ಎಷ್ಟೊಂದು ವಿಫಲತೆಗಳು…. 2014ರಿಂದ 2019ರ ಅಧಿಕಾರದ ಪಯಣದಲ್ಲಿ ಒಂದೇಒಂದು ನೆನಪಿನಲ್ಲಿ ಉಳಿಯುವಂತಹ ಸಾಧನೆಯ ಮೈಲಿಗಲಿಲ್ಲ. ಆದರೂ ಪ್ರಚಂಡ ವಿಜಯ ಒಲಿದಿದೆ. ತಾರಕಕ್ಕೇರಿದ ನಿರುದ್ಯೋಗ ಪ್ರಮಾಣ,  ಗ್ರಾಮೀಣರಿಗೆ ವರ್ಷದ ಒಂದಷ್ಟು ತಿಂಗಳು ಉದ್ಯೋಗ ಒದಗಿಸಿಕೊಡುತ್ತಿದ್ದ ನರೇಗಾ ಯೋಜನೆ ಕತ್ತು ಹಿಚುಕ್ಕಿದ್ದು, ಮೈಲಿಗಲ್ಲು ಎನ್ನುವಂತಹ ಸಾಧನೆಗಳನ್ನು ಮಾಡಿದ ಯೋಜನಾ ಆಯೋಗವನ್ನು ಸದ್ದಿಲ್ಲದೇ ಮಲಗಿಸಿ ಅದೇ ಜಾಗಕ್ಕೆ ನಿಸ್ತೇಜ ನೀತಿ ಆಯೋಗ ತಂದಿದ್ದು, ರೈತರ  ಆತ್ಮಹತ್ಯೆ ಪ್ರಮಾಣ ಅತ್ಯಧಿಕವಾಗಿದ್ದು, ಕೃಷಿಕ್ಷೇತ್ರದ ಯಾವುದೇ ಸಮಸ್ಯೆಗಳಿಗೂ ಪರಿಹಾರ ಹುಡುಕಲಿಲ್ಲ. ಅವೈಜ್ಞಾನಿಕವಾಗಿ ನೋಟು ಅಮಾನ್ಯೀಕರಣ ಮಾಡಿದರು.. ಇದೊಂದರಿಂದಲೇ ದೇಶದ ಸಣ್ಣ, ಮಧ್ಯಮ ಕೈಗಾರಿಕೆಗಳು ಮಗುಚಿ ಮಲಗಿವೆ. ಲಕ್ಷಾಂತರ ಮಂದಿ ನಿರುದ್ಯೋಗಿಗಳಾಗಿದ್ದಾರೆ. ಇದರ ಮೇಲೆ ಇನ್ನಷ್ಟೂ ಅವೈಜ್ಞಾನಿಕವಾದ ಜಿ.ಎಸ್.ಟಿ. ತಂದು ಬರೆ ಹಾಕಿದರು. ದೊಡ್ಡದೊಡ್ಡ ಉದ್ಯಮಿಗಳು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿ ಪಂಗನಾಮ ಹಾಕಿ ದೇಶದಿಂದಲೇ ಪರಾರಿಯಾದರು. ಇಂಥದ್ದನ್ನು ತಡೆಯುವ ಹೊಣೆಗಾರಿಕೆ ಕೇಂದ್ರಸರ್ಕಾರದ್ದಾಗಿತ್ತು.

 

