ಕರಾವಳಿ ಪ್ರದೇಶದಲ್ಲಿ ಸಂಚರಿಸುವಾಗ ಗೇರುತೋಟಗಳು ಕಾಣಸಿಗುತ್ತವೆ. ಅಲ್ಲಿ ಇದು ಪಾರಂಪಾರಿಕವಾಗಿ ಮಾಡಿಕೊಂಡು ಬಂದ ಕೃಷಿ. ಮುಖ್ಯವಾಗಿ ಮಳೆಯಾಶ್ರಿತದಲ್ಲಿ ಇದನ್ನು ಮಾಡಲಾಗುತ್ತಿತ್ತು. ಆದರೆ ಇದನ್ನೇ ಪ್ರಧಾನವಾಗಿ ಮಾಡುತ್ತಿರಲಿಲ್ಲ. ಭತ್ತ, ಅಡಿಕೆ ಕೃಷಿ ಮಾಡುತ್ತಿದ್ದವರು ಹೆಚ್ಚುವರಿ ಗುಡ್ಡ ಪ್ರದೇಶವಿದ್ದರೆ ಅಲ್ಲಿ ಇದನ್ನು ಬೆಳೆಯುತ್ತಿದ್ದರು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ….

ಕರಾವಳಿ ಪ್ರದೇಶದಲ್ಲಿ ಸಾಂಪ್ರದಾಯಿಕವಾಗಿ ಭತ್ತ ಬೆಳೆಯುತ್ತಿದ್ದ ಬಹುತೇಕ ಪ್ರದೇಶಗಳನ್ನು ವಾಣಿಜ್ಯ ಬೆಳೆ ಅಡಿಕೆ ಆಕ್ರಮಿಸಿಕೊಂಡಿತ್ತು. ಇದಕ್ಕೆ ಬೇರೆಬೇರೆ ಕಾರಣಗಳಿವೆ. ಅಡಿಕೆಗೆ ಬೆಳೆ ಕಡಿಮೆಯಾದಾಗ ಕೃಷಿಕರು ರಬ್ಬರಿನತ್ತ ತಿರುಗಿದರು. ಆದರೆ ಇಂದು ರಬ್ಬರಿಗೆ ಉತ್ತಮ ಧಾರಣೆ ಇಲ್ಲ. ಬಹಳಷ್ಟು ಕೃಷಿಕರು ಗೇರುಮರಗಳನ್ನು ತೆಗೆದು ಹಾಕಿ ರಬ್ಬರ್ ಹಾಕಿದ್ದರು. ಆದರೆ ಇಂದು ರಬ್ಬರ್ ತೆಗೆದು ಹಾಕಿ ಮತ್ತೆ ಗೇರು ಹಾಕುವ ಪ್ರವೃತ್ತಿ ಹೆಚ್ಚುತ್ತಿದೆ. ಇಷ್ಟೇ ಅಲ್ಲದೇ ಘಟ್ಟದ ಮೇಲಿನ ಪ್ರದೇಶ ಅಂದರೆ ಬಯಲುಸೀಮೆಯಲ್ಲಿಯೂ ಗೇರುಕೃಷಿ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ.

ದಕ್ಷಿಣಕನ್ನಡ ಜಿಲ್ಲೆ ಪುತ್ತೂರಿನ ಸಮೀಪ ದರ್ಭೆಯಲ್ಲಿ ಗೇರು ಸಂಶೋಧನಾ ಕೇಂದ್ರವಿದೆ. ಇದು ಕೇಂದ್ರ ಸರ್ಕಾರದ ಆಧೀನದಲ್ಲಿರುವ ಸಂಸ್ಥೆ. ಇಲ್ಲಿ ಗೇರುಗಿಡಗಳು, ಅದರ ಕೃಷಿಗೆ ಸಂಬಂಧಿಸಿದಂತೆ ಸಂಶೋಧನೆಗಳು ನಡೆಯುತ್ತಿರುತ್ತವೆ. ವಿಸ್ತರಣಾ ಚಟುವಟಿಕೆಗಳ ಮುಖಾಂತರ ಸಂಶೋಧನೆಗಳ ಫಲಶೃತಿಯನ್ನು ರೈತರಿಗೆ ತಲುಪಿಸಲಾಗುತ್ತಿರುತ್ತದೆ.

ಗೇರು ಅಂದರೆ ಗೋಡಂಬಿ ಸಸ್ಯಗಳ ಬಗ್ಗೆ ರಾಷ್ಟ್ರಾದ್ಯಂತ ಇರುವ ಸಂಶೋಧನಾ ಕೇಂದ್ರಗಳಲ್ಲಿ ಸಂಶೋಧನೆಗಳು ನಿರಂತರವಾಗಿ ನಡೆಯುತ್ತಿದೆ. ಇದರಿಂದ 43ಕ್ಕೂ ಹೆಚ್ಚು ತಳಿಗಳು ಬಿಡುಗಡೆಯಾಗಿವೆ. ಇವುಗಳೆಲ್ಲವೂ ಬಳಕೆಯಾಗುತ್ತಿಲ್ಲ, ಕೆಲವು ತಳಿಗಳು ಪ್ರಾಯೋಗಿಕವಾಗಿ ಯಶಸ್ವಿಯಾಗದೇ ನೇಪಥ್ಯಕ್ಕೆ ಸರಿದಿವೆ. ಆಯಾ ಪ್ರದೇಶದ ಮಣ್ಣು ಮತ್ತು ವಾತಾವರಣಕ್ಕೆ ಹೊಂದಿಕೊಂಡ ತಳಿಗಳು ಮಾತ್ರ ಹೆಚ್ಚು ಬಳಕೆಯಲ್ಲಿವೆ.

