ಚಾಮರಾಜನಗರ ಜಿಲ್ಲೆಯ ಹನೂರು ಅರಣ್ಯ ವಲಯ ಮತ್ತು ಕಾವೇರಿ ವನ್ಯಜೀವಿ ಧಾಮದ ಗಡಿಭಾಗದಲ್ಲಿ ನಡೆದ ಶೂಟೌಟ್ ಪ್ರಕರಣವು ರಾಜಕೀಯ, ಸಾಮಾಜಿಕ ಮತ್ತು ಕಾನೂನು ಸಂಘರ್ಷಕ್ಕೆ ಕಾರಣವಾಗಿದೆ. ಸ್ಥಳೀಯವಾಗಿ ಇದನ್ನು ‘ದನ ಹುಡುಕಲು ಹೋದ ಅಮಾಯಕರ ಮೇಲಿನ ಗುಂಡಿನ ದಾಳಿ’ ಎಂದು ಬಿಂಬಿಸಲು ಯತ್ನಿಸಲಾಗುತ್ತಿದೆ. ಈ ಮಾತುಗಳು ನಿಜವೇ ಅಥವಾ ಅರಣ್ಯಾಧಿಕಾರಿಗಳ ಮಾತು ನಿಜವೋ?? ತನಿಖಾ ವರದಿ ನಿಮ್ಮ ಮುಂದಿದೆ.
ಆಗಸ್ಟ್ ೨೨ರ ಮುಂಜಾನೆ ಕೊಳ್ಳೇಗಾಲ ಬೈಪಾಸ್ ಹಾದು ಹನೂರು ದಾಟುತ್ತಿದ್ದಂತೆ ಕಾರು ಚಲಾಯಿಸುತ್ತಿದ್ದ ಗೆಳೆಯ, ವನ್ಯಜೀವಿ ಛಾಯಾಗ್ರಾಹಕ ಸಿದ್ದಪ್ಪ ಮಳವಳ್ಳಿ ಅವರು ಕಳೆದ ವರ್ಷ ಎಂಎಂ ಹೀಲ್ಸ್ ವನ್ಯಜೀವಿಧಾಮದ ಮೀಣ್ಯ ವಿಭಾಗದಲ್ಲಿ ನಡೆದ ಐದು ಹುಲಿಗಳ ಕಗ್ಗೊಲೆ ಪ್ರಕರಣದ ಬಗ್ಗೆ ಮಾತನಾಡತೊಡಗಿದರು. ನಾವಿಬ್ಬರೂ ಆಗ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದೆವು. ಅಮಾಯಕ ಹುಲಿಗಳ ಸಾವಿಗೆ ಮರುಗಿದ್ದೆವು. ಈಗ ಹನೂರು ಶೂಟೌಟ್ ಎಂದೇ ಗುರುತಾದ ಪ್ರಕರಣದ ಬಗ್ಗೆಯೂ ಮಾಹಿತಿ ಸಂಗ್ರಹಿಸಲು ಬಂದಿದ್ದೆವು. ಹನೂರು ಉಪ ವಿಭಾಗದ ಕಾಡುಗಳನ್ನು ಸೀಳಿಕೊಂಡು ಹೋಗುವ ರಸ್ತೆಗಳಲ್ಲಿ ಗಾಢ ವಿಷಾದ ಕವಿದಂತೆ ಭಾಸವಾಗುತ್ತಿತ್ತು. ಮಾತನಾಡಿದ ಸ್ಥಳೀಯರು, ಸ್ಥಳೀಯ ಸಮರ್ಥ ಪತ್ರಕರ್ತರಾದ ಬಸವರಾಜ್, ಸುರೇಶ್ ಅಜ್ಜಿಪುರ ಅವರ ಮುಖಗಳಲ್ಲಿಯೂ ಬೇಸರವಿತ್ತು. ಅರಣ್ಯಾಧಿಕಾರಿಗಳ ಮೊಗಗಳಲ್ಲಿಯೂ ದುಗುಡ, ಆತಂಕ ಕಾಣುತ್ತಿತ್ತು. ನಾವು ಮಾಹಿತಿ ಸಂಗ್ರಹಿಸುವ ಕೆಲಸ ಆರಂಭಿಸಿದ್ದೆವು.
