ಜುಲೈ ೬, ೨೦೨೪. ಆಗುಂಬೆಯಲ್ಲಿ ಇಳಿದಾಗ ಮಧ್ಯಾಹ್ನ ೩. ಮಂಜಿನ ಮುಸುಕು ಆವರಿಸಿತ್ತು. ಮೋಡಗಳು ದಟ್ಟೈಸಿದ್ದವು. ಮಯೂರ ಹೋಟೆಲ್ ಎಂದಿನಂತೆ ಹಬೆಯಾಡುತ್ತಿತ್ತು. ಘಟ್ಟ ಇಳಿಯುವವರಿಗೂ ಹತ್ತಿದವರಿಗೂ ಇಲ್ಲಿ ಐದು ನಿಮಿಷ ಕಾಫಿ ವಿರಾಮ. ಒಂದಷ್ಟು ಕ್ಷಣ ತಾನೂ ವಿರಾಮ ತೆಗೆದುಕೊಂಡಿದ್ದ ಮಳೆಯೂ ಶುರುವಾಯ್ತು. ಬಿಸಿಬಿಸಿ ಬನ್ಸ್, ಕಾಫಿ ಸೇವಿಸುತ್ತಾ ಒಳ ಹೊರಗೂ ದಿಟ್ಟಿಸುತ್ತಾ ಕುಳಿತೆ. “ಬೇಗ ಕಾಫಿ ಕೊಡ್ರಿ ಮಾರ್ರೆ, ಬಸ್ಸು ಹೊರಡುತ್ತೆ”, ಎನ್ನುವ ಪ್ರಯಾಣಿಕರು “ಯಾರ್ರಿ ಶಿವಮೊಗ್ಗ, ಬೇಗ ಹತ್ಕೊಳ್ಳಿ” ಎನ್ನುವ ಕಂಡಕ್ಟರ್. ಬಿಸಿ ಕಾಫಿ ಗಂಟಲಿಗೆ ಸುರಿದುಕೊಂಡು ಬಸ್ ಹತ್ತುವ ಪ್ರಯಾಣಿಕರು !
ಊರ ಹೊರಗೆ ಸರ್ಕಾರಿ ಅತಿಥಿ ಗೃಹ. ಬ್ರಿಟಿಷ್ ಕಾಲದ ಬಂಗಲೆ. ಹಿಂದೊಮ್ಮೆ ಅಲ್ಲಿ ಉಳಿದುಕೊಂಡಿದ್ದೆ. ದೊಡ್ಡ ಗಾತ್ರದ ಕಪ್ಪು ಚೇಳಿನ ಕಡಿತದಿಂದ ಸ್ವಲ್ಪದರಲ್ಲಿ ಪಾರಾಗಿದ್ದೆ. ರಾತ್ರಿ ಸರೊತ್ತಿನಲ್ಲಿ ಕಾಡು ಪ್ರಾಣಿಗಳ ಕೂಗು. ದಿಗ್ಗನೆ ಎಚ್ಚರವಾಗಿ ಕುಳಿತುಕೊಂಡಿದ್ದೆ. ಮತ್ತೇಕೆ ಅಲ್ಲಿಗೆ ಹೋಗುವುದು ಅನಿಸಿತು. ನಾನು ಕುಳಿತಲ್ಲಿಂದ ಎದುರಿದ್ದ ಮಲ್ಯ ಲಾಡ್ಜಿಗೆ ಹೋದೆ. ” ಒಬ್ರೆನಾ” ಪ್ರಶ್ನೆ. ಹೌದು ಎಂದು ನನ್ನುತ್ತರ.” ರೂಮೆಲ್ಲ ಪುಲ್. ಒಂದೇ ರೂಮಿದೆ. ಅಲ್ಲಿ ಸ್ವಲ್ಪ ನೀರು ಸೋರುತ್ತೆ” ಎಂಬ ವಿವರ. ರೂಮ್ ತೋರಿಸಿ ಎಂದೆ. ಕಿಟಕಿಯಿಂದ ಬರುವ ಮಳೆನೀರು ಇರುಚಲು, ಅದರ ಅಂಚಿನ ಸೀಲಿಂಗ್ ನಿಂದ ಸೋರುವ ನೀರು ! ರೂಮು ಕೊಳವಾಗಿತ್ತು. ಅದೃಷ್ಟಕ್ಕೆ ಬೆಡ್ ಮೇಲೆ ನೀರು ಬೀಳುತ್ತಿರಲಿಲ್ಲ. ಬೇರೆ ಕಡೆಗೆ ಹೋಗುವ ವ್ಯವಧಾನ ಇರಲಿಲ್ಲ. ಚೆಕ್ ಇನ್ ಆದೆ. ಬೆಡ್ ಮೇಲೆ ಇದ್ದೊಂದು ಪುಟ್ಟ ಬ್ಯಾಗಿಟ್ಟೆ.
