ಅಬಚೂರಿನ ಪೋಸ್ಟಾಫೀಸು ಸಿನೆಮಾದಲ್ಲಿ ನಿರ್ದೇಶಕ ಎನ್. ಲಕ್ಷ್ಮೀನಾರಾಯಣ್ ಅವರು ಸ್ಥಳೀಯ ಜನ – ಪರಿಸರ – ವ್ಯಕ್ತಿತ್ವಗಳನ್ನು ಪರಿಪರಿಯಾಗಿ ಅನಾವರಣ ಮಾಡುವ ರೀತಿಯೇ ಅನನ್ಯ. ಯುಗಾದಿಗೆ ಬರೆದ ಪತ್ರ ಅಂಚೆಯ ಮೂಲಕ ದೀಪಾವಳಿಗೆ ತಲುಪುವ ಕಾಫಿ ಬೆಳೆಯುವ ಮಲೆನಾಡಿನ ಪುಟ್ಟಗ್ರಾಮಕ್ಕೆ ಪೋಸ್ಟಾಫೀಸು ಬಂದಿದ್ದೇ ಹೊಸಗಾಳಿ ಬೀಸಿದ ಹಾಗೆ. ಇದು ಅಲ್ಲಿಗೆ ಆಧುನಿಕತೆಯ ರೂಪವೂ ಹೌದು.
ಇದು ಮಾಡುವ ಬೇರೆಬೇರೆ ಪರಿಣಾಮಗಳನ್ನು ಸಿನೆಮಾ ಹೇಳುತ್ತಾ ಹೋಗುತ್ತದೆ. ವ್ಯಂಗ್ಯವೆಂದರೆ ಆಧುನಿಕತೆಯ ಸಂವಹನದ ಸಂಕೇತವೂ ಆದ ಪೋಸ್ಟಾಫೀಸು ಅಲ್ಲಿಯೇ ಉಳಿಯಲು ಅಂಧಶ್ರದ್ಧೆ ನೆರವಾಗುವುದು. ಹಳ್ಳಿಯಲ್ಲಿ ಇರುವವರ ವ್ಯಕ್ತಿತ್ವಗಳ ಜೊತೆಗೆ ಪೇಟೆಗೆ ಹೋಗಿ ತಳಕು – ಬಳಕು ಕಲಿತವರ ಮುಖಗಳನ್ನೂ ಅನಾವರಣ ಮಾಡುತ್ತಾ ಹೋಗುತ್ತದೆ. ಇಲ್ಲಿ ಮುಗ್ಧರಂತೆ ತೋರುವವರು ಆಂತರ್ಯದಲ್ಲಿ ಗಟ್ಟಿಗರೂ ಆಗಿರುವುದನ್ನು ಕಥೆ ಹೇಳುತ್ತಾ ಹೋಗುತ್ತದೆ.
ನಿರ್ದೇಶಕ ಎನ್. ಲಕ್ಷ್ಮೀನಾರಾಯಣ್ ಕಥೆ ಕಟ್ಟುತ್ತಾ ಹೋಗುವ ಪರಿಯೇ ಗಮನಾರ್ಹ. ಇದರಲ್ಲಿ ಅವರದು ಸಾವಧಾನ – ಸಾವಕಾಶದ ನಡೆ. ಪ್ರತಿಯೊಂದು ಪಾತ್ರದ ಗುಣಸ್ವಭಾವಗಳನ್ನು ಪರಿಪರಿಯಾಗಿ ಹೇಳುತ್ತಲೇ ಸಿನೆಮಾ ಬೆಳೆಯುತ್ತಾ ಹೋಗುತ್ತದೆ. ಅಬಚೂರಿನ ಕಾಫಿ ಎಸ್ಟೇಟ್ ರೈಟರ್ ಜೊತೆಗೆ ಪೋಸ್ಟ್ ಮಾಸ್ಟರ್ ಕೂಡ ಆಗಿರುವ ಬೋಪಣ್ಣ ಮಂದವೂ ಅಲ್ಲದ ಅತ್ತ ವೇಗವೂ ಅಲ್ಲದ ನಡಿಗೆಯಲ್ಲಿ ಬರುವುದರತ್ತಲೇ ಕ್ಯಾಮೆರಾ ಗಮನವೀಯುತ್ತದೆ. ಇಲ್ಲಿ ಯಾವುದೇ ಮಾತಿಲ್ಲ. ಆತ ನಡೆದು ಬಂದು ರಸ್ತೆಬದಿಯಲ್ಲಿರುವ ದೈವಗಳಿಗೆ ನಮಸ್ಕಾರ ಮಾಡುತ್ತಾನೆ. ಎಸ್ಟೇಟಿನಲ್ಲಿ ಕಾರ್ಮಿಕರ ಹಾಜರಾತಿಯನ್ನು ನಿಧಾನವಾಗಿ ಪರಿಶೀಲನೆ ಮಾಡುತ್ತಾನೆ. ಅಂದು ಯಾವ ಕೆಲಸ ಮಾಡಬೇಕೆಂಬುದನ್ನು ಮೇಸ್ತ್ರಿಗೆ ಸೂಚಿಸುತ್ತಾನೆ.
