ನಿಯಮ ಅಳವಡಿಸಿ ಕನ್ನಡ ಚಿತ್ರರಂಗ ಬೆಳವಣಿಗೆಗೆ ಪ್ರಯತ್ನಿಸಿ
ಬೆಂಗಳೂರು, ಜೂನ್ 18: ಸಿನಿಮಾಟೋಗ್ರಾಫ್ ಆ್ಯಕ್ಟ್ ಸಾಕಷ್ಟು ಬದಲಾವಣೆಗಳೊಂದಿಗೆ ಈಗ ಜಾರಿಗೊಂಡಿದೆ. ಶಾಸನಬದ್ಧವಾಗಿ ಜಾರಿಗೊಂಡಿರುವ ಎಲ್ಲ ಕಾನೂನುಗಳನ್ನು ಪಾಲಿಸುವದರೊಂದಿಗೆ ಕನ್ನಡ ಚಿತ್ರರಂಗದ ಉತ್ತೇಜನಕ್ಕೆ ಬೇಕಾದ ಸದ್ಯದ ತುರ್ತು ಕ್ರಮಗಳೇನು ಎಂಬುದನ್ನು ಅವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಸಿಬಿಎಫ್‌ಸಿ ಸದಸ್ಯ, ಹಿರಿಯ ಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ ಅಭಿಪ್ರಾಯ ಪಟ್ಟರು.
ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ(ಸಿಬಿಎಫ್‌ಸಿ) ಪ್ರಾದೇಶಿಕ ಕಚೇರಿಯು ಇಲ್ಲಿನ ಮಲ್ಲೇಶ್ವರಂನ ಎಸ್‌ಆರ್‌ವಿ ಥೇಟರಿನಲ್ಲಿ ಗುರುವಾರ ಆಯೋಜಿಸಿದ್ದ ಕನ್ನಡ ಚಿತ್ರೋದ್ಯಮಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಮಾಜಿಕ ಜಾಲತಾಣಗಳು,ಮಾಧ್ಯಮಗಳ ಸವಾಲನ್ನು ಚಿತ್ರರಂಗ ಹೇಗೆ ಎದುರಿಸಬೇಕು.ಈ ಎಲ್ಲ ಸವಾಲುಗಳ ಮಧ್ಯೆ ಸಾರ್ವಜನಿಕವಾಗಿ ಪ್ರದರ್ಶನಗೊಳ್ಳುವ ಚಲನಚಿತ್ರಗಳಿಗೆ ಇರುವ ಜವಾಬ್ದಾರಿಗಳನ್ನು ಸೃಜನಶೀಲ ಸಿನೆಮಾ ನಿರ್ಮಾತೃಗಳು ಅರಿಯಬೇಕು. ಮೂಕ ಮತ್ತು ಕಿವುಡರಿಗೆ ಅನೇಕ ಸೌಕರ್ಯಗಳನ್ನು ಸಿನೆಮಾ ಹಾಗೂ ಸಿನೆಮಾ ಮಂದಿರಗಳು ಅಳವಡಿಸಿಕೊಳ್ಳಬೇಕು.ದೃಷ್ಟಿ ವಿಕಲಚೇತನರಿಗಾಗಿ ಬ್ರೈಲ್ ಬಳಕೆ ಬಗ್ಗೆ ನ್ಯಾಯಾಲಯದ ನಿರ್ದೇಶನಗಳು ಬಂದಿವೆ.ಅಂತಹ ಸಮುದಾಯಗಳನ್ನು ಒಳಗೊಳ್ಳಲು ನಾವೆಲ್ಲ ಒಟ್ಟಾಗಿ ಹೆಜ್ಜೆ ಇರಿಸಬೇಕು ಎಂದರು.
ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ(ಸಿಬಿಎಫ್‌ಸಿ) ಅಧ್ಯಕ್ಷ ಶಶಿಶೇಖರ್ ವೇಂಪಾಟಿ ಅವರು ಮಾತನಾಡಿ,ಕನ್ನಡ ಚಿತ್ರರಂಗದ ಸಮಸ್ಯೆಗಳನ್ನು ಅರಿಯಲು ಇಂದು ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ ಚಿತ್ರೋದ್ಯಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ನಿರ್ಮಾಪಕರು,ನಿರ್ದೇಶಕರು,ಕಲಾವಿದರು,ತಂತ್ರಜ್ಞರಿಂದ ಅರ್ಥಪೂರ್ಣ ಸಲಹೆಗಳನ್ನು ಪಡೆದು ಉನ್ನತ ಮಟ್ಟದಲ್ಲಿ ಚರ್ಚಿಸಲಾಗುವುದು ಎಂದರು.