ಹೊರಗೆ ಬಂದೆ. ಮಳೆ ಜೋರಾಗಿಯೇ ಬೀಳುತ್ತಿತ್ತು . ಮಂಗಳೂರಿಗೆ ಹೋಗುವ ರಸ್ತೆಯಲ್ಲಿ ವೀಕ್ಷಣಾ ಗೋಪುರ. ಎರಡು ಕಿಲೋ ಮೀಟರ್ ದೂರ. ಮುಸುಕಿದ ಮಂಜು, ನಿರಂತರವಾಗಿ ಬೀಳುವ ಮಳೆ ! ಏನು ಕಾಣಲು ಸಾಧ್ಯ ? ನಡೆಯಬೇಕಿತ್ತು. ನಿಧಾನಕ್ಕೆ ನಡೆಯುತ್ತಾ ಹೊರಟೆ. ಫಾರೆಸ್ಟ್ ಚೆಕ್ ಪೋಸ್ಟ್ ದಾಟಿದ ನಂತರ ಗೋಪುರ. ನಾಲ್ಕೈದು ಮಂದಿ ಇದ್ದರು. ಮೋಡಗಳು ಮೈ ಸವರಿಸಿಕೊಂಡು ಹೋಗುತ್ತಿದ್ದವು. ತುಸು ಹೊತ್ತು ಇದ್ದೆ.
ಮಂಗಳೂರು ಕಡೆ ರಸ್ತೆಯಲ್ಲಿ ನಡೆಯುತ್ತಾ ಹೊರಟೆ. ಮೊದಲ ಹೇರ್ ಪಿನ್ ಬೆಂಡ್ ಎದುರಾಯ್ತು. ಎರಡೂ ದಿಕ್ಕಿನ ವಾಹನಗಳು ಹಾರ್ನ್ ಮೊಳಗಿಸುತ್ತಾ ಬರುತ್ತವೆ. ಘಾಟಿ ಹತ್ತುವವುಗಳಿಗೆ ಆದ್ಯತೆ. ಇಳಿಯುವವು ತುಸು ಕಾಯಬೇಕು. ಈ ನಿಯಮ ಗೊತ್ತಿಲ್ಲದೇ ಮುನ್ನುಗುವವರಿಂದ ಫಜೀತಿ. ಏರುವ ವಾಹನಗಳು ಹಿಂದೆ ಸರಿಯುವುದು ಕಷ್ಟ. ತುಂಬ ಒದ್ದೆಯಾದ ರಸ್ತೆಯಲ್ಲಿ ಟೈರುಗಳಿಗೆ ಹಿಡಿತ ಸಿಗುವುದಿಲ್ಲ. ಹಿಂದಕ್ಕೆ ಬಸ್ ತುಸು ಜಾರಿದರೂ ಒಳಗಿದ್ದರಿಗೆ ಪುಕಪುಕ.
