ಆಗುಂಬೆ (Agumbe). ಪಶ್ಚಿಮಘಟ್ಟದ ತೆಕ್ಕೆಯಲ್ಲಿರುವ ಪುಟ್ಟ ಹಳ್ಳಿ.  ಇಲ್ಲಿಂದ ಕಾಣುವ ಸೂರ್ಯಾಸ್ತ ದೃಶ್ಯ ಮನೋಹರ. ಘಾಟಿ ಹತ್ತಿಳಿಯುವ ಪ್ರಯಾಣಿಕರು ಒಂದಷ್ಟು ಕ್ಷಣ ಅದನ್ನು ಕಣ್ತುಂಬಿಕೊಳ್ಳುತ್ತಿದ್ದರು. ಸಾಮಾಜಿಕ ಜಾಲತಾಣಗಳ ಭರಾಟೆ ಶುರುವಾಯ್ತು. ಇಲ್ಲಿನ ಸುತ್ತಮುತ್ತಲ ಸಣ್ಣಪುಟ್ಟ ಜಲಪಾತಗಳಿಗೆ ಪ್ರವಾಸಿಗರ ದಂಡು ಬರತೊಡಗಿತು. ವರ್ಷದಿಂದ ವರ್ಷಕ್ಕೆ ಇವರ ಸಂಖ್ಯೆ ಏರುತ್ತಿದೆ. ಅಧಿಕೃತ- ಅನಧಿಕೃತ ಹೋಮ್‌ ಸ್ಟೇಗಳು ಹೆಚ್ಚುತ್ತಿವೆ. ರಸ್ತೆಯ ಎರಡೂ ಬದಿ ಹೋಟೆಲ್‌ ಗಳು ತಲೆಯೆತ್ತುತ್ತಿವೆ. ವಾರಾಂತ್ಯ ದಿನಗಳಲ್ಲಿ ಅಪಾರ ಸಂಖ್ಯೆಯ ಪ್ರವಾಸಿಗರ ದಂಡು.

ಕಾಳಿಂಗ ಸಂಶೋಧನಾ ಕೇಂದ್ರಕ್ಕೆ ಹೋಗುವ ದಾರಿ (king cobra research station road)

ಒಂದು ಊರಿಗೆ ಪ್ರವಾಸಿಗರು ಬಂದರೆ ನಷ್ಟವೇನಿಲ್ಲ. ಆದರೆ ಪ್ರವಾಸದ ನೆಪದಲ್ಲಿ ಮೋಜುಮಸ್ತಿ ಮಾಡುವವರೇ ಹೆಚ್ಚಾಗುತ್ತಿದ್ದಾರೆ. ಇವರಿಂದ ಪ್ರಕೃತಿಯ ರಮ್ಯತೆಯನ್ನು ಶಾಂತವಾಗಿ ನೋಡಿ ಆನಂದಿಸುವ ಪ್ರವಾಸಿಗರಿಗೂ, ಸ್ಥಳೀಯರಿಗೂ ತೊಂದರೆ.  ಕಾಳಿಂಗ ಸಂಶೋಧನಾ ಕೇಂದ್ರಕ್ಕೆ ಹೋಗುವ ದಾರಿಯಲ್ಲಿ ಒಂದು ಕಿಲೋ ಮೀಟರ್‌ ಸಾಗಿದರೆ ವಿಸ್ತಾರವಾದ ಹಸಿರು ಬಯಲು ಶುರುವಾಗುತ್ತದೆ. ಇಲ್ಲಿಗೆ ಹೋಗುವಾಗ ಮಣ್ಣಿನ ರಸ್ತೆಯ ಎರಡು ಬದಿಯಲ್ಲಿಯೂ ಬಿಯರ್‌, ವಿಸ್ಕಿ, ರಮ್‌ ಬಾಟಲುಗಳು, ಒಡೆದ ಗಾಜಿನ ಚೂರುಗಳು, ತಂಪು ಪಾನೀಯಗಳ ಪಾಸ್ಟಿಕ್‌ ಬಾಟಲ್‌ ಗಳು, ಪ್ಲಾಸ್ಟಿಕ್‌ ಕವರ್ಗಳು, ಲೋಟಗಳು, ಪಾನ್‌, ಗುಟ್ಕಾ ಖಾಲಿಯಾದ ಕವರ್‌ ಗಳು ಹೀಗೆ ಕಸದ ರಾಶಿಯೇ ಬಿದ್ದಿದೆ.

ಇರಿಸು ಮುರಿಸು

ಮಳೆಗಾಲದಲ್ಲಂತೂ ಇಲ್ಲಿಗೆ ಕಾರುಗಳು, ಬೈಕುಗಳು, ಸ್ಕೂಟರ್‌ ಗಳಲ್ಲಿ ಬರುವವರ ಸಂಖ್ಯೆ ಅಧಿಕ. ವಾರಾಂತ್ಯ ದಿನಗಳಲ್ಲಿ ಈ ಸಂಖ್ಯೆ ಅತ್ಯಧಿಕ. ಹಸಿರು ಮೈದಾನದಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿಕೊಂಡು ಇತರ ಪ್ರವಾಸಿಗರ ಬಗ್ಗೆ ಗೌರವ, ಅಂಜಿಕೆ ಇಲ್ಲದೇ ಬಹಿರಂಗವಾಗಿ ಮದ್ಯಪಾನ ಮಾಡುವವರ ಸಂಖ್ಯೆಯೂ ಹೆಚ್ಚು. ಕೆಲವರಂತೂ ಅಂಡರ್‌ ವೇರ್‌ ಗಳಷ್ಟನ್ನೇ ಧರಿಸಿ ಮದ್ಯಪಾನ ಮಾಡುತ್ತಿರುತ್ತಾರೆ. ಇದರಿಂದ ಕುಟುಂಬ ಸಮೇತ ಬಂದವರಿಗಂತೂ ಇರಿಸು ಮುರಿಸು. ಅವರು ತಕ್ಷಣವೇ ಅಲ್ಲಿಂದ ಕಾಲ್ತೆಗೆಯುತ್ತಾರೆ.

