ಒಳುಉಡುಪನ್ನೇ ಇಟ್ಟುಕೊಂಡು ಮನುಷ್ಯನ ಒಳಾಸೆಗಳ ನಿರೂಪಣೆಗೆ ತೊಡಗಬಹುದೇ… ? ಇಂಥ ಕಥನಾ ನಿರೂಪಣೆಯೂ ಸಾಧ್ಯ ಎಂಬುದನ್ನು ಕಥೆಗಾರ ಹ್ಯೂಗೋ ವ್ಯಾನ್ ಹರ್ಪೆ ಹೇಳುತ್ತಾನೆ. ಇದನ್ನು ಬಹು ಶಕ್ತಿಶಾಲಿ ಚಿತ್ರಕಥೆಯನ್ನಾಗಿ ಮಾಡಿರುವ ವೆಲ್ಟ್ ಹೆಲ್ಮರ್ ತಾನೇ ನಿರ್ದೇಶನವನ್ನು ಮಾಡಿ ಉತ್ತಮ ರೀತಿಯಲ್ಲಿ ಆ ಕಥಾನಕವನ್ನು ಪ್ರೇಕ್ಷಕರ ಮುಂದೆ ನಿರೂಪಿಸುತ್ತಾನೆ. ಒಂದು ಕಾದಂಬರಿ ಓದುವಾಗ ಅಲ್ಲಿ ಸದ್ದುಗಳಿರುವುದಿಲ್ಲ. ಆದರೆ ಸಿನೆಮಾ ಆಗಲ್ಲ. ಅಲ್ಲಿ ಮಾತಿರುತ್ತದೆ. ಆದರೀತ ಮಾತಿಲ್ಲದೇ ಕಥೆಯನ್ನು ಹೇಳುತ್ತಾನೆ. ಹೀಗಾಗಿ The Bra ಕಾದಂಬರಿಯನ್ನು ಓದಿದ ಅನುಭವವನ್ನೂ ಕೊಡುತ್ತದೆ.
ನೂರ್ಲನ್ ಮೂಲತಃ ಗುಡ್ಡಗಾಡಿನ ನಿವಾಸಿ. ಗೂಡ್ಸ್ ರೈಲಿನ ಡ್ರೈವರ್. ನಿವೃತ್ತಿಯ ಅಂಚಿನಲ್ಲಿರುವ ಒಂಟಿಜೀವ. ಏಕಾಂಗಿತನದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಲೇ ಇರುತ್ತಾನೆ. ನಗರದ ರೈಲ್ವೆಸ್ಟೇಷನ್ನಿನ ಸಮೀಪದಲ್ಲಿಯೇ ರೈಲುಗಳಿಗಳಿಗೆ ತಾಗಿಕೊಂಡಂತೆ ಇಬ್ಬದಿಗಳಲ್ಲಿಯೂ ಉದ್ದಕ್ಕೂ ಮನೆಗಳಿವೆ. ಆಗಾಗ ಗೂಡ್ಸ್ ರೈಲು ಈ ಹಾದಿಯಲ್ಲಿ ಹೋಗಬೇಕಾಗುತ್ತದೆ. ಯಾರ್ಡ್ ತಲುಪಿದ ನಂತರ ರೈಲನ್ನು ಕ್ಲೀನ್ ಮಾಡುವ ಸಂದರ್ಭದಲ್ಲಿ ಸಿಲುಕಿಕೊಂಡ ವಸ್ತುಗಳನ್ನು ವಾರಸುದಾರರನ್ನು ಹುಡುಕಿ ತಲುಪಿಸುವುದು ಆತನ ಹವ್ಯಾಸ.
ಈ ಮಧ್ಯೆ ಗುಡ್ಡಗಾಡಿನ ಕುರಿಗಾಯಿ ಯುವತಿಯೊಬ್ಬಳ ಮೇಲೆ ಮೋಹಿತನಾಗುತ್ತಾನೆ. ಮದುವೆಗೆ ಹೆಣ್ಣು ಕೇಳಲು ಆಕೆಯ ಮನೆಗೆ ಉಡುಗೊರೆಗಳೊಂದಿಗೆ ಹೋಗುತ್ತಾನೆ. ಆಗ ಯುವತಿಯ ತಾಯಿ ನಡೆಸುವ ದೈಹಿಕಬಲದ ಪರೀಕ್ಷೆಯಲ್ಲಿ ಸೋತು ನಿರಾಶೆಯಿಂದ ಹಿಂದಿರುಗುತ್ತಾನೆ. ನಿತ್ಯದ ಕರ್ತವ್ಯದಲ್ಲಿ ಗೂಡ್ಸ್ ರೈಲು, ಮನೆಗಳ ನಡುವೆ ಹಾದುಹೋಗುವಾಗ ಉಡುಪು ಬದಲಾಯಿಸುತ್ತಿದ್ದ ಸುಂದರ ಮೈಮಾಟದ ಮಹಿಳೆಯನ್ನು ಕಾಣುತ್ತಾನೆ. ಅದು ಆತನ ಮನಸಿನಲ್ಲಿ ಅಚ್ಚೊತ್ತುತ್ತದೆ. ಆಕೆ ಧರಿಸಿದ ಬ್ರಾ ವಿವರಗಳು ದಾಖಲಾಗುತ್ತವೆ.
