ತಾಯಿಯನ್ನು ಬಲಾತ್ಕಾರ ಮಾಡಲು ಯತ್ನಿಸಿ; ಕೃಷಿಕ ತಂದೆಯನ್ನು ಕೊಂದು ಊರು ಬಿಡುವಂತೆ ಮಾಡಿದವರ ವಿರುದ್ಧ ಬಸ್ ಚಾಲಕ ಚಿನ್ನಪ್ಪ ಸೇಡು ತೀರಿಸಿಕೊಳ್ಳಲು ತಹತಹಿಸುವ ಕಥೆಯನ್ನು “ಮುಯ್ಯಿ” ಸಿನೆಮಾ ಹೇಳುತ್ತದೆ. ಆದರೆ ದುರುಳರ ಪರಿಚಯ ಇವನಿಗಿಲ್ಲ. “ಬೇರೆಯವರಿಗೆಂದೂ ಕೆಡುಕು ಬಯಸಬಾರದು ಎನ್ನುವ ತಾಯಿ ನಡೆದ ದುರ್ಘಟನೆ, ಕೊಲೆಗಾರ, ನ್ಯಾಯಾಲಯದ ಶಿಕ್ಷೆಯಿಂದ ತಪ್ಪಿಸಿಕೊಂಡ ವಿವರವನ್ನು ಮಗನಿಗೆ ಹೇಳಿ ಅನಾರೋಗ್ಯದಿಂದ ಮೃತಳಾಗುತ್ತಾಳೆ. ಕೆಲವೇ ದಿನಗಳಲ್ಲಿ ಕೊಲೆಗಾರನ ಕುಟುಂಬದ ಮದುವೆ ದಿಬ್ಬಣವನ್ನು ಭಾರಿ ಕಡಿದಾದ ಘಾಟಿ ರಸ್ತೆ ಮೂಲಕ ಕರೆದೊಯ್ಯುವ ಕಾರ್ಯ ಇವನಿಗೇ ಬರುತ್ತದೆ.
ವಿಮರ್ಶಕ – ಕಥೆಗಾರ ಎಲ್.ಎಸ್. ಶೇಷಗಿರಿರಾವ್ ಅವರ ಸಣ್ಣಕಥೆ “ ಮುಯ್ಯಿ”ಯನ್ನು ನಿರ್ದೇಶಕ ಎನ್. ಲಕ್ಷ್ಮೀನಾರಾಯಣ್ ಚಿತ್ರಕಥೆ ಬರೆದು ಸಿನಿಮಾವಾಗಿ ರೂಪಾಂತರಿಸಿದ್ದಾರೆ. ಸಣ್ಣಸಣ್ಣ ವಿವರಗಳನ್ನೂ ತಂದಿರುವ ಇವರು ಪಾತ್ರಗಳ ವ್ಯಕ್ತಿತ್ವಗಳನ್ನು ಪರಿಪರಿಯಾಗಿ ಕಟ್ಟಿಕೊಡುತ್ತಾರೆ. ಸ್ಥೂಲ ಚಿತ್ರಣವಿಲ್ಲದೇ ಹಾಗೇ ಸರಿದು ಹೋಗುವ ಪಾತ್ರಗಳೇ ಇಲ್ಲ.
ಕಥನವನ್ನು ಬಹು ವಿವರವಾಗಿ ಕಟ್ಟಿಕೊಡುವ ಮಾರ್ಗವನ್ನು ಆಯ್ಕೆಮಾಡಿಕೊಂಡ ಕಾರಣಕ್ಕೆ ಸಿನಿಮಾ ಮಂದಗತಿಯಲ್ಲಿ ಸಾಗುತ್ತದೆ. ಬಹುಪಾಲು ಕಥನ, ಖಾಸಗಿ ಬಸ್ ಕಂಪನಿ ಮಾಲೀಕರ ಕಚೇರಿ, ಬಸ್ಸಿನಲ್ಲಿಯೇ ಸಾಗುತ್ತದೆ. ಆದರೆ ಇದು ಪ್ರೇಕ್ಷಕರಿಗೆ ಏಕತಾನತೆಯ ನೀರಸ ಅನುಭವ ನೀಡುವುದಿಲ್ಲ. ನೋಡಿಸಿಕೊಂಡು ಹೋಗುತ್ತದೆ.
