Kannadaಕೃಷಿ

ಒಂದೇ ಮಾರುಕಟ್ಟೆ ಮೇಲೆ ಅವಲಂಬನೆ ತರುವ ಆಪತ್ತು

ಚೀನಾ ದೇಶವು ತೈವಾನ್‌ನಿಂದ ಅತಿಯಾಗಿ ಸೀತಾಫಲ (Custard Apples – Atemoya) ಹಣ್ಣುಗಳನ್ನು ಆಮದು ಮಾಡಿಕೊಳ್ಳಲು ಮತ್ತೆ ಆಸಕ್ತಿ ತೋರಿಸುತ್ತಿರುವುದು ತೈವಾನ್‌ನ ಕೃಷಿ ವಲಯದಲ್ಲಿ ದೊಡ್ಡ ಆತಂಕವನ್ನು ಮೂಡಿಸಿದೆ.

ತೈವಾನ್ ಸೀತಾಫಲ ಬೆಳೆಗಾರರ ಕಥೆ

ಕೃಷಿಯಲ್ಲಿ ಕೇವಲ ಉತ್ತಮ ಇಳುವರಿ ಪಡೆದರೆ ಸಾಲದು, ಅದನ್ನು ಮಾರಾಟ ಮಾಡಲು ಸುರಕ್ಷಿತ ಮತ್ತು ಸ್ಥಿರವಾದ ಮಾರುಕಟ್ಟೆ ಇರಬೇಕು. ಈ ಮಾತಿಗೆ ಜಾಗತಿಕ ಮಟ್ಟದ ಉದಾಹರಣೆಯಾಗಿ ನಿಂತಿರುವುದು ತೈವಾನ್ ದೇಶದ ಸೀತಾಫಲ (ಅಲ್ಲಿನ ವಿಶೇಷ ತಳಿ ‘ಆಟೆಮೊಯಾ’) ಬೆಳೆಗಾರರ ಸದ್ಯದ ಪರಿಸ್ಥಿತಿ ನಮ್ಮ ಮುಂದಿದೆ.

ಏನಿದು ತೈವಾನ್ ಸೀತಾಫಲ ವಿವಾದ?

ತೈವಾನ್‌ನ ತೈತುಂಗ್ ಪ್ರಾಂತ್ಯದಲ್ಲಿ ಅತ್ಯಂತ ರುಚಿಕರವಾದ, ದೊಡ್ಡ ಗಾತ್ರದ ಸೀತಾಫಲಗಳನ್ನು ಬೆಳೆಯಲಾಗುತ್ತದೆ. ಈ ಹಣ್ಣುಗಳಿಗೆ ಚೀನಾದಲ್ಲಿ ಭಾರಿ ಬೇಡಿಕೆ.  ಹೀಗಾಗಿ, ತೈವಾನ್‌ನ ಶೇಕಡಾ 90 ಕ್ಕಿಂತ ಹೆಚ್ಚು ಸೀತಾಫಲಗಳು ಚೀನಾ ಒಂದಕ್ಕೇ ರಫ್ತಾಗುತ್ತಿದ್ದವು. ಆದರೆ  2021 ರಲ್ಲಿ ಚೀನಾ ಸರ್ಕಾರವು ಹಣ್ಣುಗಳಲ್ಲಿ ‘ಕೀಟಗಳು ಪತ್ತೆಯಾಗಿವೆ’ ಎಂಬ ಕಾರಣ ನೀಡಿ ತೈವಾನ್‌ನ ಸೀತಾಫಲ ಆಮದನ್ನು ಸಂಪೂರ್ಣವಾಗಿ ನಿಷೇಧಿಸಿತು. ಒಂದೇ ರಾತ್ರಿಯಲ್ಲಿ ತನ್ನ ದೊಡ್ಡ ಮಾರುಕಟ್ಟೆಯನ್ನು ಕಳೆದುಕೊಂಡ ತೈವಾನ್ ರೈತರು ಕಂಗಾಲಾದರು. ಹಣ್ಣಿನ ಬೆಲೆ ಶೇಕಡಾ 50 ಕ್ಕಿಂತಲೂ ಹೆಚ್ಚು ಕುಸಿತ ಕಂಡು ರೈತರು ಭಾರಿ ನಷ್ಟ ಅನುಭವಿಸಿದರು.

