ಸಾಹಿತ್ಯ

ಮುಂದೆ ಕನ್ನಡದ ತೇರು ಎಳೆಯುವವರು ಯಾರು ?

ಪ್ರಸ್ತುತ ಕಾಲಘಟ್ಟದಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯ ಸಂದಿಗ್ದ ಸ್ಥಿತಿಯಲ್ಲಿದೆಯೇ ? ಖಂಡಿತ ಇದೆ. ನಾಳೆ ಕನ್ನಡದ ಭವಿಷ್ಯ ಏನು ಎಂದು ಚಿಂತಿಸುವಷ್ಟು ಪರಿಸ್ಥಿತಿ ಸಂಕೀರ್ಣವಾಗಿದೆ.  ನೆರೆಯ ತಮಿಳುನಾಡಿನಲ್ಲಿ ಇಂಥ ಸ್ಥಿತಿ ಇದೆಯೇ ? ಅವರು ಸಹ ನಾಳೆ ತಮಿಳು ಭವಿಷ್ಯ ಏನು ಎಂದು ಚಿಂತಿಸುತ್ತಾರೆಯೇ ? ಖಂಡಿತ ಇಲ್ಲ ! ಆ ಪರಿಯ ಆತ್ಮವಿಶ್ವಾಸ ಅವರಿಗಿದೆ. ಆದರೆ ಕನ್ನಡ ಮಾತ್ರ ಏಕೆ ಇಂಥ ಸ್ಥಿತಿ ಎದುರಿಸುತ್ತಿದೆ ?

ಇದಕ್ಕೆ ನೂರಕ್ಕೆ ನೂರರಷ್ಟು ಕಾರಣ ದೂರದೃಷ್ಟಿ ಇಲ್ಲದ ರಾಜಕಾರಣಿಗಳು ನಿರ್ವಹಿಸಿದ ರಾಜ್ಯ ಸರ್ಕಾರಗಳು ! ಒಂದು ಸಮರ್ಪಕ ಭಾಷಾನೀತಿಯನ್ನೂ ರೂಪಿಸಲು ಆಗದ ಅಸಮರ್ಥರು ನಮ್ಮನ್ನು ಆಳಿದ್ದಾರೆ. ಸ್ವಾತಂತ್ರ್ಯ ನಂತರ ಹಿಂದಿ ಭಾಷೆಯನ್ನೂ ಒಪ್ಪಿಕೊಂಡು ನರಳುವಂಥ ಸ್ಥಿತಿ ತಂದಿಟ್ಟಿದ್ದಾರೆ. ಕನ್ನಡವನ್ನು ಅನ್ನದ ಭಾಷೆಯನ್ನಾಗಿ ಮಾಡಲು ವಿಫಲರಾಗಿದ್ದಾರೆ. ಕನ್ನಡ ಭಾಷೆಯ ಮಾಧುರ್ಯವನ್ನು ಹೊಸ ಪೀಳಿಗೆಗಳಿಗೆ ದಾಟಿಸುವ ನೀತಿಗಳ ನಿರೂಪಣೆಯಲ್ಲಿಯೂ ಸಫಲರಾಗಿಲ್ಲ !