ಆಗಸ್ಟ್ ೧೪ರ ರಾತ್ರಿ. ಶಾಗ್ಯ ಬೀಟ್ ಸಿಬ್ಬಂದಿಗೆ ಯಾರೋ ಅಕ್ರಮವಾಗಿ ಕಾಡೊಳಗೆ ನುಗ್ಗಿದ್ದಾರೆ ಎಂಬ ಸುಳಿವು ಸಿಕ್ಕಿತ್ತು. ಆಗ ಕರಿಕಲ್ಲು ಒಡ್ಡು ಸ್ಥಳದಿಂದಲೇ ಹುಡುಕುವ ಕಾರ್ಯಾಚರಣೆ ಆರಂಭಿಸಿದ್ದಾರೆ. ಎತ್ತರದ ಪ್ರದೇಶದಿಂದ ನೋಡಿದಾಗ ಬೆಳಕಿನ ಚಲನೆ ಮೇಲೆ ಇಂಥಲ್ಲಿ ಇರಬಹುದು ಎಂಬ ಅಂದಾಜಾಗಬಹುದೇ ಹೊರತು ನಿಖರವಾದ ಸ್ಥಳ ಪತ್ತೆಯಾಗುವುದಿಲ್ಲ. ಇದಕ್ಕೆ ಪ್ರಮುಖ ಕಾರಣ ಅಕ್ರಮವಾಗಿ ಕಾಡೊಳಗೆ ಬಂದವರು ಹೆಡ್ ಲೈಟ್ ಅಥವಾ ಟಾರ್ಚ್ ಅನ್ನು ಸತತವಾಗಿ ಆನ್ ಮಾಡುವುದಿಲ್ಲ. ಒಮ್ಮೆ ಆನ್ ಮಾಡಿ ಪಟ್ಟನೇ ಆಫ್ ಮಾಡುತ್ತಾರೆ. ಗುರುತು ಮಾಡಿಕೊಂಡ ಹಾದಿಯಲ್ಲಿ ನಿಶಬ್ದವಾಗಿ ನಡೆಯುತ್ತಾರೆ.ಕೂಡಲೇ ಬೇರೆಬೇರೆ ಕಳ್ಳಬೇಟೆ ತಡೆ ಶಿಬಿರಗಳ ಸಿಬ್ಬಂದಿಯನ್ನು ಬೀಟ್ ಇನ್ ಛಾರ್ಜ್ ಡಿ.ಆರ್.ಎಫ್.ಒ. ಕರೆಸಿಕೊಂಡಿದ್ದಾರೆ. ಬೇರೆಬೇರೆ ತಂಡಗಳಾಗಿ ಹುಡುಕಲು ಶುರು ಮಾಡಿದ್ದಾರೆ.
ಬೆಳಕು ಹರಿಯುವ ಮುನ್ನ ಎದುರಾದರು
ಬೀಟ್ ನೇತೃತ್ವ ವಹಿಸಿದ್ದ ಡಿ.ಆರ್.ಎಫ್.ಒ. ಇದ್ದ ತಂಡದವರಿಗೆ ಹೊಳೆಮುರಿದಟ್ಟಿ ಕಳ್ಳಬೇಟೆ ತಡೆ ಶಿಬಿರದ ಸಮೀಪದಲ್ಲಿ ಕಾಡುಗಳ್ಳರು ಎದುರಾಗಿದ್ದಾರೆ. ಆಗ ಆಗಸ್ಟ್ ೧೫ರ ಬೆಳಗ್ಗಿನ ಜಾವ ೫.೨೦ರ ಆಸುಪಾಸು. ಕಾಡುಕತ್ತಲು. ಅಂತರದಲ್ಲಿದ್ದ ಕಾಡುಗಳ್ಳರು ಹತ್ತಿರ ನಿಂತಿದ್ದರೂ ಮುಖಗಳ ಗುರುತು ಪತ್ತೆಯಾಗುವುದು ಸಾಧ್ಯವೂ ಇರಲಿಲ್ಲ. ಇನ್ನೂ ಸಾಕಷ್ಟು ಅಂತರದಲ್ಲಿ ಪೊದೆಗಳ ಹಿಂಭಾಗ ಅಡಗಿದ್ದವರ ಗುರುತು ಹತ್ತುವುದಾದರೂ ಹೇಗೆ ?