ಇಂಥದ್ದೇ ಪರಿಸ್ಥಿತಿ ಇತ್ತೀಚೆಗೆ ಭಾರತದ ಒಣ ಮೆಣಸಿನಕಾಯಿಗೂ ಒದಗಿಬಂದಿದ್ದನ್ನು ಸ್ಮರಿಸಬಹುದು. ಇವುಗಳಲ್ಲಿ ಅಪಾಯಕಾರಿ ಕೀಟನಾಶಕಗಳ ಶೇಷಾಂಶವಿದೆ ಎಂದು ಹೇಳಿ ಚೀನಾ ದೇಶವು ಮೆಣಸಿನಕಾಯಿಯನ್ನು ನಿಷೇಧಿಸಿತ್ತು. ಇದರಿಂದ ಭಾರತೀಯ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವಂತಾಯಿತು

ಈಗ ಮೂಡಿರುವ ಹೊಸ ಆತಂಕವೇನು?

ಇತ್ತೀಚೆಗೆ ಚೀನಾ ಮತ್ತೆ ತೈವಾನ್‌ನಿಂದ ಭಾರಿ ಪ್ರಮಾಣದಲ್ಲಿ ಸೀತಾಫಲಗಳನ್ನು ಖರೀದಿಸಲು ಮುಂದೆ ಬಂದಿದೆ. ಆದರೆ, ತೈವಾನ್‌ನ ಕೃಷಿ ಸಚಿವಾಲಯವು ತನ್ನ ರೈತರಿಗೆ ಚೀನಾದ ಈ ಆಮಿಷಕ್ಕೆ ಬಲಿಯಾಗಬೇಡಿ ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

ಇದಕ್ಕೆ ಅಲ್ಲಿನ ಸರ್ಕಾರ ನೀಡುವ ಕಾರಣ ಚೀನಾದ “ಬೆಳೆಸು, ಸಿಲುಕಿಸು, ಮುಗಿಸು” (Raise, Trap, Kill) ತಂತ್ರ!

  1. ಬೆಳೆಸು (Raise): ಮೊದಲು ಹೆಚ್ಚಿನ ಬೆಲೆ ಮತ್ತು ದೊಡ್ಡ ಆರ್ಡರ್ ನೀಡಿ ರೈತರು ಹೆಚ್ಚು ಹೆಚ್ಚು ತೋಟಗಳನ್ನು ಮಾಡುವಂತೆ ಪ್ರೇರೇಪಿಸುವುದು.
  2. ಸಿಲುಕಿಸು (Trap): ರೈತರು ಸಂಪೂರ್ಣವಾಗಿ ಆ ದೇಶದ ಮಾರುಕಟ್ಟೆಯ ಮೇಲೆಯೇ ಅವಲಂಬಿತರಾಗುವಂತೆ ಮಾಡುವುದು.
  3. ಮುಗಿಸು (Kill): ರಾಜಕೀಯ ಕಾರಣಗಳಿಗಾಗಿ ಅಥವಾ ಒತ್ತಡ ಹೇರಲು ಇದ್ದಕ್ಕಿದ್ದಂತೆ ಆಮದನ್ನು ನಿಲ್ಲಿಸಿಬಿಡುವುದು ಅಥವಾ ಭಾರಿ ತೆರಿಗೆ (Tariff) ವಿಧಿಸುವುದು. ಇದರಿಂದ ರೈತರು ಆರ್ಥಿಕವಾಗಿ ಸಂಪೂರ್ಣವಾಗಿ ಕಂಗೆಡುತ್ತಾರೆ.

ನಮ್ಮ ಭಾರತೀಯ ರೈತರು ಇದರಿಂದ ಕಲಿಯಬೇಕಾದ ಪಾಠಗಳೇನು?

ತೈವಾನ್‌ನ ಈ ಪರಿಸ್ಥಿತಿ ನಮ್ಮ ದೇಶದ ಮತ್ತು ರಾಜ್ಯದ ರೈತರಿಗೂ ಒಂದು ಎಚ್ಚರಿಕೆಯ ಗಂಟೆಯಾಗಿದೆ. ನಮ್ಮಲ್ಲೂ ಕೆಲವೊಮ್ಮೆ ಯಾವುದೇ ಒಂದು ನಿರ್ದಿಷ್ಟ ಹಣ್ಣು, ತರಕಾರಿ ಅಥವಾ ಬೆಳೆಗೆ ಯಾವುದೋ ಒಂದು ಪಟ್ಟಣ ಅಥವಾ ಕಂಪನಿಯಿಂದ ತಾತ್ಕಾಲಿಕವಾಗಿ ಭಾರಿ ಬೇಡಿಕೆ ಬರುತ್ತದೆ. ಆಗ ರೈತರು ಕಲಿಯಬೇಕಾದ ಸೂತ್ರಗಳು ಇಲ್ಲಿವೆ:

