ಕರ್ನಾಟಕ ಅದರಲ್ಲಿಯೂ ವಿಶೇಷವಾಗಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಿಗೆ ಉತ್ತರ ಭಾರತೀಯ ವಲಸೆ ಹೆಚ್ಚಾಗುತ್ತಿದೆ. ಎಲ್ಲಿ ಉದ್ಯೋಗ ದೊರೆಯುತ್ತದೆಯೋ ಅಲ್ಲಿಗೆ ವಲಸೆ ಸಹಜ. ನೀವು ಇಲ್ಲಿ ಬರಬೇಡಿ ಅಥವಾ ಇಂಥಲ್ಲಿ ಹೋಗಬೇಡಿ ಎಂದು ಹೇಳಲಾಗುವುದಿಲ್ಲ. ಸಮಸ್ಯೆ ಇರುವುದೆದಂದರೆ ಮನೆಯಿಂದ ಹೊರಗೆ ಕಾಲಿಟ್ಟರೆ ಕ್ಯಾಬ್, ಆಟೋ,  ಸೆಲೂನ್, ಹೋಟೆಲ್, ಖಾಸಗಿ ಆಸ್ಪತ್ರೆ ಮತ್ತು ಇತರ ವಾಣಿಜ್ಯ ಸೇವೆಗಳ ಸಿಬ್ಬಂದಿಗಳಲ್ಲಿ ಕನ್ನಡೇತರರ ಸಂಖ್ಯೆ ಹೆಚ್ಚಾಗುತ್ತಿದೆ.

ಮೊನ್ನೆ ನಾನು ಸೆಲೂನ್ ಗೆ ಹೋಗಿದ್ದೆ. ಇದರ ಮಾಲಿಕರು ಕನ್ನಡದವರು. ಸೆಲೂನ್ ವಾಣಿಜ್ಯಾತ್ಮಕವಾಗಿ ಆಯಕಟ್ಟಿನ ಜಾಗದಲ್ಲಿದೆ. ಗ್ರಾಹಕರು ಹೆಚ್ಚು. ಮೊನ್ನೆ ಹೋದಾಗ ಅಲ್ಲಿದ್ದ ಸಿಬ್ಬಂದಿಯೆಲ್ಲ ಹಿಂದಿ ಭಾಷಿಕರು. ಹಿಂದಿದ್ದ ಮಾಲಿಕರು ಸೆಲೂನ್ ಮಾರಾಟ ಮಾಡಿದ್ದಾರೆ. ಈಗಿನ ಮಾಲಿಕ ಉತ್ತರ ಭಾರತೀಯ !

ವಾಣಿಜ್ಯ ವ್ಯವಹಾರದಲ್ಲಿ ಖರೀದಿ, ಮಾರಾಟ ಇವೆಲ್ಲ ಸಹಜ. ಆದರೆ ನನ್ನ ಸಮಸ್ಯೆ ಇದ್ದಿದ್ದು ಇಷ್ಟೇ ಅಳತೆಯಲ್ಲಿ ಕೂದಲು ಕಟ್ ಮಾಡಬೇಕು, ಮೀಸೆ ಇಂತಿಷ್ಟೆ ಕಟ್ ಆಗಬೇಕು, ತುಟಿ ಕೆಳಗಿರುವ ಕಾರಳ್ಳಿಗೆ ಬ್ಲೇಡ್ ತಾಗಿಸಬಾರದು ಎಂದು ಹೇಳಬೇಕಿತ್ತು. ನನಗೆ ಹಿಂದಿ ಮಾತನಾಡಲು ಗೊತ್ತು. ಆದರೆ ನಮ್ಮ ಕನ್ನಡ ನಾಡಿನಲ್ಲಿ ಹೊರಗೆ ಹೋದಾಗ ಕನ್ನಡದಲ್ಲಿಯೇ ಮಾತನಾಡಬೇಕು ಎಂದು ನನ್ನ ನಿಲುವು.

