Kannadaರಾಜಕೀಯ

ಸೂಚನೆಗೂ ಮುನ್ನ ಸಿದ್ದರಾಮಯ್ಯ ಅಧಿಕಾರದಿಂದ ನಿರ್ಗಮಿಸಿದ್ದರೆ ?

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಪದವಿಗೆ ರಾಜಿನಾಮೆ ನೀಡಲು ಕಾಂಗ್ರೆಸ್‌ ಹೈ ಕಮಾಂಡ್‌ ಸೂಚಿಸಿದೆ ಎನ್ನುವುದೇ ಪಕ್ಷದ ಅಧಿಕಾರ ಗ್ರಹಣಕ್ಕೂ ಮೊದಲೇ ೫೦/೫೦ ಅವಧಿಗೆ ಅಧಿಕಾರ ಹಂಚಿಕೆಯಾಗಿತ್ತು ಎಂಬುದು ಸಾಬೀತಾಗಿದೆ. ೨೦೨೩ ರಲ್ಲಿ ಭರ್ಜರಿ ಬಹುಮತದಿಂದ ಗೆದ್ದರೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕತ್ವ ಆಯ್ಕೆ ವಿಳಂಬವಾಗಿತ್ತು.

ಈ ಸ್ಥಾನಕ್ಕೆ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಪ್ರಬಲ ಪೈಪೋಟಿ ಇತ್ತು. ಇಂಥ ಸಮಯದಲ್ಲಿ ಹೈ ಕಮಾಂಡ್‌ ಸೂಚಿಸಿದ ರಾಜೀ ಸೂತ್ರಕ್ಕೆ ಇವರಿಬ್ಬರೂ ಒಪ್ಪಿಗೆ ಸೂಚಿಸಿದ್ದಾರೆ. ಮೊದಲ ಎರಡೂವರೆ ವರ್ಷ ಅವಧಿಗೆ ಸಿದ್ದರಾಮಯ್ಯ ನಂತರ ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿಯಾಗಬೇಕು ಎನ್ನುವುದೇ ಒಪ್ಪಂದ. ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಅವರು ಸೂಚಿಸಿದ ನಂತರವೇ ಈ ಸೂತ್ರಕ್ಕೆ ಡಿಕೆಶಿ ಒಪ್ಪಿಗೆ ಸೂಚಿಸಿದ್ದಾರೆ ಎಂಬುದು ಕಾಂಗೈ ಪಾಳೆಯದಲ್ಲಿ ಕೇಳಿ ಬಂತು.

ಎರಡೂವರೆ ವರ್ಷ ಸಮೀಪಿಸುತ್ತಿದ್ದಂತೆ ಅಧಿಕಾರ ಹಂಚಿಕೆ ಮುನ್ನೆಲೆಗೆ ಬಂತು. ಅದುವರೆಗೂ ನಾನೇ ಐದು ವರ್ಷ ಮುಖ್ಯಮಂತ್ರಿ ಎಂದು ಪ್ರತಿಪಾದಿಸುತ್ತಿದ್ದ ಸಿದ್ದರಾಮಯ್ಯ ಅವರು ಹೈ ಕಮಾಂಡ್‌ ಸೂಚಿಸಿದಂತೆ ನಡೆಯುತ್ತೇನೆ ಎನ್ನತೊಡಗಿದರು. ಅವರ ಮಾತು ಬದಲಾಗಿದ್ದು ಗಮನಾರ್ಹ. ಆದರೂ ಅವರ ಬಣ ವಿಶೇಷವಾಗಿ ಯತೀಂದ್ರ ಸಿದ್ದರಾಮಯ್ಯ ಅವರು ತಮ್ಮ ತಂದೆಯೇ ಮುಖ್ಯಮಂತ್ರಿಯಾಗಿ  ಐದು ವರ್ಷ ಅವಧಿ ಪೂರೈಸುತ್ತಾರೆ ಎಂದು ಪದೇಪದೇ ಹೇಳಿದರು. ಸಚಿವ ಹೆಚ್.ಸಿ. ಮಹಾದೇವಪ್ಪ ಅವರು ಇಂಥ ಮಾತುಗಳನ್ನೇ ಪುನರುಚ್ಚರಿಸಿದರು. ಇವೆಲ್ಲವುದಕ್ಕೂ ಡಿ.ಕೆ. ಶಿವಕುಮಾರ್‌ ತಾಳ್ಮೆಯಿಂದಲೇ ಪ್ರತಿಕ್ರಿಯಿಸಿದರು ಎಂಬುದು ಸಹ ಗಮನಾರ್ಹ.

