ಬಂಧುಮಿತ್ರರ, ಕುಟುಂಬಗಳ ಮದುವೆ ಆಮಂತ್ರಣ ಪತ್ರಿಕೆಗಳು ಇಂಗ್ಲಿಷ್, ಕನ್ನಡ ಎರಡರಲ್ಲೂ ಮುದ್ರಿತವಾಗಿರುತ್ತವೆ. ಇತ್ತೀಚೆಗಂತೂ ಅವುಗಳಲ್ಲಿ ಕನ್ನಡ ಮಾಯವಾಗಿ ಇಂಗ್ಲಿಷ್ ಮಾತ್ರ ಇರುತ್ತದೆ. ನೋಡಿದಾಗ ಇರಿಸುಮುರಿಸಾಗುತ್ತದೆ.

ನನಗಂತೂ ಮೋಡಿಮೋಡಿಯಾಗಿರೋ ಇಂಗ್ಲಿಷ್ ಫಾಂಟ್ ನಲ್ಲಿ ಇರುವ ಆಹ್ವಾನ ಪತ್ರಿಕೆ ಓದುವುದು ತುಸುಕಷ್ಟ. ಏಕೆಂದರೆ ಕನ್ನಡ ಮಾಧ್ಯಮದಲ್ಲಿ ಓದಿ ಕಷ್ಟಪಟ್ಟು ಇಂಗ್ಲಿಷ್ ಪರೀಕ್ಷೆ ಉತ್ತೀರ್ಣನಾಗಿದ್ದೇನೆ. ಇರಲಿ ಅಂದುಕೊಂಡು ಕಲ್ಯಾಣ ಮಂಟಪಗಳಿಗೆ ಹೋದರೆ  ಪ್ರವೇಶ ದ್ವಾರದಲ್ಲಿ ” Tanu weds Manu” ಅಂತ್ಲೋ, ‘Manu weds Tanu ಅಂತ್ಲೋ ಇರುತ್ತದೆ.  ಇಲ್ಲಿಯೂ ಇಂಗ್ಲಿಷ್ ಇದೆ.

ಒಳಗೆ ಹೋದರೆ ಆರತಕ್ಷತೆನಲ್ಲಿ ಭಾವಿ ವರ,  ತನ್ನ ಭಾವಿ ವಧುವಿಗೆ ನನ್ನ “He is my friend Kumara raitha ಅಂತ ಹೇಳಿ ಪರಿಚಯ ಮಾಡಿಸುತ್ತಾನೆ. ನಾಣನು, ಅವನೂ ಹೊರಗಡೆ ಇದ್ದಿದ್ರೆ “ಲೇ ಕನ್ನಡ ಮಾತಾಡ್ಲಾ ಅನ್ಬಹುದಿತ್ತು” ಮದುವೆ ಮಂಟಪ. ಪೋಟೋ, ವಿಡಿಯೋಗೆ ಹಲ್ಲು ಕಿರಿದು ಮುಚ್ಚಿಕೊಂಡು ಊಟಕ್ಕೆ ಹೋಗುತ್ತೇನೆ. ಊಟ ಮಾಡಿದ ಬಳಿಕ ಕೈಗೆ ಇಂಗ್ಲಿಷಿನಲ್ಲಿ ಪ್ರಿಂಟಾಗಿರುವ ಪ್ಲಾಸ್ಟಿಕ್ ಕವರ್ ಇಳಗೆ ತಾಂಬೂಲ ಕೊಡುತ್ತಾರೆ. ದುಸರಾ ಮಾತನಾಡದೇ ತೆಗೆದುಕೊಂಡು ಬರುತ್ತೇನೆ