ಕನ್ನಡದಲ್ಲಿ ಹೇಳುವುದು ಆತನಿಗೆ ಅರ್ಥವಾಗುತ್ತಿಲ್ಲ. ಆಗ ಆತ “ ಹಿಂದಿ ರಾಷ್ಟ್ರೀಯ ಭಾಷೆ. ಇದನ್ನು ಶಾಲೆಯಲ್ಲಿ ಕಲಿಸ್ತಾರೆ. ನೀವು ಕಲಿಯಲಿಲ್ಲವಾ” ಎಂದು ಹಿಂದಿಯಲ್ಲಿ ಕೇಳಿದರು. ಕನ್ನಡ ನಾಡಿಗೆ ಬಂದು ಕನ್ನಡ ಕಲಿಯದೇ “ನೀವು ಹಿಂದಿ ಕಲಿಯಲಿಲ್ಲವೇ” ಎಂದು ಕೇಳಿದರೆ ಏನು ಹೇಳಬೇಕು ? ಕ್ಷೌರ ಮಾಡಿಸಿಕೊಳ್ಳದೇ ವಾಪಸ್ ಬಂದೆ.  ನಾವು ಹೊರ ರಾಜ್ಯಗಳಿಗೆ ಹೋಗಿ “ಕನ್ನಡ ಸಹ ರಾಷ್ಟ್ರೀಯ ಭಾಷೆ, ನೀವು ಏಕೆ ಕನ್ನಡ ಕಲಿಯಲಿಲ್ಲ” ಎಂದು ಕೇಳಿ ಸುರಕ್ಷಿತವಾಗಿ ಬರುವ ಸಾಧ್ಯತೆ ಇದೆಯೇ ? ಏಕಿಂಥ ದುಸ್ಥಿತಿ ಸೃಷ್ಟಿಯಾಯಿತು ?

ದಕ್ಷಿಣ ಭಾರತದಲ್ಲಿ ತಮಿಳುನಾಡು ಹೊರತುಪಡಿಸಿ ಉಳಿದ ರಾಜ್ಯಗಳು ತ್ರಿಭಾಷಾ ಸೂತ್ರ ಅಳವಡಿಸಿಕೊಂಡಿವೆ. ಶಾಲಾಮಕ್ಕಳು ತಮ್ಮ ಮಾತೃಭಾಷೆ ಜೊತೆ ಅನಿವಾರ್ಯವಾಗಿ ಇನ್ನೆರಡು ಭಾಷೆ ಕಲಿಯಬೇಕಿದೆ. ಪರೀಕ್ಷೆಗಳಲ್ಲಿಯೂ ಉತ್ತೀರ್ಣರಾಗಬೇಕಿದೆ. “ ಹಿಂದಿಯನ್ನು ನಾವು ಕಲಿಯುವುದಿಲ್ಲ. ನಮಗೆ ದ್ವಿಭಾಷಾ ಸೂತ್ರವೇ ಸಾಕು. ಇದರಲ್ಲಿ ಮಾತೃಭಾಷೆ ಮತ್ತು ಇಂಗ್ಲಿಷನ್ನು ಕಲಿಸುತ್ತೇವೆ” ಎಂದು ಹೇಳುವ ಎದೆಗಾರಿಕೆಯನ್ನು ತಮಿಳುನಾಡು ಹೊರತುಪಡಿಸಿ ಉಳಿದ ದಕ್ಷಿಣದ ರಾಜ್ಯಗಳು ತೋರಿಸಲಿಲ್ಲ.