ಶರಣಾಗುವಂತೆ ಅರಣ್ಯ ಸಿಬ್ಬಂದಿ ಕೂಗಿ ಹೇಳಿದ್ದಾರೆ. ಪದೇಪದೇ ಕೂಗಿದಾಗ ಮಾರುತ್ತರವಾಗಿ ಅತ್ತಲಿಂದ ಸಿಡಿದಿದ್ದು ಗುಂಡು ! ಕಾಡುಗಳ್ಳರೋ , ಬೇಟೆಗಾರರೋ ಎಷ್ಟು ಮಂದಿ ಇದ್ದಾರೆ ಎಂಬುದು ಅಂದಾಜಾಗದ ಅರಣ್ಯ ಸಿಬ್ಬಂದಿ ಗುಂಡಿನ ಸದ್ದು ಕೇಳಿ ಅದುರಿದ್ದಾರೆ. ಕೂಡಲೇ ಸಿಬ್ಬಂದಿಯೊಬ್ಬರು ತನ್ನ ಬಳಿ ಇದ್ದ ಪಂಪ್ ಆಕ್ಷನ್ ಶಾಟ್ಗನ್ (ಇದನ್ನು ಸ್ಲೈಡ್ ಆಕ್ಷನ್ ಶಾಟ್ ಗನ್ ಎಂದು ಸಹ ಕರೆಯಲಾಗುತ್ತದೆ) ನಿಂದ ಗುಂಡು ಹಾರಿದ ದಿಕ್ಕಿನತ್ತ ಗುಂಡು ಹಾರಿಸಿದ್ದಾರೆ. ದೊರಕಿರುವ ಮಾಹಿತಿ ಪ್ರಕಾರ ಅರಣ್ಯ ಸಿಬ್ಬಂದಿ ಒಮ್ಮೆ ಮಾತ್ರ ಗುಂಡು ಹಾರಿಸಿದ್ದಾರೆ. ಮತ್ತೆ ಬೇಟೆಗಾರರ ಕಡೆಯಿಂದ ಗುಂಡಿನದಾಳಿ ನಡೆಯಬಹುದೆಂಬ ಕಾರಣಕ್ಕೆ ಮರಗಳ ಹಿಂದೆ ಅವಿತು ರಕ್ಷಣೆ ಪಡೆದಿದ್ದಾರೆ.

ಬೇಟೆಗಾರರ ಬಳಿಯಿದ್ದ ನಾಡಬಂದೂಕುಗಳು
ಬೇಟೆಗಾರರಿದ್ದ ದಿಕ್ಕಿನಿಂದ ನರಳಾಡುವ ಸದ್ದು ಕೇಳಿಸಿದೆ. ಎದುರಿನಿಂದ ಹೋಗದೇ ಬಳಸಿಕೊಂಡು ಹೋಗಿದ್ದಾರೆ. ಅಷ್ಟರಲ್ಲಾಗಲೇ ಬೆಳಕು ಹರಿದಿತ್ತು. ಆಗ ಮೂವರು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡಿದೆ. ತಕ್ಷಣವೇ ಅವರನ್ನು ವಾಹನದಲ್ಲಿ ಹಾಕಿಕೊಂಡು ಕೊಳ್ಳೇಗಾಲ ಆಸ್ಪತ್ರೆಗೆ ತಂದಿದ್ದಾರೆ. ಆದರೆ ಅವರು ಬದುಕುಳಿದಿರಲಿಲ್ಲ. ನಂತರ ಮೈಸೂರು ಕೆ.ಆರ್.