“ಅಮೆರಿಕಾದ ಕುಕೇಶಿಯನ್ಗಳಿಗೆ ಆಫ್ರಿಕಾ ಮೂಲದ ಅಮೆರಿಕಾ ಪ್ರಜೆಗಳ ವಿರುದ್ಧದ ಜನಾಂಗೀಯ ದ್ವೇಷ, ವರ್ಣಬೇಧ, ತಾತ್ಸಾರ ಹೋಗಿಲ್ಲ. ಅದು ಬೇರೆಬೇರೆ ರೀತಿಯಲ್ಲಿ ಮುಂದುವರಿದಿದೆ. ಹೆಚ್ಚಿನವರು ಇದನ್ನು ಗ್ರಹಿಸಲು ವಿಫಲರಾಗಿದ್ದಾರೆ. ಹೀಗೊಂದು ಥಿಯರಿಯನ್ನು ಹಾಲಿವುಡ್ ನಿರ್ದೇಶಕ ಜೋರ್ಡನ್ ಪಿಲೇ “ಗೆಟೌಟ್” ಸಿನೆಮಾ ಮೂಲಕ ಮುಂದಿಟ್ಟಿದ್ದಾರೆ.

ಇಂಥ ಅಭಿಪ್ರಾಯ ಸುಮ್ಮನೆ ಮೂಡಿದ್ದಲ್ಲ. ಶತಶತಮಾನಗಳಿಂದಲೂ ಅಮೆರಿಕಾದಲ್ಲಿರುವ ಆಫ್ರಿಕನ್ –ಅಮೆರಿಕನ್ ಪ್ರಜೆಗಳು ತಾತ್ಸಾರ, ನಿಂದನೆ, ಅವಮಾನ, ಕಗ್ಗೊಲೆಗಳನ್ನು ಅನುಭವಿಸುತ್ತಲೇ ಬಂದಿದ್ದಾರೆ. ಅವರನ್ನು ಅವಮಾನಿಸುವ ಪ್ರಕರಣಗಳೂ ಇಂದಿಗೂ ನಡೆಯುತ್ತಿವೆ. ಇದರ  ಹಿನ್ನೆಲೆಯಲ್ಲಿ ಈ ಸಿನೆಮಾ ಮೂಡಿರುವಂತೆ ಕಾಣುತ್ತದೆ.

ಅಮೆರಿಕಾ ಸಿನೆ-ಟಿವಿರಂಗದಲ್ಲಿ ಜೋರ್ಡನ್ ಪಿಲೆಯದು ಖ್ಯಾತ ಹೆಸರು. ಯಶಸ್ವಿ ಚಿತ್ರಗಳನ್ನು ಕೊಟ್ಟಿದ್ದಾರೆ. ಗೆಟೌಟ್ ಸಿನೆಮಾದ ವಿಶೇಷ ಸಂಗತಿಯೆಂದರೆ ನಿರ್ದೇಶಕರೇ ಕಥೆ-ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಅಂದಹಾಗೆ ಪಿಲೆ ಕೂಡ ಆಫ್ರಿಕನ್ ಅಮೆರಿಕನ್. ಇದು ಕೂಡ ಇಥದ್ದೊಂದು ಥಿಯರಿಗೆ ಮತ್ತಷ್ಟೂ ಬಲಕೊಟ್ಟಿದೆ.