ಡಿ.ಕೆ. ಶಿವಕುಮಾರ್‌ ಪಾಳೆಯದ ಶಾಸಕರು ಡಿಕೆಶಿ ಮುಖ್ಯಮಂತ್ರಿ ಅಧಿಕಾರ ಪದಗ್ರಹಣಕ್ಕೆ  ದಿನಾಂಕಗಳ ಮೇಲೆ ದಿನಾಂಕ ಫಿಕ್ಸ್‌ ಮಾಡಿದರು. ಈ ನಡುವೆ ಐದು ರಾಜ್ಯಗಳ ಚುನಾವಣೆಗಳಿಗೆ ದಿನಾಂಕ ನಿಗದಿಯಾಯಿತು. ಕಾಂಗ್ರೆಸ್‌ ಹೈ ಕಮಾಂಡ್‌ ಬ್ಯುಸಿಯಾಯಿತು. ಒಮ್ಮೆ ಮಲ್ಲಿಕಾರ್ಜುನ ಖರ್ಗೆ ಅವರು ಸದ್ಯಕ್ಕೆ ಮುಖ್ಯಮಂತ್ರಿ ಬದಲಾವಣೆಯಿಲ್ಲ ಎಂದು ಹೇಳಿದರು. ಕೆಲದಿನಗಳಲ್ಲಿಯೇ ಅಧಿಕಾರ ಬದಲಾವಣೆಯನ್ನು ಹೈ ಕಮಾಂಡ್‌ ನಿರ್ಧರಿಸುತ್ತದೆ ಎಂದರು.

ಪಂಚರಾಜ್ಯಗಳ ಚುನಾವಣೆ ಮುಗಿಯಿತು. ಕೇರಳದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಅಧಿಕಾರ ಹಿಡಿಯಿತು. ತಮಿಳುನಾಡಿನಲ್ಲಿ ೫೭ ವರ್ಷಗಳ ಸುದೀರ್ಘ ಅವಧಿ ನಂತರ ಟಿವಿಕೆ ನೇತೃತ್ವದ ಸರ್ಕಾರದ ಭಾಗವಾಯಿತು. ಕೇರಳದಲ್ಲಿ ಜನಪ್ರಿಯ ರಾಜಕಾರಣಿ ವಿ.ಡಿ. ಸತೀಶನ್‌ ಮುಖ್ಯಮಂತ್ರಿಯಾದರು. ಈ ಸಮಾರಂಭದಲ್ಲಿ ಭಾಗಿಯಾಗಿದ್ದ ಡಿ.ಕೆ. ಶಿವಕುಮಾರ್‌ ವೇದಿಕೆಗೆ ಬಂದೊಡನೆ ಡಿಕೆ ಡಿಕೆ ಎಂಬ ಕೂಗು ಜೋರಾಗಿಯೇ ಕೇಳಿತು. ಬಹುಶಃ ಆಗ ಕರ್ನಾಟಕದ ಅಧಿಕಾರ ಒಡಂಬಡಿಕೆಯ ಸೂತ್ರ ರಾಹುಲ್‌ ಗಾಂಧಿಗೆ ನೆನಪಾಗಿರಬಹುದು. ಅಥವಾ ಹಿರಿಯ ನಾಯಕ ಸಿದ್ದರಾಮಯ್ಯ ಅವರು ಸೂಚನೆಯಿಲ್ಲದೇ ಹಿಂದಿನ ಅಧಿಕಾರ ಹಂಚಿಕೆ ಸೂತ್ರದಂತೆ ತಾವಾಗಿಯೇ ರಾಜಿನಾಮೆ ನೀಡಬಹುದು ಎಂಬುದು ಅವರ ಗ್ರಹಿಕೆಯಾಗಿರಬಹುದು.