ಚಿನ್ನಪ್ಪ ಪ್ರಾಮಾಣಿಕ ಚಾಲಕ. ದುಡುಕಿ, ಅತೀವೇಗವಾಗಿ ಬಸ್ ಚಾಲನೆ ಮಾಡುವವನ್ನಲ್ಲ. ಪ್ರಯಾಣಿಕರ ಕ್ಷೇಮದ ಜೊತೆಗೆ ರಸ್ತೆಯಲ್ಲಿ ಓಡಾಡುವವರ ಸುರಕ್ಷತೆ ಬಗ್ಗೆಯೂ ತೀವ್ರಗಮನ. ಬಸ್ ಅನ್ನು ತಾಂತ್ರಿಕವಾಗಿ ಸದಾ ಸುಸ್ಥಿತಿಯಲ್ಲಿ ಇಟ್ಟುಕೊಂಡಿದ್ದಾನೆ. ಇದರ ಬಗ್ಗೆ ಖುದ್ದು ಗಮನ ಹರಿಸುತ್ತಾನೆ. ಮುಗ್ಧನಂತೆ ಕಂಡರೂ ಅಪ್ರಮಾಣಿಕನಾದ, ಹೆಸರಿಗೆ ಆರೋಗ್ಯಸ್ವಾಮಿಯಾದರೂ ಅನಾರೋಗ್ಯನಾಗಿರುವ ಕಂಡಕ್ಟರ್. ಈತನಿಗೆ ಬೆಂಬಲ ಕೊಡುವ ಭ್ರಷ್ಟ ಅಕೌಂಟೆಂಟ್. ದಕ್ಷ, ಪ್ರಾಮಾಣಿಕರನ್ನು ಪ್ರೋತ್ಸಾಹಿಸುವ ಕಂಪನಿ ಮಾಲೀಕ. ಪತಿಯನ್ನು ಕಳೆದುಕೊಂಡಿದ್ದರೂ ಸೇಡಿನ ಬಗ್ಗೆ ಯೋಚಿಸದೇ “ಅವರವರ ಕರ್ಮ ಅವರವರನ್ನು ತಿನ್ನುತ್ತದೆ” ಎಂದು ಯೋಚಿಸುವ ನಿಂಗಮ್ಮ.


ದಿಬ್ಬಣದ ಬಸ್ಸಿನಲ್ಲಿ ಮಗಳಿಗೆ ವರನನ್ನು ಹುಡುಕುವ ಪೋಷಕರು. ತಾನೇ ಮುಂದಾಗಿ ಯುವಕನನ್ನು ಪ್ರೇಮ ಗಳಿಸಲು ಮುಂದಾಗುವ ಯುವತಿ. ಪ್ರೇಮಿಯನ್ನು ಅರಸುವ ಯುವಕ. ಇಸ್ಪೀಟ್ ಆಡುವ ಗ್ಯಾಂಗ್, ಅಡಿಗಡಿಗೆ ಜ್ಯೋತಿಷ್ಯ ಕೇಳುವ ವ್ಯಕ್ತಿ. ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಾಗಿದ್ದ ನಿವೃತ್ತ ಮೇಷ್ಟ್ರುಗಳು ಹೀಗೆ ಪರಿಪರಿಯಾದ ಪಾತ್ರಗಳಿಲ್ಲಿವೆ.
ಮದುವೆ ದಿಬ್ಬಣ ಹೊರಡುವ ಗ್ರಾಮಕ್ಕೆ ಹೋದ ನಂತರವೇ ಚಿನ್ನಪ್ಪನಿಗೆ ಕೊಲೆಗಾರ ನಂಜೇಗೌಡ, ಈತನ ತಮ್ಮ ಮಾದೇಗೌಡ ಮತ್ತಿವರ ಕುಟುಂಬ ಸದಸ್ಯರ ಪರಿಚಯ ಆಗುತ್ತದೆ. ಆದರೆ ಅವರ್ಯಾರಿಗೂ ಈತನ ಹಿನ್ನೆಲೆ ಗೊತ್ತಿಲ್ಲ. ದಿಬ್ಬಣ ಹೊರಡುವ ಮುನ್ನ ಉಪಹಾರ ಸೇವಿಸಲು ಕರೆದರೂ ಈತ ಹೋಗುವುದಿಲ್ಲ. ಕೊಲೆಗಾರನ ಮನೆಯಲ್ಲಿ ಒಂದು ತೊಟ್ಟು ನೀರೂ ಕುಡಿಯಬಾರದೆಂಬ ಹಠ. ಮನಸು ಸೇಡಿನತ್ತಲೇ ಕೇಂದ್ರೀಕೃತ. ಬೆಟ್ಟದಿಂದ ಕೆಳಗೆ ಬಸ್ ಬೀಳಿಸಿ ಎಲ್ಲರನ್ನೂ ಮುಗಿಸಿಬಿಡಬೇಕು. ಇದರಲ್ಲಿ ತನ್ನ ಪ್ರಾಣ ಹೋಗುತ್ತದೆ. ಆದರೆ ಸೇಡು ಮುಖ್ಯ ಎಂಬ ಯೋಜನೆ.