ಈ ಲೇಖನವನ್ನೂ ಓದಿ: ಕುತೂಹಲ ಮೂಡಿಸಿರುವ ಸಮಾಜಮುಖಿ ಸಾಹಿತ್ಯ ಸಮ್ಮೇಳನ

ಇವೆಲ್ಲದರ ಪರಿಣಾಮ ಸಾವಿರಾರು ಕನ್ನಡ ಶಾಲೆಗಳು ಮುಚ್ಚಿ ಹೋಗಿವೆ. ಇನ್ನೂ ಹಲವಾರು ಶಾಲೆಗಳು ಮುಚ್ಚಿಹೋಗುವ ದುಸ್ಥಿತಿಯಲ್ಲಿವೆ ! ಕಾರಣ ಒಂದೇ ; ಕನ್ನಡ ಮಾಧ್ಯಮ ಶಾಲೆಗಳಿಗೆ ವಿದ್ಯಾರ್ಥಿಗಳ ಕೊರತೆ ! ಹಾಗಿದ್ದರೆ ಜನಸಂಖ್ಯೆ ಕುಸಿತವಾಗಿದೆಯೇ ? ಖಂಡಿತ ಇಲ್ಲ. ಗ್ರಾಮೀಣ ಪರಿಸರದಲ್ಲಿಯೂ ಇಂಗ್ಲಿಷ್ ಮಾಧ್ಯಮದ ಶಾಲೆಗಳು ತಲೆಯೆತ್ತಿವೆ. ಸರ್ಕಾರಿ ಬಸ್ಸುಗಳು ತಲುಪಲಾಗದ ಊರುಗಳನ್ನು ಇಂಥ ಸ್ಕೂಲ್ ಬಸ್ಸುಗಳು ತಲುಪುತ್ತಿವೆ. ಮಕ್ಕಳು ಮಮ್ಮಿ ಡ್ಯಾಡಿ ಎನ್ನುವುದನ್ನು ಕೇಳಿಯೇ ಪೋಷಕರು ಪುಳಕಗೊಳ್ಳುತ್ತಿದ್ದಾರೆ.

ಇಂಥ ಸಂಕೀರ್ಣ ಸಂದರ್ಭದಲ್ಲಿ ಅಲ್ಲಲ್ಲಿ ಬೆರಳೆಣಿಕೆ ಆಸಕ್ತರು ಸಾಹಿತ್ಯ ಉತ್ಸವ ನಡೆಸಲು ಶ್ರಮಪಡುತ್ತಿದ್ದಾರೆ. ನಾನು ಇಲ್ಲಿ ರಾಜ್ಯ ಸರ್ಕಾರ ನೀಡುವ ಕೋಟ್ಯಂತರ ರೂಪಾಯಿ ಹಣದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಗಳ ಬಗ್ಗೆ ಮಾತನಾಡುವುದಿಲ್ಲ ! ಅದಕ್ಕೆ ನಿರ್ದಿಷ್ಟ ಗೊತ್ತುಗುರಿಯೂ ಇಲ್ಲ ! ನಿರ್ದಿಷ್ಟ ಗೊತ್ತುಗುರಿ ಇಟ್ಟುಕೊಂಡು ಚಿಕ್ಕದಾದರೂ ಚೊಕ್ಕವಾಗಿ ಸಾಹಿತ್ಯ ಉತ್ಸವಗಳನ್ನು ರಾಜ್ಯದ ಅಲ್ಲಲ್ಲಿ ನಡೆಸುತ್ತಿರುವ ವ್ಯಕ್ತಿಗಳಿದ್ದಾರೆ ! ಇದು ಸ್ವಂತ ಜೇಬು ಬರಿದು ಮಾಡಿಕೊಳ್ಳುವ ಕಾರ್ಯ ಎಂದು ಗೊತ್ತಿದ್ದರೂ ಕನ್ನಡದ ತೇರು ಎಳೆದುಕೊಂಡು ಹೋಗಬೇಕು ಎನ್ನುವ ಪ್ರೀತಿಯಿಂದ ಶ್ರಮಿಸುತ್ತಿದ್ದಾರೆ. ಇಂಥಲ್ಲಿ ಅರ್ಥಪೂರ್ಣ ಚರ್ಚೆಗಳು – ಸಂವಾದಗಳು ನಡೆಯುತ್ತಿವೆ. ಆ ಸಾರಾಂಶ, ಭಾಗವಹಿಸಿದವರ ಮೂಲಕ ನಾಡಿನ ಮೂಲೆಮೂಲೆ ತಲುಪುತ್ತಿವೆ.

