ವರ್ಣ ವ್ಯವಸ್ಥೆ ತದ ನಂತರ ಜಾತಿ ವ್ಯವಸ್ಥೆ, ತದ ನಂತರ ಪೂರ್ವಾಗ್ರಹ ಪೀಡಿತ ರಾಜಕೀಯ ವ್ಯವಸ್ಥೆ ಮತ್ತೆ ಜಾತಿಯತೆ ಎಂಬ ಕಪ್ಪೇ ಚಿಪ್ಪಿನೊಳಗೆ ಬಚ್ಚಿಟ್ಟುಕೊಳ್ಳಲು ಬಯಸುವ ಅಕ್ಷರ ಸಮುದಾಯ, ಜಾತಿ ಚುಂಗು ಹಿಡಿದೇ ಅಧಿಕಾರಕ್ಕೆರಲು ಬಯಸುವ ಪಂಚಾಯತ್ ವ್ಯವಸ್ಥೆ.. ಅಬಬ್ಬಾ… ಇದನ್ನೆಲ್ಲ ನೋಡಿದಾಗ 19ನೇ ಶತಮಾನದಲ್ಲಿ ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ ಕಂಡ ಕನಸು; ಕನಸಾಗಿಯೇ ಉಳಿಯಿತ್ತಲ್ಲ ಅನಿಸುವುದಿಲ್ಲವೆ…

ಹೆಗ್ಗೋಡಿನ ಜನಮನದಾಟ ತಂಡ ಪ್ರಸ್ತುತಪಡಿಸುವ “ಸತ್ಯಶೋಧಕ” ನಾಟಲ ಪ್ರಸ್ತುತ ಸಾಮಾಜಿಕ ಜೀವನಕ್ಕೆ ಮುಖಾಮುಖಿ ಆಗುತ್ತದೆ. ಇದು ಮಹಾರಾಷ್ಟ್ರದಲ್ಲಿ ಜನಿಸಿದ ಇಡೀ ಭರತಖಂಡಕ್ಕೆ ಸಂಗತವಾದ ಜ್ಯೋತಿಬಾ ಫುಲೆ ಮತ್ತಿವರ ಪತ್ನಿ ಸಾವಿತ್ರೀಬಾಯಿ ಅವರ ಹೋರಾಟದ ಗಾಥೆ. ಜ್ಯೋತಿಬಾ ಫುಲೆ ಹೆಸರೇ ಹೇಳುವ ಹಾಗೆ ಹೂವಾಡಿಗರ ಕುಟುಂಬದವರು. ತಮ್ಮ ಸ್ವಹಿತಾಸಕ್ತಿಯಿಂದ ಶಿಕ್ಷಣ ಪಡೆದವರು. ನಂತರ ಶಿಕ್ಷಣದಿಂದಲೇ ಜಾತಿಯ ದೌರ್ಜನ್ಯ, ದಬ್ಬಾಳಿಕೆಗಳಿಂದ ಮುಕ್ತಿ ಎಂದು ಭಾವಿಸಿದವರು. ತಮ್ಮ ಅನಕ್ಷರಸ್ಥ ಪತ್ನಿ ಸಾವಿತ್ರಿಬಾಯಿ ಅವರನ್ನು ಸುಶಿಕ್ಷಿತಗೊಳಿಸಿ ಅಸಮಾನತೆ ಬೋಧಿಸುವ ಸಮಾಜದ ವಿರುದ್ಧ ಕಹಳೆ ಊದಲು ಸಜ್ಜುಗೊಳಿಸಿದವರು.

ತಮ್ಮ ಜೀವಿತಾವಧಿಯಲ್ಲಿ ಈ ದಂಪತಿ ಉಂಡ ಕಹಿ ಅಪಾರ. ಇಂಥ ಕಹಿಗೆ ಶಿಕ್ಷಣ ಒಂದೇ ಪರಿಹಾರ ಎಂದು ನಂಬಿದವರು. ಇದರಿಂದಲೇ ಶೂದ್ರಾತೀಶೂದ್ರರಿಗೆ ಅಕ್ಷರ ಕಲಿಸುತ್ತಾರೆ. ಸೂಡೋ ಸಮಾಜದಲ್ಲಿ ನಿಜವಾಗಿಯೂ ದಲಿತರೇ ಆದ ಎಲ್ಲ ಜಾತಿಗಳ ಸ್ತ್ರೀಯರಿಗಾಗಿ, ಪರಿತ್ಯಕ್ತ್ಯ ಮಕ್ಕಳಿಗಾಗಿ ಅನಾಥಾಶ್ರಮಗಳನ್ನು ತೆರೆಯುತ್ತಾರೆ.