ವಾಪಸ್ ನಡೆತ. ಫಾರೆಸ್ಟ್ ಚೆಕ್ ಪೋಸ್ಟ್ ಪಕ್ಕದಲ್ಲಿ ಬೋಟಿಂಗ್ ಕೊಳ, ನಿರ್ವಹಣೆ ಇಲ್ಲದ ಪಾರ್ಕು ಇದೆ. ಮಳೆಯಲ್ಲಿ ಪ್ರವಾಸಿಗರ ಸುಳಿವಿರಲಿಲ್ಲ. ಮುಂದಕ್ಕೆ ಸಾಗಿದೆ. ವಸತಿ ಶಾಲೆಯಲ್ಲಿ ಮಳೆಯಲ್ಲೂ ವಿದ್ಯಾರ್ಥಿಗಳು ವಾಲಿಬಾಲ್ ಆಡುತ್ತಿದ್ದರು. ಗ್ರೌಂಡ್ ಬಲಭಾಗಕ್ಕೆ ನಕ್ಸಲ್ ನಿಗ್ರಹ ಪಡೆ ವಸತಿ. ತುಸು ಮುಂದೆ ನಡೆದರೆ ತಾಜ್ ಹೋಟೆಲ್. ತುಂಬ ಪುಟ್ಟದು. ಬಾಗಿಲು ಮುಚ್ಚಿತ್ತು. ರಜೆ ಇರಬಹುದು ಎಂದುಕೊಂಡೆ. ಗಣೇಶ ಗ್ರ್ಯಾಂಡ್ ಹೋಟೆಲಿನಲ್ಲಿ ಕಾಫಿ ಕುಡಿದೆ. ಚೆನ್ನಾಗಿರಲಿಲ್ಲ. ಲಾಡ್ಜಿಗೆ ಬಂದೆ. ಇಬ್ಬರು ಚೆಕ್ ಇನ್ ಆಗುತ್ತಿದ್ದರು. ಅವರು ಒಳಗೆ ಹೋದರು.
ರಿಸೆಪ್ಷನಿಸ್ಟ್ ಗೆ “ಏನ್ರೀ ಮತ್ಯಾವ ರೂಮು ಖಾಲಿ ಇಲ್ಲ ಅಂದ್ರಿ ! ಈಗ ಬೇರೆಯವ್ರಿಗೆ ಕೊಟ್ರಿ ಅಂದೆ. ಅಷ್ಟರಲ್ಲಿ ಲಾಡ್ಜ್ ಮಾಲಿಕ ಸುಧೀಂದ್ರ ಮಲ್ಯ ಬಂದರು. “ಸರ್ ಅವ್ರು ಮೊದಲೇ ಅಡ್ವಾನ್ಸ್ ಪೇ ಮಾಡಿ ಬುಕ್ ಮಾಡಿದ್ರು, ನೋಡಿ” ಅಂತ ಲೆಡ್ಜರ್ ತೋರಿಸಿದ್ರು. “ಬೆಳಗ್ಗೆ ಒಂದು ರೂಮ್ ಖಾಲಿಯಾಗುತ್ತೆ. ಅಲ್ಲಿಗೆ ಶಿಫ್ಟ್ ಆಗುವಿರಂತೆ” ಅಂದರು. ಮರುದಿನ ಅದರಂತೆ ಮಾಡಿದರು. ಫರ್ನಿಚರ್ ಗಳಿಂದ ವ್ಯವಸ್ಥಿತವಾಗಿದ್ದ, ದಿನದ ೨೪ ಗಂಟೆಯೂ ಬಿಸಿನೀರು ಬರುವ ರೂಮ್ ನೀಡಿದರು.
ರಾತ್ರಿ ಮಂಗಳೂರಿನಿಂದ ಗೆಳೆಯ ರಿಯಾಜ್ ಕಾಲ್. “ನಾಳೆ ಬೆಳಗ್ಗೆ ನಾನೂ ಬರ್ತಿನಿ” “ಬನ್ನಿ ಇಂಥಲ್ಲಿ ಉಳಿದಿದ್ದೇನೆ” ಎಂದೆ. ಅವರೂ ಜೊತೆಯಲ್ಲಿ ಬರಬೇಕಿತ್ತು. ಅನಿರೀಕ್ಷಿತ ಕೆಲಸ. ಬರಲಾಗಿರಲಿಲ್ಲ. ಸಾಕಷ್ಟು ನಡೆದಿದ್ದೆ. ಸುದೀಂಧ್ರ ಮಲ್ಯ ಅವರು ಟ್ರೆಕ್ಕರ್ ಗಳಿಗೆ ಡಿನ್ನರ್ ಅರೇಂಜ್ ಮಾಡಿದ್ದೇವೆ. ನೀವೂ ನಮ್ಮ ಗೆಸ್ಟ್. ಬನ್ನಿ ಎಂದಿದ್ರು. ನಾನ್ ವೆಜ್ ಊಟ. ಚೆನ್ನಾಗಿತ್ತು. ರೂಮಿಗೆ ಬಂದೆ. ನಿದ್ರೆ ಹತ್ತಿತು.