ಮೂರು ವರ್ಷ ಕಳೆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ತಾವಾಗಿಯೇ ಅಧಿಕಾರ ತ್ಯಜಿಸದಿದ್ದಾಗ ಇವರಿಗೂ ಡಿಕೆಶಿಗೂ ದೆಹಲಿಯಿಂದ ಕರೆ ಬಂತು. ರಾಹುಲ್‌ ಗಾಂಧಿ ಅವರು ಸಿದ್ದರಾಮಯ್ಯ ಅವರಿಗೆ ಖಡಕ್ಕಾಗಿಯೇ ಎರಡು ದಿನಗಳಲ್ಲಿಯೇ ರಾಜಿನಾಮೆ ನೀಡುವಂತೆ ಸೂಚಿಸಿದ್ದಾರೆ. ಕನಿಷ್ಟ ೧೫ ದಿನ ಕಾಲಾವಧಿಗೂ ಅವರು ಒಪ್ಪಿಲ್ಲ. ಇದು ಸಹ ಅಧಿಕಾರ ಹಂಚಿಕೆ ಮಾತುಕಥೆಯಾಗಿತ್ತು ಆದರೆ ಅದನ್ನು ಸಿದ್ದರಾಮಯ್ಯ ಸ್ವಯಂಪ್ರೇರಿತರಾಗಿ ಪಾಲಿಸಲಿಲ್ಲ ಎಂಬುದಕ್ಕೆ ಸಾಕ್ಷಿ ಅಲ್ಲವೇ ?

ಈ ನಡುವೆ ಊಹಾಪೋಹಗಳು ಹರಿದಾಡಿದವು. ಸಿದ್ದರಾಮಯ್ಯ ಅವರನ್ನು ಒಪ್ಪಿಸಲು ಕಾಂಗ್ರೆಸ್‌ ಹೈ ಕಮಾಂಡ್‌ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಉಪ ಮುಖ್ಯಮಂತ್ರಿ ಪಟ್ಟ ನೀಡುವ ಆಫರ್‌ ಒಡ್ಡಿದೆ ಎನ್ನಲಾಯಿತು. ಆದರೆ ಈ ರೀತಿ ಆಫರ್‌ ನೀಡುವುದು ಕಾಂಗ್ರೆಸ್‌ ಹೈ ಕಮಾಂಡ್‌ ಸಂಸ್ಕೃತಿಯಲ್ಲ. ಶಾಸಕಾಂಗ ಪಕ್ಷದ ಅತೀ ಹೆಚ್ಚಿನ ಸದಸ್ಯರ ಬೆಂಬಲ ಪಡೆದಿದ್ದ ವೀರೇಂದ್ರ ಪಾಟೀಲರನ್ನು ರಾಜೀವ್‌ ಗಾಂಧಿ ಅಧಿಕಾರದಿಂದ ಇಳಿಸಿ (ಈ ತಪ್ಪಿಗೆ ಕಾಂಗ್ರೆಸ್‌ ಬಹುಕಾಲ ಬೆಲೆ ತೆರಬೇಕಾಯಿತು) ಬಂಗಾರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿದರು. ಆಗ ಶಾಸಕಾಂಗ ಪಕ್ಷದ ಸದಸ್ಯರ ಅಭಿಪ್ರಾಯವನ್ನೇನೂ ಕೇಳಿರಲಿಲ್ಲ. ಅಂದಿನ ಪ್ರಧಾನಮಂತ್ರಿ, ಕಾಂಗ್ರೆಸ್‌ ವರಿಷ್ಠ ಪಿ.ವಿ. ನರಸಿಂಹ ರಾವ್‌ ಅವರು ಬಂಗಾರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರು. ವೀರಪ್ಪಮೊಯ್ಲಿ ಅವರನ್ನು ಮುಖ್ಯಮಂತ್ರಿ ಮಾಡಿದರು. ಆಗಲೂ ಹೈ ಕಮಾಂಡ್‌ ಸೂಚನೆಯೇ ಅಂತಿಮವಾಗಿತ್ತು.

