ಪತ್ರಕರ್ತ ಎನ್.ಎಸ್. ಶಂಕರ್ ಅವರು ‘ಲಂಕೇಶ್ ಪತ್ರಿಕೆ” ಯಲ್ಲಿ ಬರೆದ ಲೇಖನಗಳನ್ನು ಓದಿದ್ದೆ. ಆದರೆ ಕಥೆಗಳನ್ನು ಓದಿರಲಿಲ್ಲ. ಇತ್ತೀಚೆಗೆ ಅವರ ‘ರೂಢಿ’ ಕಥಾ ಸಂಕಲನ ಸಿಕ್ಕಿತು. ಓದಿದೆ. ಗಾಢವಾಗಿ ತಟ್ಟಿತು. ರೂಢಿ ಮತ್ತಿತರ ಕಥೆಗಳಲ್ಲಿ ಎರಡು ಭಾಗಗಳಿವೆ. ಒಂದನೇ ಭಾಗದಲ್ಲಿ ಶಂಕರ್ ಅವರೇ ಬರೆದ ಕಥೆಗಳು. ಎರಡನೇ ಭಾಗದಲ್ಲಿ ಅನುವಾದಿಸಿದ ಕಥೆಗಳಿವೆ. ಮೊದಲನೇಯದರಲ್ಲಿ ಕೆಟ್ಟಕಾಲ, ರೂಢಿ, ರತಿ, ಆಡಿದ ಮಾತು, ಅನುಭವ ಮಂಟಪ, ಒಂದು ತನಿಖಾ ಪ್ರಸಂಗ ಮತ್ತು ಮೂರ್ನಾಡು ತೀರದಲ್ಲಿ ಇವೆ.

ಹಿರಿಯರು ‘ನುಡಿದರೆ ಮುತ್ತಿನ ಹಾರದಂತಿರಬೇಕು’ ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೊಯ್ತು’ ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು’ ಇತ್ಯಾದಿ ಅರ್ಥಪೂರ್ಣ ನುಡಿ, ಗಾದೆ ಹೇಳುತ್ತಲೇ ಇರುತ್ತಾರೆ. ಅವುಗಳನ್ನೆಲ್ಲ ಒಂದು ಕಿವಿಯಿಂದ ಕೇಳಿ ಮತ್ತೊಂದು ಕಿವಿ ಮೂಲಕ ಆಚೆ ದಾಟಿಸಿರುತ್ತೇವೆ. ‘ಕೆಟ್ಟಕಾಲ’ ಕಥೆ ಮಾತಿನೊಳಗೆ ಅಡಗಿರುವ ಸ್ಫೋಟಕತೆಯನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ. ಈ ಕಥೆ ಓದಿದರೆ ಒಂದು ಮಾತನ್ನು ಬಾಯಿಂದ ದಾಟಿಸುವ ಮೊದಲು ನೂರು ಬಾರಿ ಯೋಚಿಸುತ್ತೇವೆ ಎಂದರೆ ಕಥೆಯ ಗಹನತೆ ಅರ್ಥವಾಗಬಹುದು.

 