ಆಸ್ಪತ್ರೆಗೆ ಶವಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಪೋಸ್ಟ್ ಮಾರ್ಟಂ ಸಂದರ್ಭದಲ್ಲಿ ಮೃತರ ಉಡುಪುಗಳಲ್ಲಿ ನಾಡ ಬಂದೂಕಿಗೆ ಬಳಸುವ ಅಲ್ಯುಮಿನಿಯಮ್ ಪ್ರೈಮರ್ ಗಳು, ಹೆಡ್ ಟಾರ್ಚ್ ದೊರಕಿವೆ. ಮೃತರಾದವರು ಅಂತೋಣಿಸ್ವಾಮಿ ಬಿನ್ ಪೆರಿಯನಾಯಗಂ (50 ವರ್ಷ) ಮರಿಮಂಗಲ ಗ್ರಾಮ, ಜಾನ್ ರೋಸ್ ಪೀಟರ್ ಬಿನ್ ಯಾಕೂಬ್ (42 ವರ್ಷ)ಜಗನ್ನಾಥದೊಡ್ಡಿ ಗ್ರಾಮ, ಕುಮಾರ್ ಬಿನ್ ಲೇಟ್ ಸವಾರಿಯಪ್ಪನ್ (33 ವರ್ಷ): ಲಾಸರ್ದೊಡ್ಡಿ ಗ್ರಾಮ. ಗುಂಡು ಹಾರಿಸಿದ ಸಂದರ್ಭದಲ್ಲಿ ಪರಾರಿಯಾಗಿದ್ದ ಮಹಿಮದಾಸ್ ಬಿನ್ ಬೆಂಜಮಿನ್ (45 ವರ್ಷ) ಮರಿಯಮಂಗಲ ಗ್ರಾಮ, ಈತ ನಂತರ ಪೊಲೀಸರಿಗೆ ಶರಣಾಗಿದ್ದಾರೆ.
ಮೃತರ ಬಳಿ ಇದ್ದು ನಂತರ ಜಪ್ತಿ ಮಾಡಿದ ವಸ್ತುಗಳು: 2 ನಾಡಬಂದೂಕುಗಳು (SBML) ಮತ್ತು 38 ಗುಂಡುಗಳು.ಸುಮಾರು 20 ಕೆಜಿ ಪ್ರಾಣಿಯ ಮಾಂಸ (ಮುದ್ದೆ ಮಾಲು). ಪಟಾಕಿ ಮದ್ದು ಮತ್ತು ಮದ್ದಿನ ಪೌಡರ್. ವಿವೋ ಅಂಡ್ರಾಯ್ಡ್ ಮೊಬೈಲ್, ನೋಕಿಯಾ ಕೀ ಪ್ಯಾಡ್, ಜಿಯೋ ಕೀ ಪ್ಯಾಡ್ ಮೊಬೈಲ್ ಗಳು, ಅಡುಗೆ ಸಾಮಗ್ರಿಗಳು, ಆಹಾರ ಪದಾರ್ಥಗಳು (ಅಕ್ಕಿ, ಬಿಸ್ಕತ್ತು, ಬೆಲ್ಲ ಇತ್ಯಾದಿ), ಟಾರ್ಚ್ ಲೈಟ್ಗಳು, ಚಾಕು ಹಾಗೂ ಇತರೆ ಬಳಕೆ ವಸ್ತುಗಳು. ಇವುಗಳ ಪೈಕಿ ಬಂದೂಕುಗಳನ್ನು ಪೊರೆನ್ಸಿಕ್ ಲ್ಯಾಬ್ ಗೆ ಕಳಿಸಲಾಗಿದೆ. ವಶಪಡಿಸಿಕೊಂಡ ಮಾಂಸದ ಮಾದರಿಯನ್ನು ಡಿಎನ್ಎ ಪರೀಕ್ಷೆಗೆ ಸಿಸಿಎಂಬಿ (CCMB) ಲ್ಯಾಬ್ಗೆ ಕಳುಹಿಸಲಾಗಿದೆ.
ಪ್ರತಿಭಟನೆ ಏಕೆ ?