೨೦೧೩ರಲ್ಲಿ ಕಾಂಗ್ರೆಸ್‌ ಬಹುಮತ ಪಡೆಯಿತು. ರಾಹುಲ್‌ ಗಾಂಧಿ ಅವರು ಮುಖ್ಯಮಂತ್ರಿ ಪದವಿಗೆ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಿದರು. ರಾಜ್ಯದ ಕಾಂಗ್ರೆಸಿನ ಶಾಸಕಾಂಗ ಪಕ್ಷದ ಸದಸ್ಯರು ಅದರ ವಿರುದ್ಧ ಮಾತನಾಡಲಿಲ್ಲ. ಇದು ಕಾಂಗ್ರೆಸ್‌ ಸಂಸ್ಕೃತಿ. ಇದೇ ಸಂಸ್ಕೃತಿ ಬಿಜೆಪಿಯಲ್ಲಿಯೂ ಇದೆ. ಅತ್ತ ಪ್ರಾದೇಶಿಕ ಪಕ್ಷವೂ ಅಲ್ಲದ ಇತ್ತ ರಾಷ್ಟ್ರೀಯ ಪಕ್ಷವೂ ಅಲ್ಲದ ಜೆಡಿಎಸ್‌ ನಲ್ಲಿಯೂ ಇದೆ. ಅಲ್ಲಿಯ ಹೈ ಕಮಾಂಡ್‌ ಗಳ ಮಾತನ್ನು ಯಾರೂ ವಿರೋಧಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರನ್ನು ಅಧಿಕಾರ ಹಸ್ತಾಂತರಿಸುವಂತೆ ಓಲೈಸಲಾಯಿತು ಎಂಬುದು ಸುಳ್ಳು.

ಡಿ.ಕೆ. ಶಿವಕುಮಾರ್‌ ಅವರಿಗೆ ಮುಖ್ಯಮಂತ್ರಿ ಅಧಿಕಾರ ತಪ್ಪಿಸುವ ಸಲುವಾಗಿಯೇ ದಲಿತ ಸಿಎಂ ಕೂಗನ್ನು ತೇಲಿ ಬಿಡಲಾಯಿತು. ಅಷ್ಟಕ್ಕೂ ಸಿದ್ದರಾಮಯ್ಯ ಅವರಿಗೆ ದಲಿತರನ್ನು ಮುಖ್ಯಮಂತ್ರಿ ಮಾಡಬೇಕು ಎನ್ನುವ ಮನಸಿದ್ದರೆ ತಮ್ಮ ಬದಲು ಮಲ್ಲಿಕಾರ್ಜುನ ಖರ್ಗೆ ಅಥವಾ ಡಾ.ಹೆಚ್.ಸಿ. ಮಹಾದೇವಪ್ಪ ಅಥವಾ ಜಿ. ಪರಮೇಶ್ವರ್‌ ಅಥವಾ ಹಿಂದುಳಿದ ಸಮುದಾಯಗಳ ನಾಯಕ, ವಿಚಾರವಾದಿ ಸತೀಶ್‌ ಜಾರಕೀಹೊಳಿ ಮುಖ್ಯಮಂತ್ರಿ ಆಗಲಿ ಎಂದು ಹೈ ಕಮಾಂಡ್‌ ಅನ್ನು ಒತ್ತಾಯಿಸಬೇಕಾಗಿತ್ತು. ಹೀಗೆ ಮಾಡಲಿಲ್ಲ. ಬದಲಾಗಿ ಇವರ ಪಾಳೆಯದಿಂದ ಸಿದ್ದರಾಮಯ್ಯ ಅಧಿಕಾರದಿಂದ ಇಳಿದರೆ ದಲಿತರೊಬ್ಬರು ಮುಖ್ಯಮಂತ್ರಿಯಾಗಬೇಕು ಎನ್ನುವ ಕೂಗು ಪದೇಪದೇ ಕೇಳಿಬರತೊಡಗಿತು. ಜಿ.ಪರಮೇಶ್ವರ್‌ ಅವರಿಗಂತೂ ತಮ್ಮ ಮೂಗಿಗೆ ತುಪ್ಪ ಸವರಲಾಗುತ್ತಿದೆ ಎಂಬುದು ಗೊತ್ತಾಗಲೇ ಇಲ್ಲ.