ಜುಲೈ ೭, ೨೦೨೪. ಬೆಳಗ್ಗೆ ೫ಕ್ಕೆ ಎಚ್ಚರ. ಮಳೆ ಸದ್ದು ಜೋರಾಗಿತ್ತು. ಮತ್ತೆ ಮಲಗಲು ಮನಸಾಗಲಿಲ್ಲ. ಹೊರಗೆ ಬಂದು ಕಾರಿಡಾರಿನಲ್ಲಿ ನಿಂತೆ. ಇಡೀ ಊರು ಮಂಜಿನಿಂದ ಆವೃತ್ತವಾಗಿತ್ತು. ರಸ್ತೆ ದೀಪಗಳು ಬೆಳಕು ಚೆಲ್ಲಲು ಪ್ರಯಾಸ ಪಡುತ್ತಿದ್ದವು. ಮಳೆ ತುಸು ವಿರಾಮ ತೆಗೆದುಕೊಂಡಿತು. ಬೆಳಗ್ಗೆ ೬ಕ್ಕೆಲ್ಲ ಮಯೂರ ಹೋಟೆಲ್ ತೆರೆಯಿತು. ಆಗಲೇ ಘಾಟಿ ಇಳಿಯುವ ಮೊದಲ ಬಸ್ ಬಂದಿತ್ತು. ಬ್ಲಾಕ್ ಕಾಫಿ ತೆಗೆದುಕೊಂಡೆ.
ಧೋ ಎಂದು ಮಳೆ ಸುರುವಾಯ್ತು. ತೀರ್ಥಹಳ್ಳಿ ರಸ್ತೆಯತ್ತ ನಡೆಯುತ್ತಾ ಹೊರಟೆ. ದಾರಿ ಬದಿಗಳ ಹೋಟೆಲ್ ಗಳಲ್ಲಿ ಚಟುವಟಿಕೆ ಶುರುವಾಗಿತ್ತು. ಕಾರುಗಳಲ್ಲಿ ಹೋಗುವವರು ಕಾಫಿ ಬ್ರೇಕ್ ತೆಗೆದುಕೊಳ್ಳುತ್ತಿದ್ದರು. ಐದು ಕಿಲೋ ಮೀಟರ್ ಮುಂದೆ ಬಂದಿದ್ದೆ. ವಾಪಸ್ ನಡೆಯಲು ಶುರು ಮಾಡಿದೆ. ರೂಮಿಗೆ ಬಂದು ತುಸು ರೆಸ್ಟ್. ಮತ್ತೆ ಹೊರಗೆ ಬಂದು ಶೃಂಗೇರಿ ರಸ್ತೆಯತ್ತ ನಡೆಯತೊಡಗಿದೆ. ಭಾನುವಾರ. ರಸ್ತೆಯಲ್ಲಿ ವಾಹನಗಳ ಸಂಚಾರ ಹೆಚ್ಚು ಇರಲಿಲ್ಲ. ಐದು ಕಿಲೋ ದೂರ ನಡೆದೆ. ಮಳೆ ಬೀಳುತ್ತಲೇ ಇತ್ತು.