ಬೇಗನೆ ಹೂ ಬಿಟ್ಟು ಫಸಲು ನೀಡುವ ಅಲ್ಪಾವಧಿ ತಳಿಗಳಿಗೆ ಬೇಡಿಕೆ ಹೆಚ್ಚು. ಆದರೆ ಇಂಥ ತಳಿಗಳಿಂದ ಅನುಕೂಲ ಇರುವಂತೆ ಅನಾನುಕೂಲಗಳು ಇವೆ. ಇಂಥ ತಳಿಗಳಿಗೆ ರೋಗಗಳ ಬಾಧೆ ಹೆಚ್ಚು. ಚಹಾಸೊಳ್ಳೆಗಳ ಬಾಧೆ ತೀವ್ರವಾಗಿರುತ್ತದೆ. ಇವುಗಳ ನಿರ್ವಹಣೆಗೆ ಅಪಾರ ಖರ್ಚು-ವೆಚ್ಚ ತಗುಲುತ್ತದೆ. ಇದನ್ನು ಮನಗಂಡಿರುವ ಬಹುತೇಕ ಬೆಳೆಗಾರರು ಅಲ್ಪಾವಧಿ ತಳಿಗಳನ್ನು ಕೃಷಿ ಮಾಡಲು ಬಯಸುವುದಿಲ್ಲ.

ಮಧ್ಯಮಾವಧಿ ಮತ್ತು ದೀರ್ಘಾವಧಿ ತಳಿಗಳಿಗೆ ರೋಗಗಳ ಬಾಧೆ ಮತ್ತು ಚಹಾಸೊಳ್ಳೆಗಳ ಬಾಧೆ ಕಡಿಮೆ. ಆದ್ದರಿಂದ ಹೆಚ್ಚಿನ ಬೆಳೆಗಾರರು ಇವುಗಳನ್ನೇ ಕೃಷಿ ಮಾಡಲು ಬಯಸುತ್ತಾರೆ. ಕರಾವಳಿ ಪ್ರದೇಶಗಳಿಗೆ ಮಧ್ಯಮಾವಧಿ ತಳಿಗಳನ್ನು ಹೆಚ್ಚಾಗಿ ಶಿಫಾರಸು ಮಾಡಲಾಗುತ್ತದೆ. ಇದರಿಂದ ಬೆಳೆಗಾರರ ಖರ್ಚು-ವೆಚ್ಚ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ.

ಮಣ್ಣಿನಲ್ಲಿ ತೇವಾಂಶ ಉತ್ತಮ ಮಟ್ಟದಲ್ಲಿದ್ದರೆ ಗಿಡಗಳ ಬೆಳವಣಿಗೆ ಅತ್ಯುತ್ತಮವಾಗಿರುತ್ತದೆ. ಗಿಡಗಳ ಬೇರು, ಕಾಂಡ, ಮತ್ತು ಎಲೆಗಳ ಬೆಳವಣಿಗೆ ಶೀಘ್ರವಾಗಿ ಆಗುತ್ತದೆ. ಇದರ ನೇರ ಪರಿಣಾಮ ಫಸಲಿನ ಮೇಲೆ ಆಗುತ್ತದೆ. ಗುಣಮಟ್ಟದ ಹಣ್ಣು ಮತ್ತು ಗೇರು ಲಭ್ಯವಾಗುತ್ತದೆ. ಇಂಥ ಮರಗಳಿಗೆ ಸಹಜವಾಗಿ ರೋಗ ಮತ್ತು ಕೀಟಗಳ ನಿರೋಧಕ ಶಕ್ತಿ ಹೆಚ್ಚಿರುತ್ತದೆ. ತೇವಾಂಶ ಉತ್ತಮ ಮಟ್ಟದಲ್ಲಿರುವ ಪ್ರದೇಶಗಳಿಗೆ ಸೂಕ್ತವಾದ ತಳಿಗಳು ಕೂಡ ಅಭಿವೃದ್ಧಿಯಾಗಿವೆ