ಆ ಬ್ರಾ ವಾರಸುದಾರಳನ್ನು ಹುಡುಕಲು ತೊಡಗುತ್ತಾನೆ. ಈ ಹಾದಿಯಲ್ಲಿ ಬಗೆಬಗೆಯ ವ್ಯಕ್ತಿತ್ವಗಳ ಅನಾವರಣವೂ ಆಗುತ್ತದೆ. ಅಷ್ಟೇ ಅಲ್ಲ; ಈತನ ವ್ಯಕ್ತಿತ್ವದ ವಿವರಗಳೂ ದಾಖಲಾಗುತ್ತವೆ. ಇವೆಲ್ಲವನ್ನು ನಿರ್ದೇಶಕ ಎಳೆಎಳೆಯಾಗಿ ನಿರೂಪಿಸುತ್ತಾನೆ. ಆ ಬ್ರಾದ ಸೈಜ್ ನೋಡಲು ಹಣ್ಣುಗಳನ್ನು ಬಳಸುತ್ತಾನೆ. ಇದು ಎಷ್ಟೆರಮಟ್ಟಿಗೆ ಆತನಿಗೆ ಗೀಳಾಗಿ ಪರಿಣಮಿಸುತ್ತದೆ ಎಂದರೆ ಸರಿರಾತ್ರಿಯಲ್ಲಿ ಕಳ್ಳತನದಿಂದ ಮಹಡಿ ಏರಿ ಮಲಗಿದ್ದ ಮಹಿಳೆಗೆ ಆ ಬ್ರಾ ಹೊಂದುವುದೇ ಎಂದು ನೋಡುವಷ್ಟರ ಮಟ್ಟಿಗೆ !ಈ ಯತ್ನ ಸಹಜವಾಗಿಯೇ ಸ್ಥಳೀಯ ಪುರುಷರ ಸಿಟ್ಟಿಗೆ ಕಾರಣವಾಗುತ್ತದೆ.
ಇಲ್ಲಿ ಚಹಾ ಅಂಗಡಿಯ ಪುಟ್ಟ ಹುಡುಗ ಬಂಧಿತನಾಗಿದ್ದ ನೂರ್ಲನ್ ಸರಪಳಿಗಳನ್ನು ತುಂಡರಿಸುವುದು ಸಾಂಕೇತಿಕ. ಇಲ್ಲಿ ಆತ ಸರಪಳಿ ಬಿಚ್ಚುವುದಿಲ್ಲ. ಪುಟ್ಟಗರಗಸ ತಂದು ತುಂಡರಿಸುತ್ತಾನೆ. ಒಬ್ಬ ಪುಟ್ಟ ಹುಡುಗ ಬಹುಕಡಿಮೆ ಕಾಲಾವಧಿಯಲ್ಲಿ ಪುಟ್ಟ ಗರಗಸದಿಂದ ಸರಪಳಿಗಳನ್ನು ತುಂಡರಿಸುವುದು ಅಸಾಧ್ಯ. ಆದರಿದು ಇಲ್ಲಿ ಬ್ರಾ ಹೇಗೆ ಒಳಾಸೆಗಳ ಸಂಕೇತವಾಗಿದೆಯೋ ಹಾಗೆ ಸರಪಳಿ ಇಲ್ಲಿ ಒಂದು ರೂಪಕವಾಗಿದೆ. ಇದು ಆತ ಒಳಾಸೆಗಳಿಂದ ಮುಕ್ತಿಪಡೆಯುವುದರ ಸಂಕೇತವೂ ಹೌದು.