ಅಮೆರಿಕಾದ ಕುಕೇಶಿಯನ್ (ಶ್ವೇತವರ್ಣಿಯರು) ಆಫ್ರಿಕಾದವರನ್ನು ಶತಶತಮಾನಗಳ ಕಾಲ ಗುಲಾಮರನ್ನಾಗಿ ನಡೆಸಿಕೊಂಡಿದೆ. ಇಂದು ಗುಲಾಮಗಿರಿ ಪದ್ಧತಿ ನಿಷೇಧವಾಗಿ ಶತಮಾನಗಳೇ ಕಳೆದಿವೆ. ಆದರೆ ಅದನ್ನು ಕುಕೇಶಿಯನ್ ಸಮಾಜ ಬೇರೊಂದು ರೀತಿಯಲ್ಲಿ ಮುಂದುವರಿಸಿಕೊಂಡು ಬರುತ್ತಿದೆ. ಇಂಥ ಸ್ಥಿತಿಯನ್ನು ಗ್ರಹಿಸಲಾಗದೇ ಅದೇ ಉತ್ತಮ ಸ್ಥಿತಿ ಎಂದು ಶೋಷಿತರು ಅಂದುಕೊಂಡಿರುವ ವಾತಾವರಣ ಸೃಷ್ಟಿ ಮಾಡಲಾಗಿದೆ. ಇದೊಂದು ರೀತಿಯ ಸಮಾಜೋ-ಸಮ್ಮೋಹಿನಿ ಎಂಬ ವಾದವನ್ನು ಜೋರ್ಡನ್ ಪಿಲೆ ನಮ್ಮ ಮುಂದಿಡುತ್ತಾರೆ.

ತಮ್ಮ ವಾದವನ್ನು ಕಥಾರೂಪಕ್ಕೆ ತಂದಿರುವ ಪಿಲೆ ಅದಕ್ಕೆ ಸಶಕ್ತ ಚಿತ್ರಕಥೆ ಸ್ವರೂಪ ನೀಡಿದ್ದಾರೆ. ಇದು ಎಷ್ಟು ಪರಿಪಕ್ವವಾಗಿದೆ ಎಂದರೆ ಎಲ್ಲಿಯೂ ಗೋಜಲು – ಗೊಂದಲವಿಲ್ಲ. ಸಂಭಾಷಣೆ ಕೂಡ ಅಷ್ಟೆ ಸ್ಪಷ್ಟತೆ-ನಿಖರತೆ ಹೊಂದಿದೆ. ಇದನ್ನು ಪಿಲೆ ಮತ್ತು ಅವರ ಸಂಗಡಿಗ ತಂತ್ರಜ್ಞರು ತೆರೆ ಮುಂದೆ ಕಾಣಿಸಿರುವ ರೀತಿ ಅನನ್ಯ.

“ಗೆಟೌಟ್” ಸಮಾಜೋ -ರಾಜಕೀಯ  ಕಥನ. ಕೊಂಚ ಹಳಿ ತಪ್ಪಿದ್ದರೂ ಇದೊಂದು ನಿರ್ದೇಶಕನ ಹಳಹಳಿಕೆಯ ದುರ್ಬಲ ಡಾಕ್ಯುಮೆಂಟರಿಯಾಗುವ ಸಾಧ್ಯತೆ ದಟ್ಟವಾಗಿತ್ತು. ಆದರೆ ಜೋರ್ಡನ್ ಪಿಲೆಯ ಪರಿಶ‍್ರಮ ಅದಕ್ಕೆ ಅವಕಾಶ ನೀಡಿಲ್ಲ. ಈ ಕಾರಣದಿಂದ ಸಿನೆಮಾದ ಎಲ್ಲ ದೃಷ್ಟಿಕೋನಗಳಲ್ಲಿಯೂ ಇದು ಅತ್ಯುತ್ತಮ.