ದೀರ್ಘಾವಧಿ ತಳಿಗಳನ್ನು ಕೂಡ ಅಭಿವೃದ್ಧಿಪಡಿಸಲಾಗಿದೆ. ಇವುಗಳ ಬೆಳವಣಿಗೆಯೂ ಉತ್ತಮವಾಗಿರುತ್ತದೆ. ಒಳ್ಳೆಯ ಇಳುವರಿಯೂ ದೊರೆಯುತ್ತದೆ. ಮುಖ್ಯವಾಗಿ ಇಂಥ ತಳಿಗಳಲ್ಲಿ ರೋಗ ಮತ್ತು ಕೀಟಬಾಧೆ ಸಮಸ್ಯೆ ಗಣನೀಯವಾಗಿ ಕಡಿಮೆ ಇರುತ್ತದೆ. ಇಂಥ ತಳಿಗಳನ್ನು ಆಯ್ಕೆ ಮಾಡುವಾಗ ಆಯಾ ಪ್ರದೇಶಕ್ಕೆ ಸೂಕ್ತವಾದ ತಳಿಗಳನ್ನು ಆಯ್ಕೆ ಮಾಡಿಕೊಳ್ಳುವುದು ಅಗತ್ಯ. ಈ ನಿಟ್ಟಿನಲ್ಲಿ ತಜ್ಞರ ಮಾರ್ಗದರ್ಶನ ಪಡೆಯಬೇಕು

ಕರಾವಳಿ ಪ್ರದೇಶದಲ್ಲಿ ಮಧ್ಯಮಾವಧಿ ತಳಿಗಳಲ್ಲದೇ ದೀರ್ಘಾವಧಿ ತಳಿಗಳನ್ನು ಕೂಡ ಹೆಚ್ಚು ಪ್ರಮಾಣದಲ್ಲಿ ಕೃಷಿ ಮಾಡುತ್ತಾರೆ. ಕೆಲವೊಂದು ಸಾಂಪ್ರದಾಯಿಕ ತೋಟಗಳಲ್ಲಿ ಮಧ್ಯಮಾವಧಿ ಮತ್ತು ದೀರ್ಘಾವಧಿ ತಳಿಗಳನ್ನು ಕೃಷಿ ಮಾಡುತ್ತಿರುತ್ತಾರೆ. ಆದರೆ ಇತ್ತೀಚೆಗೆ ಹೀಗೆ ಬೇರೆಬೇರೆ ತಳಿಗಳನ್ನು ಒಂದೇ ತೋಟದಲ್ಲಿ ಮಿಶ್ರ ಮಾಡಿ ಕೃಷಿ ಮಾಡುವ ಪ್ರವೃತ್ತಿ ಅತ್ಯಂತ ಕಡಿಮೆ

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ವ್ಯತ್ಯಯಗಳು ಆಗುತ್ತಿರುತ್ತವೆ. ಇದು ದೂರದ ಹಳ್ಳಿಗಳಲ್ಲಿ ಕೃಷಿ ಮಾಡುವ ಬೆಳೆಗಾರರ ಮೇಲೆ ನೇರ ಪರಿಣಾಮ ಬೀರುತ್ತದೆ. ಇದಕ್ಕೆ ಸೂಕ್ತ ಉದಾಹರಣೆ ರಬ್ಬರ್. ಹತ್ತು ವರ್ಷಗಳ ಹಿಂದೆ ಇದರ ಬೆಲೆ ತಾರಕಕ್ಕೇರಿತ್ತು. ಆಗ ಸಾಕಷ್ಟು ಕೃಷಿಕರು ಗೇರುಗುಡ್ಡಗಳಲ್ಲಿ ಅಲ್ಲಿನ ಗಿಡಗಳನ್ನು ಕಿತ್ತು ಹಾಕಿ ರಬ್ಬರ್ ಹಾಕಿದರು. ನೋಡುನೋಡುತ್ತಿದ್ದಂತೆ ರಬ್ಬರ್ ಬೆಲೆ ಕುಸಿಯಿತು. ಇದರಿಂದ ಈ ಎಲ್ಲ ಕೃಷಿಕರು ತತ್ತರಿಸಿದರು. ಈಗ ಅವರಲ್ಲಿ ಬಹುತೇಕರು ಮತ್ತೆ ಗೇರುಕೃಷಿಯತ್ತ ಮುಖ ಮಾಡಿದ್ದಾರೆ

ಕರಾವಳಿ ಪ್ರದೇಶದಲ್ಲಿ ಮಾತ್ರ ಕಾಣಸಿಗುತ್ತಿದ್ದ ಗೇರುಗಿಡಗಳು ಇತ್ತೀಚೆಗೆ ಬಯಲುಸೀಮೆ ಪ್ರದೇಶದಲ್ಲಿಯೂ ಕಾಣಸಿಗುತ್ತವೆ. ಇಲ್ಲಿನ ಕೆಲವಾರು ಕೃಷಿಕರು ಗೇರುಕೃಷಿಯಲ್ಲಿ ಆಸಕ್ತಿ ಹೊಂದಿ ಮಧ್ಯಮ ಮತ್ತು ದೊಡ್ಡ ಪ್ರಮಾಣದ ತೋಟಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ. ಬಯಲುಸೀಮೆಗೆ ಸೂಕ್ತವಾದ ತಳಿಗಳು ಕೂಡ ಅಭಿವೃದ್ಧಿಯಾಗಿವೆ.