ವಿಷಯ ತಿಳಿಯುತ್ತಿದ್ದಂತೆ ಮೃತರ ಗ್ರಾಮಗಳಿಂದ ಹಲವರು ಬಂದು ಪ್ರತಿಭಟನೆ ಆರಂಭಿಸಿದ್ದಾರೆ. ಇವರ ಪ್ರಕಾರ “ನಾಲ್ಕು ಮಂದಿಯೂ ಕಾಣೆಯಾದ ಹಸು ಹುಡುಕಲು ಹೋಗಿದ್ದರು” ಕಾಡಿಗೆ ಹೋಗುವ ಮುನ್ನ ಸ್ಥಳೀಯ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಲಿಲ್ಲವೇಕೆ ? ಬಂದೂಕುಗಳನ್ನು, ಅಡುಗೆ ಸಾಮಾನುಗಳನ್ನು ತೆಗೆದುಕೊಂಡು ಹೋಗಿದ್ದು ಏಕೆ ? ವನ್ಯಮೃಗವನ್ನು ಬೇಟೆಯಾಡಿ ಚೀಲದಲ್ಲಿ ತುಂಬಿಸಿಕೊಂಡಿದ್ದು ಏಕೆ ? ಅರಣ್ಯ ಸಿಬ್ಬಂದಿಗೆ ಎದುರಾದಾಗ “ನಾವು ಇಂಥ ಗ್ರಾಮದವರು” ಎಂದು ಏಕೆ ಪರಿಚಯಿಸಿಕೊಳ್ಳಲಿಲ್ಲ ? ಇಂಥ ಯಾವುದೇ ಪ್ರಶ್ನೆಗಳಿಗೂ ಉತ್ತರ ದೊರೆಯುವುದಿಲ್ಲ.
ಉತ್ತರಗಳೇ ಇಲ್ಲದ ಪ್ರಶ್ನೆಗಳಿರುವಾಗ ಸಲೀಸಾಗಿ “ಅರಣ್ಯ ಇಲಾಖೆ ಸಿಬ್ಬಂದಿ ಮೂವರು ಅಮಾಯಕರನ್ನು ಕೊಂದಿದ್ದಾರೆ” ಎಂಬ ಆರೋಪ ಮಾಡಲಾಗಿದೆ. ಕಾನೂನಿನ ಪ್ರಕಾರ ಮ್ಯಾಜಿಸ್ಟ್ರೇಟ್ ತನಿಖೆ ನಡೆಯುತ್ತಿದೆ. ಆದರೆ ಎಲ್ಲ ಆಯಾಮಗಳಿಂದಲೂ ನೋಡಿ, ಸಂಗ್ರಹಿಸಿದ ಮಾಹಿತಿಗಳ ಆಧಾರದ ಮೇಲೆ ವಿಶ್ಲೇಷಿಸಿದಾಗ ಅರಣ್ಯ ಸಿಬ್ಬಂದಿ ತಮ್ಮ ರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ ಎಂಬುದು ಸ್ಪಷ್ಟ !
ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ಹೋಗುವುದೇ ಅಪರಾಧ ! ಇನ್ನು ಶಸ್ತ್ರಾಸ್ತ್ರಗಳೊಂದಿಗೆ ಪ್ರವೇಶಿಸುವುದೇ ದೊಡ್ಡ ಅಪರಾಧ, ಬೇಟೆಯಾಡುವುದು ಮತ್ತಷ್ಟೂ ಘೋರ ಅಪರಾಧ ! ವಿಷಯವೇ ಅರಿಯದ ಅನೇಕರು ಸೋಶಿಯಲ್ ಮೀಡಿಯಾಗಳಲ್ಲಿ, ಸ್ಥಳೀಯ ರಾಜಕೀಯ ಮುಖಂಡರು ಸಾರ್ವಜನಿಕವಾಗಿ ಇದನ್ನು ‘ದನ ಮೇಯಿಸುವವರ ಮೇಲಿನ ದಾಳಿ’ ಎಂದು ಬಿಂಬಿಸುವುದು ಅರಣ್ಯ ಸಂರಕ್ಷಣೆಗೆ ಮಾರಕ.
ವಿ.ಸೂ.ಮುಖಪುಟಕ್ಕಾಗಿ ಸಾಂದರ್ಭಿಕ ಚಿತ್ರ ಬಳಸಲಾಗಿದೆ