ಅಷ್ಟಕ್ಕೂ ಸಿದ್ದರಾಮಯ್ಯ ಬಣದಿಂದ ದಲಿತ ಸಿಎಂ ಕೂಗು ಏಕೆ ಕೇಳಿಬಂತು ? ಈ ರೀತಿಯ ಕೂಗು ಹಾಕುತ್ತಲೇ ಇದ್ದರೆ ಕಾಂಗ್ರೆಸ್‌ ಹೈ ಕಮಾಂಡ್‌ ಗೊಂದಲಕ್ಕೆ ಒಳಗಾಗುತ್ತದೆ. ಅಧಿಕಾರ ಹಂಚಿಕೆಯೇ ಬೇಡ, ಸಿದ್ದರಾಮಯ್ಯ ಅವರೇ ಐದುವರ್ಷ ಪೂರೈಸಲಿ ಎಂದು ನಿರ್ಧರಿಸುತ್ತದೆ ಎಂಬ ಅಂದಾಜು ಮಾಡಿರಬಹುದು. ಆದರೆ ಈ ಅಂದಾಜುಗಳು ಹುಸಿಯಾಗಿವೆ.

ಸಿದ್ದರಾಮಯ್ಯ ಅವರು ರಾಜ್ಯಪಾಲರ ಕಾರ್ಯದರ್ಶಿಗೆ ಮೇ ೨೮ರಂದು ರಾಜಿನಾಮೆ ಸಲ್ಲಿಸಿದರು. ಇದು ಸಹ ಗಮನಾರ್ಹ ಸಂಗತಿ. ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋತ್‌ ಅವರು ಬರುವವರೆಗೂ ಕಾಯ್ದು ಅವರಿಗೆ ನೇರವಾಗಿ ರಾಜಿನಾಮೆ ಸಲ್ಲಿಸುವುದಕ್ಕೂ ಅವಕಾಶ ನೀಡಿಲ್ಲ.  ರಾಜಿನಾಮೆ ಸಲ್ಲಿಸಿದ ನಂತರ ಪತ್ರಿಕಾಗೋಷ್ಠಿ ನಡೆಸಿದರು. ಈ ಸಂದರ್ಭದಲ್ಲಿ “ನನ್ನ ರಾಜೀನಾಮೆ ಮುಖ್ಯಮಂತ್ರಿ ಹುದ್ದೆಗೆ ಮಾತ್ರವೇ ಸೀಮಿತ, ಸಕ್ರಿಯ ರಾಜಕಾರಣಕ್ಕಲ್ಲ. ನನ್ನ ಜೀವದ ಕೊನೆಯುಸಿರು ಇರುವ ವರೆಗೂ ಸಾಮಾಜಿಕ ನ್ಯಾಯಕ್ಕಾಗಿ ಮತ್ತು ಸಂವಿಧಾನ ವಿರೋಧಿ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟ ಮಾಡುತ್ತೇನೆ” ಎಂದರು.