ಬಯಲುಸೀಮೆಯಲ್ಲಿ ಭತ್ತ, ರಾಗಿ, ಕಬ್ಬು ಮತ್ತು ತರಕಾರಿ ಬೆಳೆಗಳನ್ನು ಕೃಷಿ ಮಾಡುತ್ತಿರುವ ಪ್ರದೇಶವೇ ಅಧಿಕ. ಇಲ್ಲಿ ಹಣ್ಣಿನ ತೋಟಗಳು ಆಧಿಕ. ಆದರೆ ಗೇರುಕೃಷಿಯನ್ನು ಇಲ್ಲಿ ಮಾಡಲಾಗುತ್ತಿರಲಿಲ್ಲ. ಅದು ಎಲ್ಲ ವಾತಾವರಕ್ಕೂ ಹೊಂದಾಣಿಕೆಯಾಗುತ್ತದೆ ಎಂದು ತಿಳಿದ ನಂತರ ಅವುಗಳತ್ತ ಗಮನ ನೀಡುತ್ತಿದ್ದಾರೆ. ಪ್ರಯೋಗಶೀಲ ಕೃಷಿಕರನೇಕರು ಗೇರುಕೃಷಿ ಮಾಡಲು ಮುಂದಾಗಿದ್ದಾರೆ.

ಕೋಲಾರ ಸಮೀಪದ ಚಿಂತಾಮಣಿ ಸುತ್ತಮುತ್ತಲೂ ಗೇರುಕೃಷಿ ಅತ್ಯುತ್ತಮವಾಗಿ ನಡೆಯುತ್ತಿದೆ. ಇದಕ್ಕೆ ಕಾರಣ ಕೃಷಿವಿಜ್ಞಾನಿಗಳು. ಇವರು ಬಯಲುಸೀಮೆ ವಾತಾವರಣಕ್ಕೂ ಹೊಂದಾಣಿಕೆಯಾಗಬಲ್ಲ ತಳಿಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಇದರಿಂದ ಹೆಚ್ಚಾಗಿ ಭತ್ತ ಮತ್ತು ಕಬ್ಬು ಕೃಷಿ ಮಾಡುವ ಮಂಡ್ಯ ಜಿಲ್ಲೆಯ ಪ್ರಯೋಗಶೀಲ ಕೃಷಿಕರು ಗೇರುಕೃಷಿಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಕೋಲಾರ ಜಿಲ್ಲೆಯ ಹಲವೆಡೆ ಗೇರುಕೃಷಿ ಮಾಡುವವರ ಸಂಖ್ಯೆ ಗಣನೀಯವಾಗಿದೆ.

ಗೇರುಕೃಷಿಯನ್ನು ಆರಂಭಿಸುವ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ. ಅವರು ಯಾವಯಾವ ಪ್ರದೇಶಕ್ಕೆ ಯಾವಯಾವ ತಳಿಗಳು ಸೂಕ್ತ ಎಂದು ತಿಳಿಸುತ್ತಾರೆ. ಹೀಗೆ ಮಾಡದೇ ಇದ್ದರೆ ನಷ್ಟವಾಗುವ ಸಾಧ್ಯತೆ ಅಧಿಕ. ಸೂಕ್ತವಾಗಿ ಹೊಂದಾಣಿಕೆಯಾಗದ ಸಸಿಗಳನ್ನು ತದು ನೆಟ್ಟು ಅದು ಬೆಳೆದ ನಂತರ ಫ್ರೂನಿಂಗ್ ಮಾಡುವುದರಿಂದಲೂ ಏನೂ ಪ್ರಯೋಜನವಾಗುವುದಿಲ್ಲ. ಫಲ ಕಚ್ಚುವ ಸಾಧ್ಯತೆಗಳು ತೀರಾ ಕಡಿಮೆ ಇರುತ್ತದೆ

ಗೇರುಕೃಷಿಯಲ್ಲಿಯೂ ಅನೇಕ ಪದ್ಧತಿಗಳಿವೆ. ಆಸಕ್ತರು ಅವುಗಳ ಬಗ್ಗೆ ತಿಳಿದುಕೊಳ್ಳಬೇಕು. ಸಾಂದ್ರ, ಘನ ಸಾಂದ್ರ ಪದ್ಧತಿಗಳಿವೆ. ಈ ಎಲ್ಲ ಪದ್ಧತಿಗಳಿಗೂ ಎಲ್ಲ ರೀತಿಯ ತಳಿಗಳು ಕೂಡ ಹೊಂದಾಣಿಕೆಯಾಗುವುದಿಲ್ಲ. ಆದ್ದರಿಂದ ಘನ ಸಾಂದ್ರತೆಗೆ ಆಯ್ಕೆ ಮಾಡಿಕೊಂಡಾಗ ಅದಕ್ಕೆ ಸೂಕ್ತವಾದ ತಳಿಗಳನ್ನೇ ಬೆಳೆಸಬೇಕು. ನಿರ್ದಿಷ್ಟ ಅಂತರ ನೀಡಿ ಸಸಿಗಳನ್ನು ಹಾಕಿ, ಸೂಕ್ತವಾಗಿ ಪೋಷಣೆ ಮಾಡಿದರೆ ಅವುಗಳ ಬೆಳವಣಿಗೆ ಅತ್ಯುತ್ತಮವಾಗಿ ಆಗುತ್ತದೆ.

