿತ್ಯ ಮಿಂದು ತುಳಸಿಕಟ್ಟೆಗೆ ಪೂಜೆ ಮಾಡುವುದು ಸೇರಿದಂತೆ ತೀರ್ಥ ಸೇವನೆ, ದೈನಂದಿನ ಪೂಜೆ, ಪುನಸ್ಕಾರ, ಆಚಾರ – ವಿಚಾರಗಳಲ್ಲಿ ಬ್ರಾಹ್ಮಣರನ್ನು ಅನುಕರಣೆ ಮಾಡುತ್ತಿರುತ್ತಾರೆ. ಇದು ಅವರ ಸೋದರ ಸಂಬಂಧಿಗಳಲ್ಲಿ ಅಸೂಯೆಭರಿತ ವ್ಯಂಗ್ಯಕ್ಕೂ ಕಾರಣವಾಗಿರುತ್ತದೆ. ಅದನ್ನು ಕಾದಂಬರಿಯೇ ಹೇಳುವ ಸಾಲುಗಳಲ್ಲಿ ಗಮನಿಸಬಹುದು.
”ಸಣ್ಣಮನೆ ಶಂಕರಪ್ಪ ಹೇಳಿ ಕಳ್ಸಿದ್ದ ಹೋಗಿ ಬರ್ತೀನಿ” ಎಂದು ವೆಂಕಟಣ್ಣ ಅತ್ತ ಕಡೆ ನೋಡಿದಾಗ, ಮಿಂದು ಬಂದ ಶಂಕರಪ್ಪ ಹೆಗ್ಗಡೆ ಅಂಗಳದಲ್ಲಿದ್ದ ತುಳಸಿಗೆ ನೀರು ಹಾಕಿ ಪ್ರದಕ್ಷಿಣೆ ಮಾಡುತ್ತಿದ್ದುದು ಕಣ್ಣಿಗೆ ಬಿತ್ತು. ಅದನ್ನು ನೋಡಿದ ದೊಡ್ಡ ಹೆಗ್ಗಡೆಯವರು ವ್ಯಂಗ್ಯಹಾಸ್ಯದಿಂದಲೆಂಬಂತೆ “ಓಹೋ ನಮ್ಮ ಬಿರಾಂಬರ ಮಡಿಪೂಜೆ ಆಗ್ತಾ ಇದೆ!” ಎಂದರು.
ಒಟ್ಟು ಸಂಸ್ಕೃತಿಯ ಚೌಕಟ್ಟಿನಲ್ಲಿ ಕುಟುಂಬ ಸದಸ್ಯರು ಒಟ್ಟಿಗೆ ಅಂದರೆ ಒಂದೇ ಮನೆಯಲ್ಲಿ ಹಿಸ್ಸೆ ಅಂದರೆ ಪಾಲು ಆಗದೇ ಇರುವುದು ಸಹ ಸೇರಿತ್ತು. ಈ ಅವಿಭಕ್ತ ಕುಟುಂಬ ಸಂಸ್ಕೃತಿಯಲ್ಲಿಯೂ ಪಲ್ಲಟ ಆರಂಭವಾದ ಹಂತವನ್ನೂ ಕಾದಂಬರಿ ಗುರುತಿಸುತ್ತದೆ. ಹಳೇಮನೆಯ ಸುಬ್ಬಣ್ಣ ಹೆಗ್ಗಡೆ ಮತ್ತು ಶಂಕರಪ್ಪ ಹೆಗ್ಗಡೆ ಪಾಲಾಗಿದ್ದಾರೆ. ಒಂದು ಮನೆ ಎರಡು ಮನೆಗಳಾಗಿವೆ. ಮುಂದೆ ಕೋಣೂರು ಮನೆಯ ಸಹೋದರರಾದ ರಂಗಪ್ಪ ಹೆಗ್ಗಡೆ, ಮುಕುಂದಯ್ಯ ಸಹ ಪಾಲಾಗುತ್ತಾರೆ. ಇದರ ಪೂರ್ವದಲ್ಲಿಯೇ ಮುಕುಂದಯ್ಯ ತನ್ನ ಭಾವಿ ಪತ್ನಿ ಚಿನ್ನಮ್ಮನ ಮನೆಗೆ ಬಂದು ವಾಸಿಸತೊಡಗುತ್ತಾನೆ. ಈತನನ್ನು ಅವರ ಒಟ್ಟುಮನೆಯ ಆಳು ಒಕ್ಕಲಾಗಿದ್ದ ದಂಪತಿ ಪಿಂಚಲು – ಐತ ಅನುಸರಿಸುತ್ತಾರೆ.