ಆಗುಂಬೆ ಪುಟಾಣಿ ಊರು. ಸುತ್ತಲೂ ಕಾಡು. ಇಕ್ಕೆಲಗಳಲ್ಲಿಯೂ ಕಾಡು ಇದ್ದ ರಸ್ತೆ ಶುರುವಾಗಿತ್ತು. ಅಲ್ಲೊಂದು ಒಂಟಿ ಆನೆ ತಿರುಗುತ್ತಿರುತ್ತದೆ. ಎದುರಾದ್ರೆ ಅನ್ನೊ ಆತಂಕ. ಇದರ ನಡುವೆಯೇ ಎಚ್ಚರಿಕೆಯಿಂದ ನೋಡುತ್ತಾ ಬಂದೆ. ಒಂದು ವೇಳೆ ಆನೆ ಥಟ್ಟನೆ ಮುಂದೆ ನಿಂತ್ರೆ ! ಅದರ ಮೂಡ್ ಚೆನ್ನಾಗಿದ್ರೆ ಬಚಾವ್ ! ಇಲ್ಲದಿದ್ರೆ ?? ಕಾಲುಗಳಲ್ಲಿ ಕಡಿತ ಶುರುವಾಗಿತ್ತು. ಶೂಗಳ ಒಳಗು ನವೆ ! ಶೂ ಬಿಚ್ಚಿ ನೋಡಿದರೆ ಜಿಗುಣೆಗಳು ಪಾದಗಳಿಂದ ರಕ್ತ ಹೀರುತ್ತಿದ್ದವು. ಜೇಬಿನಲ್ಲಿ ಪುಟ್ಟ ಡಬ್ಬಿಯಲ್ಲಿ ಇಟ್ಟುಕೊಂಡಿದ್ದ ನಿಂಬೆಹಣ್ಣು ಹೋಳನ್ನು ಉಪ್ಪಿನ ಪುಡಿಯಲ್ಲಿ ಅದ್ದಿ ಒರೆಸಿದೆ. ಜಿಗುಣೆಗಳು ತುಪತುಪನೆ ಉದುರಿ ಬಿದ್ದವು. ಪಾದಗಳಿಂದ ರಕ್ತ ಜಿನುಗುತ್ತಿತ್ತು. ರಸ್ತೆಯಲ್ಲಿ ಪ್ಯಾಂಟ್ ಬಿಚ್ಚಲು ಆಗುವುದಿಲ್ಲ. ಬೇಗನೇ ರೂಮಿಗೆ ಬಂದು ನೋಡಿದರೆ ತೊಡೆಯ ತನಕ ಏಂಟು ಜಿಗುಣೆಗಳು ಹತ್ತಿದವು. ಹಿಂದಿನಂತೆ ಒರೆಸಿ ತೆಗೆದು ಅವುಗಳನ್ನು ಉಪ್ಪು ನೀರಿನಲ್ಲಿ ಹಾಕಿದೆ. ಬಿಸಿಬಿಸಿ ನೀರಿನಲ್ಲಿ ಸ್ನಾನ ಮಾಡಿದೆ.
ಬೆಳಗ್ಗೆ ೧೧ಕ್ಕೆ ರಿಯಾಜ್ ಬಂದರು. ಮಯೂರದಲ್ಲಿ ತಿಂಡಿ ಆಯಿತು. ಇಬ್ಬರೂ ಮತ್ತೆ ನಡೆಯಲು ಶುರು ಮಾಡಿದೆವು. ಇವರಿಗೆ ವಿಪರೀತ ಕುತೂಹಲ. ಭಾರಿ ಪ್ರಶ್ನೆಗಳು. ಗೊತ್ತಿರುವುದಕ್ಕೆ ಉತ್ತರ ಹೇಳುತ್ತಾ ಮಲ್ಲಂದೂರು ರಸ್ತೆಗೆ ಬಂದೆವು. ರಸ್ತೆಯುದ್ದಕೂ ಮಳೆಯಲ್ಲಿಯೂ ಪೋಟೋ ಸೆಶನ್. ಇದಕ್ಕಿದಂತೆ ಎದುರಿಗೆ ಏನಿದೆ ಎಂದು ಕಾಣಿಸದಷ್ಟು ಮಂಜು ಆವರಿಸಿತು. ಜೋಗಿಗುಂಡಿಗೆ ಪ್ರವೇಶ ಇರಲಿಲ್ಲ. ವಾಪಸ್ ಬಂದೆವು. ಮತ್ತೆ ಸರ್ಕಲಿಗೆ ಬಂದು ಮಂಗಳೂರು ರಸ್ತೆಯತ್ತ ನಡೆಯತೊಡಗಿದೆವು. ಪುನಃ ಬಂದು ಫಿಶ್ ತಡ್ಕದಲ್ಲಿ ಮೀನೂಟ. ಮತ್ತೆ ನಡಿಗೆ. ಅಲ್ಲಿದಿದ್ದು ಬಂಗುಡೆ ಮೀನು. ರಿಯಾಜ್ ಗೆ ಕಾಟ್ಲ ಮೀನು ತಿನ್ನುವ ಬಯಕೆ !