ನೋಡಿದರೆ ಎದೆ ಜಲ್ಲೆನ್ನಿಸುವ ಆಳವಾದ ಕಮರಿಗಳಿರುವ ಘಾಟಿ ರಸ್ತೆಯಲ್ಲಿ ಬಸ್ ಚಲಿಸುವುದನ್ನು ಲಾಂಗ್, ಮಿಡ್ ಶಾಟ್ ಗಳ ಮೂಲಕ ಚಿತ್ರಿಸಿದ್ದಾರೆ. ಬೆಟ್ಟದ ಎತ್ತರೆತ್ತರಕ್ಕೆ ಬಸ್ ಹೋದಂತೆ ಕಥೆ ತೀವ್ರತೆ ಪಡೆದುಕೊಳ್ಳುತ್ತಾ ಹೋಗುತ್ತದೆ. ಕಡಿದಾದ ತಿರುವಿನಲ್ಲಿ ಬಸ್ ತಿರುಗುತ್ತಿದೆ. ಸಹೋದರರಾದ ನಂಜೇಗೌಡ – ಮಾದೇಗೌಡ ಚಾಲಕನ ಎಡಮಗ್ಗುಲಿನ ಸೀಟಿನಲ್ಲಿಯೇ ಕುಳಿತಿದ್ದಾರೆ. ಇವರಿಗೆ ತನ್ನ ಹಿನ್ನೆಲೆ ಹೇಳಿಕೊಂಡಂತೆ, ಅವರೆಲ್ಲ ಸೇರಿ ತನ್ನ ಮೇಲೆ ಹಲ್ಲೆ ಮಾಡಿದಂತೆ ಕಲ್ಪಿಸಿಕೊಂಡು ಬೆವರುತ್ತಾನೆ.

ಬೆಟ್ಟದ ಎತ್ತರೆರಕ್ಕೆ ಬಸ್ ಏರಿದಂತೆಲ್ಲ ಚಿನ್ನಪ್ಪನ ಸಂಕಲ್ಪದ ಯೋಚನೆಯೂ ಕಠಿಣವಾಗತೊಡಗಿದೆ. ಅದು ಅವನ ಮುಖದಲ್ಲಿ ಪ್ರತಿಬಿಂಬವಾಗತೊಡಗುತ್ತದೆ. ಆಗವನಿಗೆ ಬಸ್ಸಿಗೆ ಆಕಸ್ಮಿಕವಾಗಿ ಏರಿದ ಮಗಳನ್ನು ಕಳೆದುಕೊಂಡು ಆಕೆಯ ಮಕ್ಕಳಿಗೆ ತಾನೇ ಆಸರೆಯಾದ ಅಜ್ಜಿ, ದಿಬ್ಬಣದಲ್ಲಿದ್ದವರ ಪುಟ್ಟಪುಟ್ಟ ಮಕ್ಕಳ ಯೋಚನೆಯಾಗತೊಡಗುತ್ತದೆ. ಯಾರೋ ಮಾಡಿದ ತಪ್ಪಿಗೆ ಅಮಾಯಕರೇಕೆ ಬಲಿಯಾಗಬೇಕು ಎಂಬ ತಾಕಲಾಟ ಶುರುವಾಗುತ್ತದೆ. ಇದ್ದಕ್ಕಿದ್ದ ಹಾಗೆ ಆತ ಕಲ್ಪಿಸಿರದ ಘಟನೆಯೊಂದು ನಡೆಯುತ್ತದೆ. ಆತ ಸದಾ ಸುಸ್ಥಿತಿಯಲ್ಲಿಟ್ಟುಕೊಂಡಿರುವ ಬಸ್ಸಿನ ಬ್ರೇಕ್ ಹಠಾತ್ ವಿಫಲವಾಗುತ್ತದೆ.
