ಯತೀಂದ್ರ ಸಿದ್ದರಾಮಯ್ಯ ಸಚಿವ; ಅಸಮಾಧಾನ ಭುಗಿಲೇಳಬಹುದೇ
ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಿರುವ ನಿರ್ಧಾರವು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಮತ್ತು ಸಹಜವಾಗಿಯೇ ಕೆಲವು ಆಂತರಿಕ ಅಸಮಾಧಾನಗಳಿಗೆ ಕಾರಣವಾಗಿದೆ. ಆದರೆ ಇದರಿಂದ ಪಕ್ಷದಲ್ಲಿ ತಕ್ಷಣವೇ ದೊಡ್ಡ ಮಟ್ಟದ ಬಂಡಾಯ ಅಥವಾ ಅಸಮಾಧಾನ ಭುಗಿಲೇಳುತ್ತದೆಯೇ ಎಂಬುದೇ ಸದ್ಯದ ಪ್ರಶ್ನೆ !
ಯತೀಂದ್ರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರರಾಗಿರುವುದರಿಂದ, ಹಿರಿಯ ನಾಯಕರನ್ನು ಬದಿಗಿಟ್ಟು ಅವರಿಗೆ ಆದ್ಯತೆ ನೀಡಿದಾಗ ಪಕ್ಷದ ಒಳಗಿರುವ ಹಿರಿಯ ಶಾಸಕರಲ್ಲಿ ಅಸಮಾಧಾನ ಮೂಡುವುದು ರಾಜಕೀಯದಲ್ಲಿ ಸಹಜ ಪ್ರಕ್ರಿಯೆ. ಮೈಸೂರು ಭಾಗದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ದಶಕಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುತ್ತಾ ಬಂದಿರುವ ಶಾಸಕರಿದ್ದಾರೆ. ಪಕ್ಷಕ್ಕಾಗಿ ದುಡಿದ ಹಿರಿಯರಿದ್ದಾಗ, ಕೇವಲ ಒಂದು ಅವಧಿಯ ವಿಧಾನಸಭಾ ಶಾಸಕ ಮತ್ತು ಪ್ರಸ್ತುತ ವಿಧಾನಪರಿಷತ್ ಸದಸ್ಯರಾಗಿರುವ ಯತೀಂದ್ರ ಅವರಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿರುವುದು ಸಹಜವಾಗಿ ಪಕ್ಷದ ಹಿರಿಯರ ಕೆಂಗಣ್ಣಿಗೆ ಕಾರಣವಾಗಿದೆ.
ಕರ್ನಾಟಕ ಸಚಿವ ಸಂಪುಟದಲ್ಲಿ ೩೪ ಸದಸ್ಯರಿರುವ ಅವಕಾಶವಿದೆ. ಪ್ರಸ್ತುತ ಮುಖ್ಯಮಂತ್ರಿ ಸೇರಿ ೧೪ ಮಂದಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇನ್ನೂ ೨೦ ಮಂದಿಗೆ ಅವಕಾಶವಿದೆ. ಆದರೂ ಸಚಿವ ಸಂಪುಟದ ಮೊದಲ ಹಂತದಲ್ಲಿಯೇ ಯತೀಂದ್ರ ಅವರಿಗೆ ಅವಕಾಶ ದೊರೆತಿರುವುದು ಸಿದ್ದರಾಮಯ್ಯ ಅವರ ಕುಟುಂಬ ರಾಜಕಾರಣದ ಒಲವು ತೋರಿಸುತ್ತಿದೆ. ವಂಶಪಾರಂಪರ್ಯ ರಾಜಕಾರಣ ವಿರೋಧಿಸುತ್ತಾ ಬಂದಿದ ಅವರು ಸಹ ಪುತ್ರ ವ್ಯಾಮೋಹದಿಂದ ಅನ್ಯರಿಗೆ ಸಿಗಬಹುದಾಗಿದ್ದ ಅವಕಾಶ ತಪ್ಪಿಸಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.
ಕಾಂಗ್ರೆಸ್ ಪಕ್ಷದಲ್ಲಿ ಈ ನಿರ್ಧಾರದಿಂದಾಗಿ ತಕ್ಷಣಕ್ಕೆ ಬಹಿರಂಗ ಬಂಡಾಯ ಏಳುವ ಸಾಧ್ಯತೆ ಕಡಿಮೆ ಇರಬಹುದು, ಅದಕ್ಕೆ ಕಾರಣಗಳೂ ಇವೆ. ಪ್ರಸ್ತುತ ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿಯಾಗಿದ್ದರೂ ಅವರು ಪಕ್ಷದ ಹೈ ಕಮಾಂಡ್ ಮೇಲೆ ಪ್ರಭಾವ ಹೊಂದಿದ್ದಾರೆ ಮತ್ತು ಸದ್ಯ ರಚನೆಯಾಗಿರುವ ಸರ್ಕಾರದ ಮೇಲೆ ಬಲವಾದ ಹಿಡಿತ ಹೊಂದಿದ್ದಾರೆ. ಅವರ ನಿರ್ಧಾರವನ್ನು ನೇರವಾಗಿ ಪ್ರಶ್ನಿಸಲು ಹಿರಿಯ ನಾಯಕರು ಕೂಡ ಹಿಂಜರಿಯುತ್ತಾರೆ.