ಅಂಗಡಿಗೆ ಹೋಗುತ್ತೇನೆ.  ಮಾಲೀಕ ಕನ್ನಡ ಬುಟ್ಟು ಬೇರೆ ಭಾಷೆನಾಗೆ ಮಾತನಾಡ್ತಾನೆ, ನನಗೆ ಆತನ ಭಾಷೆ ಗೊತ್ತಿಲ್ಲ !  ಆಗ ಆತ ವಿಧಿಯಿಲ್ಲದೇ ತನಗೆ ಬರುವ ಚೂರುಪಾರು ಕನ್ನಡದಲ್ಲೇ ಮಾತನಾಡಬೇಕು. ಏಕೆ ಅಂದರೆ ವ್ಯಾಪಾರವಾಗಬೇಕಲ್ಲ !! ಖರೀದಿ ಆಯಿತು. ರಶೀದಿ ಕೊಡುತ್ತಾನೆ ನೋಡಿದರೆ ಇಂಗ್ಲಿಷ್ ನಲ್ಲಿರುತ್ತದೆ. ದುಡ್ಡುಕೊಟ್ಟು ಬರ್ತೀನಿ.

ಊರೊಟ್ಟಿನ ಕಾರ್ಯಕ್ಕೆ ಚಂದಾ ಸಂಗ್ರಹಣೆ ಆಗುತ್ತಿರುತ್ತದೆ. ಹಾಗೆ ಪೇಟೆಬೀದಿಗೂ ಹೋಗ್ತೀವಿ. ಅಲ್ಲಿ ಕನ್ನಡ ಮಾತನಾಡಲು ಬಾರದ, ಕನ್ನಡದವರನ್ನು ಕೆಲಸದಲ್ಲಿ  ನೇಮಕ ಮಾಡಿಕೊಳ್ಳದ, ರಶೀದಿನಾ ಕನ್ನಡದಲ್ಲಿ ಪ್ರಿಂಟ್ ಮಾಡ್ದೆ ಇರೋ ಅಂಗಡಿಗಳಿಗೂ ಹೋಗ್ತೀವೆ, ಚಂದಾ ಸಂಗ್ರಹಣೆ ಮಾಡುತ್ತೇವೆ.

ಮಗುವನ್ನು ಎಲ್.ಕೆಜಿ ಅಥವಾ ಯು.ಕೆಜಿಗೆ ಸೇರಿಸಲು ಹೋಗುತ್ತೇವೆ. ಅಲ್ಲಿನ ಕಚೇರಿಯಲ್ಲಿ ಮುಕ್ಕಾಲು ಇಂಗ್ಕಿಷ್, ಕಾಲು ಭಾಗ ಕನ್ನಡದಲ್ಲಿ ಮಾತನಾಡುತ್ತಾರೆ. “ಪೂರ್ಣ ಕನ್ನಡದಲ್ಲಿ ಮಾತನಾಡಿ” ಎಂದು ಹೇಳುವುದರ ಬದಲು ನಮ್ಮ ಮಗುವಿಗೆ ಅವರ ಶಾಲೆಯಲ್ಲಿ ಪ್ರವೇಶಾತಿ ದೊರಕುತ್ತಿರುವುದೇ ಪೂರ್ವಜನ್ಮದ ಪುಣ್ಯ ಎನ್ನುವಂತೆ ಹಿರಿಹಿರಿ ಹಿಗ್ಗುತ್ತೇವೆ.