ಸೇಡು ತೀರಿಸಿಕೊಳ್ಳಬೇಕೆಂದು ಬಯಸಿದವನಿಗೆ ಅವಕಾಶ ತಾನಾಗಿ ಬಂದರೂ ನೇರವೇರಿಸುವುದಿಲ್ಲ. ಆಕಸ್ಮಿಕವಾಗಿ ಬಸ್ ಬ್ರೇಕ್ ವಿಫಲವಾದಾಗ ಹೊರ ಜಿಗಿದು ತನ್ನ ಪ್ರಾಣ ಉಳಿಸಿಕೊಳ್ಳಬಹುದಾಗಿದ್ದರೂ ಮುಂದಾಗುವುದಿಲ್ಲ. ತನ್ನ ಜೀವವನ್ನೇ ಒತ್ತೆಯಾಗಿಟ್ಟು ಎಲ್ಲರನ್ನೂ ರಕ್ಷಿಸುತ್ತಾನೆ. ಈ ಯತ್ನದಲ್ಲಿ ತೀವ್ರ ಗಾಯಗಳಾಗಿ ಸಾವಿನಂಚಿಗೆ ಹೋಗಿ ಬರುತ್ತಾನೆ. ಒಳಿತು – ಕೆಡುಕಿನ ಸಂಘರ್ಷದಲ್ಲಿ ಒಳಿತೇ ಜಯಶಾಲಿಯಾಗುವುದನ್ನು ಹೇಳಲಾಗಿದೆ. ಮಾಡಿದ ಅಪಕಾರಕ್ಕೆ ಸೇಡು ತೀರಿಸಿಕೊಳ್ಳುವುದೇ ದೊಡ್ಡ ಸಂಗತಿಯಲ್ಲ ಎಂಬುದನ್ನು ಪ್ರತಿಪಾದಿಸಿದ್ದಾರೆ.
ಚಾಲಕ ಚಿನ್ನಪ್ಪನ ಮನಸ್ಸಿನಲ್ಲಾಗುವ ಸಂಘರ್ಷಗಳನ್ನು ತಮ್ಮ ಮುಖಾಭಾವಗಳಿಂದ ಲೋಕೇಶ್ ಸಮರ್ಥವಾಗಿ ಬಿಂಬಿಸಿದ್ದಾರೆ. ಬಸ್ ಬ್ರೇಕ್ ವಿಫಲವಾದಾಗ ಚಿನ್ನಪ್ಪನಿಗಾಗುವ ದಿಗ್ಬ್ರಮೆಯನ್ನು ವ್ಯಕ್ತಪಡಿಸುವ ಪರಿ ಅನನ್ಯ. ನಿಂಗಮ್ಮನಾಗಿ ಭಾರ್ಗವಿ ನಾರಾಯಣ್, ನಂಜೇಗೌಡನಾಗಿ ಮುಖ್ಯಮಂತ್ರಿ ಚಂದ್ರು ಅಭಿನಯ ಅತ್ಯುತ್ತಮ. ಉಳಿದ ಪೋಷಕ ಪಾತ್ರಗಳನ್ನು ನಿರ್ವಹಿಸಿದವರು ಕೂಡ ಉತ್ತಮವಾಗಿ ನಟಿಸಿದ್ದಾರೆ.
ಸಾಹಿತಿ ನವರತ್ನರಾಮ್ ಅವರು ಮಂಡ್ಯ, ಹಾಸನ ಪ್ರದೇಶಿಕ ಆಡುಭಾಷೆಯಲ್ಲಿ ಸಂಭಾಷಣೆ ಬರೆದಿದ್ದಾರೆ. ಬಹುತೇಕ ಕೊಠಡಿ, ಬಸ್ ನಲ್ಲಿ ನಡೆಯುವ ಕಥೆಗೆ ಕ್ಯಾಮೆರಾ ಹಿಡಿದಿರುವ ಎನ್.ಜಿ. ರಾವ್ ಅವರು ಮಾಡಿದ ನೆರಳು – ಬೆಳಕಿನ ಸಂಯೋಜನೆ ಉತ್ತಮವಾಗಿದೆ. ಬಸ್ಸಿನಲ್ಲಿ ಚಿತ್ರೀಕರಣ ನಡೆಸಲು ಇವರಿಗೆ ವಿಶೇಷ ಉಪಕರಣದ ಮೂಲಕ ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋ ಅಂಡ್ ಲ್ಯಾಬೋರೇಟರಿ ತಂತ್ರಜ್ಞರಾದ ಎಸ್.ಆರ್ ಕನ್ನಯ್ಯನಾಯ್ಡು, ಐ ಎ.ಎನ್ ಶಾಸ್ತ್ರಿ ನೆರವು ನೀಡಿದ್ದಾರೆ.
