ಮೈಸೂರು ಅರಮನೆ ಮುಂದೆ ಸ್ಪೋಟ; ತನಿಖೆ ದಿಕ್ಕು ತಪ್ಪುತ್ತಿದೆಯೇ ?
ಮೈಸೂರು ಅಂಬಾವಿಲಾಸ ಅರಮನೆಯ ಜಯ ಮಾರ್ತಾಂಡ ದ್ವಾರದ ಬಳಿ ಡಿಸೆಂಬರ್ ೨೫ರ ರಾತ್ರಿ ೮.೩೦ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ಬಲೂನು ಮಾರುತ್ತಿದ್ದ ಉತ್ತರ ಪ್ರದೇಶದ ಕನೋಜ್ ಜಿಲ್ಲೆಯ ತೊಫಿಯ ಗ್ರಾಮದ ಸಲೀಮ್ ಸಾವಿಗೀಡಾಗಿದ್ದಾರೆ. ಘಟನೆಯಲ್ಲಿ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನಂಜನಗೂಡು ಮೂಲದ ಮಂಜುಳಾ ಕೂಡ ಇಂದು ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಸ್ಥಳೀಯ ಪೊಲೀಸ್ ಆಯುಕ್ತರು “ಬಲೂನುಗಳನ್ನು ಮಾಡುವ ಸಲುವಾಗಿ ತುಂಬುವ ಹೀಲಿಯಂ ಗ್ಯಾಸ್ ಇದ್ದ ಸಿಲಿಂಡರ್ ಸ್ಫೋಟವಾಗಿದೆ. ಬಲೂನು ಮಾರುತ್ತಿದ್ದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಕೆಲವರಿಗೆ ಗಾಯಗಳಾಗಿವೆ” ಎಂದು ಹೇಳಿದ್ದಾರೆ. ಮರುದಿನದ ದಿನಪತ್ರಿಕೆಗಳಲ್ಲಿಯೂ ಇದೇ ಸುದ್ದಿ ಪ್ರಕಟವಾಗಿದೆ. ಅಂದರೆ ಯಾವುದೇ ಮಾಹಿತಿ ಅಪ್ ಡೇಟ್ ಆಗಿಲ್ಲ.
ವಾಸ್ತವವಾಗಿ ಹೀಲಿಯಂ (Helium) ದಹನಕಾರಿ (flammable) ಅಥವಾ ಸ್ಪೋಟಕ (explosive) ಗುಣಗಳನ್ನು ಹೊಂದಿಲ್ಲ. ಹೀಲಿಯಂ ಒಂದು ನಿಷ್ಕ್ರಿಯ (inert) ಅನಿಲವಾಗಿದ್ದು, ರಾಸಾಯನಿಕವಾಗಿ ಸ್ಥಿರವಾಗಿರುತ್ತದೆ. ಇದು ಆಕ್ಸಿಜನ್‌ನೊಂದಿಗೆ ಸಂಯೋಜನೆ ಹೊಂದುವುದಿಲ್ಲ. ಆದ್ದರಿಂದ ಬೆಂಕಿ ಉಂಟು ಮಾಡಲು ಅಥವಾ ಸ್ಫೋಟಕಕಾರಿ ಪ್ರಕ್ರಿಯೆಗಳನ್ನು ಉಂಟುಮಾಡಲು ಸಾಧ್ಯವಿಲ್ಲ. ಈ ಕಾರಣದಿಂದಲೇ ತೆಳುವಾದ ಸಣ್ಣ ರಬ್ಬರ್ ಅಥವಾ ದೊಡ್ಡ ರಬ್ಬರ್ ಚೀಲಗಳಿಗೆ ಹೀಲಿಯಂ ತುಂಬಿ ಬಲೂನ್ ಗಳಾಗಿ ಮಾಡಲಾಗುತ್ತದೆ.
ಇಂಥದ್ದೇ ಗುಣ ಹೈಡ್ರೋಜನ್ (Hydrogen)ಗೆ ಇರುವುದಿಲ್ಲ. ಇದು ದಹನಕಾರಿ ಹಾಗೂ ಸ್ಫೋಟಕ ಗುಣ ಹೊಂದಿರುತ್ತದೆ. ಈ ಹಿನ್ನೆಲೆಯಲ್ಲಿ ಜಯ ಮಾರ್ತಾಂಡ ಅರಮನೆ ಮುಂದೆ ಸ್ಪೋಟಗೊಂಡಿರುವುದು ಹೀಲಿಯಂ ಸಿಲಿಂಡರ್ ಆಗಿರುವ ಸಾಧ್ಯತೆ ಇಲ್ಲ. ಇದು ದಹನಕಾರಿ ಮತ್ತು ಸ್ಪೋಟಕಗುಣ ಉಳ್ಳದೇ ಆಗಿರಬಹುದು. ಇದೇನಾದರೂ ಭಯೋತ್ಪಾದನೆ ಕೃತ್ಯವೇ ಎಂಬುದನ್ನು ಸೂಕ್ತ ತನಿಖೆಯೇ ತಿಳಿಸಬೇಕು.
ಮೈಸೂರು ಅರಮನೆ ದೇಶದ ಬಹುಮುಖ್ಯ ಸ್ಮಾರಕಗಳಲ್ಲಿ ಒಂದಾಗಿದೆ. ಇಲ್ಲಿಗೆ ಹೆಚ್ಚಿನ ಭದ್ರತೆ ಕಲ್ಪಿಸುವ ಅಗತ್ಯವಿದೆ. ಅರಮನೆ ಮುಂದೆ ಬಲೂನ್ ಮಾಡುವುದು ಅಥವಾ ಗ್ಯಾಸ್ ಸಿಲಿಂಡರ್ ಗಳನ್ನು ಇಟ್ಟುಕೊಂಡು ತಿಂಡಿತಿನಿಸು ಮಾಡುವುದಕ್ಕೆ ಅವಕಾಶ ನೀಡಬಾರದು.
ಸ್ಥಳದಲ್ಲಿ ಸಿಕ್ಕಿರುವ ಅವಶೇಷಗಳನ್ನು ಈಗಾಗಲೇ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿರುತ್ತಾರೆ. ಅಲ್ಲಿಂದ ತ್ವರಿತವಾದ ಪರೀಕ್ಷಾ ಫಲಿತಾಂಶ ಬರಬೇಕು. ಆಗಷ್ಟೇ ನಿಖರವಾದ ಕಾರಣ ತಿಳಿಯಲು ಸಾಧ್ಯವಿದೆ. ಆದರೆ ಇದು ಹೀಲಿಯಂ ಅನಿಲ ತುಂಬಿದ ಸಿಲಿಂಡರ್ ನಿಂದ ಆಗಿರುವ ಸ್ಫೋಟವಂತೂ ಅಲ್ಲ.