ಗೆಟೌಟ್ ಹಂತಹಂತವಾಗಿ ಬೆಳೆಯುತ್ತಾ ಹೋಗುತ್ತದೆ. ಆಗರ್ಭ ಶ್ರೀಮಂತ ಕುಕೇಶಿಯನ್ ಮನೆತನದ ಯುವತಿ ರೋಸ್ ಆರ್ಮಿಟೆಜ್ ತನ್ನ ಆಫ್ರಿಕನ್ –ಅಮೆರಿನ್ ಬಾಯ್ ಫ್ರೆಂಡ್/ಲವ್ವರ್ ಕ್ರಿಸ್ ಜೊತೆ ಮೈಲುಗಟ್ಟಲೆ ದೂರ ಹರಡಿದ ತಮ್ಮ ಎಸ್ಟೇಟಿನ ತನ್ನ ಅರಮನೆಯಂಥನಿವಾಸಕ್ಕೆ ಅಡಿಯಿಡುತ್ತಾಳೆ. ಕಾಲಿಟ್ಟ ಗಳಿಗೆಯಿಂದಲೂ ಕ್ರಿಸ್ಗೆ ನಾನಾರೀತಿಯ ಮಾನಸಿಕ ಯಾತನೆಗಳು ಶುರುವಾಗುತ್ತವೆ. ರೋಸಿ ಅಪ್ಪ ನರರೋಗ ಶಾಸ್ತ್ರಜ್ಞ. ಅಮ್ಮ ಕ್ಯಾಥ್ರೆನ್ ಕೀನರ್ ಸಮ್ಮೋಹಿನಿ ತಜ್ಞೆ.

ಈ ಎರಡು ಪಾತ್ರಗಳು ಮಾಡುತ್ತಿರುವ ವೃತ್ತಿಗಳು ಕೂಡ ಸಾಂಕೇತಿಕ. ಡೀನ್ ಅರ್ಮಿಟೇಜ್ ತನ್ನ ಮನೆತನದ ಹೆಗ್ಗಳಿಕೆಗಳನ್ನು ಹೇಳಿಕೊಳ್ಳುತ್ತಾ ಹೋಗುತ್ತಾನೆ. ಪ್ರತಿಹಂತದಲ್ಲಿಯೂ ಆತನ ಮಾತುಗಳು ಆತನಿಗೆ ಆಫ್ರಿಕನ್ –ಅಮೆರಿಕನ್ ಸಮುದಾಯದವರ ಬಗ್ಗೆ ಹೊಂದಿರುವ ಹೇವರಿಕೆಗಳನ್ನು ವ್ಯಕ್ತ ಮಾಡುತ್ತಲೇ ಹೋಗುತ್ತವೆ. ಈತನ ಹೆಂಡತಿ, ಮಗ ಕೂಡ ಇದೇ ಸ್ವಭಾವದವರು: ಚಿತ್ರದ ಕೊನೆಕೊನೆ ಹಂತದಲ್ಲಿ ರೋಸಿಯ ಮೂಲಭೂತ ಸ್ವಭಾವದ ಅನಾವರಣ ನಮ್ಮನ್ನು ಮತ್ತೊಂದು ಮಹಾನ್ ಶಾಕಿಗೆ ದೂಡುತ್ತದೆ.

ಡೀನ್ ಅರ್ಮಿಟೇಜ್ ತಾನು ಲಿಬರಲ್ ಧೋರಣೆಯುಳ್ಳವನು, ಅಮೆರಿಕಾದ ಅಧ್ಯಕ್ಷಿಯ ಚುನಾವಣೆಯಲ್ಲಿ ಬರಾಕ್ ಒಬಾಮನನ್ನು ಬೆಂಬಲಿಸಿದೆ ಎನ್ನುತ್ತಾನೆ. ಮಾತುಗಳು ಪ್ರಗತಿಪರತೆಯ ಮುಖವಾಡ ಹೊಂದಿವೆ. ಆದರೆ ಆತನ ಅಂತರಂಗದಲ್ಲಿ ಜನಾಂಗೀಯ ದ್ವೇಷ ಮಡುಗಟ್ಟಿದೆ.

