ಜೀತದಾಳುಗಳಾದ ಕಪ್ಪುವರ್ಣೀಯರು ಅನುಭವಿಸಿದ ಹಿಂಸೆಯನ್ನು ಹೇಳಲು ಪದಗಳೇ ಇಲ್ಲವೇನೋ ಎನಿಸುತ್ತದೆ. ಹಿಂಸೆ, ಕ್ರೌರ್ಯ, ದಬ್ಬಾಳಿಕೆ, ಅತ್ಯಾಚಾರ, ಕಗ್ಗೊಲೆ ಇವ್ಯಾವುವು ಆ ನರಕದ ಚಿತ್ರವನ್ನು ಹಿಡಿದಿಡಲಾರವು. ಅಂಥದೊಂದು ಚಿತ್ರಣವನ್ನು 12 ಇಯರ್ಸ್ ಎ ಸ್ಲೇವ್ (12 Years a slave) ಸಿನೆಮಾ ನಮ್ಮ ಮುಂದಿಡುತ್ತದೆ. ಇದು ಕಾಲ್ಪನಿಕ ಕಥೆಯಲ್ಲ. ಜೀತದಾಳಗಿದ್ದ ಓರ್ವ ಕಲಾವಿದ ಬರೆದ ಆತ್ಮಕಥೆ. ಅದೇ ಹೆಸರಿನಲ್ಲಿ ಸಿನೆಮಾ ಆಗಿದೆ.
ನ್ಯೂರ್ಯಾಕ್ ನಗರದ ನಿವಾಸಿಯಾಗಿದ್ದ ಖ್ಯಾತ ವಯೋಲಿನ್ ಕಲಾವಿದ ಸೊಲೊಮನ್ ನಾರ್ಥಪ್ ಅನುಭವಿಸಿ ಬರೆದ ತಲ್ಲಣವಿದು. ಇದನ್ನು ಜಾನ್ ರಿಡ್ಲಿ ಸಶಕ್ತ ಚಿತ್ರಕಥೆಯಾಗಿಸಿದ್ದಾರೆ. ನಿರ್ದೇಶಕ ಸ್ಟೀವ್ ಮ್ಯಾಕ್ವೀನ್ ಅಷ್ಟೇ ಸಶಕ್ತವಾದ ಚಿತ್ರವನ್ನಾಗಿ ಮಾಡಿ ನಮ್ಮ ಮುಂದಿರಿಸಿದ್ದಾರೆ.
ಅಮೆರಿಕಾದ ಸ್ವಾತಂತ್ರ್ಯ, ಸಮಾನತೆ ಇತ್ಯಾದಿ ಇತ್ಯಾದಿ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡಲಾಗುತ್ತದೆ. ಆದರೆ ಆ ನೆಲದಲ್ಲಿ ಕಪ್ಪುವರ್ಣೀಯರ ಮೇಲೆ ಎಂಥಾ ಕ್ರೌರ್ಯ ನಡೆದಿತ್ತು ಎಂಬುದನ್ನು “12 ಇಯರ್ಸ್ ಎ ಸ್ಲೇವ್” ಹೇಳುತ್ತದೆ. ಅಂಥದ್ದೊಂದು ಜನಾಂಗೀಯ ದ್ವೇಷ, ವರ್ಣ ತಾರತಮ್ಯ ಅಲ್ಲಿ ಇನ್ನೂ ಇದೆ ಎಂಬ ಕುರುಹುಗಳು ಅಲ್ಲಲ್ಲಿ ಸಿಕ್ಕುತ್ತಿವೆ. ಹೀಗಿರುವಾಗ ಅಂಥ ಹೊತ್ತಿನಲ್ಲಿ ಅಂದರೆ 18, 19ನೇ ಶತಮಾನದಲ್ಲಿ ಹೇಗಿರಬಹುದು ?
“12 ಇಯರ್ಸ್ ಎ ಸ್ಲೇವ್” ಅಂದಿನ ಚಿತ್ರಹಿಂಸೆಯನ್ನು ಹೇಗೆ ಕಟ್ಟಿಕೊಟ್ಟಿದೆ ಎಂದರೆ ಇದನ್ನು ಸಿನೆಮಾ ಎಂದೂ ಕರೆಯಲು ಸಾಧ್ಯವಾಗುವುದಿಲ್ಲ. ಕಾಲಯಾನದ ಯಂತ್ರದಲ್ಲಿ ಕುಳಿತು ಅಂದಿನ ಕಾಲಘಟ್ಟಕ್ಕೆ ಜಾರಿ ಸ್ವತಃ ನಾವೇ ಆ ನರಕ ಅನುಭವಿಸುತ್ತಿದ್ದಿವೇನೋ ಎನ್ನಿಸಿ ಮೈಮನದಲ್ಲಿ ನಡುಕ ಮೂಡುತ್ತದೆ.
