ರಾಜ್ಯದಲ್ಲಿ ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಕಾಫಿ ಬೆಳೆಯಲಾಗುತ್ತದೆ. ಕಾಫಿ ಕೊಯ್ಲು ಸೀಸನ್ ಹತ್ತಿರವಾಗುತ್ತಿದ್ದಂತೆ ಬೆಳೆಗಾರರ ಆತಂಕ ಹೆಚ್ಚಾಗತೊಡಗುತ್ತದೆ. ಕೃಷಿಕಾರ್ಮಿಕರ ಲಭ್ಯತೆ ಕಡಿಮೆಯಾಗಿರುವುದು ಇದಕ್ಕೆ ಕಾರಣ. ನಿಗದಿತ ಅವಧಿಯಲ್ಲಿ ಕೊಯ್ಲಾಗುವುದು ಅತ್ಯವಶ್ಯಕ. ಕಾಫಿಕೊಯ್ಲಿನಲ್ಲಿ ಕುಶಲತೆ ಉಳ್ಳವರು ಹೆಚ್ಚಿನ ಸಂಖ್ಯೆಯಲ್ಲಿ ಸಿಗುವುದು ವಿರಳವಾಗತೊಡಗಿದೆ. ಇದೆಲ್ಲವೂ ಕಾಫಿ ಸಂಗ್ರಹಣೆ ಪ್ರಮಾಣದ ಮೇಲೆ ದುಷ್ಪರಿಣಾಮ ಬೀರುತ್ತದೆ. ಪರಿಣಾಮ ಬೆಳೆಗಾರರು ನಷ್ಟ ಅನುಭವಿಸುವಂಥ ಸ್ಥಿತಿ ಉಂಟಾಗುತ್ತದೆ.

ಇಂಥ ಸಂದರ್ಭಗಳಲ್ಲಿ ಯಂತ್ರಗಳ ಅವಶ್ಯಕತೆ ಹೆಚ್ಚು. ಇತ್ತೀಚಿನವರೆಗೂ ಕಾಫಿಕೊಯ್ಲಿಗೆ ಸೂಕ್ತವಾದ ಯಂತ್ರೋಪಕರಣಗಳಿರಲಿಲ್ಲ. ಈ ಕೊರತೆ ನೀಗಿಸಲು ಗಲಿವರ್ ಎಂಬ ಸಾಧನ ಆವಿಷ್ಕಾರವಾಗಿದೆ. ಇದನ್ನು ಬಳಸಿ ಪರಿಣಾಮಕಾರಿಯಾದ ರೀತಿಯಲ್ಲಿ ನಿಗದಿತ ದಿನಗಳಿಗಿಂತಲೂ ಮುಂಚಿತವಾಗಿ ಕೊಯ್ಲು ಮಾಡಬಹುದು. ನೋಡಲು ಸರಳವಾಗಿರುವ ಈ ಸಾಧನ ಬಳಸಲು ಅಷ್ಟೇ ಹಗುರು ಮತ್ತು ಸರಾಗ.

ಸಾಧನ ಬಳಸಿದಾಗ ಪ್ರತಿ ಒಂದು ಗಂಟೆ  ಅವಧಿಯಲ್ಲಿ ಸರಾಸರಿ 80 ಕೆಜಿ ಕಾಫಿಹಣ್ಣು ಕೊಯ್ಲು ಮಾಡಬಹುದು.  ವಿದ್ಯುತ್ ನಿಂದ ಇದರ ಬ್ಯಾಟರಿ ಛಾರ್ಜ್ ಮಾಡಿಕೊಳ್ಳಬೇಕು. ಯಾವುದೇ ಸ್ಥಳದಲ್ಲಿಯಾದರೂ ಇದನ್ನು ಶೀಘ್ರವಾಗಿ ಛಾರ್ಜ್ ಮಾಡಿಕೊಳ್ಳಬಹುದು. ಕೊಯ್ಲು ಮಾಡುವಾಗ ನೇರ ವಿದ್ಯತ್ ಸಂಪರ್ಕದ ಅವಶ್ಯಕತೆ ಇರುವುದಿಲ್ಲ. ಇದರಿಂದ ಶಾರ್ಟ್ ಸರ್ಕ್ಯೂಟ್, ವಿದ್ಯುತ್ ಅವಘಡ ಉಂಟಾಗುವ ಅಪಾಯಗಳು ಇಲ್ಲ.

ಈ ಸಾಧನಕ್ಕೆ ಸೆನ್ಸಾರ್ ಅಳವಡಿಸಲಾಗಿದೆ. ಇದನ್ನು ಬಳಸಿ ಕೊಯ್ಲು ಮಾಡುವಾಗ ಕಾಫಿಗಿಡದ ಬುಡ ಅಲುಗಾಡುವುದಿಲ್ಲ. ಅದರ ಕಾಂಡಗಳಿಗೆ, ರೆಕ್ಕೆಗಳಿಗೆ ಗಾಸಿಯಾಗುವುದಿಲ್ಲ. ಹಣ್ಣುಗಳ ಮೇಲೆ ತರಚುಗಾಯಗಳಾಗುವುದಿಲ್ಲ. ಬಹಳ ನಾಜೂಕಾಗಿ ಹಣ್ಣುಗಳ ಕೊಯ್ಲುಕಾರ್ಯ ನಡೆಯುತ್ತದೆ. ಕೊಯ್ಲು ನಡೆಯುವಾಗ ಗಿಡದ ಕೆಳಗೆ ತೆಳುವಾದ ಪ್ಲಾಸ್ಟಿಕ್ ಶೀಟ್ ಅಥವಾ ಗೊಬ್ಬರದ ಚೀಲಗಳನ್ನು ಹೊಲಿದು ಮಾಡಿದ ಶೀಟ್, ಟಾರ್ಪಾಲ್ ಹಾಸಬೇಕು. ಇದರಿಂದ ಹಣ್ಣುಗಳು ನೆಲಕ್ಕೆ ಬಿದ್ದು ಚೆದುರುವುದಿಲ್ಲ. ಇದರಿಂದ ಸಂಗ್ರಹಣೆ ಕಾರ್ಯ ಸಲೀಸಾಗುತ್ತದೆ.

ಕೃಷಿಕಾರ್ಯದ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಉತ್ಪನ್ನಗಳನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋದಾಗ ಕೃಷಿಗೆ ಮಾಡಿದ ಖರ್ಚೂ ಗಿಟ್ಟದ ಉದಾಹರಣೆಗಳು ಸಾಕಷ್ಟು. ಇಂಥ ಸಂದರ್ಭಗಳಲ್ಲಿ ಖರ್ಚು ಕಡಿಮೆಯಾದಷ್ಟೂ ಲಾಭದಾಯಕ. ಈ ನಿಟ್ಟಿನಲ್ಲಿ ಈ ಸಾಧನ ಬೆಳೆಗಾರರಿಗೆ ವರದಾನ ಎಂದೇ ಹೇಳಬಹುದು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ರತ್ನಗಿರಿ ಇಂಪೆಕ್ಸ್, ಮೊಬೈಲ್: 94808 86513

Similar Posts

Leave a Reply

Your email address will not be published. Required fields are marked *