ಡೀನ್ ಅರ್ಮಿಟೇಜ್ ಮಾಲಿಕತ್ವದ ಎಸ್ಟೇಟ್ –ನಿವಾಸದಲ್ಲಿ ದುಡಿಯುವ ಪ್ರತಿಯೊಬ್ಬರೂ ಕೆಲಸ ಮಾಡುವ ಪ್ರತಿಯೊಬ್ಬರೂ ಆಫ್ರಿಕನ್ –ಅಮೆರಿಕನ್ ಸಮುದಾಯದವರು. ಇವರ ವರ್ತನೆ, ಹಾವಭಾವ-ಸ್ವಭಾವ ಎಲ್ಲವೂ ಕೃತಕ ಎಂದು ಕ್ರಿಸ್ಗೆ ಮೇಲಿಂದ ಮೇಲೆ ಅನಿಸತೊಡಗುತ್ತದೆ. ಇವರಿಗೆ ತಮ್ಮನ್ನು ಗುಲಾಮರಂತೆಯೇ ನಡೆಸಿಕೊಳ್ಳಲಾಗುತ್ತಿದೆ ಎಂಬ ಅರಿವೇ ಇಲ್ಲ. ಅಪಾರ ವಿಧೇಯತೆಯಲ್ಲಿ ದುಡಿಯುತ್ತಿರುತ್ತಾರೆ. ಇದು ಎಷ್ಟರಮಟ್ಟಿಗೆ ಎಂದರೆ ತಮ್ಮದೇ ಸಮುದಾಯದ ನಿರಪರಾಧಿ ಯುವಕನನ್ನು ಕೊಲ್ಲಲ್ಲು ಯತ್ನಿಸುವ ಮಟ್ಟಕ್ಕೆ ಬೆಳವಣಿಗೆಯಾಗಿರುತ್ತದೆ.

 ಈ ದೊಡ್ಡಮನೆಯ ಪಾರ್ಟಿಗೆ ಬಂದ ಕುಕೇಶಿಯನ್ ಸಮುದಾಯದವರದು ಕೂಡ ಆಫ್ರಿಕನ್ –ಅಮೆರಿಕನ್ ಸಮುದಾಯದ ಬಗ್ಗೆ ಹೇವರಿಕೆ ನೋಟ. ವ್ಯಂಗ್ಯ, ಮೊನಚು ಮಾತುಗಳಿಂದ ಕ್ರಿಸ್ ನನ್ನು ಇರಿಯುತ್ತಾರೆ.

ಅಲ್ಲೊಬ್ಬ ಕಪ್ಪುವರ್ಣೀಯ ಯುವಕನ ಜೊತೆ ಆತನಿಗಿಂತ ವಯಸಿನಲ್ಲಿ ಸಾಕಷ್ಟು ಹಿರಿಯಳಾದ ಮಹಿಳೆ ಸಾಂಗತ್ಯ ಹೊಂದಿರುತ್ತಾಳೆ. ಆತನ ನಡೆನುಡಿ ಅಸ್ವಾವಿಕ. ಅದು ಕೂಡ ಶೀಘ್ರದಲ್ಲಿಯೇ ವ್ಯಕ್ತವಾಗುತ್ತದೆ. ಈ ಎಲ್ಲ ಬೆಳವಣಿಗೆಗಳ ಕಾರಣಗಳ ಬಗ್ಗೆ ಕ್ರಿಸ್ ತನ್ನ ಪೊಲೀಸ್ ಗೆಳೆಯನ ಜೊತೆ ಪೋನಿನಲ್ಲಿ ಮಾತನಾಡುತ್ತಾ ತನ್ನ ಗ್ರಹಿಕೆಗಳೆಲ್ಲವನ್ನೂ ಹಂಚಿಕೊಳ್ಳುತ್ತಿರುತ್ತಾನೆ. ಅದು ಕೂಡ ಕೊನೆಯಲ್ಲಿ ಈತನ ನೆರವಿಗೆ ಬರುತ್ತದೆ.