ಇಂಥ ಹಿನ್ನೆಲೆ ಸಂದರ್ಭದಲ್ಲಿ “ಚಿಂತನಶೀಲ ಸಮಾಜಮುಖಿ” ಪತ್ರಿಕೆಯನ್ನು ಪ್ರಕಟಿಸುತ್ತಾ ಬಂದಿರುವ ಸಮಾಜಮುಖಿ ಪ್ರಕಾಶನದವರು ಸಾಹಿತ್ಯ ಸಮ್ಮೇಳನ ನಡೆಸಲು ಮುಂದಾಗಿದ್ದಾರೆ. ಸರ್ಕಾರದ ನೆರವು ಕೇಳದೇ, ಕಾರ್ಪೊರೇಟ್ ಸಂಸ್ಥೆಗಳಿಂದ ಫಂಡಿಂಗ್ ಪಡೆಯದೇ ತಮ್ಮ ಸ್ವಂತ ಹಣ, ದೇಣಿಗೆ ನಂಬಿಕೊಂಡು ಕನ್ನಡಿಗರಿಂದಲೇ ಕನ್ನಡಿಗರಿಗಾಗಿ ಎನ್ನುವಂತೆ ಸಾಹಿತ್ಯೋತ್ಸವ ನಡೆಸಲು ಮುಂದಾಗಿದ್ದಾರೆ.

ಸಮಾಜಮುಖಿ ಸಾಹಿತ್ಯ ಸಮ್ಮೇಳನದ ಆಯೋಜಕರು ಕರೆದಿದ್ದ ಒಂದು ಪೂರ್ವಾಭಾವಿ ಸಭೆಯಲ್ಲಿ ನಾನೂ ಭಾಗವಹಿಸಿದ್ದೆ. ರೂವಾರಿಗಳ ಮಾತುಗಳನ್ನು ಕೇಳಿದಾಗ ಸಾಹಿತ್ಯ ಸಮ್ಮೇಳವನ್ನು ಏಕೆ, ಹೇಗೆ ನಡೆಸಬೇಕು ಮತ್ತು ಮುಂದೆ ಕನ್ನಡದ ತೇರನ್ನು ಎಳೆಯುವವರು ಯಾರು ಎಂಬ ವಿಚಾರದಲ್ಲಿ ಅವರಿಗೆ ಸ್ಪಷ್ಟತೆ ಇದೆ.

ಈ ಲೇಖನವನ್ನೂ ಓದಿ: ಸಮಾಜಮುಖಿಯ ಅಚ್ಚರಿ ಮೂಡಿಸುವ ವೈವಿಧ್ಯ ಗೋಷ್ಠಿಗಳು

ವಿದ್ಯಾರ್ಥಿಗಳೇ ಕನ್ನಡದ ತೇರು ಎಳೆಯುವವರು ಎಂದವರು ಗುರುತಿಸಿದ್ದಾರೆ. ಈ ದಿಶೆಯಲ್ಲಿ “ಸಮಾಜಮುಖಿ ಸಾಹಿತ್ಯ ಸಮ್ಮೇಳನ”ದ ಆಶಯಗಳನ್ನು ಅವರಿಗೆ ತಲುಪಿಲು ಇಡೀ ತಂಡವೇ ಕಾರ್ಯೋನ್ಮುಖವಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಇತರೆಡೆಗಳ ಆಸಕ್ತರ ಮೂಲಕ ಕಾಲೇಜು, ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳನ್ನು ತಲುಪುವ ಮತ್ತು ಆಸಕ್ತರು ಸಮ್ಮೇಳನದಲ್ಲಿ ಭಾಗವಹಿಸುವಂತೆ ಮಾಡುವ ಕಾರ್ಯವನ್ನು ಮಾಡುತ್ತಿದ್ದಾರೆ. ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳ ಜೊತೆಗೆ ಗಣನೀಯ ಪ್ರಮಾಣದಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳೂ ಸ್ಪಂದಿಸುತ್ತಿದ್ದಾರೆ. ಇದು ದೊಡ್ಡ ಭರವಸೆ ನೀಡುತ್ತದೆ. ಆಸಕ್ತ ಅಧ್ಯಾಪಕರು, ಪ್ರಾಧ್ಯಾಪಕರು ಸಹ ಸಕಾರಾತ್ಮಕವಾಗಿ ಸ್ಪಂದಿಸುತ್ತಿರುವುದು ಸಹ ಆಶಾಭಾವನೆ ಮೂಡಿಸುತ್ತದೆ.