ಇದರಿಂದಾಗಿ ಕೇಂದ್ರ ಸರ್ಕಾರದ ಚುಕ್ಕಾಣಿ ಹಿಡಿಯುವ ಉತ್ತರ ಭಾರತೀಯ ದಕ್ಷಿಣ ಭಾರತೀಯ ಮೇಲೆ ಮಾಡುತ್ತಿರುವ ಸವಾರಿ ಮಿತಿ ಮೀರಿದೆ.  ಕೇಂದ್ರ ಆಧೀನದ ಕಚೇರಿಗಳು, ರೈಲ್ವೆ ವಲಯ (ಬ್ಯಾಂಕೂ ಸೇರಿದಂತೆ) ಹಿಂದಿ ಭಾಷಿಕರನ್ನೇ ಹೆಚ್ಚಾಗಿ ತುಂಬುತ್ತಿರುವುದು ದೊಡ್ಡ ಸಮಸ್ಯೆ. ಬರೀ ಸರ್ಕಾರದ ವಲಯವಷ್ಟೇ ಅಲ್ಲ, ಉತ್ತರ ಭಾರತೀಯ ಅಧೀನದ ಖಾಸಗಿ ಸಂಸ್ಥೆಗಳ ಭರಾಟೆಯೂ ಇಲ್ಲಿ ಹೆಚ್ಚಾಗಿದೆ. ಅವರು ತಮ್ಮತಮ್ಮ ಸಂಸ್ಥೆಗಳಿಗೆ ನೌಕರರನ್ನು ನೇಮಿಸಿಕೊಳ್ಳುವಾಗ ಆದ್ಯತೆ ನೀಡುವುದು ಉತ್ತರ ಭಾರತೀಯರಿಗೆ. ಕನ್ನಡಿಗರಿಗೆ ಅಳಿದುಳಿದ ಕೆಳ ಹಂತದ ಉದ್ಯೋಗಗಳು ಸಿಗುವುದು ಕಷ್ಟ !

ಇಂಥ ಸಮಸ್ಯೆಗಳ ನಡುವೆ ಮನೆಯ ಹೊಸ್ತಿಲು ಒಳಗಿನ ಮತ್ತು ಹೊರಗಿನ ಭಾಷೆ ಎಂದು ವಿಭಾಗೀಕರಣ ಮಾಡಿಕೊಳ್ಳಲಾಗಿದೆ. ಆದರೆ ಆಯಾ ರಾಜ್ಯಗಳ ಮೂಲ ನಿವಾಸಿಗಳಿಗೆ ಇವೆರಡೂ ಒಂದೇ ಆಗಿರಬೇಕಾದ್ದು ನ್ಯಾಯ. ಇದರಿಂದಾಗಿಯೇ ನಾಡಿನ ಅಸ್ಮಿತೆಯಾಗಿರುವ ಮೂಲನಿವಾಸಿಗಳ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಮಾಡಲಾಗಿದೆ. ತಮ್ಮ ನಾಡಿನಲ್ಲಿ ತಮ್ಮ ಭಾಷೆಯಲ್ಲಿಯೇ ಮನೆಯ ಹೊರಗೂ ಅಂದರೆ ರಾಜ್ಯ, ಕೇಂದ್ರ, ಖಾಸಗಿ, ವಾಣಿಜ್ಯ ಕಚೇರಿ, ಸಂಸ್ಥೆಗಳಲ್ಲಿ, ವಾಣಿಜ್ಯ ಸ್ಥಳಗಳಲ್ಲಿ ಸೇವಾ ಕೇಂದ್ರಗಳಲ್ಲಿ ವ್ಯವಹರಿಸಬೇಕು.  ಸಾಧ್ಯವಾಗದಿದ್ದರೆ ಅದನ್ನು ಪ್ರತಿಭಟಿಸಲೇಬೇಕು. ಕನ್ನಡಿಗರು ನಮ್ಮ ಭಾಷಾ ಬಳಕೆ ಹಕ್ಕಿಗೆ ಚ್ಯುತಿ ಬಂದಾಗಲೆಲ್ಲ ಪ್ರತಿಭಟಿಸುತ್ತಿದ್ದೇವೆ. ಇದು ನಮ್ಮ ಭಾಷಾ ಅಸ್ಮಿತೆ ಉಳಿಸುವ ದೃಷ್ಟಿಯಿಂದ ಸೂಕ್ತ ಕೂಡ. ಆದರೆ ನಮ್ಮ ಪ್ರತಿಭಟನೆಗಳಿಗೆ ಕೇಂದ್ರ ಸರ್ಕಾರ ಮಣಿದಿಲ್ಲ !!