ನೆನಪಿಡಿ, ಇದು ನೂರೈವತ್ತು ವರ್ಷಕ್ಕೂ ಹಿಂದೆ. ಇಡೀ ಭಾರತೀಯ ಸಮಾಜ ಜಾತೀಯತೆ ಎಂಬ ಕೂಪದಲ್ಲಿ ಇದ್ದ ಸಂದರ್ಭ. ಇಂಥ ಸಂದರ್ಭದಲ್ಲಿ ಈ ಕ್ರಾಂತಿಕಾರಿ ದಂಪತಿಗೆ ಸವಾಲು ಎದುರಾಗುವುದು ಬ್ರಾಹ್ಮಣರಿಂದ. ಸಾವಿರಾರು ವರ್ಷಗಳ ಕಾಲ ಅಕ್ಷರವನ್ನು ತಮ್ಮ ಮುಷ್ಟಿಯಲ್ಲಿಟ್ಟುಕೊಂಡವರು ಅದನ್ನು ಸುಲಭವಾಗಿ ಶೂದ್ರರಿಗೆ, ದಲಿತರಿಗೆ ವರ್ಗಾಯಿಸಲಾಗದ ಮನಸ್ಥಿತಿ ಹೊಂದಿರುತ್ತಾರೆ. ಇದನ್ನು ದಾಟುವುದು, ಅಕ್ಷರವನ್ನು ದಲಿತರ ಎದೆಗಳಲ್ಲಿ ಬಿತ್ತುವುದು ಸುಲಭದ ಸಂಗತಿ ಆಗಿರುವುದಿಲ್ಲ.

ಈ ಹಾದಿಯಲ್ಲೆ ಫುಲೆ ದಂಪತಿ ಅನೇಕ ಕಷ್ಟನಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಪ್ರಾಣವನ್ನು ಒತ್ತೆಯಿಟ್ಟು ಕೆಲಸ ಮಾಡಬೇಕಾದ ಸಂದರ್ಭ. ಇವರ ಅಕ್ಷರ ದಾಸೋಹ ಸಹಿಸಲಾರದ ಬ್ರಾಹ್ಮಣ ಸಮುದಾಯ, ದಂಪತಿ ಹತ್ಯೆಗೂ ಸಂಚು ರೂಪಿಸುತ್ತದೆ. ಇದಕ್ಕಾಗಿ ಶೂದ್ರಾತೀಶೂದ್ರ ಸಮುದಾಯದ ವ್ಯಕ್ತಿಗಳಿಗೆ ಸುಫಾರಿ ಕೊಡುತ್ತದೆ.

ಯಾರನ್ನು ಅನಕ್ಷರತೆ, ಅಜ್ಞಾನ, ಅಂಧಕಾರದಿಂದ ಮೇಲೆತ್ತಲು ಬೆಳಕಿನ ಹಾದಿ ತೋರಿಸಲು ಶ್ರಮಿಸಿದರೋ ಅದೇ ವರ್ಗದ ವ್ಯಕ್ತಿಗಳು ಕೊಲ್ಲಲು ಕೊಡಲಿಯೆತ್ತುತ್ತಾರೆ. ಇಂಥ ಸಂದರ್ಭಗಳಲ್ಲಿಯೂ ಫುಲೆ ದಂಪತಿ ಹೋರಾಟ ಅನನ್ಯ. ತಮ್ಮ ಕಾಯಕ ದ್ವೇಷಿಸುವ ಬ್ರಾಹ್ಮಣ ಸಮುದಾಯದತ್ತ ಇವರು ನಂಜು ಕಾರುವುದಿಲ್ಲ. ಬದಲಾಗಿ ಅವರ ಅಜ್ಞಾನಕ್ಕೆ ಅನುಕಂಪ ತೋರುತ್ತಾರೆ. ಬ್ರಾಹ್ಮಣ ವಿಧವಾ ಸ್ತ್ರೀಯರ ಕೇಶಮುಂಡನ ಮಾಡಲು ಧಿಕ್ಕರಿಸಿ ಚಳವಳಿಗಿಳಿಯುವ ಹಂತಕ್ಕೆ ಸವಿತಾ ಸಮಾಜದವರನ್ನು ಪ್ರೇರೆಪಿಸುತ್ತಾರೆ. ಬ್ರಾಹ್ಮಣ ಸಮುದಾಯದ, ತಮ್ಮವರಿಂದಲೇ ಅನ್ಯಾಯ ಅತ್ಯಾಚಾರಕ್ಕೊಳಗಾದ ಸ್ತ್ರೀಯರಿಗೆ ತಾವೇ ಸ್ಥಾಪಿಸಿದ ಅನಾಥಾಶ್ರಮಗಳಲ್ಲಿ ಆಶ್ರಯ ನೀಡುತ್ತಾರೆ.