ಎರಡು ದಿನಗಳ ಸಮ್ಮೇಳನದಲ್ಲಿ ಭಾಗವಹಿಸಲು ಒಬ್ಬರಿಗೆ ೩೦೦ ರೂ. ನಿಗದಿಪಡಿಸಿದ್ದಾರೆ. ಎರಡು ದಿನ ಉಪಹಾರ, ಕಾಫಿ ಮತ್ತು ಊಟದ ವೆಚ್ಚ ಇದರಲ್ಲಿಯೇ ಸೇರಿರುತ್ತದೆ. ಈ ಮೊತ್ತದಲ್ಲಿಯೂ ವಿದ್ಯಾರ್ಥಿಗಳಿಗೆ ರಿಯಾಯತಿ ಇದೆ. ಆಸಕ್ತ ವಿದ್ಯಾರ್ಥಿಗಳು ಹಣಕಾಸು ಕೊರತೆ ಇದೆ ಎಂಬ ಹಿಂಜರಿಯುವುದು ಬೇಡ. ಸಾಹಿತ್ಯ ಸಮ್ಮೇಳನದಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಮುಖ್ಯ ಎಂಬ ನಿಲುವು ಆಯೋಜಕರಿಗಿದೆ. ಆಸಕ್ತರು ನೇರವಾಗಿ ಸಂಬಂಧಿಸಿದವರ ಜೊತೆ ಮಾತನಾಡಬಹುದು.

ಮುಂದೆ ಕನ್ನಡದ ತೇರನ್ನು ಎಳೆದುಕೊಂಡು ಹೋಗಬೇಕಾದ ವಿದ್ಯಾರ್ಥಿಗಳು ರಾಜ್ಯದೆಲ್ಲೆಡೆಯಿಂದ ಬಂದು ಭಾಗವಹಿಸುವ ಅವಶ್ಯಕತೆ ಇದೆ. ಭಾಷೆ ಬೆಳವಣಿಗೆಯ ಆಯಾಮಗಳನ್ನು ಬಿಂಬಿಸುವ ವೈವಿಧ್ಯ ಗೋಷ್ಠಿಗಳ ಸಂವಾದಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕಾಗಿದೆ. ಈ ಮೂಲಕ ಭಾಷೆಗೆ ಹೊಸ ಭರವಸೆ ತರಬೇಕಾಗಿದೆ.

  • ಸಮಾಜಮುಖಿ ಸಾಹಿತ್ಯ ಸಮ್ಮೇಳನ” ಬೆಂಗಳೂರು ಅರಮನೆ ರಸ್ತೆಯ ಸ್ಕೌಟ್ ಅಂಡ್ ಗೈಡ್ಸ್ ಆವರಣದಲ್ಲಿ  ನವೆಂಬರ್ ೮-೯ರಂದು ನಡೆಯಲಿದೆ.  ವಸತಿ ವ್ಯವಸ್ಥೆಯ ಸೌಲಭ್ಯವೂ ಇದೆ. ವಿಶೇಷವಾಗಿ ಆಸಕ್ತ ವಿದ್ಯಾರ್ಥಿಗಳಿಗೆ ರಿಯಾಯತಿಯೂ ಇದೆ.
  • ವಿವರಗಳಿಗೆ https://samajamukhi.com/ ಜಾಲತಾಣಕ್ಕೆ ಭೇಟಿ ನೀಡಬಹುದು. ಮೊಬೈಲ್ ನಂಬರ್ 9900049892 / 9035828777 ಕರೆ ಮಾಡಬಹುದು

One thought on “ಮುಂದೆ ಕನ್ನಡದ ತೇರು ಎಳೆಯುವವರು ಯಾರು ?

  • ಡಾ. ವಾಸುದೇವ ಶರ್ಮಾ ಎನ್.ವಿ

    ಅರ್ಥಪೂರ್ಣವಾಗಿದೆ.
    ವಿದ್ಯಾರ್ಥಿಗಳ ಮೇಲೇ ನಮ್ಮ ಹೂಡಿಕೆ, ಅವರಿಗಾಗಿ ವ್ಯವಸ್ಥೆಯ ಗುಣಮಟ್ಟ ಹೆಚ್ಚಬೇಕಿದೆ

    Reply

Leave a Reply

Your email address will not be published. Required fields are marked *

error: Content is protected !!