ಇಷ್ಟರ ಮೂಲಕವೇ ಆತನ ಮಧ್ಯಮಗತಿಯ ವ್ಯಕ್ತಿತ್ವದ ಚಿತ್ರಣವನ್ನು ಹೇಳಲಾಗಿದೆ. ಎಸ್ಟೇಟ್ ಓನರ್ ಸ್ವಭಾವವೂ ಹೀಗೆ ಅನಾವರಣಗೊಳ್ಳುತ್ತದೆ. ಆತನಿಗೆ ಪ್ರತಿಯೊಂದರ ಮೇಲೂ ಕುತೂಹಲದ ಕಣ್ಣು. ಬೋಪಣ್ಣನ ಮನೆಯ ವಿವರಗಳನ್ನೂ ವಿಚಾರಿಸುತ್ತಲೇ ಎಸ್ಟೇಟಿನ ಮರಗಳಿಂದ ಉದುರಿದ ಎಲೆಗಳಲ್ಲಿ ಮುಚ್ಚಿಹೋದ ಹೆಂಡದ ಬಾಟ್ಲಿಯನ್ನೂ ಪತ್ತೆಹಚ್ಚಬಲ್ಲ ಚಾಣಾಕ್ಷ. ಆತನಿಗೆ ಕಾರ್ಮಿಕರು ಪ್ರತಿವರ್ಷ ಉಚಿತವಾಗಿ ತೆಗೆದುಕೊಳ್ಳುವ ಕಂಬಳಿ ಬದಲು ಹಣವನ್ನೇ ಕೊಡಿ ಎನ್ನುವುದು ಸಹ ಮದ್ಯದ ವ್ಯಾಮೋಹದಿಂದಲೇ ಎನ್ನುವುದು ಗೊತ್ತು. ಆದರೂ ಏಕೆ ಎಂದು ಬೋಪಣ್ಣನನ್ನು ಕೇಳುವ ಮೂಲಕ ಇವನ ಉತ್ತರ ಹೇಗಿರುತ್ತದೆ ಎಂದು ತಿಳಿಯುವ ಆಸಕ್ತಿ.


ಎಸ್ಟೇಟ್ ಓನರ್ ಮಗ ರಮೇಶನ ವ್ಯಕ್ತಿತ್ವವನ್ನು ಆತ ಕಾರಿನಲ್ಲಿ ಕುಳಿತು ಮನೆಗೆ ಬರುವ ಹಾದಿಯೊಳಗೆ ಪರಿಚಯ ಮಾಡಿಕೊಡುತ್ತಾರೆ. ಆತನ ಉಡುಪು – ಧರಿಸಿದ ಕನ್ನಡಕ – ಕೇಳುವ ಸಂಗೀತ – ಪರಿಸರವನ್ನು ಸೆರೆಹಿಡಿಯಲು ಹಿಡಿದ ಆಧುನಿಕ ಕ್ಯಾಮೆರಾ- ಮಾತನಾಡುವ ಶೈಲಿ – ಸೇದುವ ಸಿಗರೇಟು ಇವೆಲ್ಲವುದರ ಮೂಲಕ ಆತ ಸಂಪೂರ್ಣ ಪಾಶ್ಚಾತ್ಯ ಗಾಳಿಗೆ ತೆರೆದುಕೊಂಡವನು ಎಂದು ತಿಳಿಯುತ್ತದೆ. ಆತ ಕೇವಲ ಪ್ಲೇಬಾಯ್ ಪತ್ರಿಕೆಯನ್ನಷ್ಟೇ ಓದುವವನಲ್ಲ; ಪ್ಲೇಬಾಯ್ ಕೂಡ ಹೌದು ಎನ್ನುವುದು ಆತ ತನ್ನ ಗೆಳತಿಯರೊಂದಿಗೆ ವರ್ತಿಸುವ ರೀತಿಯಿಂದಲೂ ಹೇಳುತ್ತಾರೆ. ಇವ್ಯಾವುದು ವಾಚ್ಯವಾಗದೇ ಇರುವುದು ಗಮನಾರ್ಹ.