ಆಂತರಿಕ ಅಸಮಾಧಾನ (Undercurrent) ಹೊಂದಿರುವವರ್ಯಾರೂ ಬಹಿರಂಗವಾಗಿ ಪ್ರತಿಭಟಿಸದಿದ್ದರೂ, ಮೈಸೂರು ಜಿಲ್ಲೆಯ ಹಿರಿಯ ಶಾಸಕರು ಮತ್ತು ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ “ಪಕ್ಷ ನಿಷ್ಠೆಗಿಂತ ವಂಶಪಾರಂಪರ್ಯ ರಾಜಕಾರಣಕ್ಕೆ ಮನ್ನಣೆ ಸಿಗುತ್ತಿದೆ” ಎಂಬ ಅಸಮಾಧಾನದ ಹೊಗೆಯಾಡುತ್ತಿರುವುದು ನಿಜ. ಇದು ಭವಿಷ್ಯದ ಚುನಾವಣೆಗಳಲ್ಲಿ ಅಥವಾ ಪಕ್ಷದ ಆಂತರಿಕ ನಿರ್ಧಾರಗಳ ಸಮಯದಲ್ಲಿ ಭಿನ್ನಮತವಾಗಿ ಹೊರಹೊಮ್ಮುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.
ಈ ನಡೆ ಕಾಂಗ್ರೆಸ್ ಪಕ್ಷದ ಒಳಗಿನ ಸದ್ಯದ ಆಂತರಿಕ ವಿರೋಧದ ಜೊತೆಗೆ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ಗೆ ದೊಡ್ಡ ರಾಜಕೀಯ ಅಸ್ತ್ರವಾಗಿದೆ. “ಘಟಾನುಘಟಿ ಹಿರಿಯ ನಾಯಕರನ್ನು ಕಡೆಗಣಿಸಿ ಪುತ್ರವ್ಯಾಮೋಹಕ್ಕೆ ಮಣಿದಿದ್ದಾರೆ” ಎಂದು ಟೀಕಿಸಲು ಅವರಿಗೆ ಸುಲಭದ ದಾರಿಯಾಗಿದೆ.
ಸದ್ಯದ ಪರಿಸ್ಥಿತಿಯಲ್ಲಿ ಹಿರಿಯ ಶಾಸಕರು ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ಪ್ರದರ್ಶಿಸದೆ ಮೌನಕ್ಕೆ ಶರಣಾಗಬಹುದು. ಆದರೆ, ಈ ರೀತಿಯ ಸರಣಿ ನಿರ್ಧಾರಗಳು ಪಕ್ಷದ ತಳಮಟ್ಟದ ಕಾರ್ಯಕರ್ತರಲ್ಲಿ ಮತ್ತು ದಶಕಗಳಿಂದ ಕಾಯುತ್ತಿರುವ ಹಿರಿಯ ನಾಯಕರಲ್ಲಿ ಆಂತರಿಕ ಬೇಸರವನ್ನು ಹೆಚ್ಚಿಸುವುದಂತೂ ಖಂಡಿತ. ಇದು ತಕ್ಷಣಕ್ಕೆ ಸರ್ಕಾರಕ್ಕೆ ಗಂಡಾಂತರ ತರದಿದ್ದರೂ, ಪಕ್ಷದ ಆಂತರಿಕ ಶಿಸ್ತಿಗೆ ದೀರ್ಘಾವಧಿಯಲ್ಲಿ ಸವಾಲಾಗಬಹುದು.
ಮುಖ್ಯವಾಗಿ ಹಳೇ ಮೈಸೂರು ಭಾಗಕ್ಕೆ ಪ್ರಾತಿನಿಧ್ಯ ಕೊಡಲು ಯೋಚಿಸಿದ್ದರೆ ಎರಡು ಮೂರು ಬಾರಿ ಗೆದ್ದು ಬಂದಿರುವ, ಪಕ್ಷದ ಏಳಿಗೆಗಾಗಿ ಅಪಾರವಾಗಿ ಶ್ರಮಿಸಿರುವ ಶಾಸಕರಿದ್ದರು. ಅವರಿಗೆ ಪ್ರಾತಿನಿಧ್ಯ ಕೊಡಬಹುದಾಗಿತ್ತು. ಒಂದು ವೇಳೆ ಜಾತಿಯನ್ನೇ ಪರಿಗಣಿಸುವುದಾದರೆ ಅತೀ ಹಿಂದುಳಿದ ಜಾತಿಗಳಲ್ಲಿ ಒಂದಾದ ಈಡಿಗ ಸಮುದಾಯದ ಮಧು ಬಂಗಾರಪ್ಪ ಅವರಿಗೆ ಮೊದಲ ಹಂತದ ವಿಸ್ತರಣೆಯಲ್ಲಿಯೇ ಆದ್ಯತೆ ನೀಡಬಹುದಾಗಿತ್ತು. ಇವೆಲ್ಲವುದನ್ನು ಬಿಟ್ಟು ಪಕ್ಷದ ಕಾರ್ಯಕರ್ತರೂ ಆಗದೇ ನೇರವಾಗಿ ಶಾಸಕರಾಗಿ ನಂತರ ವಿಧಾನಪರಿಷತ್ ಸದಸ್ಯರಾದ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಮಣೆ ಹಾಕಿರುವುದು ಎಷ್ಟರ ಮಟ್ಟಿಗೆ ಸರಿ ?