ರಫೇಲ್ ಡೀಲ್: ಇದೊಂದು ಬಹುದೊಡ್ಡ ಹಗರಣ ಎಂದೇ ಕುಖ್ಯಾತವಾಗಿದೆ. ಆದರೆ ಇದನ್ನು ಜನರಿಗೆ ಮನವರಿಕೆ ಮಾಡಿಕೊಡಲು ಪ್ರತಿಪಕ್ಷಗಳು ವಿಫಲವಾದವು. ಇದರ ವಿವರಗಳನ್ನು ಜನಸಾಮಾನ್ಯರಿಗೂ ಅರ್ಥವಾಗುವಂತೆ ಎಳೆಎಳೆಯಾಗಿ ಬಿಡಿಸಿಡುವ ಕಾರ್ಯವನ್ನು ಯಾವುದೇ ಪ್ರತಿಪಕ್ಷಗಳು ಮಾಡಲಿಲ್ಲ. ಮೇಲ್ನೋಟಕ್ಕೆ ಒಂದಷ್ಟು ಪ್ರತಿಭಟನೆಯಾದಂತೆ ಕಂಡರೂ ಅದರ ತೀವ್ರತೆ ಜನರಿಗೆ ಅರ್ಥವಾಗಲಿಲ್ಲ:

ದೇಶದ ಭದ್ರತೆಗೆ ದಕ್ಕೆ ತಂದ ಪುಲ್ವಾಮ ಪ್ರಕರಣ: ದೇಶ ಕಾಯುವ ಸೈನಿಕರ ಅತ್ಯಮೂಲ್ಯ ಜೀವಹಾನಿ ಆಗಿ ಹೋಯಿತು. ಇದು ಯುದ್ದವಾಗಿರಲಿಲ್ಲ. ಭಯೋತ್ಪಾದಕರ ಕೃತ್ಯವಾಗಿತ್ತು. ದೇಶದ ಭದ್ರತೆಯನ್ನು ಕಟ್ಟೆಚ್ಚರದಿಂದ ಗಮನಿಸಬೇಕಾದ ರಕ್ಷಣಾ ಸಚಿವಾಲಯ, ಗೃಹ ಸಚಿವಾಲಯ ಇಂಥ ಭದ್ರತಾ ವೈಫಲ್ಯದ ಹೊಣೆ ಹೊರಬೇಕಿತ್ತು. ಈ ಹೊಣೆಗಾರಿಕೆಯನ್ನು ಹೊರಿಸಿ ಅವುಗಳ ಇಬ್ಬರೂ ಸಚಿವರೂ ರಾಜಿನಾಮೆ ನೀಡುವಂಥ ಒತ್ತಡವನ್ನು ಪ್ರತಿಪಕ್ಷಗಳು ಹೇರಬೇಕಿತ್ತು. ಜನರಿಗೆ ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯ ಮನದಟ್ಟು ಮಾಡಿಕೊಟ್ಟಿದ್ದರೂ ಸಾಕಿತ್ತು. ಆದರೆ ಪ್ರತಿಪಕ್ಷಗಳು ಇಂಥ ಕೆಲಸ ಮಾಡಲೇ ಇಲ್ಲ.

ವಿಫಲತೆಗಳಿದ್ದೂ ವಿಜಯವೇ: ಇಂಥದೊಂದು ಪ್ರಶ್ನೆ ಪದೇಪದೇ ಕಾಡುತ್ತಿದೆ. ಪ್ರಧಾನಿ ನರೇಂದ್ರಮೋದಿ ನೇತೃತ್ವದ ಯಾವ ಕೆಲಸವನ್ನು ನೋಡಿ ಜನತೆ ಅವರಿಗೆ ಈ ಪರಿಯ ವಿಜಯ ತಂದುಕೊಟ್ಟರು. ಅದು ಸಾಮಾನ್ಯವಾದ ವಿಜಯವಲ್ಲ. ಅಸಾಮಾನ್ಯ ವಿಜಯ. ಕೆಲವೊಂದು ರಾಜ್ಯಗಳಲ್ಲಿ ಬಿಜೆಪಿ ಪಡೆದ ಮತಗಳ ಪ್ರಮಾಣ ಶೇಕಡ 70, ಇನ್ನೂ ಕೆಲವು ರಾಜ್ಯಗಳಲ್ಲಿ ಶೇಕಡ 51 ರಿಂದ 54, ಇದೆಲ್ಲ ಹೇಗೆ ಸಾಧ್ಯವಾಯಿತು ? ಇದಕ್ಕೆ ಪ್ರಮುಖವಾಗಿ ಕಾಣುವ ಉತ್ತರಗಳು ಹೀಗಿವೆ.