ಕಥೆಯ ಬೆಳವಣಿಗೆಗೆ ಪೋಷಕರಾದ ಗ್ರಾಮ ನಿವಾಸಿಗಳ ಪರಿಚಯವನ್ನೂ ಸಿನೆಮಾ ಕಟ್ಟಿಕೊಡುತ್ತದೆ.ಯಾರಿಗೂ ಕೇಡು ಬಯಸದ ಶಾಲೆಯ ವೃದ್ಧಮೇಷ್ಟ್ರು, ಸದಾ ಕಿತಾಪತಿ ಮಾಡುವ ಓದು – ಬರೆಹ ಬಲ್ಲ ಸೋಮಾರಿ ರಂಗಪ್ಪ, ತನಗೇ ಮನಿಯಾರ್ಡರ್ ಮಾಡಿಕೊಂಡು ಬಂದ ಹಣವನ್ನು ಎಲ್ಲರಿಗೂ ತೋರಿಸುತ್ತಾ ಅವರೆಲ್ಲರಿಗೂ ಮದ್ಯ ಕೊಡಿಸುವಾತ, ಅನರಕ್ಷಸ್ಥ ಯುವಕ ಹೆರಿಗೆಗೆ ಹೋದ ತನ್ನ ಅನರಕ್ಷಸ್ಥ ಹೆಂಡತಿಗೆ “ ನಿಮ್ಮ ಹೆಂಡತಿಗೆ ಅಂತಾನೇ ಅಂತ ತಿಳಿದುಕೊಂಡು ಒಂದು ಕಾಗದ ಬರೆದುಕೊಡಿ” ಎನ್ನುವುದರಲ್ಲಿರುವ ಮುಗ್ಥತೆ. ಇದರ ಮೂಲಕ ಅಕ್ಷರಗಳು ಗೊತ್ತಿರಬೇಕು ಎಂದು ತಿಳಿಸುವ ರೀತಿ ಗಮನ ಸೆಳೆಯುತ್ತದೆ.

ಕಥಗೆ ಬೇರೆಬೇರೆ ತಿರುವುಗಳನ್ನು ಕೊಡುವ ಪಾತ್ರಗಳೂ ಇಲ್ಲಿವೆ. ತಾನೇ ಹಣ ಖರ್ಚು ಮಾಡಿ ಮಗಳನ್ನು ಬೋಪಣ್ಣನಿಗೆ ಮದುವೆ ಮಾಡಿಕೊಡುವ ಅತ್ತೆ, ಇವರಿಬ್ಬರೂ ಅನೋನ್ಯವಾಗಿರಲು, ದೈಹಿಕವಾಗಿ ಮಿಲನವಾಗಲು ಅಡಿಗಡಿಗೆ ಅಡ್ಡಿಯಾಗಿ ದುಖಸ್ವಪ್ನವಾಗುವುದನ್ನು ಬಹು ವಿವರವಾಗಿಯೇ ಹೇಳಲಾಗಿದೆ. ಈ ಪಾತ್ರದ ದುಷ್ಟತೆ ಹೇಗಿದೆಯೆಂದರೆ ಅಳಿಯ ತನ್ನ ಸ್ವಂತ ದುಡಿಮೆಯಲ್ಲಿ ಸುಗಂಧ ದ್ರವ್ಯ ಪೂಸಿಕೊಳ್ಳುವುದನ್ನು, ತನ್ನ ಪತ್ನಿ ಕಾವೇರಿಗೆ ಪೌಡರ್ ಸ್ನೋ ತಂದುಕೊಡುವುದನ್ನು ಸಹಿಸಲಾಗದ ರೀತಿ. ಹೀಗೆ ಮಾಡಿದರೆ ತಾನು ಮಾಡಿದ ಸಾಲವನ್ನು ಅಳಿಯ ತೀರಿಸುವುದಾದರೂ ಹೇಗೆ ಎಂಬುದು ಆಕೆಯ ಚಿಂತೆ. ಇದೇ ಕಥೆಗೊಂದು ಬೋಪಣ್ಣ – ಕಾವೇರಿ ಬಿಡುಗಡೆಗೂ ಕಾರಣವಾಗುವುದು ಆಸಕ್ತಿಕರ.