ಕೆಟ್ಟಕಾಲದಲ್ಲಿ ಕಥೆ ಬೆಳೆಯುವ ಕ್ರಮ ಸಹಜ. ಕೃತಿಮತೆ ನೆರಳೂ ಅಲಿಲ್ಲ. ಪ್ರತಿಯೊಂದು ಪಾತ್ರವೂ ಕಥೆಯನ್ನು ಬೆಳೆಸುತ್ತಾ ಹೋಗುತ್ತವೆ. ಆದ್ದರಿಂದ ಇಂಥ ಪಾತ್ರ ಅನವಶ್ಯಕ ಎನಿಸುವುದಿಲ್ಲ. ಕಥೆಗಾರ, ಕಥೆ ಹೇಳುವ ರೀತಿಯೂ ಭಿನ್ನ. ಭೂತ ಮತ್ತು ವರ್ತಮಾನದ ನಡುವೆ ವಿವರಗಳು ಹೊಯ್ದಾಡುತ್ತಾ ಕಥೆ ಗಂಭೀರವಾಗಿ ಬೆಳೆಯುತ್ತಾ ಸಾಗುತ್ತದೆ.ಗುರುರಾಜ, ಪೋಕರಿ, ಉಂಡಾಡಿಗುಂಡ, ಗಂಭೀರ, ಉಢಾಪೆ ಇವೆಲ್ಲವುಗಳ ಸಂಮಿಶ್ರಣ. ಊರಿನ ಬಹುತೇಕ ಗಂಡಸರು ತಮ್ಮ ನಿದ್ದೆಗೆಡಿಸಿಕೊಳ್ಳುವಷ್ಟು ಕಪ್ಪು ಸುಂದರಿ ಪಾರಿಜಾತಳನ್ನು ಲವ್ ಮಾಡಿ ಮದುವೆಯಾಗಿರುತ್ತಾನೆ. ಈಕೆ ಉತ್ತಮ ಹಾಡುಗಾರ್ತಿ ಸಹ. ಬೇರೆಯವರ ಹೊಟ್ಟೆಕಿಚ್ಚಿಗೆ ಇಷ್ಟು ಸಾಕಲ್ಲವೇ . ಎಲ್ಲ ದಾಂಪತ್ಯಗಳ ಹಾಗೆ ಇವರ ದಾಂಪತ್ಯ ಕೂಡ ಸರಸ-ವಿರಸಗಳ ನಡುವೆ ಉಯ್ಯಾಲೆಯಾಡುತ್ತಾ ಸಾಗಿರುತ್ತದೆ.

ಒಂದು ಮುನಿಸು ಇನ್ನೇನು ಸರಿಹೋಯಿತು ಎನಿಸುವಷ್ಟರಲ್ಲಿ ವಿಪರೀತಕ್ಕೆ ತಿರುಗುತ್ತದೆ. ಹೀಗಾಗಬೇಕೆಂದು ಇಬ್ಬರೂ ಬಯಸಿದವರಲ್ಲ. ಈ ಮುನಿಸು ಹರಿದು ಸರಸದ ಬೆಳಕು ಮೂಡಿದರೆ ಸಾಕೆಂದು ಹಂಬಲಿಸಿದವರೇ. ಆದರೆ ತುಟಿ ಜಾರಿದ ಮಾತುಗಳು ಸನ್ನಿವೇಶವನ್ನು ಇವರ ಅಂಕೆಗೂ ಸಿಗದಂತೆ ಬೆಳೆಸುತ್ತದೆ. ಇದಕ್ಕೂ ಮೊದಲು ಗುರುರಾಜನ ಸ್ವಗತ ಹೀಗಿದೆ.

“ಹೋಟೆಲೊಳಗೆ ಸ್ವಲ್ಪ ತಂಪಾಗಿತ್ತು. ಈಗ ತಿಂಡಿ ಸೇರಿ ಹೊಟ್ಟೆಯೂ ತಂಪಾಗಿತ್ತು. ಈಗ ಶಿವಕುಮಾರನ ಮಾತಿನ ಹಿನ್ನೆಲೆಯಲ್ಲಿ ಮನಸು ತಂತಾನೆ ಬಸಲಿಂಗಪ್ಪನ ಹೆಂಡತಿಯನ್ನೂ, ತನ್ನ ಹೆಂಡತಿಯನ್ನೂ ಅಪ್ರಯತ್ನವಾಗಿ ತೂಗಿ ನೋಡಿ ಹೆಂಡತಿ ಬಗ್ಗೆ ಹೆಮ್ಮೆಗೊಂಡಿತು. ತಾನು ಇಲ್ಲಿ ಹೊಟ್ಟೆಬಿರಿಯೇ ತಿಂದೆ. ಅಲ್ಲಿ ಅವಳು ಸಾಮಾನ್ಯ ನನ್ನನ್ನು ಬಿಟ್ಟು ಏನೂ ತಿನ್ನುವುದಿಲ್ಲ. ಜಗಳವಾದರಂತೂ ಉಪವಾಸವೇ ಎಂಬುದು ಹೊಳೆದು ಗುರುರಾಜನಿಗೆ ಈಗ ಹೆಂಡತಿಯ ಬಗ್ಗೆ ಮೆದುಭಾವನೆಯೂ ಉತ್ಪತ್ತಿಯಾಯಿತು. ಪಾಪ ಪಾರಿಜಾತ, ನನ್ನ ಬಗ್ಗೆ ಅಪ್ಪಿ ತಪ್ಪಿಯೂ ಹದ್ದುಮೀರಿ ಮಾತನಾಡುವುದಿಲ್ಲ. ಸ್ವಲ್ಪ ಕಿರಿಕಿರಿ ಮಾಡ್ತಾಳೆ ನಿಜ. ಇಲ್ಲ ಅಂತಲ್ಲ. ಗಂಡಸರಿಗೆ ಏನೇನೋ ತಲೆಯಲ್ಲಿರುತ್ತೆ. ಬೇಗ ಸಿಟ್ಟು ಬರುತ್ತೆ. ಅವಳು ಅರ್ಥ ಮಾಡಿಕೊಳ್ಳಬೇಕು. ಅಂದರೂ ನಿಧಾನವಾಗಿ ತಿಳಿಹೇಳಿದರೆ ಸರಿ ಹೋಗ್ತಾಳೆ. ಏನೂ ಸಮಸ್ಯೆ ಇಲ್ಲ. ಪಾಪ, ಸುಳ್ಯಾಕೆ, ಎಲ್ಲ ಮಗು ಥರ ಅವಳು. ಮುನಿಸಿಕೊಳ್ಳೋದು ಮಕ್ಕಳ ಥರಾನೇ”