ನಾನ್ನಿಲ್ಲಿ ಆ ಎಲ್ಲ ವಿವರಗಳನ್ನು ಹೇಳಲು ಹೋಗುವುದಿಲ್ಲ. ಅಲ್ಲಿನ ಎರಡೇ ಮೂರು ಸನ್ನಿವೇಶಗಳನ್ನಷ್ಟೇ ಹೇಳುತ್ತೇನೆ. ವಯೋಲಿನಸ್ಟ್ ಸೊಲೊಮನ್ ನಾರ್ಥಪ್ ಅವರದು ಸ್ವತಂತ್ರ ಆಫ್ರಿಕನ್ ಅಮೆರಿಕನ್ ಸುಖೀಕುಟುಂಬ. ನ್ಯೂರ್ಯಾಕಿನಲ್ಲಿ ನೆಮ್ಮದಿಯ ಜೀವನ. ನಾರ್ಥಪ್, ಇಬ್ಬರು ಬಿಳಿವರ್ಣಿಯರ ಮೋಸದ ಬಲೆಗೆ ಅರಿವಿಲ್ಲದೇ ಬೀಳುತ್ತಾರೆ. ಜೀತದಾಳಾಗಿ ಮಾರಾಟವಾಗುತ್ತಾರೆ.
ಇವರನ್ನು ಅಕ್ಷರಶಃ ವನ್ಯಮೃಗಕ್ಕಿಂತಲೂ ಕ್ರೂರವಾಗಿ ಹಿಂಸಿಸಲಾಗುತ್ತದೆ. ಇವರ ಎದೆಯೊಳಗಿನ ಸ್ವಾತಂತ್ರ್ಯದ ಹಸಿವು ಹಿಂಗಿ ಹೋಗುವ ಹಾಗೆ ಬಡಿಯಲಾಗುತ್ತದೆ. ಮೈಚರ್ಮ ಸುಲಿದು ಹೋಗುತ್ತದೆ. ಆ ನಂತರ ಇವರಿಗೆ ತನ್ನಂತೆ ಅನೇಕರು ಬಂಧಿಗಳಾಗಿ, ಚಿತ್ರಹಿಂಸೆ ಪಡುತ್ತಿದ್ದಾರೆ ಎಂದು ಗೊತ್ತಾಗುತ್ತದೆ. ಇವರ್ಯಾರು ಸೊಲ್ಲೇ ಎತ್ತದಂತೆ ಮಾಡಲಾಗುತ್ತದೆ. ಹೆಸರುಗಳನ್ನು ಬದಲಿಸಲಾಗುತ್ತದೆ. ಕೊರಳಿನಲ್ಲಿ ಜೀತದಾಳಿನ ಬಿಲ್ಲೆಗಳು ನೇತಾಡುತ್ತವೆ. ಹಲ್ಲುಗಳನ್ನು, ಕಾಲುಗಳನ್ನು ನೋಡಿ ಜಾನುವಾರುಗಳು ಬಿಕರಿಯಾಗುವ ರೀತಿ ಇವರನ್ನೆಲ್ಲ ಮಾರಾಟ ಮಾಡಲಾಗುತ್ತದೆ. ನಂತರ ನಾರ್ಥಪ್ ಬಿಳಿಯ ಕಾರ್ಪೆಂಟರ್ ಒಬ್ಬನ ಸಿಟ್ಟಿಗೆ ಗುರಿಯಾಗುತ್ತಾರೆ. ನೇಣು ಹಾಕಲಾಗುತ್ತದೆ. ಪಾದದ ಬೆರಳುಗಳು ನೆಲಕ್ಕೆ ಸೋಕಿವೆ. ಹಗ್ಗಕ್ಕೆ ಕಟ್ಟಿದ ಕತ್ತು ಬಿಗಿಯುತ್ತಿದೆ. ಉಸಿರು ಕಟ್ಟುತ್ತಿದೆ. ಕಣ್ಣಾಲಿಗಳು ಉಬ್ಬಿ ಹೊರಬರುತ್ತಿವೆ. ಅಲ್ಲಿಯೇ ಜೀತದಾಳುಗಳಾಗಿದ್ದವರು ಓಡಾಡುತ್ತಿದ್ದಾರೆ. ಬಿಡಿಸುವುದಿರಲಿ, ಹತ್ತಿರ ಹೋಗುವ ಧೈರ್ಯವೂ ಅವರಿಗಿಲ್ಲ.