ಸಂಸ್ಕೃತಿ- ರೀತಿ- ರಿವಾಜು ಆಚರಣೆ ಎನ್ನುವುದು ಬ್ರಾಹ್ಮಣರು, ಒಕ್ಕಲಿಗರಿಗೆ ಮಾತ್ರ ಸೀಮಿತವಾಗಿರಲಿಲ್ಲ. ಇವರು ಕೆಳಜಾತಿ ಎಂದು ಪರಿಗಣಿಸಿದ್ದ ದಲಿತರಲ್ಲಿಯೂ ಇತ್ತು. ಆದರೆ ಅವರು ಅದನ್ನು ಕಾಪಾಡಿಕೊಳ್ಳುವಲ್ಲಿ ನಿಸ್ಸಹಾಯಕರಾಗಿದ್ದರು ಎಂಬ ಸಂಗತಿಯನ್ನು “ಮಲೆಗಳಲ್ಲಿ ಮದುಮಗಳು” ಕೃತಿ ಗುರುತಿಸುತ್ತದೆ. ಅದು ಮುಂದಿನ ಸಾಲುಗಳಲ್ಲಿದೆ.
ತಿಮ್ಮಪ್ಪ ಹೆಗ್ಗಡೆಯ ಅಬ್ಬರವನ್ನಾಲಿಸಿದ ಸಣ್ಣ ತನ್ನ ಮಗಳಿಗೆ “ಏ ಪುಟ್ಟೇ, ಸಣ್ಣ ಹೆಗ್ಗಡೇರ ಸವಾರಿ ಬಂದ ಹಾಂಗೆ ಕಾಣದೇ, ಕೆಲಸಕ್ಕೆ ಕರೆಯೋಕೆ. ಎಲ್ಲರೂ ಬಿಡಾರದ ಒಳಗೇ ಇದಾರೆ. ಒಬ್ಬರೂ ಹೊರಗೆ ತಲೆ ಹಾಕಿದ್ದಾಂಗೆ ಕಾಣಲಿಲ್ಲ. ಇನ್ನು ಅವರೇ ಕೇರಿ ಒಳಗೆ ನುಗ್ಗಿದ್ರೆ, ಇಡೀ ಕೇರಿಗೇ ಅಪಸಕುನ! ನಮ್ಮ ದಯ್ಯ ದ್ಯಾವರಿಗೆ ಮುಟ್ಟುಚಿಟ್ಟಾದ್ರೆ ಕೇರಿಗೆ ಕೇರಿನೇ ತೆಗೆದುಬಿಡ್ತವೆ! ಹೋಗಿ ಆ ಬೈರಗಾದ್ರೂ ಹೇಳ” ಎಂದು ಕೆಮ್ಮತೊಡಗಿದನು.
ಅಂದಿನ ಫ್ಯೂಢಲ್ ಜಾತಿಗಳಲ್ಲಿ ಕುಟುಂಬದ ಹಿರಿಯರ ಮಾತನ್ನು ಧಿಕ್ಕರಿಸಿ ಮದುವೆ ಸಲುವಾಗಿ ಮನೆಬಿಟ್ಟು ಹೋಗುವುದು ಅಥವಾ ಹುಡುಗ – ಹುಡುಗಿ ಓಡಿ ಹೋಗುವುದು ಒಟ್ಟು ಸಂಸ್ಕೃತಿಯಲ್ಲಿ ಇರಲಿಲ್ಲ. ಇದರಲ್ಲಿಯೂ ಪಲ್ಲಟ ಆರಂಭವಾದ ಸಂಗತಿಯನ್ನು ಕೃತಿ ಹೇಳುತ್ತದೆ. ತನ್ನದೇ ಜಾತಿಯವನು, ಸಂಬಂಧಿಕನೂ ಆಗಿದ್ದ ಮುಕುಂದಯ್ಯನನ್ನು ಮದುವೆಯಾಗಲು ಬಂದಿದ್ದ ಅಡ್ಡಿ ನಿವಾರಿಸಿಕೊಳ್ಳಲು ಚಿನ್ನಮ್ಮ ಮನೆ ಬಿಟ್ಟು ಹೊರಡುತ್ತಾಳೆ, ಮುಕುಂದಯ್ಯ ಸಹ ಮನೆ ಬಿಟ್ಟು ಬಂದಿರುತ್ತಾನೆ. ಇದು ಅಂದಿನ ದಿನಗಳ ಮಟ್ಟಿಗೆ ಬಹುದೊಡ್ಡ ಪ್ರತಿರೋಧ ಮತ್ತು ಪಲ್ಲಟ !

ಪರಿಚಯ ಮತ್ತು ವಿಶ್ಲೇಷಣೆ ಸಮಚಿತ್ತವಾಗಿದೆ. ಸೊಗಸಿದೆ.