ಪಿ. ಭಕ್ತವತ್ಸಲಂ ಅವರ ಸಂಕಲನವಿದೆ. ಆದರೆ ಕಥೆಯನ್ನು ಹೇಳಲು ನಿರ್ದೇಶಕ ಬಹು ವಿವರ ಮಾರ್ಗ ಆಯ್ಕೆ ಮಾಡಿಕೊಂಡ ಇವರ ಕತ್ತರಿಗೆ ಅವಕಾಶವಾಗಿಲ್ಲ. ಬಸ್ ಬರುವುದನ್ನು ದೀರ್ಘವಾಗಿ ತೋರಿಸಿದ್ದಾರೆ. ಕಂಡಕ್ಟರ್ ಆರೋಗ್ಯಸ್ವಾಮಿಯ ಹಾಸ್ಯದ ದೃಶ್ಯಗಳು ಚಿತ್ರಕ್ಕೇನೂ ಪೂರಕವಾಗಿಲ್ಲ. ಇಂಥ ಅನಗತ್ಯೆ ಎನಿಸುವ ದೃಶ್ಯಗಳು ಸಾಕಷ್ಟಿವೆ. ಇವೆಲ್ಲವುಗಳಿಗೂ ಕತ್ತರಿಯಾಕುವ ಅವಶ್ಯಕತೆ ಇತ್ತು. ಹೀಗೆ ಮಾಡಿದ್ದರೆ ಚಿತ್ರ ಒಂದಷ್ಟು ವೇಗಗಳಿಸಲು ಸಾಧ್ಯವಿತ್ತು. ಸಮಾಯಾವಧಿಯನ್ನೂ ಕಡಿಮೆ ಮಾಡಬಹುದಾಗಿತ್ತು. ಆದರೆ ಎನ್. ಲಕ್ಷ್ಮೀನಾರಾಯಣ್ ಇದಕ್ಕೆ ಅವಕಾಶವನ್ನೇ ನೀಡಿಲ್ಲ.
ವಿಜಯಭಾಸ್ಕರ್ ಅವರು ನೀಡಿದ ಹಿನ್ನೆಲೆ ಸಂಗೀತವಿದೆ. ಕೆಲವೆಡೆ ಸಹಜವಾದ ಸೌಂಡ್ ಬಳಸಲಾಗಿದೆ. ಉದಾಹರಣೆಗೆ ಲಾಂಗ್ – ಮಿಡ್ ಶಾಟ್ ನಲ್ಲಿ ಬಸ್ ಬರುವುದನ್ನು ತೋರಿಸುವಾಗ ಅದರ ಸಹಜವಾದ ಸದ್ದನ್ನೇ ಬಳಸಲಾಗಿದೆ. ಬಸ್ಸಿನೊಳಗೂ ಮದುವೆ ದಿಬ್ಬಣದ ಸಂದರ್ಭದಲ್ಲಿ  ಹಳೇ ಸಿನೆಮಾಗಳ ತುಣುಕು ಹಾಡುಗಳೇ ಹಿನ್ನೆಲೆಯಾಗಿವೆ. ಕಲಾಜ್ಯೋತಿ ಬ್ಯಾನರ್ ಮುಖಾಂತರ ಕೆ,ಎಸ್. ಜಗನ್ನಾಥ್ ನಿರ್ಮಾಣ ಮಾಡಿರುವ ಎರಡು ತಾಸುಗಳ ಈ ಸಿನೆಮಾ 1979ರಲ್ಲಿ ತೆರೆಕಂಡಿದೆ.

ಸರಣಿ: ರಾಜ್ಯೋತ್ಸವ ಸಂದರ್ಭದಲ್ಲಿ ಪ್ರಮುಖ ನಿರ್ದೇಶಕರ ಕನ್ನಡ ಚಿತ್ರಗಳನ್ನು ವಿಮರ್ಶಿಸುವ ಸರಣಿಯಲ್ಲಿ ಇದು ಮೂರನೇಯದು. ಈ ಮೊದಲಿನ ಎರಡು ಚಿತ್ರಗಳಾದ ನಾಂದಿ, ಉಯ್ಯಾಲೆಯೂ ಇದೇ ನಿರ್ದೇಶಕರದ್ದಾಗಿವೆ.

Similar Posts

Leave a Reply

Your email address will not be published. Required fields are marked *