ಹೀಗೆ ಕನ್ನಡನಾಡಿನಲ್ಲಿ ಕನ್ನಡ ಬಳಸದ ಅನೇಕ ಸಂದರ್ಭಗಳು ಪದೇಪದೇ ಎದುರಾಗುತ್ತಿರುತ್ತದೆ. ಇಂಥ ಸಂದರ್ಭದಲ್ಲಿ ನಾವು ಅವರೊಂದಿಗೆ ಮಾಡುವ ಮಾತುಕತೆ, ವ್ಯಾಪಾರ, ವಹಿವಾಟು ನಿರಾಕರಿಸಿದ್ದೀವಾ ? ಇನ್ನೊಂದು ಮುಖ್ಯವಾದ ಪ್ರಶ್ನೆ, ನಾವೆಷ್ಟು ಜನ ನಮ್ಮ ನಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲೇ ಓದಿಸ್ತಿದ್ದೀವಿ ? ಅವ್ರು ಮಮ್ಮಿ, ಡ್ಯಾಡಿ ಅಂದಾಗ ಗದರಿ ಅಮ್ಮ, ಅಪ್ಪ ಅಂತೇಳೋ ಅಂತ ಗದರಿದ್ದೀವಿ ? ಶಾಲೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಇಂಗ್ಲಿಷ್ನಲ್ಲಿ ನಿರೂಪಣೆ, ಕಾರ್ಯಕ್ರಮ ಇದ್ರೆ ನಿಮ್ ಶಾಲೆಯಲ್ಲಿ ಕನ್ನಡ ಬಳಸೋದಿಲ್ಲ, ಕನ್ನಡ ಮಾತಾಡಿದರೆ ಮಕ್ಕಳಿಗೆ ದಂಡ ಹಾಕ್ತೀರಿ, ಟಿಸಿ ಕೊಡಿ, ಬೇರೆ ಸ್ಕೂಲಿಗೆ ಸೇರಿಸ್ತೀವಿ ಅಂದಿದ್ದೀವಿ ?

ಮಕ್ಕಳು ಮನೆಗೆ ಬಂದ್ರೆ ಹೋಮ್ ವರ್ಕ್ ಮಾಡು ಅಂತ ಪೀಡಿಸ್ತೀವಿ, ಎಷ್ಟು ಮಂದಿ ಕನ್ನಡ ಕಾಮಿಕ್ಸ್ ನೋಡು, ಕನ್ನಡದ ಸಣ್ಣಸಣ್ಣ ಕಥೆ ಓದು, ಒಳ್ಳೆಯ ಕನ್ನಡ ಸಿನೆಮಾ ನೋಡು ಅಂದಿದ್ದೀವಿ ? ನನ್ನ ಪೀಳಿಗೆಯ ಹೆಚ್ಚಿನವರು  ನಮ್ ಕುಟುಂಬ ಸದಸ್ಯರೊಂದಿಗೆ ಕನ್ನಡದಲ್ಲೇ ಮಾತನಾಡುತ್ತಿದ್ದೇವೆ.  ಇಂಗ್ಲಿಷ್ ಕಲಿತ ಮಕ್ಕಳು ಮುಂದಿನ ಹಂತಗಳಲ್ಲಿ ಅವರ ಮಕ್ಕಳ ಜೊತೆ ಇಂಗ್ಲಿಷ್ ನಲ್ಲಿಯೇ ಮಾತನಾಡುವುದಿಲ್ಲ ಅಂತ ಗ್ಯಾರಂಟಿ ಏನು, ಈಗಾಗಲೇ ಇಂಗ್ಲಿಷ್ ಕಲಿತ ಎರಡನೇ, ಮೂರನೇ ತಲೆಮಾರುಗಳ ಬಹುತೇಕ ಕುಟುಂಬಗಳಲ್ಲಿ ಮನೆಯ ದೈನಂದಿನ ಭಾಷೆ ಇಂಗ್ಲಿಷ್ ಆಗಿದೆ !!!

ಹೀಗೆಲ್ಲ ಮಾಡುತ್ತಾ ಮುಂದಕ್ಕೆ ಹೋಗುತ್ತಾ ಇದ್ದರೆ ಇದ್ರೆ ಕನ್ನಡ ಉಳಿಯುತ್ತಾ, ಅದರ ಕಂಪು ಮುಂದಿನ ಪೀಳಿಗೆಗಳಿಗೂ ಇರುತ್ತಾ ಎನ್ನುವುದೇ ಪ್ರಶ್ನೆ ?

Similar Posts

Leave a Reply

Your email address will not be published. Required fields are marked *