ಇವರ ಇಷ್ಟೆಲ್ಲ ಕಾರ್ಯಗಳಿಗೆ ಬ್ರಾಹ್ಮಣ ಸಮುದಾಯದ ಕ್ರಾಂತಿಕಾರಿಗಳಿಂದ ಬೆಂಬಲ ದೊರಕುತ್ತದೆ ಆದರೂ ಅದು ಸಾರ್ವತ್ರಿಕತೆ ಸ್ವರೂಪ ಪಡೆಯುವುದಿಲ್ಲ. ಫುಲೆ ದಂಪತಿಯ ಚಲನಶೀಲ ಕ್ರಮಗಳಿಗೆ ಶ್ರೀರಕ್ಷೆ ಆಗಿದ್ದು ಬ್ರಿಟಿಷ್ ಸರಕಾರವೇ. 1957ರ ಸಿಪಾಯಿದಂಗೆ ಉಗ್ರತ್ವಕ್ಕೆ ಬೆದರಿದ ಬ್ರಿಟಿಷ್ ಸರಕಾರ ಸ್ವರಾಜ್ಯ ಒಪ್ಪಿಸುವ ಆಲೋಚನೆಯನ್ನೂ ಮಾಡಿರುತ್ತದೆ.

ಬ್ರಿಟಿಷರು ಭಾರತ ಬಿಟ್ಟು ಹೋದರೆ ಮಹಾರಾಷ್ಟ್ರದಲ್ಲಿ ಸನಾತನ ಪರಂಪರೆ ಎತ್ತಿ ಹಿಡಿಯಲು ಶ್ರಮಿಸುವ ಪೇಶ್ವೆಗಳು, ಯಥಾಪ್ರಕಾರದ ಆಡಳಿತ ನಡೆಸುವ ಮೊಗಲ ವಂಶಸ್ಥರ ಕೈಗೆ ಅಧಿಕಾರ ಹೋಗುತ್ತದೆ. ಕ್ರಾಂತಿಕಾರಿ ನಡೆಗಳಿಗೆ ಪೂರ್ಣವಿರಾಮ ಬೀಳುತ್ತದೆ ಎಂದು ಜ್ಯೋತಿಬಾ ಫುಲೆ ಹೆದರುತ್ತಾರೆ.

ಸಾವಿರಾರು ವರ್ಷಗಳಿಂದ ಮೇಲ್ಞಾತಿಗಳ ಅಧಿಕಾರ, ಅನ್ಯಾಯ, ಅಕ್ರಮ, ದಬ್ಬಾಳಿಕೆಗಳಿಗೆ ಈಡಾದ ಸುಶಿಕ್ಷಿತ ಮತ್ತು ಭಾರತೀಯ ಸಮಾಜದ ಆರೋಗ್ಯದ ಬಗ್ಗೆ ಸಕಾರಾತ್ಮಕ ಚಿಂತನೆ ಮಾಡುವ ವ್ಯಕ್ತಿ , ಬ್ರಿಟಿಷರ ಆಡಳಿತವೇ ಇರಲಿ ಎಂದು ಬಯಸಿದ್ದರ ಹಿಂದಿನ ನೋವನ್ನು ಅರ್ಥ ಮಾಡಿಕೊಳ್ಳುವುದು ಅಗತ್ಯ. ಜ್ಯೋತಿಬಾ ಫುಲೆ ದಂಪತಿ ಜೀವಿತಾವಧಿಯಲ್ಲಿಯೇ ರೈತ-ಕಾರ್ಮಿಕ ವರ್ಗಗಳ ಹೋರಾಟಕ್ಕೂ ನಾಂದಿ ಆಗುತ್ತದೆ. ಆಗಿನ ಮುಂಬೈ ನವನಗರ ಇದಕ್ಕೆ ಸಾಕ್ಷಿ ಆಗುತ್ತದೆ. ಶೂದ್ರರು, ದಲಿತರು ಮತ್ತು ಕಾರ್ಮಿಕರು ತಮಗಾಗುತ್ತಿರುವ ಅನ್ಯಾಯ ಮೆಟ್ಟಿ ಅಧಿಕಾರ ಹಿಡಿಯಬೇಕು, ನವ ಸಮಾಜದ ನಿರ್ಮಾಣ ಆಗಬೇಕು ಎಂದು ಫುಲೆ ಬಯಸುತ್ತಾರೆ.