ಅತ್ತ ಪಾರಿಜಾತ ಮನಸ್ಥಿತಿಯೂ ಹೀಗೆ ಇದೆ “ ಪಾರಿಜಾತ ಈಗ ತಹಬದಿಗೆ ಬಂದಿದ್ದಳು. ಗಂಡ ಕಣ್ಣೆದುರಿಗಿದ್ದಾಗ ಸೆಡವು ತೋರಿದರೂ ಅವನು ಕಣ್ಣಿಂದ ಮರೆಯಾದ ಮೇಲೆ ಅದರ ಕಠೋರತೆ ಯಾಕೆ ತಂತಾನೆ ಕರಗುತ್ತಿತ್ತೋ ಅವಳಿಗೆ ಅರ್ಥವಾಗಿರಲಿಲ್ಲ. ಇದೇ ಏನು, ಇನ್ನೂ ಎಷ್ಟೋ ವಿಷಯಗಳು ಅವಳಿಗರ್ಥವಾಗಿರಲಿಲ್ಲ. ತನ್ನ ಲವ್ವು, ತನ್ನ ಮದುವೆ, ಈಗ ಮಾಮೂಲಾಗಿ ನಡೆಯುತ್ತಲೇ ಇರುವ ಜಗಳ. ಇವೆಲ್ಲ ತನ್ನ ಇಷ್ಟವೇನೆಂದು ಸ್ಪಷ್ಟವಾಗುವ ಮೊದಲೇ ವಿಧಿಲೀಲೆಯಂತೆ ನಡೆದು ಹೋಗುತ್ತಿವೆ. ಅರ್ಥವಾಗಲಿ ಬಿಡಲಿ. ಈಗಂತೂ ಅವಳು, ಗಂಡ ದಿಲ್ ಖುಷ್ ತಂದರೆ ರಾಜಿಯಾಗಲು ತಯಾರಾಗಿ ಕೂತಿದ್ದಳು.

ಹೀಗೆ ಇಬ್ಬರ ಮನಸು ರಾಜಿಯಾಗಲು ಬಯಸಿದೆ. ಆದರೆ ಘಟಿಸುವುದು ಬೇರೆ. ಮಾತಿನೊಳಗಿನ ಸ್ಟೋಟಕತೆ ಒಂದು ಜೀವವನ್ನೇ ಬಲಿ ತೆಗೆದುಕೊಂಡು ಬಿಡುತ್ತದೆ. ಇನ್ನೊಂದು ಜೀವ, ತನ್ನ ಜೀವಮಾನದುದ್ದಕೂ ಕೊರಗುವಂತೆ ಮಾಡುತ್ತದೆ. ಇವೆಲ್ಲದರ ನಡುವೆ ವ್ಯಕ್ತಿಗಳ ದೊಡ್ಡತನ, ಸಣ್ಣತನ ಅನಾವರಣಗೊಳ್ಳುತ್ತಾ ಹೋಗುತ್ತವೆ.