ಈ ಮಾತಿಗೆ ಸಿದ್ದರಾಮಯ್ಯ ಬದ್ದರು ಎನ್ನುವುದರಲ್ಲಿ ಎರಡು ಮಾತಿಲ್ಲ. ಕಾಂಗ್ರೆಸ್‌ ಹೈ ಕಮಾಂಡ್‌ ನೀಡಿದ ರಾಜ್ಯಸಭಾ ಸದಸ್ಯ ಆಫರ್‌ ಒಪ್ಪಿಕೊಂಡು ಈ ಹೋರಾಟವನ್ನು ರಾಷ್ಟ್ರಮಟ್ಟಕ್ಕೂ ವಿಸ್ತರಿಸಬಹುದಿತ್ತಲ್ಲವೇ ? ಹಾಗೆ ಏಕೆ ಮಾಡಿಲ್ಲ ? ರಾಜ್ಯಸಭಾ ಸ್ಥಾನ ಒಪ್ಪಿಕೊಂಡರೇ ವರುಣಾ ವಿಧಾನಸಭಾ ಕ್ಷೇತ್ರಕ್ಕೆ ರಾಜಿನಾಮೆ ನೀಡಬೇಕಾಗುತ್ತದೆ ! ತೆರವಾಗುವ ಸ್ಥಾನಕ್ಕೆ ಯತೀಂದ್ರ ಸಿದ್ದರಾಮಯ್ಯ ಅವರನ್ನು ಉಪ ಚುನಾವಣೆಗೆ ನಿಲ್ಲಿಸೋಣ ಎಂದರೆ ಅವರು ಇತ್ತೀಚೆಗಷ್ಟೆ ವಿಧಾನಪರಿಷತ್‌ ಸದಸ್ಯರಾಗಿದ್ದಾರೆ. ಆ ಸ್ಥಾನಕ್ಕೆ ರಾಜಿನಾಮೆ ಕೊಡಿಸಿ ವರುಣಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡಲು ಹೈ ಕಮಾಂಡ್‌ ಒಪ್ಪುವುದಿಲ್ಲ. ಆಗ ಅನಿವಾರ್ಯವಾಗಿ ಮತ್ತೊಬ್ಬರು ಕ್ಷೇತ್ರ ಪ್ರವೇಶಿಸುತ್ತಾರೆ, ಅವರು ಗೆದ್ದು ‌೨೦೨೮ರ ಸಾರ್ವತ್ರಿಕ ಮುಂದಿನ ಚುನಾವಣೆಯಲ್ಲಿಯೂ ಸ್ಪರ್ಧಿಸುವುದಾಗಿ ಪಟ್ಟು ಹಿಡಿದರೆ ? ಇದರ ಬದಲು ಅವಧಿ ಪೂರೈಸಿ ೨೦೨೮ರ ಚುನಾವಣೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡುವ ಆಲೋಚನೆ ಇದ್ದಿರಬಹುದೇ ?

ಇದೇನೇ ಇರಲಿ; ಅಧಿಕಾರ ಹಂಚಿಕೆ ವಿಳಂಬವಾದಗಲೂ, ಸಿದ್ದರಾಮಯ್ಯ ಬಣದಿಂದ ಪ್ರಚೋದನೆಯ ಮಾತುಗಳು ಬರತೊಡಗಿದಾಗಲೂ ಡಿಕೆಶಿ ತಾಳ್ಮೆ ಕಳೆದುಕೊಂಡಿಲ್ಲ. ಇದೇ ತಾಳ್ಮೆಯನ್ನು ಮುಂದಿನ ಎರಡು ವರ್ಷ ಉಳಿಸಿಕೊಂಡು ಮತ್ತೆ ಕಾಂಗ್ರೆಸ್‌ ಅನ್ನು ೨೦೨೮ ರಲ್ಲಿಯೂ ಮರಳಿ ಅಧಿಕಾರಕ್ಕೆ  ತರುತ್ತಾರಾ ಎನ್ನುವುದು ಸದ್ಯದ ಪ್ರಶ್ನೆ !