ಒಂದು ರಾಜ್ಯ ಎಂದರೆ ಸ್ಥಳೀಯರಲ್ಲದೇ ಬೇರೆಬೇರೆ ಭಾಷೆಗಳ ಸಮುದಾಯಗಳವರೂ ಇರುತ್ತಾರೆ. ತಮ್ಮ ರಾಜ್ಯದಿಂದ ಹೊರಗೆ ಬಂದಾಗ ಜಾತಿ ಭಾವನೆಗಿಂತಲೂ ಭಾಷಾ ಭಾವನೆಯಿಂದಲೇ ಬರೆಯುತ್ತಾರೆ. ಗುಂಪಾಗಿ ಇರಲು ಬಯಸುತ್ತಾರೆ. ಈ ಪ್ರವೃತ್ತಿಯನ್ನು ಹೊರ ರಾಜ್ಯ/ದೇಶಗಳಲ್ಲಿರುವ ಕನ್ನಡಿಗರಲ್ಲಿಯೂ ನೋಡಬಹುದು. ನಮ್ಮ ರಾಜ್ಯದಲ್ಲಿ ಇರುವ ತಮಿಳು ಭಾಷಿಕರು, ಹಿಂದಿ ಭಾಷಿಕರು ಮತ್ತು ಇತರ ಭಾಷಾ ಸಮುದಾಯಗಳಲ್ಲಿ ವಿಶೇಷವಾಗಿ ನೋಡಬಹುದು.

ಅವರೆಲ್ಲ ತಮ್ಮ ಮನೆಗಳಲ್ಲಿ ಅಥವಾ ತಾವು ಕೆಲಸ ಮಾಡುವ ಸ್ಥಳದಲ್ಲಿ ಪರಸ್ಪರ ತಮ್ಮ ಭಾಷೆಗಳಲ್ಲಿಯೇ ಮಾತನಾಡಲಿ, ತಮ್ಮ ಸಭೆ – ಸಮಾರಂಭಗಳಲ್ಲಿ ಅವರ ಭಾಷೆಯನ್ನೇ ಬಳಸಲಿ. ಇದಕ್ಕೆ ಯಾರ ಅಭ್ಯಂತರವೂ ಇಲ್ಲ. ಆದರೆ ಇದರಾಚೆಗಿನ ಹೊರ ಜಗತ್ತಿನಲ್ಲಿ ಕನ್ನಡದಲ್ಲಿಯೇ ವ್ಯವಹರಿಸಬೇಕು ಎಂಬ ಪ್ರಜ್ಞೆ ಅವರಲ್ಲಿ ಉಂಟಾಗಬೇಕು, ಕನ್ನಡ ಕಲಿಯದಿದ್ದರೆ ಇಲ್ಲಿ ವ್ಯಾಪಾರ – ವ್ಯವಹಾರ – ಉದ್ಯೋಗ ನಿರ್ವಹಿಸುವುದು ಕಷ್ಟ ಎಂಬ ಭಾವನೆ ಮೂಡಿಸಬೇಕು.