ಕ್ರಿಸ್ ಗೆ ಕುಕೇಶಿಯನ್ ರೋಸಿ ಮನೆತನದ ಎಲ್ಲರ  ಸ್ವಭಾವ ಆಷಾಢಭೂತಿತನದಿಂದ ಕೂಡಿದೆ. ಬೇಗನೆ ಇಲ್ಲಿಂದ ಪಾರಾಗಬೇಕು ಎಂದು ಮನದಟ್ಟಾಗುತ್ತದೆ. ಹೊರಡಲು ಅನುವಾಗುತ್ತಾನೆ. ಅಷ್ಟರಲ್ಲೆ ಆತನ ಕೊಲೆಯ ಪಿತೂರಿ ನಡೆಯುತ್ತದೆ. ಇದರಿಂದ ಕ್ರಿಸ್ ಹೇಗೆ ಪಾರಾದ ಎನ್ನುವುದನ್ನು ಸಿನೆಮಾ ನೋಡಿ ಅರಿಯುವುದೇ ಸೂಕ್ತ.

ಇಂದಿಗೂ ಅಮೆರಿಕಾದಲ್ಲಿ ಜನಾಂಗೀಯ ದ್ವೇಷ ನಿಂತಿಲ್ಲ. ಕುಕೇಶಿಯನ್ (ಶ್ವೇತವರ್ಣೀಯರು) ಆಫ್ರಿಕನ್ –ಅಮೆರಿಕನ್ಸ್ ವ್ಯಕ್ತಿಗಳನ್ನು ಕಗ್ಗೊಲೆ ಮಾಡಿದ ವರದಿಗಳು ಆಗಾಗ್ಗೆ ಬರುತ್ತಲೇ ಇವೆ. ಅಲ್ಲಿನ ಪೊಲೀಸ್ ಇಲಾಖೆಯ ಕುಕೇಶಿಯನ್ಸ್ ಗಳಲ್ಲಿಯೂ ಇಂಥ ಜನಾಂಗೀಯ ದ್ವೇಷವಿದೆ. ಕಪ್ಪುವರ್ಣೀಯರು, ಶ್ವೇತವರ್ಣೀಯ ಪೊಲೀಸ್ ಅಧಿಕಾರಿಗಳ ಗುಂಡೇಟಿಗೆ ವಿನಾಃಕಾರಣ ಬಲಿಯಾದ ಉದಾಹರಣೆಗಳು ಸಾಕಷ್ಟು.

ಇಂಥ ಉದಾಹರಣೆಗಳು ಕೂಡ “ಗೆಟೌಟ್” ಸಿನೆಮಾದ ಅಂತ್ಯ ಬದಲಾಗಲು ಕಾರಣವಾಗಿದೆ. ಈ ಮೊದಲು ಇದರ ಕ್ಲೈಮ್ಯಾಕ್ಸ್ ಬೇರೆಯದೇ ಆಗಿತ್ತು. ಯಾವಾಗ ಅಲ್ಲಿನ ಪೊಲೀಸರ ಎನ್ ಕೌಂಟರಿಗೆ ಕಪ್ಪುವರ್ಣೀಯರು ಬಲಿಯಾಗುವ ಪ್ರಕರಣಗಳು ಹೆಚ್ಚಾಯಿತೋ ಆಗ ನಿರ್ದೇಶಕ ಜೋರ್ಡನ್ ಪಿಲೆ ಮತ್ತು ತಂಡದವರು ಕ್ಲೈಮ್ಯಾಕ್ಸ್ಗೆ ಬೇರೆಯದೇ ಸ್ವರೂಪ ನೀಡಲು ನಿರ್ಧರಿಸಿದರು.

ಕುಕೇಶಿಯನ್ ಸಮಾಜದಲ್ಲಿ ಮಡುಗಟ್ಟಿರುವ ಜನಾಂಗೀಯ ದ್ವೇಷ – ತಾತ್ಸಾರ ಯಾವ ಆಯಾಮಗಳನ್ನು ತೆಗೆದುಕೊಂಡಿದೆ. ಅದು ಯಾವಸ್ವರೂಪದಲ್ಲಿ ಮುಂದುವರಿದಿದೆ ಎನ್ನುವುದನ್ನು ನಿರ್ದೇಶಕ ಜೋರ್ಡನ್ ಪಿಲೆ ಗ್ರಹಿಸಿ  ಮುಂದಿಟ್ಟಿರುವ ರೀತಿ ನಮ್ಮನ್ನು ಬೆಚ್ಚಿಬೀಳಿಸುತ್ತದೆ.