3 thoughts on “ಸೂಚನೆಗೂ ಮುನ್ನ ಸಿದ್ದರಾಮಯ್ಯ ಅಧಿಕಾರದಿಂದ ನಿರ್ಗಮಿಸಿದ್ದರೆ ?

  • PANCHAXARI HIREMATH

    ಲೇಖನ ಸತ್ಯ ಮತ್ತು ಪ್ರಸ್ತುತ ಸನ್ನಿವೇಶಗಳ ಕನ್ನಡಿ ಯಾಗಿದೆ ವಿವರಣೆ ಚೆನ್ನಾಗಿದೆ ಧನ್ಯವಾದಗಳು

    Reply
  • ಸಿದ್ದರಾಮಯ್ಯನವರು ಮುಖ್ಯ ಮಂತ್ರಿ ಹುದ್ದೆಗೆ ಹೈ ಕಮಾಂಡ್ ಆದೇಶದ ಮೇರೆಗೆ ರಾಜೀನಾಮೆ ಕೊಟ್ಟಿರುತ್ತಾರೆ. ಈ ರಾಜಿನಾಮೆ ತೆಗೆದು ಕೊಳ್ಳುವ ಮೊದಲು ಹೈಕಮಾಂಡ್ ಚಿಂತಿಸ ಬೇಕಿತ್ತು. ಕಾರಣ ಕಾಂಗ್ರೆಸ್ ಆಡಳಿತದ ಬೇರೆ ರಾಜ್ಯಗಳಲ್ಲಿ ಗ್ಯಾರೆಂಟಿಗಳ ಹೆಸರಿನಲ್ಲಿ ಭಾಗ್ಯಗಳನ್ನು ಕರುಣಿಸಿದರೂ ಸಹ ವಿರೋಧ ಪಕ್ಷಗಳು ಅಧಿಕಾರ ಸಾಧಿಸಿವೆ. ಈ ದಿಶೆಯಲ್ಲಿ ಕರ್ನಾಟಕದ ಜನ ನಾಯಕ ಸಿದ್ದರಾಮಯ್ಯನವರನ್ನು ಈಗ ಹುದ್ದೆಯಿಂದ ಇಳಿಸುವ ಬದಲು ಮುಂದಿನ ಚುನಾವಣೆಯಲ್ಲಿ ಗೆಲವು ಸಾಧಿಸಿದ ಮೇಲೆ ಅಧಿಕಾರವನ್ನು ಬೇರೆಯವರಿಗೆ ಹಸ್ತಾಂತರಿಸ ಬಹುದಿತ್ತು. ಕಾರಣ, ಗ್ಯಾರೆಂಟಿಗಳನ್ನು ನಿಭಾಯಿಸುವ ರೀತಿ, ಬೇರೆ, ಬೇರೆ ವರ್ಗದ ಮತದಾರರನ್ನು ಸೆಳೆದು ಅವರ ನಾಯಕರುಗಳಿಗೆ ಸೂಕ್ತ ರೀತಿಯ ಬೆಂಬಲ, ಸ್ಥಾನ ಕೊಡಿಸಿ ಪಕ್ಷವನ್ನು ಅಧಿಕಾರಕ್ಕೆ ತರುವ ಚಾಕ ಚಕ್ಯತೇ ಇತ್ತು.

    Reply
  • ಸಿರಾಜ್

    ಬಹಳ ಒಳ್ಳೆಯ ಒಳನೋಟಗಳಿರುವ ಬರಹ. ಸುದ್ದಿಯಾಚೆಗಿನ ಸತ್ಯಗಳ ಸೂಕ್ಷ್ಮ ವಿಶ್ಲೇಷಣೆ.

    Reply

Leave a Reply

Your email address will not be published. Required fields are marked *

error: Content is protected !!