ವೈವಿಧ್ಯಮಯ ಮಾರುಕಟ್ಟೆ (Market Diversification): ನಿಮ್ಮ ಬೆಳೆಯನ್ನು ಕೇವಲ ಒಬ್ಬನೇ ದೊಡ್ಡ ವ್ಯಾಪಾರಿಗಾಗಲಿ ಅಥವಾ ಒಂದೇ ಒಂದು ಮಾರುಕಟ್ಟೆಗಾಗಲಿ ಸೀಮಿತಗೊಳಿಸಬೇಡಿ. ನಿಮ್ಮ ಉತ್ಪನ್ನಕ್ಕೆ ಕನಿಷ್ಠ 2-3 ವಿಭಿನ್ನ ಮಾರಾಟದ ದಾರಿಗಳಿರಲಿ ಉದಾಹರಣೆಗೆ ಸ್ಥಳೀಯ ಮಾರುಕಟ್ಟೆ, ಹತ್ತಿರದ ನಗರಗಳು ಮತ್ತು ಸಂಸ್ಕಾರ ಘಟಕಗಳು

 ಮೌಲ್ಯವರ್ಧನೆ (Value Addition): ಹಣ್ಣುಗಳು ಬೇಗನೆ ಕೊಳೆಯುವುದರಿಂದ ಮಾರುಕಟ್ಟೆ ಸಿಗದಿದ್ದಾಗ ನಷ್ಟ ಗ್ಯಾರಂಟಿ. ತೈವಾನ್ ಸರ್ಕಾರ ತನ್ನ ರೈತರನ್ನು ರಕ್ಷಿಸಲು ಸೀತಾಫಲವನ್ನು ತಕ್ಷಣವೇ ‘ಫ್ಲ್ಯಾಶ್ ಫ್ರೀಜ್’ (Flash Freeze – ಐಸ್ ತರಹ ಗಟ್ಟಿಯಾಗಿಸುವುದು) ಮಾಡಿ ಜ್ಯೂಸ್ ಮತ್ತು ಪಲ್ಪ್ ತಯಾರಿಸಿ ಜಪಾನ್ ಹಾಗೂ ಸಿಂಗಾಪುರಕ್ಕೆ ರಫ್ತು ಮಾಡಲು ಆರಂಭಿಸಿತು. ನಮ್ಮಲ್ಲೂ ಹಣ್ಣುಗಳ ಪಲ್ಪ್, ಒಣಗಿಸಿದ ಉತ್ಪನ್ನಗಳನ್ನು ಮಾಡುವತ್ತ ಗಮನ ಹರಿಸಬೇಕು.

 ಒಂದೇ ಬೆಳೆಗೆ ಮುಗಿಬೀಳಬೇಡಿ: ಮಾರುಕಟ್ಟೆಯಲ್ಲಿ ಸದ್ಯಕ್ಕೆ ಒಂದು ಬೆಳೆಗೆ ಭಾರಿ ಬೆಲೆ ಇದೆ ಎಂದು ಇಡೀ ಜಮೀನಿನಲ್ಲಿ ಅದನ್ನೇ ಬೆಳೆಯಬೇಡಿ. ಮಿಶ್ರ ಬೇಸಾಯ ಅಥವಾ ವೈವಿಧ್ಯಮಯ ಬೆಳೆಗಳನ್ನು ಬೆಳೆಯುವುದರಿಂದ ಮಾರುಕಟ್ಟೆಯ ಅಪಾಯವನ್ನು ಕಡಿಮೆ ಮಾಡಬಹುದು. ಮಾರುಕಟ್ಟೆಯಲ್ಲಿ ಹಠಾತ್ ಆಗಿ ಸಿಗುವ ಭಾರಿ ಲಾಭದ ಹಿಂದೆ ಅಷ್ಟೇ ದೊಡ್ಡ ಅಪಾಯವೂ ಇರುತ್ತದೆ. ಜಾಣ್ಮೆಯ ಮಾರುಕಟ್ಟೆ ನಿರ್ವಹಣೆಯೇ ಕೃಷಿಯ ನಿಜವಾದ ಯಶಸ್ಸು.

Leave a Reply

Your email address will not be published. Required fields are marked *

error: Content is protected !!