  1. ಸರ್ಜಿಕಲ್ ಸ್ಟ್ರೈಕ್ ದೇಶಕ್ಕೆ ಹೊಸ ಸಂಗತಿಯಲ್ಲ. ಹಿಂದಿನ ಸರ್ಕಾರಗಳ ಅವಧಿಯಲ್ಲಿಯೂ ಆಗಿವೆ. ಆದರೆ ಅವರ್ಯಾರು ಸೈನ್ಯದ ಸಾಧನೆಗಳನ್ನು ಸರ್ಕಾರದ ಸಾಧನೆಗಳು ಎಂದು ಬಣ್ಣಿಸಿಕೊಳ್ಳಲು ಹೋಗಲಿಲ್ಲ. ರಾಜಕೀಯವಾಗಿ ಬಳಸಿಕೊಳ್ಳಲು ಹೋಗಲಿಲ್ಲ. ಆದರೆ ಉರಿ ನಂತರದ ಬಾಲಾಕೋಟ್ ನಲ್ಲಿ ಸೈನ್ಯ ಮಾಡಿದ ಸರ್ಜಿಕಲ್ ಸ್ಟ್ರೈಕ್ ಅನ್ನು ತಮ್ಮದೇ ಸಾಧನೆ ಎಂಬಂತೆ ಪ್ರಧಾನಿ ಬಣ್ಣಿಸಿಕೊಂಡರು.
  2. ದೇಶವನ್ನು ರಕ್ಷಿಸಲು ತಾವಷ್ಟೇ ಸಮರ್ಥರು ಎಂದು ಮೋದಿ ಮತ್ತು ಅವರ ಪಕ್ಷ ಬಿಜೆಪಿ ಬಿಂಬಿಸಿಕೊಂಡಿದ್ದು.
  3. ಮೋದಿಯಂಥ ನಾಯಕ ಹಿಂದೆ ಹುಟ್ಟಿರಲಿಲ್ಲ; ಮುಂದೆ ಹುಟ್ಟುವುದೂ ಸಂದೇಹ ಎಂಬಂತೆ ಬಹುತೇಕ ಮಾಧ್ಯಮಗಳು ಭಟ್ಟಂಗಿತನ ಮಾಡಿದವು.
  4. ದೇಶದ ಬಹುತೇಕ ಜನರ ಧಾರ್ಮಿಕ ಭಾವನಾತ್ಮಕತೆಯನ್ನು ರಾಮಜನ್ಮಭೂಮಿ, ಗೋ ವಿಚಾರಗಳ ಮೂಲಕ ಬಡಿದೆಬ್ಬಿಸಿದ್ದು. ಈ ಮೂಲಕ ಅಲ್ಪಸಂಖ್ಯಾತರೆಡೆಗೆ ಅಸಹನೆ ಬೆಳೆಯುವಂತೆ ಮಾಡಿರುವುದು, ಈ ಅಸಹನೆಯೇ ಮತಗಳಾಗಿ ಪರಿವರ್ತಿತವಾಗುವಂತೆ ಮಾಡಿರುವುದು
  5. ಭಾರತದ ಸನಾತನ ಸಂಸ್ಕೃತಿಯನ್ನು ಕಾಪಾಡಲು ಬಿಜೆಪಿಯೇ ಪರ್ಯಾಯ ಎಂದೇ ನಂಬಿಸಿದ್ದು.
  6. ಬಹು ವ್ಯವಸ್ಥಿತ ಕಾರ್ಯಕರ್ತರ ಪಡೆ ಮೂಲಕ ದೇಶವನ್ನು ಅಭಿವೃದ್ಧಿ ಮಾಡಲು, ರಕ್ಷಿಸಲು ಬಿಜೆಪಿ ಮತ್ತು ಮೋದಿ ಬಿಟ್ಟರೆ ಪರ್ಯಾಯವೇ ಇಲ್ಲ ಎಂದು ಪ್ರಚಾರ ಮಾಡಿದ್ದು
  7. ಬಹುಮುಖ್ಯವಾಗಿ ದೇಶದ ಯಾವುದೇ ರಾಜ್ಯದಲ್ಲಿಯೂ ಏನೇ ಪ್ರಗತಿಯಾದರೂ ಅದಕ್ಕೆ ಮೋದಿಯೇ ಕಾರಣ ಎಂದು ಬಿಂಬಿಸಿದ್ದು.
  8. ಈ ಬಾರಿಯ ಚುನಾವಣೆ ಸಂದರ್ಭದಲ್ಲಿ ಎಂಟು ಮಿಲಿಯನ್ ಗೂ ಅಧಿಕವಾಗಿದ್ದ ಮೊದಲನೇ ಬಾರಿ ಮತ ಚಲಾಯಿಸುವ ಹಕ್ಕು ಪಡೆದ ಬಹುತೇಕ ಯುವಮತದಾರರ ಮನದಲ್ಲಿ ಮೋದಿ ಎಂಬ ಬೀಜ ಬಿತ್ತಿದ್ದು
  9. ಇವೆಲ್ಲದರ ಜೊತೆಗೆ ದೇಶಕ್ಕೆ ಸ್ವಾತಂತ್ರ್ಯ ಬಂದ 1947 ರಿಂದ ಇಲ್ಲಿಯವರೆಗೆ ಅಭಿವೃದ್ಧಿಯೇ ಆಗಿಲ್ಲ. ಅದು ಆಗಲು ಶುರುವಾಗಿದ್ದೆ ಮೋದಿ ಆಡಳಿತಾವಧಿ ನಂತರ ಎಂದು ನಂಬಿಸುತ್ತಾ ಹೋಗಿದ್ದು.