ಫುಲೆ ದಂಪತಿ ಆಗಿ ಹೋಗಿ ನೂರೈವತ್ತಕ್ಕೂ ಹೆಚ್ಚು ವರ್ಷ ಆಗಿದೆ. ಇಲ್ಲಿನ ನದಿಗಳಲ್ಲಿ ಅನೇಕ ಪ್ರವಾಹಗಳು ಬಂದು ಕಸಕೊಳ್ಳೆಯನ್ನೆಲ್ಲ ಕೊಚ್ಚಿ ಹಾಕಿವೆ. ಆದರೆ ಸನಾತನ ಭಾರತೀಯ ಮನಸಿನ ಕೊಳೆಗಳು ಕೊಚ್ಚಿ ಹೋಗಿವೆಯೇ ? ಅಧಿಕಾರ ಶೂದ್ರರ, ದಲಿತರ ಮತ್ತು ರೈತರ ಕೈ ಸೇರಿದೆಯೇ… ಖಂಡಿತ ಇಲ್ಲ.

ಬ್ರಿಟಿಷರಿಂದ ದಾಟಿದ ಅಧಿಕಾರ ಇನ್ನೂ ಬ್ರಾಹ್ಮಣ ಸಮುದಾಯ ಎನ್ನುವ ಸೀಮಿತಾರ್ಥ ದಾಟಿ ಬ್ರಾಹ್ಮಣ್ಯ ಮನಸ್ಥಿತಿಯ ಸಮುದಾಯಗಳಿಗೆ ಹಸ್ತಾಂತರ ಆಗಿದೆ. ಭೂ ಮಾಲೀಕರು, ಭಾರೀ ಕೈಗಾರಿಕೋದ್ಯಮಿಗಳು ಅಧಿಕಾರದ ಸವಿ ಅನುಭವಿಸುತ್ತಿದ್ದಾರೆ. ಸಾವಿರಾರು ವರ್ಷಗಳಿಂದ ಅವಮಾನ, ಅಸಮಾನತೆ, ಅನ್ಯಾಯ ಅನುಭವಿಸಿದ ವರ್ಗಗಳು ಇನ್ನೂ ಹಾಗೆ ಇವೆ. ಇ<ಥ ಸಂದರ್ಭದಲ್ಲಿ ಫುಲೆ ದಂಪತಿ ಹೆಚ್ಚು ಪ್ರಸ್ತುತ ಆಗುತ್ತಿರುವುದು ಭಾರತೀಯ ಸಮಾಜ ಚಲನಶೀಲತೆ ಕಳೆದುಕೊಂಡಿರುವುದರ ಸೂಚಕವೂ ಹೌದು.

ಮರಾಠಿಯಲ್ಲಿ ಪ್ರೊ. ಜಿ.ಪಿ. ದೇಶಪಾಂಡೆ ರಚಿಸಿದ ಮತ್ತು ಕನ್ನಡಕ್ಕೆ ಡಾ. ಡಿ.ಎಸ್. ಚೌಗಲೆ ಅನುವಾದಿಸಿದ ನಾಟಕವನ್ನು ಮರಾಠಿ ರಂಗಭೂಮಿಯ ಅನನ್ಯ ಪ್ರತಿಭೆ ಅತುಲ್ ಪೇಠೆ ನಿರ್ದೇಶಿಸಿದ್ದಾರೆ.

Similar Posts

Leave a Reply

Your email address will not be published. Required fields are marked *