ತೀರ್ಥಹಳ್ಳಿ ರಸ್ತೆ ಕಡೆಗೆ ನಡೆಯ ತೊಡಗಿದೆವು. ರಸ್ತೆಯಲ್ಲಿ ಇದ್ದಬದ್ದ ನಾನ್ ವೆಜ್ ಹೋಟೆಲುಗಳಲೆಲ್ಲ “ಕಾಟ್ಲಾ ಮೀನು ಇದ್ಯಾ ಇದ್ಯಾ” ಎಂದು ಕೇಳುತ್ತಾ ಸಾಗಿದ್ದಾಯ್ತು” ಎಲ್ಲೂ ಇರಲಿಲ್ಲ. “ಕಾಳಿಂಗ ರಿಸರ್ಚ್ ಸೆಂಟರ್ ಗೆ ಹೋಗೋಣ ಎಂದು ನಿರ್ಧರಿಸಿದೆವು. ಮಳೆ ಬೀಳುತ್ತಲೇ ಇತ್ತು. ಮುಖ್ಯ ರಸ್ತೆಯಿಂದ ಎಡಬದಿಯ ಕಚ್ಚಾ ರಸ್ತೆಯಲ್ಲಿ ೧ ಕಿಲೋ ಮೀಟರ್ ಮುಂದೆ ಸಾಗಿದರೆ ವಿಶಾಲ ಹಸಿರು ಬಯಲು ಸಿಗುತ್ತದೆ. ಅದು ಶೋಲಾ ಬಯಲು !
ಬಯಲಿನಲ್ಲಿ ನಡೆಯುತ್ತಾ ಇರಬೇಕಾದರೆ ಮಳೆ ಮತ್ತಷ್ಟೂ ಬಿರುಸಾಯ್ತು. ಮಗದಷ್ಟೂ ಬಿರುಸಾಯ್ತು. ಅದೆಷ್ಟು ತೀವ್ರತೆ ಪಡೆಯಿತೆಂದರೆ ಹಿಂದಕ್ಕೆ ಜೋರಾಗಿ ನೂಕಿದಂತಾಯಿತು. ದೇಹದ ಬ್ಯಾಲೆನ್ಸ್ ಸಿಗಲಿಲ್ಲ. ಕಾಲು ಎಡವಿ ಹಿಮ್ಮುಖವಾಗಿ ಬೀಳುವುದರಲ್ಲಿದ್ದೆ. ಹೇಗೋ ಸಾವರಿಸಿಕೊಂಡೆ. ಬಹುಶಃ ಅದು ವಿಶಾಲ ಬಟ್ಟಾ ಬಯಲಾದ ಕಾರಣ ಮಳೆ ತೀವ್ರ ಬಿರುಸು ಸ್ವರೂಪ ಪಡೆದುಕೊಂಡಿರಬಹುದು. ಬಿರುಗಾಳಿಯ ತೀವ್ರತೆಯನ್ನು ನೋಡಿದ್ದೆ. ಆದರೆ ಮಳೆಯ ಅಂಥ ರೌದ್ರ ಸ್ವರೂಪ ನೋಡಿರಲಿಲ್ಲ. ಈಗ ಅನುಭವಿಸಿದ್ದಾಯ್ತು. ನನಗಂತೂ ಅದೊಂದು ಅನಿರೀಕ್ಷಿತ ಘಟನೆ !
ಯಾವ ಮಾಹಿತಿಗಾಗಿ ಈ ಬರಹ ಓದಬೇಕು ಗುರುಗಳೇ?
ಆಗುಂಬೆಯಲ್ಲಿ ಮಳೆ ನಡಿಗೆ, ಮಳೆ ತೀವ್ರತೆ ಬಗ್ಗೆ ನನ್ನ ಅನುಭವ ಹಂಚಿಕೊಂಡಿದ್ದೇನೆ.