ಕೆಟ್ಟಕಾಲ ಓದಿದ ನಂತರ ಮನಸು ಭಾರವಾಗುತ್ತದೆ. ಮಾತುಗಳ ಮರ್ಮರ, ಕಠೋರತೆ, ಅವುಗಳ ಒಳಗೆ ಹುದುಗಿರುವ ಭಯಾನಕತೆ, ಕ್ರೂರತೆ ಅವೆಲ್ಲವುಗಳನ್ನು ಕಥೆ ಕಟ್ಟಿಕೊಡುತ್ತದೆ. ಮತ್ತೆಮತ್ತೆ ಮನಸು ಅವುಗಳನ್ನೇ ಚಿಂತಿಸುವಂತೆ ಮಾಡುತ್ತದೆ. ಆದ್ದರಿಂದ “ಕೆಟ್ಟಕಾಲ” ಉಂಟು ಮಾಡುವ ಪರಿಣಾಮ ದೀರ್ಘ…

‘ರೂಢಿ’ ಇದು ಭ್ರಷ್ಟಚಾರವನ್ನೇ ಕುರಿತ ಕಥೆಯಲ್ಲ. ಭ್ರಷ್ಟಚಾರದ ಅಲೆಗಳು ವ್ಯಕ್ತಿಯನ್ನು ತೇಲಿಸುವ ಕಥೆ. ಶಂಕರನಾರಾಯಣನಿಗೆ ಲಂಚ ತೆಗೆದುಕೊಳ್ಳುವ ಆಸೆಯಿದೆ. ಆದರೆ ಧೈರ್ಯವಿಲ್ಲ. ಅದು ಉಂಟು ಮಾಡಬಹುದಾದ ಪರಿಣಾಮಗಳ ಹೆದರಿಕೆ ಜೊತೆಗೆ ಅವಕಾಶವೂ ಒದಗದಿರುವುದು. ಆದರೆ ಅಂಥ ಅವಕಾಶ ಒದಗುತ್ತದೆ. ನಂತರ ಅದು ಪುನರಾವರ್ತನೆ ಆಗುತ್ತಲೇ ಹೋಗುತ್ತದೆ. ಹೆಚ್ಚುವರಿ ಹಣ ಸೇರತೊಡಗಿದ ಮೇಲೆ ಆತನ ವ್ಯಕ್ತಿತ್ವದಲ್ಲಿ ಬದಲಾವಣೆ ಶುರುವಾಗುತ್ತದೆ. ಈತನನ್ನು ಹೆಂಡತಿ ಮತ್ತು ಬಂಧುಗಳು ನೋಡುವ ಕ್ರಮ ಬೇರೆಯಾಗುತ್ತದೆ. ಗೌರವಾದರ ಮೂಡುತ್ತದೆ,

ಹಣದ ಮೂಲ ಭ್ರಷ್ಟಚಾರವೇ ಆಗಿದ್ದರೂ ಸಮಾಜ ನೋಡುವ ನೋಟದಲ್ಲಿ ಎಂಥ ಪಲ್ಲಟಗಳಾಗಿವೆ ಎಂಬುದನ್ನು ರೂಢಿ ಪರಿಣಾಮಕಾರಿಯಾಗಿ ಹೇಳುತ್ತದೆ. ಈ ಕಥೆಯ ಕೊನೆಯಲ್ಲಿ ಬರುವ ಈ ಸಾಲುಗಳು ಧ್ವನಿಪೂರ್ಣವಾಗಿವೆ. “ಅವತ್ತು ಊರಿನಲ್ಲಿಯೇ ಉಳಿಯಬೇಕೆನ್ನುವ ಅವರೆಲ್ಲರ ಒತ್ತಾಯವನ್ನೂ ನಯವಾಗಿ ತಳ್ಳಿಹಾಕಿ ವಾಪ್ಪಸ್ಸು ಕಾರಿನಲ್ಲಿ ಹೊರಟಾಗ ಮಣ್ಣುದಾರಿಯ ಧೂಳು ಒಳಬಾರದೆಂದು ಹೆಂಡತಿ ಏರಿಸಿದ್ದ ಕಿಟಿಕಿ ಗಾಜುಗಳನ್ನು ಇವನೇ ಇಳಿಸತೊಡಗಿದ. ‘ಯಾಕ್ರೀ’ ಮಳೆ ಬರುವ ಹಾಗಿತ್ತು. ಆ ಮಳೆಯ ಕಂಪಿಗೆ ಉಸಿರೆಳೆದ ಶಂಕರನಾರಾಯಣನಲ್ಲಿ ಈಗ ಯಾವ ಅಳುಕು ಇರಲಿಲ್ಲ. ತನ್ನ ‘ಯಶಸ್ಸಿಗೆ’ ಸಾಮಾಜಿಕ ಒಪ್ಪಿಗೆಯಿದೆಯೆಂದು ಗ್ರಹಿಸಿದ್ದ ಅವನ ಒಳಮನಸು, ಈಗ ಅವನ ಮುಖದ ಮೇಲೆ ನಿರುಮ್ಮಳ ಮುಗುಳ್ನಗೆ ಅರಳಿಸಿತು. ಆ ನಗು ಕಂಡು ಸೋತ ಸೀತಾಲಕ್ಷ್ಮಿ, ಯಾಕೆಂದು ತಿಳಿಯದೇ ತಾನೂ ನಕ್ಕಳು”

