ಜೀವನಶೈಲಿ

ಅನುರೂಪ ದಾಂಪತ್ಯದ ಹಾಗೆ ಅನುರೂಪ ಆಹಾರ ಜೋಡಿ !

ಅನುರೂಪ ಎಂಬುದು ಅಪರೂಪ. ಹಾಗೊಂದು ವೇಳೆ ಪರಸ್ಪರ ತಾಳಮೇಳ ಆಗುವಂಥ ಸಂಗತಿ ಹೆಚ್ಚಿದ್ದರೆ ಅನುರೂಪ ಪದ ಚಾಲ್ತಿಗೆ ಬರುತ್ತಿರಲಿಲ್ಲ.ಉದಾಹರಣೆಗೆ ಅನುರೂಪ ಜೋಡಿ ! ಅನುರೂಪ ದಾಂಪತ್ಯ,ಅನುರೂಪ ಸ್ನೇಹ ಎಂದು ಕರೆಯುತ್ತೇವೆ. ಇಂಥವು ಅಪರೂಪವಾಗಿರುವುದರಿಂದಲೇ ಅನುರೂಪ !!

ಹೆಚ್ಚಿನ ದಾಂಪತ್ಯಗಳಲ್ಲಿ, ಸಂಬಂಧಗಳಲ್ಲಿ “ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು” ಅನ್ನೋ ಥರ. ಇಬ್ಬರಲ್ಲಿ ಎತ್ತು – ಕೋಣ ಯಾರಾದರೂ ಆಗಬಹುದು. ಅದು ಸಂದರ್ಭಾನುಸಾರ.ಈ ವಿಷಯ ಇರಲಿ ನಾನು ಹೇಳ ಹೊರಟ್ಟಿದ್ದು ಬೇರೆ ಸಂಗತಿ
ಆಹಾರಗಳಲ್ಲಿಯೂ ಅನುರೂಪ ಹೊಂದಿರುವಂಥವೂ ಇವೆ. ಉದಾಹರಣೆಗೆ ಮುದ್ದೆ ± ಉಪ್ಸಾರು ± ಬೆಳ್ಳುಳ್ಳಿ ಕಾರ ± ತುಪ್ಪ ಅಥವಾ ಬೆಣ್ಣೆ, ಹಾಗೆ ಮುದ್ದೆ ± ಬಸ್ಸಾರು ± ಪಲ್ಯ, ಮುದ್ದೆ ± ಕೋಳಿಸಾರು, ಉಪ್ಪಿಟ್ಟು + ಮೊಸರು, ದೋಸೆ + ಕಾಯಿಚಟ್ನಿ ಇತ್ಯಾದಿ ಇತ್ಯಾದಿ!

ಇವುಗಳಲ್ಲದೇ ಮ್ಯಾಚಿಂಗ್ ಮ್ಯಾಚಿಂಗ್ ದಂಪತಿಗಳಂತೆ ಕಂಗೊಳಿಸುವ ಜೋಡಿ ಎಂದರೆ ನೀರ್ ದೋಸೆ ± ಕೋಳಿಸಾರು ! ನೀರ್ ದೋಸೆ ಜೊತೆಗೆ ಕಾಯಿತುರಿ, ಬೆಲ್ಲದ ಜೋಡಿ ಅಥವಾ ಕಾಯಿಚಟ್ನಿಯೂ ಬಹುರುಚಿಯಾಗಿರುತ್ತದೆ ! ಆದರೆ ನನಗೆ ನೀರ್ ದೋಸೆ ಜೊತೆಗೆ ಕೋಳಿ ಸಾರು ಭಾರಿ ಇಷ್ಟ !!

Neerdode And Chikken

ಇವೆರಡೂ ಜೊತೆಯಲ್ಲಿದ್ದರೆ ನನ್ನಂಥ ಕಿರಿದಾದ ಹೊಟ್ಟೆಯೂ ಹಿರಿದಾಗುವುದು ಸಹಜ ! ಎಷ್ಟು ತಿಂದಿದ್ದರೂ ಉಂಡೆದ್ದ ಮೇಲೆ ಏನೂ ತಿಂದಿಲ್ಲವೆಂಬ ಭಾವನೆ ! ಹೆಸರಿಗೆ ನೀರ್ ದೋಸೆಯಾದರೂ ಸಾರನ್ನೇನೂ ಇಂದು ಹೀರಿಕೊಳ್ಳುವುದಿಲ್ಲ ! ಕೋಳಿಸಾರಿನಲ್ಲಿ ತುಸು ಅದ್ದಿ ಬಾಯಿಗಿಟ್ಟರೆ ಅಗಿಯುವ ಪ್ರಮೇಯವೂ ಇಲ್ಲ ! ಹಾಗೇ ಕರಗಿ ಹೋಗುತ್ತದೆ ! ಆದ್ದರಿಂದಲೇ ತಿನ್ನುವವರಿದ್ದರೆ ಬಡಿಸುವವರೂ ಲೆಕ್ಕವಿಡುವುದಿಲ್ಲ.

ಮೊದಲೆಲ್ಲ ನೀರ್ ದೋಸೆ ಅಂದ್ರೆ ಕರಾವಳಿಗೋ ಅಥವಾ ಕರಾವಳಿ ಹೋಟೆಲ್ ಗೋ ಹೋಗಬೇಕಿತ್ತು.ಇತ್ತೀಚೆಗೆ ಬಯಲುಸೀಮೆ ಮನೆಗಳಲ್ಲಿಯೂ ಮಾಡುತ್ತಾರೆ.ಆದರೆ ಕರಾವಳಿ ಸೀಮೆಯ ನೀರ್ ದೋಸೆ ರುಚಿ ಅದಕ್ಕಿಲ್ಲ ಎಂಬುದು ನನ್ನ ಗ್ರಹಿಕೆ!! ನೀವೇನ್ ಹೇಳ್ತೀರಾ ? ಕಾಮೆಂಟ್ ಮಾಡಿ ತಿಳಿಸಿ !

Leave a Reply

Your email address will not be published. Required fields are marked *

error: Content is protected !!