ಹೀಗೆ ಅನೇಕ ಸಂಗತಿಗಳನ್ನು ಪಟ್ಟಿ ಮಾಡುತ್ತಾ ಹೋಗಬಹುದು. ಆದರೆ ಇಂಥ ಸಂದರ್ಭದಲ್ಲಿ ಬಹುದೊಡ್ಡ ಪಕ್ಷವಾದ ಕಾಂಗ್ರೆಸ್ ಏನು ಮಾಡುತ್ತಿತ್ತು. ಏನೂ ಮಾಡುತ್ತಿರಲಿಲ್ಲ. ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಪಟ್ಟಿ ಮಾಡುತ್ತಾ ಮೋದಿ ಮತ್ತು ಬಿಜೆಪಿಯ ವರ್ಚಸ್ಸು ಹೆಚ್ಚುತ್ತಾ ಹೋಗುವುದನ್ನು ತಡೆಯಬಹುದಾಗಿತ್ತು. ಈ ಮೂಲಕ ಬಿಜೆಪಿ ಮತ್ತೆ ಅಧಿಕಾರಕ್ಕೇರುವುದನ್ನು ತಡೆಯಬಹುದಾಗಿತ್ತು. ಆದರೆ ಈ ಪಕ್ಷವಾಗಲಿ, ಕೆಲವು ರಾಜ್ಯಗಳಲ್ಲಿ ಪ್ರಬಲವಾಗಿರುವ ಬಿ.ಎಸ್.ಪಿ. ಎಸ್ಪಿ, ಇತರ ಪ್ರಾದೇಶಿಕ ಪಕ್ಷಗಳಾಗಲಿ ಈ ಕೆಲಸವನ್ನು ಸಮರ್ಥವಾಗಿ ಮಾಡಲಿಲ್ಲ. ಇದರಿಂದ ಬಿಜೆಪಿ ಇನ್ನಿಲ್ಲದ ಬಹುಮತ ಪಡೆದು ಬೀಗುತ್ತಿದೆ. ಬಹುತ್ವದ ಭಾರತ ಸೋಲುತ್ತಿದೆ.

Similar Posts

Leave a Reply

Your email address will not be published. Required fields are marked *