ಈ ಸಿನೆಮಾಕ್ಕೆ ಟೊನಿ ಲಿವರ್ ಕ್ಯಾಮೆರಾ ಹಿಡಿದಿದ್ದಾರೆ. ಅದು ಚಿತ್ರಕಥೆಯ ಸಶಕ್ತತೆಯನ್ನು ಮತ್ತಷ್ಟೂ ಹೆಚ್ಚಿಸಿದೆ. ಮೈಕೆಲ್ ಅಬ್ಲಸ್ ನೀಡಿರುವ ಸಂಗೀತಕ್ಕೂ ಇದೇ ಮಾತು ಸಲ್ಲುತ್ತದೆ.2017ರ ಫೆಬ್ರವರಿಯಲ್ಲಿ ಅಮೆರಿಕಾದಲ್ಲಿ ತೆರೆಕಂಡ ಈ ಸಿನೆಮಾ ಅತ್ಯುತ್ತಮ ಚಿತ್ರಕಥೆಗಾಗಿ ಆಸ್ಕರ್ ಪುರಸ್ಕಾರವನ್ನೂ ಪಡೆದಿರುವುದು ಗಮನಾರ್ಹ.

ಅಭಿನಯದ ಬಗ್ಗೆ ಹೇಳುವುದಾದರೆ ಕ್ರಿಸ್ ಆಗಿರುವ ಡ್ಯಾನಿಯಲ್ ಅಭಿನಯ ಅನನ್ಯ. ಈತನ ಕಂಗಳೇ ಸಂಭಾಷಣೆಗಳನ್ನು ಹೇಳುತ್ತವೆ. ಕೆಲವೊಂದು ದೃಶ್ಯಗಳಲ್ಲಿ ಈತನ ಅಭಿನಯ ಅಬ್ಬಾ ಎಂಬ ಉದ್ಗಾರದೊಡನೆ ಮೆಚ್ಚುಗೆ ಪಡೆಯುತ್ತದೆ. ರೋಸ್ ಅರ್ಮಿಟೇಜ್ ಆಗಿರುವ ಆಲಿಸನ್ ವಿಲಿಯಮ್ಸ್, ಮಿಸ್ಸಿ ಅರ್ಮಿಟೇಜ್ ಆಗಿರುವ ಕ್ಯಾಥೆರಿನ್ ಕೀರ್ನರ್, ಡೀನ್ ಅರ್ಮಿಟೇಜ್ ಪಾತ್ರಧಾರಿ ಬ್ರಾಡ್ಲಿ, ಜಿಮ್ ಹಡ್ಸನ್ ಆಗಿ ಅಭಿನಯಿಸಿರುವ ಸ್ಟಿಫನ್ ರೂಟ್ ಅಭಿನಯ ಮನೋಜ್ಞ.

ಅಮೆರಿಕಾ ಸಮಾಜದೊಳಗೊಂದು ಪಾತಾಳಗರುಡಿ ಬಿಟ್ಟು ಸಮಾಜೋ-ರಾಜಕೀಯ ದೃಷ್ಟಿಕೋನದಿಂದ ನೋಡುತ್ತಾ ಆಲ್ಲಿನ ಸಂಗತಿಗಳನ್ನು ಅತ್ಯುತ್ತಮ ರೀತಿಯಲ್ಲಿ ಸಿನೆಮ್ಯಾಟಿಕ್ ಪರಿಭಾಷೆಯಲ್ಲಿ ಕಟ್ಟಿಕೊಟ್ಟಿರುವ “ಗೆಟೌಟ್” ನಾನಾ ಕಾರಣಗಳಿಂದ ಈ ಕಾಲಘಟ್ಟದ ಬಹುಮುಖ್ಯವಾದ ಸಿನೆಮಾ.

Similar Posts

Leave a Reply

Your email address will not be published. Required fields are marked *