ಘಟ್ಟದ ಕೆಳಗಿನ ಪ್ರದೇಶ ಅಂದರೆ ಕರಾವಳಿಯಲ್ಲಿ ಗೇರುಕೃಷಿ ಮಾಡುವ ರೀತಿಗೂ ಘಟ್ಟದ ಮೇಲಿನ ಪ್ರದೇಶಗಳಲ್ಲಿ ಕೃಷಿ ಮಾಡುವುದಕ್ಕೂ ವ್ಯತ್ಯಾಸಗಳಿವೆ. ಬೆಂಗಳೂರು, ರಾಮನಗರ, ಮಂಡ್ಯ, ಕೋಲಾರ ಈ ಪ್ರದೇಶಗಳ ಮಣ್ಣು ಮತ್ತು ವಾತಾವರಣ ಭಿನ್ನವಾಗಿರುತ್ತದೆ. ಕಲ್ಲುಮಣ್ಣಿನಲ್ಲಿಯೂ ಗೇರುಕೃಷಿ ಚೆನ್ನಾಗಿ ಬೆಳವಣಿಗೆಯಾಗುತ್ತದೆ. ಆದರೆ ಗೇರುಕೃಷಿ ಮಾಡುವ ಮುನ್ನ ಅಲ್ಲಿನ ಮಣ್ಣಿನ ಪರೀಕ್ಷೆ ಮಾಡಿಸುವುದು ಸೂಕ್ತ.

ಚಿಂತಾಮಣಿ ಕೃಷಿ ಸಂಶೋಧನಾ ಕೇಂದ್ರದಲ್ಲಿಯೂ ಗೇರುಕೃಷಿ ಬಗ್ಗೆ ವ್ಯಾಪಕ ಅಧ್ಯಯನ ಮತ್ತು ಅಭಿವೃದ್ಧಿ ನಡೆದಿದೆ. ಕೆಲವೊಂದು ತಳಿಗಳಿಗೆ ಸ್ಥಳೀಯ ಹೆಸರನ್ನೇ ಇಡಲಾಗಿದೆ. ಚಿಂತಾಮಣಿ -1 ಮತ್ತು ಚಿಂತಾಮಣಿ – 2 ತಳಿಗಳು ಈ ಪ್ರದೇಶದಲ್ಲಿ ಹೆಚ್ಚು ಕೃಷಿಯಾಗುತ್ತಿವೆ. ಇದಲ್ಲದೇ ದೂರದ ಕೇರಳದ ಗೇರು ಸಂಶೋಧನಾ ಕೇಂದ್ರದಲ್ಲಿ ಅಭಿವೃದ್ಧಿಯಾದ ಧನ ಎನ್ನುವ ತಳಿ ಬಹುತೇಕ ಎಲ್ಲ ರೀತಿಯ ಹವಾಗುಣಕ್ಕೂ ಹೊಂದಾಣಿಕೆಯಾಗಿ ಬೆಳವಣಿಗೆ ಹೊಂದುತ್ತದೆ.

:ಚಿಂತಾಮಣಿ 1, ಚಿಂತಾಮಣಿ 2, ವೆಂಗುರ್ಲ ತಳಿ ಕೂಡ ಬಹುತೇಕ ಎಲ್ಲ ಪ್ರದೇಶಗಳಿಗೆ ಹೊಂದಾಣಿಕೆಯಾಗುತ್ತವೆ. ಆದರೆ ವೆಂಗುರ್ಲ ತಳಿಗೆ ರೋಗ ಮತ್ತು ಕೀಟಬಾಧೆ ಹೆಚ್ಚು. ಅದರಲ್ಲಿಯೂ ಮುಖ್ಯವಾಗಿ ಚಹಾ ಸೊಳ್ಳೆ ಬಾಧೆ ಹೆಚ್ಚು. ಇವುಗಳನ್ನು ನಿಯಂತ್ರಣ ಮಾಡುವುದು ಬಹಳ ಕಷ್ಟ ಮತ್ತು ದುಬಾರಿ ವೆಚ್ಚ ಕೂಡ. ಹೀಗೆ ಮಾಡುವುದರಿಂದ ಕೃಷಿಕರ ಲಾಭಾಂಶ ಕುಸಿಯುವುದಲ್ಲದೇ ಬೇರೆಬೇರೆ ರೀತಿಯ ದುಷ್ಪರಿಣಾಮಗಳೂ ಉಂಟಾಗುತ್ತವೆ.

ಕೇರಳದಲ್ಲಿ ಗೇರುಗಿಡಗಳಿಗೆ ಉಂಟಾಗುವ ರೋಗ ಮತ್ತು ಕೀಟಬಾಧೆ, ಅದರಲ್ಲಿಯೂ ಮುಖ್ಯವಾಗಿ ಚಹಾಸೊಳ್ಳೆ ನಿಯಂತ್ರಿಸಲು ಸಿಂಪಡಿಸಿದ ಕೀಟನಾಶಕಗಳಿಂದಾಗಿ ಬಹಳ ದುಷ್ಪರಿಣಾಮಗಳಾಗಿವೆ. ಮಣ್ಣು, ನೀರು, ವಾಯು ಕಲುಷಿತವಾಗುವುದಲ್ಲದೇ ಹುಟ್ಟುವ ಮಕ್ಕಳ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ ಪರಿಸರಕ್ಕೆ ಕುತ್ತು ತರುವಂಥ ಕೀಟನಾಶಕಗಳ ಬಳಕೆಯಿಂದ ದೂರ ಇರುವುದು ಅಗತ್ಯ.