ಎಸ್ಟೇಟ್ ಓನರ್ ಬಳಿ ತನ್ನ ಅಳಿಯನ ನಡೆಗಳ ಬಗ್ಗೆ ದೂರು ಹೇಳುತ್ತಾಳೆ. ಮಾಲೀಕ ಅದನ್ನು ವಿಚಾರಿಸಿದಾಗ ಬೋಪಣ್ಣ ಕೇಳುವ “ ಈಗ ನಿಮ್ಮ ತೀರ್ಮಾನ ಏನು ಅಂತ ಹೇಳಿ” ಎನ್ನುವು ಧಾಟಿಯೇ ಈಗಾಗಲೇ ಆತ ಸ್ವತಃ ಮಾಡಿಕೊಂಡ ತೀರ್ಮಾನದ ಪರಿಚಯವನ್ನು ಸಮರ್ಥವಾಗಿ ಮಾಡಿಕೊಡುತ್ತದೆ. “ ನಿನ್ನತ್ತೆ ಮಾಡಿದ ಸಾಲ ನೀನೇ ತೀರಿಸಬೇಕು” ಇದು ಮಾಲೀಕನ ಮಾತಷ್ಟೇ ಅಲ್ಲ; ಆತನ ಆದೇಶ ಕೂಡ.
ಅತ್ತೆ ತನ್ನ ಕೆಟ್ಟ ಕುತೂಹಲದಿಂದ ಬೇರೆಯವರಿಗೆ ಬಂದ ಪತ್ರವನ್ನು ಅಳಿಯನ ಮೇಲಿನ ಅನುಮಾನದಿಂದ ಓದಿಸಲು ಹೋಗುತ್ತಾಳೆ. ಆಗ ನೀರು ಬಿದ್ದು ಅಕ್ಷರ ಮಸುಕಾಗುತ್ತವೆ. ಆದರಿದನ್ನು ಹಾಗೆ ತಂದಿಟ್ಟುಬಿಡುತ್ತಾಳೆ. ವಿಳಾಸದಾರರ ಕಾಳಕಜಿಯಿಂದ ಬೋಪಣ್ಣ ತಾನೇ ಅದರ ಒಕ್ಕಣೆ ಬರೆದು ಬರೆಯುವ ಪತ್ರ ನಕಾರಾತ್ಮಕ ಪರಿಣಾಮ ಬೀರುತ್ತದೆ. ಊರವರ ದರಷ್ಟಿಯಲ್ಲಿ ಕೆಟ್ಟವನಿಗೆ ನಿಲ್ಲಬೇಕಾದಾಗ ನೆರವಿಗೆ ಧಾವಿಸುವ ಶಾಲಾಮೇಷ್ಟ್ರು ವಿಷಯ ವಿವರಿಸಿ; ಬೋಪಣ್ಣನಿಗೆ ಬಂದ ಅಪವಾದ ನಿವಾರಿಸುತ್ತಾರೆ. ಆದರೆ ಚಾಣಾಕ್ಷ ಬೋಪಣ್ಣ ತನ್ನ ಬಿಡುಗಡೆಯ ಅಸ್ತ್ರವನ್ನಾಗಿ ಬಳಸಿಕೊಳ್ಳುವುದು ಅಚ್ಚರಿಯೇನಲ್ಲ.