“ರತಿ” ಇಲ್ಲಿ “ನೀನು ಕಥೆಗಾರ ಆಗಲಾರೆ ಕಣ್ಣಯ್ಯ” ಎಂಬ ವಾಕ್ಯದೊಂದಿಗೆ ಕಥೆ ಬೆಳೆಯುತ್ತಾ ಹೋಗುತ್ತದೆ. ಹೀಗೆ ಹೇಳಿಸಿಕೊಂಡ ವ್ಯಕ್ತಿಯ ಮೂಲಕವೇ ಕಥೆಗಾರ,ಕಥೆ ಹೇಳಿಸುತ್ತಾರೆ. ಹೀಗೆ ಹೇಳಿದವರು ಆತನ ಗುರು. ಅಂದರೆ ಪಾಠ ಮಾಡಿದ ಗುರು ಅಲ್ಲ. ಆತ ಲೇಖಕ, ನಾಟಕಕಾರ ಮತ್ತು ರಂಗ ನಿರ್ದೇಶಕ ಆಗಿದ್ದ ವ್ಯಕ್ತಿಯೊಬ್ಬರ ಮೇಲಿನ ಅಭಿಮಾನದಿಂದ ಹೇಳುವ ಮಾತು.

ಈ ಗುರು ಮತ್ತು ಆತ ನಿರ್ದೇಶಿಸುವ ನಾಟಕದಲ್ಲೊಂದು ಪ್ರಮುಖ ಪಾತ್ರ ಮಾಡುತ್ತಿದ್ದ ರತಿ ಎಂಬಾಕೆ ಸುತ್ತ ಕಥೆ ಬೆಳೆಯುತ್ತದೆ. ಗುರು, ರತಿಯ ಮೋಹಕ್ಕೆ ಸಿಲುಕುತ್ತಾನೆ. ಇದರ ಬಗ್ಗೆ ಆತನಲ್ಲಿ ನಡೆದಾಡುವ ಹೊಯ್ದಾಟಗಳು, ತುಮುಲಗಳು, ಆತನ ವೈಯಕ್ತಿಕ ಬದುಕಿನ ಮೇಲಾಗುವ ಪರಿಣಾಮಗಳನ್ನು ಆತನೇ ಹೇಳುತ್ತಾ ಹೋಗುತ್ತಾನೆ. ಗುರುವಿನ ಗೆಳತಿಯೂ ಆಗಿದ್ದ ರತಿಯ ದುರಂತ ಅಂತ್ಯವನ್ನು ಹೇಳುವುದು ಆತನ ಶಿಷ್ಯ. ಇದು ಬದುಕಿನ ಎಳೆಗಳು ಎತ್ತ ಬೇಕಾದರೂ ಎಳೆದಾಡಬಹುದು ಎನ್ನುವುದನ್ನು ತೋರ್ಪಡಿಸುತ್ತವೆ.

ಸಮಾಜದಲ್ಲಿ ಹೆಣ್ಣು-ಗಂಡಿನ ಕುರಿತ ನೋಟಗಳ ಬಗ್ಗೆ ಇರುವ ಅಗಾಧ ವ್ಯತ್ಯಾಸದ ಬಗ್ಗೆಯೂ ಹೇಳುತ್ತದೆ. ಇದಕ್ಕೆ ಸಾಕ್ಷಿ ಗುರು ಎನಿಸಿಕೊಂಡವನು ತಣ್ಣಗೆ ಮದ್ಯಪಾನ ಮಾಡುತ್ತಾ ತನ್ನ ಮೋಹದ ಕಥೆಯನ್ನು ಹೇಳುತ್ತಾ ಹೋಗುವ ರೀತಿಯಲ್ಲಿಯೇ ವ್ಯಕ್ತವಾಗುತ್ತದೆ. ಸಮಾಜದ ಇಂಥ ಆಷಾಢಭೂತಿತನವನ್ನು ರತಿ ಅನಾವರಣ ಮಾಡುತ್ತದೆ.