ಸ್ಥಳೀಯರ ಜವಾಬ್ದಾರಿ:

ಇವರೆಲ್ಲ ತಮ್ಮ ಮನೆಯ ಹೊಸ್ತಿಲಿನಿಂದಾಚೆಯ ದೈನಂದಿನ ವ್ಯವಹಾರಕ್ಕಾಗಿ ಕನ್ನಡವನ್ನೇ ಬಳಸಬೇಕು. ಅಂಥ ಅನಿವಾರ್ಯತೆಯನ್ನು ಸ್ಥಳೀಯರೇ ಉಂಟು ಮಾಡಬೇಕು.ಇದು ನಮ್ಮ ಕರ್ತವ್ಯ. ನಾವು ಕನ್ನಡವನ್ನೇ ಮಾತನಾಡಿದರೆ ಹೊರಗಿನಿಂದ ಬಂದ ಪರಭಾಷಿಕರು ಕನ್ನಡ ಕಲಿಯಲು ಮುಂದಾಗುತ್ತಾರೆ. ಬ್ಯಾಂಕುಗಳಲ್ಲಿ ವ್ಯವಹರಿಸಲು ಕನ್ನಡ ಸಿಬ್ಬಂದಿ ಇಲ್ಲದಿದ್ದರೆ ನಮ್ಮ ಠೇವಣಿ ಹಿಂತೆಗೆದುಕೊಳ್ಳುತ್ತೇವೆ, ಬ್ಯಾಂಕ್‌ ಅಕೌಂಟ್‌ ರದ್ದು ಮಾಡುತ್ತೇವೆ ಎಂದು ಹೇಳಬೇಕು. ಹತ್ತಾರು ಮಂದಿ ಕನ್ನಡಿಗರು ಒಡಗೂಡಿ ಹೀಗೆ ಹೇಳಿದರೆ ಅಲ್ಲಿಗೆ ಕನ್ನಡ ಸಿಬ್ಬಂದಿ ಬರುತ್ತಾರೆ. ಕನ್ನಡಿಗರ ನೇಮಕಾತಿ ಹೆಚ್ಚಾಗುತ್ತದೆ.

ಸಾಮಾನ್ಯವಾಗಿ ವ್ಯಾಪಾರಕ್ಕಾಗಿ ಬಂದವರೆಲ್ಲ ಸ್ಥಳೀಯ ಭಾಷೆ ಕಲಿಯುತ್ತಾರೆ. ವ್ಯವಹರಿಸುತ್ತಾರೆ. ಆದರೆ ನಾವು ಶಾಲೆಯಲ್ಲಿ ಹಿಂದಿ ಕಲಿತಿದ್ದೇವೆ ಎಂದು ಭಾಷಾ ಜ್ಞಾನ ಪ್ರದರ್ಶಿಸಲು ಹೋದರೆ “ಅಯ್ಯೋ ಇಲ್ಲಿ ಕನ್ನಡ ಕಲಿಯದಿದ್ದರೂ ಬದುಕಬಹುದು” ಎಂಬ ಭಾವನೆ ಅವರಲ್ಲಿ ಬರುತ್ತದೆ. ಸ್ಥಳೀಯ ಭಾಷೆಯತ್ತ ಉದಾಸೀನ, ಅಸಡ್ಡೆ ಉಂಟಾಗುತ್ತದೆ.