ಇತ್ತೀಚಿನ ವರ್ಷಗಳಲ್ಲಿ ಸಾವಯವ ಕೃಷಿ ಹೆಚ್ಚು ಜನಪ್ರಿಯಗೊಳ್ಳುತ್ತಿದೆ. ಇದರ ಮುಖ್ಯ ಉದ್ದೇಶ ಮಣ್ಣು, ನೀರು, ವಾಯು ಕಲುಷಿತವಾಗದಂತೆ ನೋಡಿಕೊಳ್ಳುವುದು. ಹೀಗೆ ಮಾಡುವುದರಿಂದ ಮನುಷ್ಯರ ಆರೋಗ್ಯವೂ ಉತ್ತಮವಾಗಿರುತ್ತದೆ. ಸಾವಯವ ಕೃಷಿಯನ್ನು ಮಾಡುವ ಹಂಬಲವಿದ್ದೂ ಗೇರುಕೃಷಿ ಮಾಡಬೇಕೆಂದು ಹೊರಟವರು ಸೂಕ್ತವಾದ ತಳಿಗಳನ್ನೇ ಆಯ್ಕೆ ಮಾಡಿಕೊಳ್ಳುವುದು ಸೂಕ್ತ.

ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಕಾರ್ಯ ಹೆಚ್ಚು ಲಾಭಾಂಶವನ್ನು ತಂದುಕೊಡುತ್ತದೆ. ಇಂಥ ಪದಾರ್ಥಗಳಿಗೆ ಮಾರುಕಟ್ಟೆಯಲ್ಲಿ ಸದಾ ಬೇಡಿಕೆ ಇರುತ್ತದೆ. ಗೇರುಹಣ್ಣಿನ ಮೌಲ್ಯವರ್ಧನೆಗೆ ಅಪಾರ ಅವಕಾಶವಿದೆ. ಇದರಿಂದ ವಿವಿಧ ಪದಾರ್ಥಗಳನ್ನು ತಯಾರಿಸಬಹುದು. ಇದನ್ನು ದೀರ್ಘಕಾಲ ಸಂರಕ್ಷಿಸಡಬಬಹುದು.

ಗೇರುಹಣ್ಣಿನಿಂದ ಜ್ಯೂಸ್, ಜಾಮ್ ಮತ್ತು ಜೆಲ್ಲಿ ತಯಾರು ಮಾಡಬಹುದು. ರಾಜ್ಯದ ಬೆರಳಿಕೆಯಷ್ಟು ಮಂದಿ ಮಾತ್ರ ಈ ಕಾರ್ಯ ಮಾಡುತ್ತಿದ್ದಾರೆ. ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾಡಲು ದೊಡ್ಡ ಗಾತ್ರದ ಗೇರುಹಣ್ಣುಗಳು ಬೇಕಾಗುತ್ತವೆ. ಆದ್ದರಿಂದ ಮೌಲ್ಯವರ್ಧನೆಯಲ್ಲಿ ಆಸಕ್ತಿ ಹೊಂದಿರುವವರು ಅದಕ್ಕೆ ತಳಿಗಳ ಆಯ್ಕೆ ಮಾಡಿ, ಅಗತ್ಯ ಪೋಷಕಾಂಶಗಳನ್ನು ಪೂರೈಸಬೇಕು. ಇದು ಬಹಳ ಉತ್ತಮ ಫಲಿತಾಂಶ ನೀಡುತ್ತದೆ.

ಸಾಮಾನ್ಯವಾಗಿ ಸಣ್ಣ ಮತ್ತು ಮಧ್ಯನ ಪ್ರಮಾಣದ ಗೇರು ಸಂಸ್ಕರಣಾ ಘಟಕಗಳಲ್ಲಿ ಗೇರನ್ನು ಮಾತ್ರ ತೆಗೆದುಕೊಂಡು ಹಣ್ಣನ್ನು ಎಸೆಯುತ್ತಾರೆ. ಆದರೆ ಇದರಿಂದಲೂ ಗುಣಮಟ್ಟದ ಆಹಾರ ಪದಾರ್ಥಗಳನ್ನು ತಯಾರಿಸಬಹುದು ಎಂದು ಮೌಲ್ಯವರ್ಧನೆ ನಿಪುಣರು ತಿಳಿಸುತ್ತಾರೆ. ಆದ್ದರಿಂದ ನರ್ಸರಿಯಿಂದ ಗಿಡಗಳನ್ನು ಖರೀದಿಸಿ ತರುವ ಮೊದಲು ಒಮ್ಮೆ ತಜ್ಞರ ಸಲಹೆ ಪಡೆಯಬೇಕು