“ಆಡಿದ ಮಾತು” ಕಥೆಗೆ ತಮಿಳು ನಾಣ್ನುಡಿ ಅಡಿಸಾಲು ಇದೆ. ‘ಆಡಿದ ಮಾತಿಗೆ ನಾನು ಒಡೆಯ, ನಾನಾಡಿದ ಮಾತು ನನಗೆ ಒಡೆಯ’ ‘ಅಷ್ಟೆ ನಾನವನಿಗೆ ಚಾಕು ಹಾಕಿಬಿಡ್ತೀನಿ’ ಅಂದವನ ಒಳಗೆ ನಡೆಯುವ ತುಮುಲಗಳನ್ನು, ಆಡಿದ ಮಾತನ್ನು ನೇರವೇರಿಸಲೇಬೇಕೆನ್ನುವ ಹುಂಬ ಹಠಕ್ಕೆ ಕಾರಣವಾದ ಸನ್ನಿವೇಶಗಳನ್ನು ಕಥೆ ಹೇಳುತ್ತದೆ. ಇದೊಂದೊ ಮನಃಶಾಸ್ತ್ರೀಯ ಕಥೆಯೂ ಹೌದು. ಯಾರಾದರೂ ನಮಗೆ ‘ ಅದೆಲ್ಲ ನಿನ್ನ ಕೈಲಿ ಆಗುವ-ಹೋಗುವ ಮಾತಲ್ಲ’ ಎಂದೇಳಿ ಕುಹಕದ ನಗೆ ನಕ್ಕರೆ ಅದನ್ನು ಈಡೇರಿಸಲೇಬೇಕೆನ್ನುವ ಹಠಕ್ಕೆ ಬೀಳುತ್ತೇವೆ. ಎದುರಿನವರ ಬುದ್ದಿಮಾತು ನಾಟುವುದಿಲ್ಲ. “ಇಲ್ಲಿ ಚಾಕು ಹಾಕಿಬಿಡ್ತೀನಿ” ಅಂದವನು ಕೊಲೆ ಮಾಡುವುದಿಲ್ಲ. ಆದರೆ ಚಾಕು ತೆಗೆದುಕೊಳ್ಳುತ್ತಾನೆ. ಸ್ವಾರಸ್ಯಕರ ಕಥೆ ಇದು.

‘ಅನುಭವ ಮಂಟಪ’ ಕಥೆ ಸಿನೆಮಾ ರಂಗದ ದಗಲುಬಾಜಿ ವ್ಯಕ್ತಿಯೊಬ್ಬನಿಂದ ಮೋಸಹೋದ ವ್ಯಾಪಾರಿಯೋರ್ವನ ಕಥೆ. ಆದರೆ ಮೋಸದಿಂದ ಆತನೇನು ಕುಸಿದು ಹೋಗುವುದಿಲ್ಲ. ತಾನು ಬಕ್ರಾ ಆದ ರೀತಿಯಲ್ಲಿಯೇ ಬೇರೆಯವರನ್ನು ಬಕ್ರಾ ಮಾಡಲು ರೆಡಿಯಾಗುತ್ತಾನೆ. ಹಿಂದು-ಮುಂದು ಗೊತ್ತಿಲ್ಲದೇ ವ್ಯವಹಾರಕ್ಕೆ ಇಳಿದರೆ ಎಂಥಾ ಸ್ಥಿತಿ ಒದಗುತ್ತದೆ ಎಂಬುದನ್ನು ಅನುಭವ ಮಂಟಪ ಹೇಳುತ್ತದೆ.