Similar Posts

1 Comment

  1. ನಿಮ್ಮ ಅನುಭವ, ಅಭಿಪ್ರಾಯಗಳಿಗೆ ನನ್ನ ಸಹಮತವಿದೆ. ಕೆಲವು ವರ್ಷಗಳ ಹಿಂದೆಯೇ ನಮ್ಮ ಇಲ್ಲಿನ ಸ್ಥಳೀಯ ಮಾಲೀಕರ ಹೊಟೆಲ್‌ಗಳಲ್ಲೇ (ಜಯನಗರದಲ್ಲೇ) ಹಿಂದಿ ಮಾತನಾಡುವ (ಬಿಹಾರ್‌, ಝಾರ್ಕಂಡ್‌ ಅತವಾ ಯುಪಿ) ಹುಡುಗರು ಮಸಾಲೆ ದೋಸೆ ಹಾಕಿ ಕೊಡುವುದು ನೋಡಿದಾಗ, ಅವರ ಬದುಕುವ ಕೌಶಲ್ಯಕ್ಕೆ ಮೆಚ್ಚಿಕೊಂಡೆ. ಆದರೆ ಇದು ಅಷ್ಟು ಒಳ್ಳೆಯ ಬೆಳವಣಿಗೆಯಲ್ಲ ಎನಿಸಿತು. ನಮ್ಮವರಿಗೂ ಲಾಭ ಹೆಚ್ಚು ಬೇಕು, ಹೀಗಾಗಿ ಕಡಿಮೆ ಕೂಲಿ, ಸಂಬಳಕ್ಕೆ ದುಡಿಯುವ ಹೊರಗಿನವರು ಬೇಕು. ಇವಿಷ್ಟೇ ಅಲ್ಲ, ತೋಟಗಳಲ್ಲಿ ಅಡುಕೆ ಕೊಯ್ಯಲು, ಭತ್ತ ನಾಟಿ ಹಾಕಲು, ಹಸು ಹಾಲು ಹಿಂಡಲು, ಕುರಿ ನೋಡಿಕೊಳ್ಳಲೂ ಈಗ ಉತ್ತರದವರೇ ಬರುತ್ತಾರೆ. ಇಲ್ಲಿನ ಬಹುತೇಕ ಕೊರಿಯರ್‌ ಸೇವೆ ಕೊಡುವವರು ಉತ್ತರದವರೇ. ಹಾಗೆಯೇ ಮನೆಗೆ ಬೇರೆ ಬೇರೆ ಹೆಸರಿನಲ್ಲಿ ತಿನುಸು ತಂದು ಕೊಡುವವರೂ ಅವರೇ. ನಿಧನಿಧಾನವಾಗಿ ಯುಬರ್‌, ಓಲಾ ಟ್ಯಾಕ್ಸಿ, ಬೈಕ್‌ನವರೂ ಅವರೇ. ನಿಮ್ಮ ಮನೆ ಕಟ್ಟಲು ಮರದ ಕೆಲಸ, ಟೈಲ್ಸ್‌ ಕೆಲಸ, ವಿದ್ಯುತ್‌ ಕೆಲಸ, ಪೈಪುಗಳ ಅಳವಡಿಕೆ, ಬಣ್ಣ ಬಳಿಯುವ ಕೆಲಸ ಎಲ್ಲದಕ್ಕೂ ಅವರೇ ಸ್ವಾಮಿ.
    ಒಂದು ಕಾಲದಲ್ಲಿ ಮಹಾರಾಷ್ಟ್ರಾದ ಮುಂಬಯಿಯಿಂದ ಕನ್ನಡದವರನ್ನು ಓಡಿಸಿ ಎಂಬ ಹೋರಾಟ, ಆಮೇಲೆ ಬಿಹಾರದವರನ್ನು ಓಡಿಸಿ ಎಂದರು. ಇವರನ್ನು ಓಡಿಸಿದರೆ, ಅಲ್ಲಿ ಜನರಿಗೆ ಬದುಕಲು ಆಗದು! ಅಂತಹದೇ ಪರಿಸ್ಥಿತಿ ನಮಗೂ ಬರಲಿದೆ… ಬಂದಿದೆ! ಆಗಲಿ, ನಾನೂ ನಿಮ್ಮಂತೆಯೇ ಎಲ್ಲರೊಡನೆ ಕನ್ನಡದಲ್ಲೇ ಮಾತನಾಡಲು ಯತ್ನಿಸುವೆ. ಕೆಲವರು ಈಗಾಗಲೇ ಕನ್ನಡ ಕಲಿತಿದ್ದಾರೆ. ಕನ್ನಡವೂ ರಾಷ್ಟ್ರೀಯ ಭಾಷೆ ಎಂಬುದು ಅವರಿಗೂ ಸ್ವಲ್ಪ ಸ್ವಲ್ಪವೇ ತಿಳಿಯುತ್ತಿದೆ!

Leave a Reply

Your email address will not be published. Required fields are marked *