ರಾಷ್ಟ್ರದಲ್ಲಿ ಗೇರುಹಣ್ಣಿನ ಮೌಲ್ಯವರ್ಧನೆಯನ್ನೂ ಪ್ರಮುಖ ಉದ್ದೇಶ ಮಾಡಿಕೊಂಡು ತಳಿಗಳನ್ನು ಅಭಿವೃದ್ಧಿಪಡಿಸಲಾಗಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ನಿಟ್ಟಿನಲ್ಲಿ ಪ್ರಯತ್ನಗಳು ಆಗುತ್ತಿರುವುದು ಗಮನಾರ್ಹ. ಈ ದಿಶೆಯಲ್ಲಿ ಪುತ್ತೂರಿನ ಗೇರು ಸಂಶೋಧನಾ ಕೇಂದ್ರದ ಕೃಷಿವಿಜ್ಞಾನಿಗಳು ಪ್ರಯತ್ನ ನಡೆಸಿದ್ದಾರೆ. ಹೀಗೆ ಆದರೆ ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಸಣ್ಣ ಪ್ರಮಾಣದ ರೈತರಿಗೂ ಗೇರುಕೃಷಿ ಲಾಭದಾಯಕವಾಗಿರುತ್ತದೆ.

ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರಿಗೂ ಗೇರುಕೃಷಿ ಅನುಕೂಲಕರ. ಲಭ್ಯ ಇರುವ ವಿಸ್ತೀರ್ಣಾದ ಜಮೀನಲ್ಲಿ ಅವುಗಳ ಕೃಷಿಯನ್ನು ಯೋಜನಾಬದ್ಧವಾಗಿ ಮಾಡಬಹುದು. ಗೇರು ಎಲ್ಲ ಬಗೆಯ ಮಣ್ಣಿಗೂ ಹೊಂದಾಣಿಕೆಯಾದರೂ ಕಪ್ಪು ಮತ್ತು ಜೇಡಿಮಣ್ಣಿನಲ್ಲಿ ಚೆನ್ನಾಗಿ ಬೆಳೆಯುವುದಿಲ್ಲ. ಗೇರುಕೃಷಿ ಮಾಡಲು ಹೊರಟವರು ಈ ಬಗ್ಗೆ ಗಮನಹರಿಸುವ ಅಗತ್ಯವಿದೆ. ಇದರಿಂದ ನಷ್ಟಕ್ಕೀಡಾಗುವ ಸಾಧ್ಯತೆ ನಿವಾರಣೆಯಾಗುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಮಾರುಕಟ್ಡೆಯಲ್ಲಿ ಗೋಡಂಬಿಗೆ ಬಹು ಬೇಡಿಕೆ ಇದೆ. ಬೆಳೆಗಾರರಿಗೂ ಲಾಭಾಂಶ ದೊರೆಯುತ್ತಿದೆ. ಆದರೆ ಮುಂಚಿನ ದಿನಗಳಲ್ಲಿ ಇಂಥ ಪರಿಸ್ಥಿತಿ ನಿರ್ಮಾಣವಾಗಿರಲಿಲ್ಲ. ಹೆಚ್ಚಿನ ಲಾಭಾಂಶ ಸಂಸ್ಕರಣೆ ಮಾಡುವವರಿಗೆ ಹೋಗುತ್ತಿತ್ತು. ಇದರಿಂದಾಗಿಯೂ ಬೆಳೆಗಾರರನೇಕರು ಗೇರುಕೃಷಿಯತ್ತ ಗಮನವನ್ನೇ ಹರಿಸಿರಲಿಲ್ಲ. ಆದರೆ  ಈ ಪರಿಸ್ಥಿತಿ ಬದಲಾಗಿದೆ. ಇದು ಸಕಾರಾತ್ಮಕ ಪರಿಣಾಮವಾಗಿದೆ.ಇದರಿಂದ ಗೇರುಕೃಷಿ ವಿಸ್ತರಣೆ ಮತ್ತಷ್ಟೂ ಹೆಚ್ಚುವ ಸಾಧ್ಯತೆಗಳು ಹೆಚ್ಚು.

ಪ್ರಸ್ತುತ ಸಂದರ್ಭದಲ್ಲಿ ಕೃಷಿಕರಿಗೆ ಮಾರುಕಟ್ಟೆ , ಅದರ ಏರಿಳಿತಗಳು ಚೆನ್ನಾಗಿ ಅರ್ಥವಾಗಿವೆ. ಇದರಿಂದ ಅವರು ಬೆಲೆ ಕುಸಿದಾಗ ಅದರ ಕಾರಣಗಳನ್ನು ತಿಳಿದುಕೊಳ್ಳಲು ಯತ್ನಿಸುತ್ತಾರೆ. ಇದೊಂದ ಮಹತ್ವದ ಸಕಾರಾತ್ಮಕ ಬದಲಾವಣೆಯಾಗಿದೆ. ಇದಕ್ಕೆ ಪೂರಕವಾಗಿ ಗೇರಿನಲ್ಲಿ ಸಾಕಷ್ಟು ತಳಿಗಳ ಅಭಿವೃದ್ಧಿಯಾಗಿದೆ. ಬಂಜರು ಎಂದು ಬಿಟ್ಟಿರುವ ಜಮೀನುಗಳಲ್ಲಿಯೂ ಇದರ ಕೃಷಿ ಮಾಡಿ ಲಾಭ ಪಡೆಯಬಹುದು