ಈತ ಅತ್ತೆ, ಆಕೆಯ ಮನೆ, ಎಸ್ಟೇಟು ಮತ್ತು ಪೋಸ್ಟಾಫೀಸು ಕೆಲಸ ಎಲ್ಲವನ್ನೂ ಬಿಟ್ಟು ದೂರ ಹೋಗಲು ನಿಶ್ಚಯಿಸುತ್ತಾನೆ. ಕಾವೇರಿ ಈತನನ್ನು ಹಿಂಬಾಲಿಸುತ್ತಾಳೆ. ಬಸ್ಸು ಹೊರಡುತ್ತದೆ. ಎರಡು ಕೆಲಸಗಳೂ ಕಳೆದು ಹೋಗಿರುವುದಕ್ಕೆ ಬೋಪಣ್ಣನ ಮುಖದಲ್ಲಿ ದುಗುಡು – ದುಃಖ ಆವರಿಸಿದೆ. ಆದರೆ ಕಾವೇರಿ ಮೊಗದಲ್ಲಿ ಸಂತೋಷವಿದೆ. ಆಕೆ ಈ ಬಿಡುಗಡೆಯನ್ನು ಸಂಭ್ರಮಿಸುತ್ತಿದ್ದಾಳೆ. ಆಕೆಯ ಗಮನ, ಪಕ್ಕದಲ್ಲಿ ಕುಳಿತ ಹೆಂಗಸು, ಮಗುವಿಗೆ ಹಾಲೂಡಿಸುವುದರತ್ತ ಹೋಗುತ್ತದೆ, ನಾಚಿಕೆಯ ನಗುವೊಂದು ಸರಿದು ಹೋಗುತ್ತದೆ. ಬಯಕೆಯ ಭಾವದಿಂದ ಗಂಡನತ್ತ ಭರವಸೆಯಿಂದ ನೋಡಿ ಆತನ ಭುಜಕ್ಕೊರಗುತ್ತಾಳೆ. ಈಕೆಯ ವಿಶ್ವಾಸದ ನಗು ಆತನ ಚಿಂತೆಯನ್ನೂ ಪರಿಹರಿಸಿತು ಎನ್ನುವ ಹಾಗೆ ಆತನ ಮೊಗ ಕೂಡ ಸಡಿಲಗೊಳ್ಳುತ್ತದೆ. ಮರಗಳೆಲ್ಲವೂ ಎಲೆ ಉದುರಿಸಿಕೊಂಡ ಹಾದಿ ಬಿಟ್ಟು ಎಲೆಗಳಿಂದ ತುಂಬಿದ ಮರಗಳಿರುವ ಮಾರ್ಗದೆಲ್ಲಿ ಬಸ್ಸು ಚಲಿಸತೊಡಗುತ್ತದೆ. ಇದು ಅವರಿಬ್ಬರ ಬದುಕು ಪಲ್ಲವಿಸುವುದರ ಸಂಕೇತವೂ ಹೌದು.
ಸಿನೆಮಾದಲ್ಲಿ ಬರುವ ಪೋಸ್ಟಾಫೀಸು, ಟಪಾಲು ತಂದು ಕೊಡುವ ಬಸ್ಸು, ಪತಿ –ಪತ್ನಿಯನ್ನು ತೋಯ್ಯಿಸುವ ಮಳೆ, ಮಾಲೀಕ ತನ್ನ ತೀರ್ಮಾನ ಹೇಳಿದೊಡನೆ ಬೀಳುವ ಬೃಹತ್ ಮರ, ಬೋಪಣ್ಣ- ಕಾವೇರಿ ಕುಳಿತ ಬಸ್ಸು ಹೋಗುವ ಮಾರ್ಗದ ಬೋಳುಮರ – ಎಲೆಗಳಿಂದ ತುಂಬಿದ ಮರ ಇವೆಲ್ಲವನ್ನೂ ನಿರ್ದೇಶಕ ಶಕ್ತಿಯುತ ರೂಪಕಗಳನ್ನಾಗಿ ದುಡಿಸಿಕೊಂಡಿದ್ದಾರೆ.