ಬೆಳಗ್ಗೆದ್ದರೆ ವಿವಿಧ ಕೆಲಸಗಳಲ್ಲಿ ತೊಡಗಬೇಕು. ಹತ್ತಿ ಬಿಡಿಸುವ ಕೆಲಸ ಮಾಡಿಸುತ್ತಿದ್ದಾರೆ. ಪ್ರತಿಯೊಬ್ಬರಿಗೂ ಇಂತಿಷ್ಟೇ ಹತ್ತಿ ಬಿಡಿಸಬೇಕು ಎಂದು ಟಾರ್ಗೆಟ್ ನೀಡಲಾಗಿದೆ. ಸಂಜೆ ಪ್ರತಿಯೊಬ್ಬರೂ ಬಿಡಿಸಿದ ಹತ್ತಿ ತೂಗು ಹಾಕುತ್ತಾರೆ. ಕಿಂಚಿತ್ತೂ ತೂಕ ಕಡಿಮೆಯಾದರೂ ಬಟ್ಟೆ ಬಿಚ್ಚಿಸಿ ಮೈಚರ್ಮ ಸಂಪೂರ್ಣ ಸುಲಿದು ರಕ್ತ ಸುಲಿಯುವವರೆಗೂ ಚಾಟಿಯಿಂದ ಬಾರಿಸುತ್ತಾರೆ. ಜೋರಾಗಿ ಅತ್ತರೂ ಮತ್ತಷ್ಟು ಬಡಿತ. ಅಬ್ಬಬ್ಬಾ…
ಪಾಸ್ಟಿ. ಸ್ವಾತಂತ್ರ್ಯದ ಹಂಬಲ ಹಾರಿ ಹೋಗದ ಹಾಗೆ ಕಾಪಿಟ್ಟುಕೊಂಡ ಯುವತಿ. ಆ ಸ್ವಾತಂತ್ರ್ಯ ಮೃತ್ಯುವಾಗಿಯಾದರೂ ದಕ್ಕಲಿ ಎಂದುಕೊಂಡವಳು. ಈಕೆ ಅತ್ತ ಎಸ್ಟೇಟ್ ಮಾಲೀಕನ ಕಾಮುಕತೆ, ಪೈಶಾಚಿಕತೆ, ಆತನ ಹೆಂಡತಿಯ ಕ್ರೌರ್ಯದಿಂದ ನಿತ್ಯವೂ ನಲುಗುತ್ತಲೇ ಇರುವವಳು. ನಿತ್ಯ ಬೆಳಗ್ಗೆಯಿಂದ ಕತ್ತಲಾಗುವವರೆಗೂ ದುಡಿದು ಮೈ ಬೆವತು ದುರ್ವಾಸನೆ ಬರುತ್ತಿರುತ್ತದೆ. ಅದನ್ನು ತೊಳೆಯಲು ಸಾಬೂನು ತರಲು ಪಕ್ಕದ ಎಸ್ಟೇಟ್ ಹೌಸಿಗೆ ಹೋಗಿ ಬಂದಿದ್ದಾಳೆ. ಆಕೆ ಪಲಾಯನ ಮಾಡಲು ಯತ್ನಿಸಿದ್ದಾಳೆ ಎಂಬ ಶಂಕೆ ಎಸ್ಟೇಟಿನ ಮಾಲೀಕನಿಗೆ ಬಂದಿದೆ. ಕಂಭಕ್ಕೆ ಕಟ್ಟಿ ಹಾಕಿಸುತ್ತಾನೆ. ಮೈಚರ್ಮ ಸುಲಿದು ರಕ್ತ ದಳದಳನೆ ಸುರಿಯುವ ಹಾಗೆ ಚಾಟಿಯಿಂದ ಹೊಡೆಯಲು ನಾರ್ಥಪ್ಗೆ ಆಜ್ಞಾಪಿಸುತ್ತಾನೆ. ಕಲಾವಿದ ನಾರ್ಥಪ್ಗೆ ತನ್ನ ಪ್ರಾಣವೇ ಹೋಗಬಾರದೇ ಎಂಬಷ್ಟು ಹಿಂಸೆ. ಈತನ ಕೈಯಿಂದ ಚಾಟಿ ಕಿತ್ತುಕೊಂಡ ಎಸ್ಟೇಟ್ ಮಾಲೀಕ ಬಡಿಯತೊಡಗುತ್ತಾನೆ. ಆತ ಸುಸ್ತಾಗುವವರೆಗೂ ಬಡಿತ ನಿಲ್ಲುವುದಿಲ್ಲ. ಪಾಸ್ಟಿಯ ಮೈಮೇಲಿನ ಚರ್ಮ ಸುಲಿದು, ಇಬ್ಬಾಗವಾಗಿ ರಕ್ತ ಹರಿದು ಅಲ್ಲಿಯೇ ಹೆಪ್ಪುಗಟ್ಟುತ್ತದೆ.