ಹಿಂದೆಲ್ಲ ಬೀಜಗಳನ್ನು ಬಿತ್ತನೆ ಮಾಡಿ ಸಸಿಗಳನ್ನು ಬೆಳೆಸುತ್ತಿದ್ದರು. ಆದರೆ ಇಂದು ಕಸಿ ವಿಧಾನದ ಸಸಿಗಳಿಗೆ ತೀವ್ರ ಬೇಡಿಕೆ ಇದೆ. ಇದರಿಂದ ಗುಣಮಟ್ಟದ ಸಸಿಗಳು ಲಭ್ಯವಾಗುತ್ತವೆ ಎಂಬುದೇ ಇದಕ್ಕೆ ಕಾರಣ. ಕಸಿ ಮಾಡಿದ ಸಸಿಗಳಲ್ಲಿ ರೋಗ ಮತ್ತು ಕೀಟಬಾಧೆಗಳ ವಿರುದ್ಧ ನಿರೋಧಕ ಶಕ್ತಿ ಇರುತ್ತದೆ. ಬೆಳವಣಿಗೆಯೂ ತೀವ್ರವಾಗಿರುತ್ತದೆ. ಇದು ಏಕರೂಪವಾಗಿಯೂ ಇರುತ್ತದೆ.

ನರ್ಸರಿಗಳಿಂದ ಗೇರುಸಸಿಗಳನ್ನು ಖರೀದಿಸಿ ತರುವ ಸಂದರ್ಭದಲ್ಲಿ ಬೆಳೆಗಾರರು ಜಾಗ್ರತೆ ವಹಿಸಬೇಕು. ಏಕೆಂದರೆ ಎಲ್ಲ ನರ್ಸರಿಗಳು ಗುಣಮಟ್ಟ ಕಾಯ್ದುಕೊಂಡಿರುವುದಿಲ್ಲ. ಕೃಷಿಕರು ಕೇಳಿದ ತಳಿ ಒಂದಾದರೆ ನರ್ಸರಿಯಿಂದ ತಂದ ತಳಿ ಬೇರೆಯಾದರೆ ಮುಂದಿನ ದಿನಗಳಲ್ಲಿ ನಷ್ಟ ಉಂಟಾಗಬಹುದು. ಆದ್ದರಿಂದ ಕೃಷಿಕರು ಯಾವ ನರ್ಸರಿಯಿಂದ ಸಸಿ ತರಬೇಕು ಎಂಬ ಬಗ್ಗೆ ಮಾಹಿತಿ ಹೊಂದಿರುವುದು ಅವಶ್ಯಕ.

ಗೇರು ಸಂಶೋದನಾ ಕೇಂದ್ರಗಳ ನರ್ಸರಿಗಳಿಂದ ಗುಣಮಟ್ಟದ ಸಸಿಗಳು ಲಭ್ಯವಾಗುತ್ತವೆ. ಆದರೆ ದಿಢೀರನ್ನೇ ಹೋಗಿ ಅವುಗಳನ್ನು ಖರೀದಿಸಿ ತರಲು ಸಾಧ್ಯವಿಲ್ಲ. ಆದ್ದರಿಂದ ಮುಂಚಿತವಾಗಿಯೇ ಎಷ್ಟು ಸಸಿಗಳು ಬೇಕು ಎಂದು ಬೇಡಿಕೆ ಸಲ್ಲಿಸಬೇಕು. ಅವರು ತಿಳಿಸಿದ ದಿನ ಸಸಿಗಳನ್ನು ತರಬೇಕು. ಇಲ್ಲಿನ ಸಸಿಗಳಿಗೆ ಬೆಲೆಯೂ ಕಡಿಮೆ. ಇದಲ್ಲದೇ ಗೇರುತೋಟಗಳನ್ನು ಮಾಡಲು ರಾಜ್ಯ ಮತ್ತು ಕೇಂದ್ರಗಳ ಸಹಾಯಧನವೂ ಇದೆ. ಇವೆಲ್ಲದರ ಪ್ರಯೋಜನವನ್ನು ಕೃಷಿಕರು ಪಡೆಯುವುದು ಅವಶ್ಯಕವಾಗಿದ

Similar Posts

2 Comments

  1. ಉತ್ತಮ ಮಾಹಿತಿ. ಅದರಲ್ಲೂ ವಿಶೇಷವಾಗಿ ಕರಾವಳಿ ಭಾಗದ ರೈತರಿಗೆ ಅತ್ಯಂತ ಉಪಯುಕ್ತ ಮಾಹಿತಿ.. ?☺

  2. ಉಪಯುಕ್ತ ಮಾಹಿತಿ.

Leave a Reply

Your email address will not be published. Required fields are marked *