ಚಹಾದಂಗಡಿ ಅನಾಥ ಹುಡುಗನನ್ನು ಸಾಕಲು ನಿರ್ಧರಿಸುತ್ತಾನೆ. ಮದುವೆಯಾಗಲು ಹೊರಟ ಇಳಿವಯಸ್ಸಿನ ವ್ಯಕ್ತಿ ಏರುವಯಸಿನ ಕಡೆ ಸಾಗುತ್ತಿರುವ ಬಾಲಕನನ್ನು ಸಲುಹಲು ನಿರ್ಧರಿಸುವುದು ಕೂಡ ಮಹತ್ವದ ಸಂಗತಿ. ಇದನ್ನೆಲ್ಲ ನಿರ್ದೇಶಕ ಬಹುಪರಿಣಾಮಕಾರಿಯಾಗಿ ಹೇಳಿದ್ದಾನೆ.
ಬಹುಮುಖ್ಯವಾದ ಅಂಶವೆಂದರೆ ಇದು ಮಾತಿಲ್ಲದ ಸಿನೆಮಾ. ಒಂದುವೇಳೆ The Bra ಸಿನೆಮಾವನ್ನು ಸಂಭಾಷಣೆಗಳ ಮೂಲಕ ಕಟ್ಟಿಕೊಟ್ಟಿದ್ದರೆ ಅದರ ಗಂಭೀರತೆ ಹಾಳಾಗುತ್ತದೆ. ಸುಮ್ಮನೆ ಹಾಗೆ ಕಲ್ಪಿಸಿಕೊಳ್ಳಿ. ಓರ್ವ ವ್ಯಕ್ತಿ ಮತ್ತೋರ್ವ ಅಪರಿಚಿತ ಮಹಿಳೆ ಬಳಿ ಹೋಗಿ ” ಈ ಬ್ರಾ ನಿಮ್ಮದೇ’ ಎಂದು ಕೇಳಿದರೆ ಎಷ್ಟು ವಾಚ್ಯ ಎನಿಸುತ್ತದೆ ಅಲ್ಲವೇ ?ಹಾಗೆ ಆಗಲು ನಿರ್ದೇಶಕ ಇಲ್ಲಿ ಅವಕಾಶ ಮಾಡಿಕೊಟ್ಟಿಲ್ಲ. ಸಿನೆಮಾ ಕಥೆಗೆ ಹೊಂದುವ ದೃಶ್ಯಗಳ ಹಿನ್ನೆಲೆಯಲ್ಲಿ ಆತ ಕಥೆಯನ್ನು ಸಹಜಗತಿಯಲ್ಲಿ ನಿರೂಪಿಸುತ್ತಾ ಹೋಗುತ್ತಾನೆ.
ಗೂಡ್ಸ್ ರೈಲ್ ಡ್ರೈವರ್ ಪಾತ್ರ ಮಾಡಿರುವ ಪ್ರಿದರ್ಗ್ ಮಿಕಿ ಮನೊಜೊವಿಕ್, ಈತನ ಸಹಾಯಕನ ಪಾತ್ರ ಮಾಡಿರುವ ಡೆನೀಸ್ ಲೆವಟ್ ನಟನೆ ಅಪಾರ ಮೆಚ್ಚುಗೆ ಪಡೆಯುತ್ತದೆ. ಚಹಾ ಅಂಗಡಿ ಹುಡುಗನ ಪಾತ್ರಧಾರಿ ಅಭಿನಯ ಮನಗೆಲ್ಲುತ್ತದೆ. ಆತ ಅತ್ಯಂತ ಸಹಜ ಸೊಬಗಿನಲ್ಲಿ ನಟಿಸಿದ್ದಾನೆ. ಈ ಸಿನೆಮಾದ ವೈಶಿಷ್ಟತೆಯೆಂದರೆ ಪ್ರತಿಪಾತ್ರವೂ ಕೂಡ ಪ್ರೇಕ್ಷಕರ ಮನಸಿನಲ್ಲಿ ಅಚ್ಚೊತ್ತುತ್ತದೆ. ಅಂದಹಾಗೆ ನೂರ್ಲನ್ ಆ ಬ್ರಾ ವಾರಸುದಾರಳನ್ನು ಪತ್ತೆ ಹಚ್ಚಲು ಯಶಸ್ವಿಯಾದನೇ ಎಂಬ ಕುತೂಹಲ ನಿಮಗೆ ಮೂಡಿರಬಹುದಲ್ಲವೇ ? ಇದನ್ನು ನೀವು ತೆರೆಯ ಮೇಲೆ ನೋಡಿದರೆ ಚೆನ್ನ ….
Please send Film link of The Bra
ಈ ಫಿಲ್ಮ್ ಇನ್ನೂ ಯೂಟ್ಯೂಬಿಗೆ ಬಂದಿಲ್ಲ. ನಾನು ನೋಡಿದ್ದು ಬೆಂಗಳೂರು ಫಿಲ್ಮ್ ಫೆಸ್ಟಿವಲ್ನಲ್ಲಿ….