ಈ ಚಿತ್ರದಲ್ಲಿ ಕಲಾವಿದರು ನಟಿಸಿದ್ದಾರೆ ಎಂದು ಹೇಳಲು ಆಗುವುದೇ ಇಲ್ಲ. ಪ್ರತಿಯೊಬ್ಬರು ಆಯಾ ಪಾತ್ರಗಳಲ್ಲಿ ಪರಕಾಯ ಪ್ರವೇಶವನ್ನೇ ಮಾಡಿದ್ದಾರೆ. ಅದರಲ್ಲಿಯೂ ನಾರ್ಥಪ್ ಪಾತ್ರಧಾರಿ ಚೀವ್ಟೆಲ್ ಇಜೋಫರ್, ಪಾಸ್ಟಿ ಪಾತ್ರಧಾರಿ ಲೂಪಿತಾ ನೆಯೋಗ್ ಅಭಿನಯ ಮತ್ತೆಮತ್ತೆ ಕಣ್ಣು ತೇವಗೊಳ್ಳುವಂತೆ ಮಾಡುತ್ತದೆ.
ಸೀನ್ ಬಾಬಿಟ್ ಅವರ ಛಾಯಾಗ್ರಾಹಣ, ಹನ್ಸ್ ಜಿಮರ್ ಅವರು ನೀಡಿರುವ ಹಿನ್ನೆಲೆ ಸಂಗೀತ ಚಿತ್ರಕಥೆಗೆ ಮತ್ತಷ್ಟೂ ಸಶಕ್ತತೆ ತಂದುಕೊಟ್ಟಿವೆ. ಚಿತ್ರದ ಮುನ್ನೆಲೆ, ಹಿನ್ನೆಲೆಯಲ್ಲಿರುವ ಪ್ರತಿಯೊಬ್ಬರೂ ಗರಿಷ್ಠ ಶ್ರಮಪಟ್ಟಿದ್ದಾರೆ ಎಂಬುದು ಚಿತ್ರಣವನ್ನು ನೋಡುವಾಗ ಅರಿವಿಗೆ ಬರುತ್ತದೆ.
ಈ ಚಿತ್ರ, ಅನೇಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಅವೆಲ್ಲ ಗೌರವಕ್ಕೆ ಇದು ಅರ್ಹ. 2014ರ ಜನವರಿಯಲ್ಲಿ ಅಮೆರಿಕಾದಲ್ಲಿ ತೆರೆಕಂಡಿದೆ. ನೆಟ್ ಫ್ಲಿಕ್ಸ್ ನಲ್ಲಿ ನಾನಿದನ್ನು ನೋಡಿದೆ. ನಮ್ಮ ಬದುಕಿರುವವರೆಗೂ ನೆನಪಿನಲ್ಲಿ ಉಳಿಯುವ, ವರ್ಣೀಯ ದ್ವೇಷದ ತಾರಕ ಸ್ಥಿತಿ ಏನೆಂದು ಹೇಳುವ ಚಿತ್ರವಿದು.
ಇದನ್ನ ಓದುತ್ತೋದುತ್ತಾ ಫ್ರೆಡರಿಕ್ ಡಗ್ಲಸ್ ಆತ್ಮಕಥನ ನೆನಪಾಯಿತು. ಒಂದಿಡೀ ಜನಾಂಗ ಅನುಭವಿಸಿದ ನರಕಯಾತನೆ, ಸ್ವಾತಂತ್ರ್ಯದ ಹಂಬಲದ ಬರಹ ಅದು.
ಈ ಸಿನಿಮಾ ನೋಡಬೇಕು.