‘ಒಂದು ತನಿಖಾ ಪ್ರಸಂಗ” ಮಗಳಿಗೆ ಸೂಕ್ತ ವರನನ್ನು ಹುಡುಕುತ್ತಾ ಇರುವ ವ್ಯಕ್ತಿಯೊಬ್ಬ, ತನ್ನ ಕಿರಿಯ ಸಹೋದ್ಯೋಗಿ ಜಾತಿ ತಿಳಿದುಕೊಳ್ಳುವ ಹಾದಿಯಲ್ಲಿನ ವಿವರಗಳ ಬಗ್ಗೆ ಕಥೆ ಹೇಳುತ್ತದೆ. ಆದರೆ ಇದು ಅಂಥ ದಟ್ಟ ಚಿತ್ರಣ ನೀಡುವಂಥ ಕಥೆಯೇನಲ್ಲ. ಆದರೆ ಕಥೆ ಬೆಳೆಸುವ ಕ್ರಮ ಚೆನ್ನಾಗಿದೆ.

‘ಮೂರ್ನಾಡು ತೀರದಲ್ಲಿ” 1940ರ ದಶಕದ ಮಧ್ಯಭಾಗದಲ್ಲಿ ನಡೆದ ಕೋಮುಗಲಭೆ, ಸಂಸ್ಥಾನದ ಮುಖ್ಯಸ್ಥ ಅದನ್ನು ಎದುರಿಸುವ ಕ್ರಮವನ್ನು ಕಥೆ ಹೇಳುತ್ತದೆ. ಕಥೆ ಅಷ್ಟಕ್ಕೆ ಮುಗಿಯುವುದಿಲ್ಲ. ಗಲಭೆಗೆ ಕಾರಣವಾದ ಹಿಂದೂ ಮತ್ತು ಮುಸ್ಲೀಮ್ ವ್ಯಕ್ತಿಗಳಿಬ್ಬರಿಗೂ ಮರಣದಂಡನೆ ವಿಧಿಸಲಾಗುತ್ತದೆ. ಆದರೆ ಮೂಲಭೂತವಾಗಿ ಮುಖ್ಯಸ್ಥ ಇಂಥ ಘೋರಶಿಕ್ಷೆಗಳಿಗೆ ವಿರುದ್ಧ. ಆದರೆ ವಿಚಾರಣೆ ಪ್ರಕ್ರಿಯೆಯಲ್ಲಿ ಈ ತೀರ್ಮಾನಕ್ಕೆ ಬರುವುದು ಅನಿವಾರ್ಯವಾಗುತ್ತದೆ.

ಶಿಕ್ಷೆಗೊಳಗಾದ ಇಬ್ಬರಿಗೂ ತಪ್ಪಿಸಿಕೊಳ್ಳುವ ಸಾಧ್ಯತೆಯೂ ಇರುವ ರೀತಿ ಮರಣದಂಡನೆ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಮರಣದಿಂದ ಪಾರಾಗಲೇಬೇಕಾದರೇ ಇಬ್ಬರೂ ಒಂದಾಗಲೇಬೇಕು. ಅವರೇನು ಮಾಡುತ್ತಾರೆ, ಅವರಿಬ್ಬರಲ್ಲಿ ಮೂಡುವ ಹೊಸನೋಟವೇನು ಎಂಬುದನ್ನು ಕಥೆ ಪರಿಣಾಮಕಾರಿಯಾಗಿ ಹೇಳುತ್ತದೆ.

ಸಂಕಲನದ ಎರಡನೇ ಭಾಗದಲ್ಲಿ ಅನುವಾದಿತ ಕಥೆಗಳಿವೆ. ಚಾಪ್ಲಿನ್ ಮತ್ತು ಮಂಟೋ ಅವರ ಕಥೆಗಳನ್ನು ಅನುವಾದ ಮಾಡಿದ್ದಾರೆ. ಅನುವಾದ ಕಾರ್ಯವನ್ನು ಹೇಗೆ ಸಶಕ್ತಗೊಳಿಸಬಹುದು ಎಂಬುದಕ್ಕೆ ಈ ಕಥೆಗಳು ಉದಾಹರಣೆ. ತಲ್ಲಣಗೊಳಿಸುವ ಈ ಕಥೆಗಳ ಬಗ್ಗೆ ಮತ್ತೆ ಬರೆಯುತ್ತೇನೆ.

ಸಂಕಲನದ ಹೆಸರು: ರೂಢಿ, ಕಥೆಗಾರ: ಎನ್.ಎಸ್. ಶಂಕರ್. ಪ್ರಕಾಶಕರು: ಐಬಿಎಚ್ ಪ್ರಕಾಶನ

Similar Posts

Leave a Reply

Your email address will not be published. Required fields are marked *