ಬೋಪಣ್ಣನಾಗಿರುವ ನಾಣಿ – ಕಾವೇರಿಯಾದ ಗಿರಿಜಾ ಲೋಕೇಶ್ – ಮಾಲೀಕನಾದ ಉಪಾಸನೆ ಸೀತಾರಾಂ, ಈತನ ಮಗನಾದ ರಮೇಶ್ ಭಟ್ ಇವರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ವಿಜಯಭಾಸ್ಕರ್ ನೀಡಿರುವ ಸಂಗೀತ ಕೂಡ ಗಮನಾರ್ಹ. ಆರಂಭದಲ್ಲಿ ತಂಜಾವೂರು ಶೈಲಿಯ ಹಿಮ್ಮೇಳದ ಡೋಲು ವಾದನ ಚಿತ್ರಕ್ಕೊಂದು ಅಗತ್ಯವಾದ ಓಟದ ಲಹರಿಯನ್ನು ತಂದುಕೊಟ್ಟಿದೆ. ಎನ್.ಜಿ. ರಾವ್ ಅವರ ಕ್ಯಾಮೆರಾ, ಪಿ. ಭಕ್ತವತ್ಸಲಂ ಅವರು ಮಾಡಿರುವ ಸಂಕಲನ ಕಾರ್ಯ, ನಿರ್ದೇಶಕ ಎನ್. ಲಕ್ಷೀನಾರಾಯ್ ಅವರ ಚಿತ್ರಕಥನದ ಚೌಕಟ್ಟಿನಿಂದಾಚೆಗೆ ಹೋಗಿಲ್ಲ.
ಕಥೆಗಾರ ಪೂರ್ಣಚಂದ್ರ ತೇಜಸ್ವಿ ಅವರ ಇದೇ ಹೆಸರಿನ ನೀಳ್ಗತೆ ಆಧರಿಸಿದ ಸಿನೆಮಾಕ್ಕೆ ಚಿತ್ರಕಥೆ ಬರೆದು ನಿರ್ದೇಶನವನ್ನೂ ಮಾಡಿರುವ ಎನ್. ಲಕ್ಷ್ಮೀನಾರಾಯಣ್ ಅವರು ಹೊಸಹೊಸ ಹೊಳವುಗಳನ್ನು ನೀಡಿದ್ದಾರೆ. ಇವರ ದೃಷ್ಟಿಯ ಮಿಂಚು ಕಥೆಗೊಂದು ಹೊಸ ಆಯಾಮವನ್ನೇ ನೀಡಿದೆ. ಇದಕ್ಕೆ ಕಾರಣ ಲಕ್ಷ ಎನ್.ಎಲ್. ಎನ್. ರಚಿಸಿದ ಸಮರ್ಥ ಚಿತ್ರಕಥೆ ಮತ್ತು ಅವರ ಸಿನೆಮಾ ನಿರೂಪಿಸುವ ದೃಷ್ಟಿಕೋನಗಳೇ ಆಗಿವೆ.

ಇಡೀಚಿತ್ರದ ಗಟ್ಟಿಪಾತ್ರವೆಂದರೆ ಕಾವೇರಿ. ಆಕೆ ಹೆಚ್ಚೇನೂ ಮಾತನಾಡುವುದಿಲ್ಲ. ಗಂಡನೊಂದಿಗೆ ಅನೋನ್ಯವಾಗಿರಬೇಕು ಎಂಬ ಬಯಕೆಗೆ ಹೆತ್ತತಾಯಿಯೇ ಅಡ್ಡವಾಗಿದ್ದಾಳೆ. ತನ್ನವನು ಜೀತದಾಳಿನಂತೆ ಇರುವುದು ಆಕೆಗೆ ಬೇಕಿಲ್ಲ. ಸಮಯ ಬಂದರೆ ಈಕೆ ತನ್ನ ತಾಯಿಯ ವಿರುದ್ಧ ದನಿಯೆತ್ತಬಲ್ಲಳು. ಆದರೆ ಬೋಪಣ್ಣ ದನಿ ಕಳೆದುಕೊಂಡವನು. ಈತ ಅತ್ತೆಮನೆ ಬಿಟ್ಟು ಹೊರಡುವಾಗ ಬಹುತೇಕರಿಗೆ ಬೇಸರ. ಆದರಿದನು ಸಂಭ್ರಮಿಸುವವಳು ಕಾವೇರಿ. ಆಕೆ ಬೋಪಣ್ಣನ ಪಾಲಿಗೂ ಜೀವದಾಯಿನಿ ಕಾವೇರಿ

Similar Posts

1 Comment

  1. ಉತ್ತಮ ವಿಮರ್ಶೆ.

Leave a Reply

Your email address will not be published. Required fields are marked *