ಕಾರುಗಳಲ್ಲಿ ಬಂದ ಕೆಲವರದಂತೂ ಮತ್ತಷ್ಟೂ ಹುಚ್ಚಾಟ. ಹಸಿರು ಮೈದಾನದಲ್ಲಿ ಕಾರು ಚಲಾಯಿಸುತ್ತಾರೆ. ಹೀಗೆ ಮಾಡುವವರ ಸಂಖ್ಯೆ ಅತಿಯಾಗುತ್ತಿದೆ. ಇದರಿಂದ ಅಲ್ಲಿನ ಹಸಿರು ಮಾಯವಾಗುತ್ತಿದೆ. ಮಣ್ಣಿನ ಸವಕಳಿಯಾಗಿ, ಕೆಸರುಮಯವಾಗುತ್ತಿದೆ. ಕುಡಿದ ಕೆಲವರಂತೂ ಮದ್ಯದ ಮತ್ತಿನಲ್ಲಿ ಜೋರಾಗಿ ಅರಚಿಕೊಳ್ಳುತ್ತಾ ಬಾಟಲುಗಳನ್ನು ದೂರಕ್ಕೆ ಎಸೆಯುವ ಸ್ಪರ್ಧೆಗೆ ಬೀಳುತ್ತಾರೆ. ಹೀಗಾಗಿ ಎಲ್ಲೆಂದರಲ್ಲಿ ಬಾಟಲುಗಳು, ಗಾಜಿನ ಚೂರುಗಳು ಬಿದ್ದಿವೆ.

ನಿದ್ರಿಸುತ್ತಿರುವ ಗ್ರಾಮ ಪಂಚಾಯತ್‌

ಹಸಿರು ಹುಲ್ಲುಗಾವಲು ಮೈದಾನಕ್ಕೆ ಕಾರುಗಳು ಪ್ರವೇಶಿದಂತೆ ತಡೆಯುವ ಅಧಿಕಾರ, ಸ್ಥಳೀಯ ಗ್ರಾಮ ಪಂಚಾಯತ್‌ ಗಿದೆ. ಅವರು  ರಸ್ತೆ ಬದಿಯಲ್ಲಿ ಜಾಗ ಪಡೆದು ವಾಹನಗಳಿಗೆ ವಾಹನಗಳಿಗೆ ಪಾರ್ಕಿಂಗ್‌ ಸೌಲಭ್ಯ ಕೊಟ್ಟು ಹಣ ಪಡೆಯಬಹುದು. ಹಸಿರು ಮೈದಾನಕ್ಕೆ ಹೋಗುವುದಕ್ಕೂ ಶುಲ್ಕ ವಿಧಿಸಬಹುದು. ಆಸಕ್ತರು ಅಲ್ಲಿಗೆ ನಡೆದೇ ಹೋಗುವಂತೆ ಸೂಚಿಸಬೇಕು. ಪ್ಲಾಸ್ಟಿಕ್‌ ಬಾಟಲ್‌, ಮದ್ಯದ ಬಾಟಲುಗಳನ್ನು ತೆಗೆದುಕೊಂಡು ಹೋಗಲು ಬಿಡಬಾರದು. ಆದರೆ ಆಗುಂಬೆ ಪಂಚಾಯತ್‌ ಇತ್ತ ಗಮನ ಹರಿಸಿಯೇ ಇಲ್ಲ

ಆಗುಂಬೆ ಪೊಲೀಸರಿಗೆ ಒದ್ದೆಯಾಗುವ ಭಯವೇ

ಪೊಲೀಸರು ಮಳೆಗಾಲದಲ್ಲಿ ಇಂಥ ಪ್ರವಾಸಿ ತಾಣಗಳಲ್ಲಿ ಗಸ್ತು ತಿರುಗಬೇಕು. ಮದ್ಯಪಾನ ಮಾಡಿ ಹುಚ್ಚಾಟ ಆಡುವವರಿಗೆ ಕಾನೂನಿನ ರುಚಿ ತೋರಿಸಬೇಕು. ಪೊಲೀಸರು ಪದೇಪದೇ ಇತ್ತ ಸುಳಿಯುತ್ತಿದ್ದರೆ ಮೋಜು ಮಸ್ತಿ ಮಾಡಲು ಬರುವವರಿಗೆ ಭಯವಿರುತ್ತದೆ. ಆದರೆ ಮಳೆಗಾಲದಲ್ಲಿ ಸ್ಟೇಷನ್‌ ನಿಂದ ಹೊರಗೆ ಬಂದರೆ ಒದ್ದೆಯಾಗುತ್ತೇವೆಂದು ಇವರು ಇಲ್ಲೆಲ್ಲ ಬೀಟ್‌ ಮಾಡುತ್ತಿಲ್ಲವೆಂದು ಕಾಣುತ್ತದೆ !

Similar Posts

Leave a Reply

Your email address will not be published. Required fields are marked *